ಮಂಗಳವಾರ, ಜುಲೈ 27, 2021
24 °C
ಭಾರತದ ಭೂಭಾಗ ಒಳಗೊಂಡ ಹೊಸ ನಕ್ಷೆ

ನೇಪಾಳ ಸಂಸತ್‌ ಅಧಿವೇಶನ ಆರಂಭ: ಪರಿಷ್ಕೃತ ಭೂಪಟಕ್ಕೆ ಅನುಮೋದನೆ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

ಕಠ್ಮಂಡು: ಸಂಸತ್‌ ಅಧಿವೇಶನ ಶನಿವಾರ ಆರಂಭಗೊಂಡಿದ್ದು, ನೇಪಾಳದ ಭೌಗೋಳಿಕ ಮತ್ತು ರಾಜಕೀಯ ಭೂಪಟವನ್ನು ಮಾರ್ಪಡಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅನುಮೋದಿಸುವ ಸಾಧ್ಯತೆ ಇದೆ.

ಭಾರತ ಜತೆಗಿನ ವಿವಾದಿತ ಗಡಿಯಲ್ಲಿರುವ ಲಿಪುಲೇಖ್‌, ಕಾಲಾಪಾನಿ ಮತ್ತು ಲಿಂಪಿಯಾಧೂರಾಗಳನ್ನು ತನ್ನದೆಂದು ಪ್ರತಿಪಾದಿಸುತ್ತಿರುವ ನೇಪಾಳ, ಈ ಪ್ರದೇಶಗಳನ್ನು ಸೇರ್ಪಡೆ ಮಾಡಿದ ಹೊಸ ಭೂಪಟವನ್ನು ಸಿದ್ಧಪಡಿಸಿದೆ.

‘ಭೂಪಟವನ್ನು ಮಾರ್ಪಡಿಸುವ ಸಂವಿಧಾನ ತಿದ್ದುಪಡಿ ಮಸೂದೆ ಮೇಲೆ ಚರ್ಚೆ ನಂತರ, ಅದನ್ನು ಮತಕ್ಕೆ ಹಾಕಲಾಗುವುದು’ ಎಂದು ಸಂಸತ್‌ನ ವಕ್ತಾರ ರಾಜನಾಥ್‌ ಪಾಂಡೆ ತಿಳಿಸಿದರು. ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವುದಾಗಿ ವಿರೋಧ ಪಕ್ಷಗಳಾದ ನೇಪಾಳಿ ಕಾಂಗ್ರೆಸ್‌ ಹಾಗೂ ಜನತಾ ಸಮಾಜವಾದಿ ಪಾರ್ಟಿ–ನೇಪಾಳ ಈಗಾಗಲೇ ಘೋಷಿಸಿವೆ.

ಈ ನಡುವೆ, ಸಂಸತ್‌ನಲ್ಲಿ ಮಸೂದೆಯನ್ನು ಮಂಡಿಸುವ ಸರ್ಕಾರದ ನಡೆಯನ್ನು ರಾಜತಾಂತ್ರಿಕರು ಆಕ್ಷೇಪಿಸಿದ್ದಾರೆ. ಈಗಾಗಲೇ ಸಂಪುಟವು ನೂತನ ಭೂಪಟಕ್ಕೆ ಅನುಮೋದನೆ ನೀಡಿರುವಾಗ. ಈ ಸಂಬಂಧ ಕಾರ್ಯಪಡೆಯೊಂದನ್ನು ರಚಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

ಪ್ರಕ್ರಿಯೆ: ಮಸೂದೆ ಅಂಗೀಕಾರವಾಗಲು, 275 ಸದಸ್ಯ ಬಲ ಹೊಂದಿರುವ ಲೋಕಸಭೆಯಲ್ಲಿ ಮೂರನೇ ಒಂದರಷ್ಟು ಮತಗಳ ಅಗತ್ಯ ಇದೆ. ಲೋಕಸಭೆಯಲ್ಲಿ ಅಂಗೀಕಾರಗೊಂಡ ಮಸೂದೆಗೆ ನ್ಯಾಷನಲ್‌ ಅಸೆಂಬ್ಲಿಯಲ್ಲಿ ಅನುಮೋದನೆ ನೀಡಲಾಗುತ್ತದೆ.

ಇದಾದ ನಂತರ, ಮಸೂದೆಯಲ್ಲಿ ತಿದ್ದುಪಡಿಗಳು ಅಗತ್ಯವೆನಿಸಿದರೆ, ಅದಕ್ಕೆ 72 ಗಂಟೆ ಕಾಲಾವಕಾಶ ನೀಡಲಾಗುತ್ತದೆ. ತಿದ್ದುಪಡಿಗಳನ್ನು ಒಳಗೊಂಡ ಮಸೂದೆಗೆ ನ್ಯಾಷನಲ್‌ ಅಸೆಂಬ್ಲಿ ಮತ್ತೊಮ್ಮೆ ಅನುಮೋದನೆ ನೀಡಿ, ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲಾಗುತ್ತದೆ. ನಂತರ ಈ ತಿದ್ದುಪಡಿಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು