ಮಂಗಳವಾರ, ಆಗಸ್ಟ್ 3, 2021
21 °C

ನೇಪಾಳ | ಅಧಿವೇಶನ ಮುಂದೂಡಿಕೆಗೆ ಅಧ್ಯಕ್ಷರ ಒಪ್ಪಿಗೆ: ಸರ್ಕಾರಕ್ಕೆ ಕುಟುಕು ಜೀವ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕಠ್ಮಂಡು: ಸಂಸತ್ ಅಧಿವೇಶನ ಮುಂದೂಡಬೇಕೆನ್ನುವ ಸರ್ಕಾರದ ವಿನಂತಿಗೆ ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಗುರುವಾರ ಒಪ್ಪಿಗೆ ಸೂಚಿಸಿದ್ದಾರೆ. ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದಲ್ಲಿ ಕಾಣಿಸಿಕೊಂಡಿರುವ ಭಿನ್ನಮತದ ಬಿಸಿಯಿಂದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ನೇತೃತ್ವದ ಸರ್ಕಾರಕ್ಕೆ ಇದು ಕುಟುಕು ಜೀವ ನೀಡಿದೆ.

ಸಂಸತ್ತನ್ನು ವಿಸರ್ಜಿಸದೇ, ಕೇವಲ ಅಧಿವೇಶನ ಮುಂದೂಡಿರುವ ಕಾರಣ ಶೀಘ್ರದಲ್ಲಿ ವಿಶ್ವಾಸಮತ ಯಾಚಿಸಬೇಕು ಎನ್ನುವ ಒತ್ತಡವಾಗಲೀ, ತಮ್ಮದೇ ಪಕ್ಷದ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಬಹುದಾದ ಅಪಾಯವೂ ಒಲಿ ಸರ್ಕಾರಕ್ಕೆ ಇರುವುದಿಲ್ಲ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. 

ಸಂಸತ್ತಿನ ಬಜೆಟ್ ಅಧಿವೇಶನವನ್ನು ಮುಂದೂಡುವಂತೆ ಅಧ್ಯಕ್ಷರನ್ನು ವಿನಂತಿಸುವ ಪ್ರಧಾನಿ ಒಲಿ ಅವರ ಪ್ರಸ್ತಾವಕ್ಕೆ ನೇಪಾಳ ಸಂಪುಟ ಸಭೆಯು ಗುರುವಾರ ಅನುಮೋದನೆ ನೀಡಿತು. ಸಂಪುಟ ಸಭೆಗೂ ಮೊದಲು ಒಲಿ ಅವರು ಅಧ್ಯಕ್ಷೆ ಭಂಡಾರಿ ಅವರನ್ನು ಎರಡು ಸಲ ಭೇಟಿಯಾಗಿದ್ದರು.

ನೇಪಾಳದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದ ಸಹ ಅಧ್ಯಕ್ಷ ಪುಷ್ಪ ಕಮಲ್ ದಹಾಲ್ (ಪ್ರಚಂಡ) ಅವರಿದ್ದಾರೆ. ಬುಧವಾರ ನಡೆದ ಪಕ್ಷದ ಸಭೆಯಲ್ಲಿ ಕಾರ್ಯಕಾರಿ ಸಮಿತಿಯ 44 ಸದಸ್ಯರ ಪೈಕಿ 31 ಮಂದಿ ಒಲಿ ವಿರುದ್ಧ ಮಾತನಾಡಿ, ರಾಜೀನಾಮೆಗೆ ಒತ್ತಾಯಿಸಿದರು ಎಂದು ಕಠ್ಮಂಡು ಪೋಸ್ಟ್‌ ಪತ್ರಿಕೆ ವರದಿ ಮಾಡಿದೆ. ಗೃಹ ಸಚಿವ ರಾಮ್‌ ಬಹದೂರ್ ಥಾಪ ಸಹ ಭಿನ್ನಮತೀಯರ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ.

ಸಂಸತ್ತಿನ ಅಧಿವೇಶನ ಮುಂದೂಡಿರುವ ಪ್ರಸ್ತುತ ಕ್ರಮವು ಅವಿಶ್ವಾಸ ನಿರ್ಣಯದ ತೂಗುತ್ತಿಯಿಂದ ಒಲಿ ಅವರನ್ನು ಪಾರು ಮಾಡಿದೆ. ಇದರ ಜೊತೆಗೆ ರಾಜಕೀಯ ಪಕ್ಷವು ಹೋಳಾಗುವುದನ್ನು ಮರು ವ್ಯಾಖ್ಯಾನಿಸುವ ಸುಗ್ರೀವಾಜ್ಞೆಯನ್ನು ಹೊರಡಿಸಲು ಅವಕಾಶ ಮಾಡಿಕೊಟ್ಟಿದೆ.

ಭಾರತದೊಂದಿಗೆ ಗಡಿ ಕಿಡಿ

ಭಾರತದೊಂದಿಗೆ ಗಡಿ ವಿವಾದ ಆರಂಭವಾದ ಬೆನ್ನಲ್ಲೇ ನೇಪಾಳದಲ್ಲಿ ರಾಜಕೀಯ ಚಟುವಟಿಕೆಗಳೂ ಗರಿಗೆದರಿವೆ. ಕೊರೊನಾ ಪಿಡುಗು ನಿರ್ವಹಣೆಯಲ್ಲಿ ಪ್ರಧಾನಿ ಒಲಿ ವಿಫಲರಾಗಿದ್ದಾರೆ ಎನ್ನುವುದು ಸ್ವಪಕ್ಷೀಯರು ಬಂಡೇಳಲು ಮುಖ್ಯ ಕಾರಣ. ಅದರೆ ಒಲಿ ಅವರು ಇದನ್ನು ಭಾರತದ ಚಿತಾವಣೆ ಎಂದು ದೇಶಭಕ್ತಿಗೆ ತಳಕು ಹಾಕಲು ಯತ್ನಿಸಿದ್ದಾರೆ.

'ಪ್ರಚಂಡ ಅವರು ದೆಹಲಿಯೊಂದಿಗೆ ಕೈಜೋಡಿಸಿ ನನ್ನ ಸರ್ಕಾರ ಉರುಳಿಸಲು ಯತ್ನಿಸುತ್ತಿದ್ದಾರೆ. ಹೊಸ ನಕಾಶೆಯು ದೆಹಲಿ ದೊರೆಗಳಿಗೆ ಬೇಸರ ತಂದಿದೆ. ಹೀಗಾಗಿಯೇ ಪ್ರಚಂಡ ನನ್ನ ವಿರುದ್ಧ ನಿಂತಿದ್ದಾರೆ' ಎಂಬ ಒಲಿ ಅವರ ಹೇಳಿಕೆಯನ್ನು ಹಿಮಾಲಯನ್ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು