ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಡತೆಗಳಿಂದ ಆಹಾರ ಭದ್ರತೆಗೆ ಅಪಾಯ: ಡಬ್ಲ್ಯುಎಂಒ

Last Updated 21 ಜುಲೈ 2020, 6:33 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ‘ಹವಾಮಾನ ಬದಲಾವಣೆಯಿಂದ ಪೂರ್ವ ಆಫ್ರಿಕಾದ ರಾಷ್ಟ್ರಗಳು, ಭಾರತ ಮತ್ತು ಪಾಕಿಸ್ತಾನದಲ್ಲಿ ಮಿಡತೆಗಳ ದಾಳಿ ಹೆಚ್ಚಾಗಿ, ಆಹಾರ ಭದ್ರತೆಗೆ ಅಪಾಯ ಉಂಟಾಗಿದೆ’ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಕಳವಳ ವ್ಯಕ್ತಪಡಿಸಿದೆ.

ಮರುಭೂಮಿ ಪ್ರದೇಶಗಳಲ್ಲಿನ ತಾಪಮಾನದಲ್ಲಿ ಏರಿಕೆ, ಮಳೆಯ ಪ್ರಮಾಣದಲ್ಲಿ ವಿಪರೀತ ಹೆಚ್ಚಳ, ಉಷ್ಣವಲಯದ ಚಂಡಮಾರುತದ ಫಲವಾಗಿ ಬೀಸುವ ಬಲವಾದ ಗಾಳಿ ಮುಂತಾದ ವೈಪರೀತ್ಯಗಳು ಮಿಡತೆಗಳ ಸಂತಾನೋತ್ಪತ್ತಿ ಹಾಗೂ ವಲಸೆಗೆ ಹೊಸ ಪರಿಸರವನ್ನು ಸೃಷ್ಟಿಸಿದೆ. ಬೆಳೆಯನ್ನು ತಿನ್ನುವ ಸಣ್ಣ ಕೊಂಬಿನ ಈ ಮಿಡತೆಗಳು ಇತ್ತೀಚೆಗೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಗುಜರಾತ್‌ ರಾಜ್ಯಗಳ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ದಾಳಿ ಮಾಡಿವೆ ಎಂದು ಸಂಸ್ಥೆ ಹೇಳಿದೆ.

‘ಈ ಪ್ರದೇಶದಲ್ಲಿ ಅನಾದಿ ಕಾಲದಿಂದಲೂ ಮಿಡತೆಗಳಿವೆ. ಆದರೆ ಮಾನವನಿರ್ಮಿತ ಕೃತ್ಯಗಳಿಂದಾಗಿ ಹವಾಮಾನ ವೈಪರೀತ್ಯ ಉಂಟಾಗಿ, ಮಿಡತೆಗಳ ಸಂಖ್ಯೆ ವಿಪರೀತವಾಗಲು ಕಾರಣವಾಗಿದೆ. ಮಿಡತೆಗಳ ಸಂಖ್ಯೆ ಹೆಚ್ಚಿದ ಕಾರಣಕ್ಕೆ ಪಾಕಿಸ್ತಾನವು ಕಳೆದ ಫೆಬ್ರುವರಿಯಲ್ಲಿ ತುರ್ತುಸ್ಥಿತಿಯನ್ನು ಘೋಷಿಸಿತ್ತು ಎಂದು ಡಬ್ಲ್ಯುಎಂಒ ತಿಳಿಸಿದೆ.

‘ಹವಾಮಾನ ಬದಲಾವಣೆಗೆ ನಿಖರವಾದ ಕಾರಣ ಹೇಳುವುದು ಕಷ್ಟ. ಆದರೆ‌, ತಾಪಮಾನ ಏರಿಕೆಯು ಈ ಮಿಡತೆಗಳ ವಂಶವೃದ್ಧಿ ಹಾಗೂ ಜೀವಿತಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿದೆ’ ಎಂದು ಇಂಟರ್‌ ಗವರ್ನ್‌ಮೆಂಟಲ್‌ ಅಥಾರಿಟಿ ಆನ್‌ ಕ್ಲೈಮೇಟ್‌ ಪ್ರೆಡಿಕ್ಷನ್‌ ಆ್ಯಂಡ್‌ ಅಪ್ಲಿಕೇಷನ್ಸ್‌ ಸೆಂಟರ್‌ನ (ಐಸಿಪಿಎಸಿ) ವಿಜ್ಞಾನಿಯೊಬ್ಬರು ಹೇಳಿದ್ದಾರೆ.

2019ರಲ್ಲಿ ಮಿಡತೆಗಳು ನಡೆಸಿದ ಮೊದಲ ದಾಳಿಯಲ್ಲಿ ಸೊಮಾಲಿಯಾ ಹಾಗೂ ಇಥಿಯೋಪಿಯಾದ ಸುಮಾರು 70,000 ಹೆಕ್ಟೇರ್‌ ಹೊಲದ ಬೆಳೆಗಳು ಹಾಗೂ ಕೀನ್ಯಾದ 2,400 ಕಿ.ಮೀ ಉದ್ದದ ಹುಲ್ಲುಗಾವಲು ನಾಶವಾಗಿವೆ ಎಂದು ಡಬ್ಲ್ಯುಎಂಒ ಅಂಕಿ ಅಂಶಗಳ ಮಾಹಿತಿ ನೀಡಿದೆ.

2019ರ ಡಿಸೆಂಬರ್‌ನಿಂದ 2020ರ ಮಾರ್ಚ್‌ವರೆಗಿನ ಅವಧಿಯಲ್ಲಿ ಇಥಿಯೋಪಿಯಾದ 1.14 ಲಕ್ಷ ಹೆಕ್ಟೇರ್‌ ಹುಲ್ಲುಗಾವಲು, 41,000 ಹೆಕ್ಟೇರ್‌ ಜೋಳ ಹಾಗೂ 36,000 ಹೆಕ್ಟೇರ್‌ ಗೋದಿ ಬೆಳೆಯನ್ನು ಮಿಡತೆಗಳು ನಾಶಪಡಿಸಿವೆ ಎಂದು ಇತ್ತೀಚಿನ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT