ಬುಧವಾರ, ಡಿಸೆಂಬರ್ 8, 2021
28 °C

ಜಾಧವ್‌ ಪರ ವಕೀಲರ ನೇಮಕಕ್ಕೆ ಮತ್ತೆ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

ಕುಲಭೂಷಣ ಯಾದವ್

ಇಸ್ಲಾಮಾಬಾದ್: ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಪರ ವಕೀಲರನ್ನು ನೇಮಿಸಲು ಭಾರತಕ್ಕೆ ಮತ್ತೊಂದು ಅವಕಾಶ ಕಲ್ಪಿಸಬೇಕು ಎಂದು ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ಪಾಕಿಸ್ತಾನ ಸರ್ಕಾರಕ್ಕೆ ಆದೇಶಿಸಿದೆ.

ಗೂಢಚಾರಿಕೆ, ಭಯೋತ್ಪಾದನೆ ಸಂಚು ನಡೆಸಿದ ಆರೋಪದ ಮೇಲೆ 50 ವರ್ಷದ, ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಜಾಧವ್ ಅವರಿಗೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ 2017ರ ಏಪ್ರಿಲ್ ತಿಂಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದೆ. ಇದನ್ನು ಪ್ರಶ್ನಿಸಲು ವಕೀಲರ ನೆರವು ಪಡೆಯಲು ಜಾಧವ್ ಅವರಿಗೆ ಪಾಕಿಸ್ತಾನ ಅವಕಾಶ ನಿರಾಕರಿಸಿದೆ ಎಂದು ಭಾರತ ಅಂತರರಾಷ್ಟ್ರೀಯ ಕೋರ್ಟ್ ಮೊರೆ ಹೋಗಿತ್ತು.

ಐಸಿಜೆ ಭಾರತದ ಪರವಾಗಿ ಆದೇಶ ನೀಡಿತ್ತು. ಸೋಮವಾರ ಇಸ್ಲಾಮಾಬಾದ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅಖ್ತರ್ ಮಿನಾಲ್ಹಾ ಮತ್ತು ನ್ಯಾಯಮೂರ್ತಿ ಮಿಯಾಗುಲ್ ಹಸನ್ ಔರಂಗಜೇಬ್ ಅವರಿದ್ದ ದ್ವಿಸದಸ್ಯ ಸಮಿತಿಯು ಪಾಕಿಸ್ತಾನ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.

ಜಾಧವ್ ಅವರಿಗಾಗಿ ಕಾನೂನು ಪ್ರತಿನಿಧಿ ನೇಮಿಸಬೇಕು ಎಂದು ಪಾಕ್ ಸರ್ಕಾರ ಅರ್ಜಿಯಲ್ಲಿ ಕೋರಿತ್ತು. ‘ಈಗ ವಿಷಯ ಕೋರ್ಟ್ ಪರಿಧಿಯಲ್ಲಿದೆ. ಭಾರತ ಸರ್ಕಾರಕ್ಕೆ ಏಕೆ ಇನ್ನೊಂದು ಅವಕಾಶ ನೀಡಬಾರದು?' ಎಂದು ನ್ಯಾಯಮೂರ್ತಿ ಮಿನಾಲ್ಹಾ ಪ್ರಶ್ನಿಸಿದರು.

ನ್ಯಾಯಮೂರ್ತಿಗಳ ಮಾತಿಗೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ಜಾವೇದ್ ಖಾನ್ ಅವರು,  ‘ಭಾರತ ಸರ್ಕಾರಕ್ಕೆ ಇನ್ನೊಂದು ಅವಕಾಶ ನೀಡುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲಾಗಿದೆ’ ಎಂದು ತಿಳಿಸಿದರು. ಪ್ರಕರಣವನ್ನು ಸೆ.3ಕ್ಕೆ ಮುಂದೂಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು