ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಮಾಲಿನ್ಯ ಪ್ರಮಾಣ ಕುಸಿತ: ವಿಶ್ವಸಂಸ್ಥೆ

ಕೊಳಗೇರಿಗಳಲ್ಲಿ ಸಾಂಕ್ರಾಮಿಕ ಸಾಧ್ಯತೆ ಹೆಚ್ಚು; ನಗರಗಳ ಪುನಶ್ಚೇತನಕ್ಕೆ ಸಲಹೆ
Last Updated 28 ಜುಲೈ 2020, 7:51 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಲಾಕ್‌ಡೌನ್ ವೇಳೆನವದೆಹಲಿಯ ವಾತಾವರಣದಲ್ಲಿ ನೈಟ್ರೋಜನ್ ಡಯಾಕ್ಸೈಡ್ ಪ್ರಮಾಣ ಶೇ 70ರಷ್ಟು ಕುಸಿದಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.ಚೀನಾದ ನಗರ ಭಾಗಗಳಲ್ಲಿ ಶೇ 40, ಬೆಲ್ಜಿಯಂ ಹಾಗೂ ಜರ್ಮನಿಯಲ್ಲಿ ಶೇ 20 ಮತ್ತು ಅಮೆರಿಕದಲ್ಲಿ ಶೇ 40ರಷ್ಟು ಕುಸಿತ ಕಂಡುಬಂದಿದೆ.

ಸರ್ಕಾರಗಳು ವಾಯುಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಯೋಜನೆಗಳನ್ನು ಜಾರಿಗೆ ತರದಿದ್ದರೆ,ಪರಿಸರದಲ್ಲಿ ಆಗಿರುವ ಈ ಸಕಾರಾತ್ಮಕ ಬದಲಾವಣೆ ತಾತ್ಕಾಲಿಕವಾಗಿರುತ್ತದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

‘ಶೇ 90ರಷ್ಟು ಕೋವಿಡ್ ಪ್ರಕರಣಗಳು ನಗರ ಪ್ರದೇಶಗಳಲ್ಲಿ ಕಂಡುಬಂದಿವೆ. ನಗರಗಳ ಗಾಳಿಯ ಕಳಪೆ ಗುಣಮಟ್ಟವು ಕೋವಿಡ್ ಮರಣ ಪ್ರಮಾಣದ ಜತೆಗೆ ನಂಟು ಹೊಂದಿದೆ ಎಂದು ಹಲವು ವೈಜ್ಞಾನಿಕ ಅಧ್ಯಯನಗಳು ಅಭಿಪ್ರಾಯಪಟ್ಟಿವೆ’ ಎಂದುವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಅವರ ‘ನಗರಗಳಲ್ಲಿ ಕೋವಿಡ್–19’ ಹೆಸರಿನ ವರದಿಯಲ್ಲಿ ಉಲ್ಲೇಖಸಲಾಗಿದೆ.

‘ನಗರಗಳ ಜನಸಂಖ್ಯೆಯ ಪ್ರಮಾಣ ಮತ್ತು ಅವು ಜಾಗತಿಕವಾಗಿ ಮತ್ತು ಸ್ಥಳೀಯವಾಗಿ ಹೊಂದಿರುವ ಅಂತರ್‌ಸಂಪರ್ಕಗಳೇ ಕೋವಿಡ್ ಶೀಘ್ರವಾಗಿ ಹರಡಲು ಕಾರಣವಾಗಿವೆ’ ಎಂದು ವರದಿ ಹೇಳಿದೆ.

‘ಕೊರೊನಾ ನಿಯಂತ್ರಿಸುವ ಕಾರಣಕ್ಕೆ ಆರ್ಥಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರಿಂದ ವಾಯುಮಾಲಿನ್ಯ ಹಾಗೂ ವಾತಾವರಣಕ್ಕೆ ಹಸಿರುಮನೆ ಅನಿಲ ಹೊರಸೂಸುವಿಕೆ ಪ್ರಮಾಣ ಗಣನೀಯವಾಗಿ ಕುಸಿತಗೊಂಡಿದೆ. ಆರ್ಥಿಕ ಚಟುವಟಕೆಗಳು ಸೂಕ್ತ ನೀತಿಗಳ ಜೊತೆ ಪುನರಾರಂಭ ಆಗಬೇಕು. ಇಲ್ಲವಾದರೆ, ಮತ್ತೆ ವಾಯುಮಾಲಿನ್ಯದ ಅಪಾಯ ಎದುರಾಗುತ್ತದೆ’ ಎಂದು ವರದಿ ಸಲಹೆ ನೀಡಿದೆ.

ನಗರಗಳ ಪುನಶ್ಚೇತನಕ್ಕೆ ಸಲಹೆ:‘ನಗರಗಳು ಬಿಕ್ಕಟ್ಟಿನ ತೀವ್ರತೆಯನ್ನು ಎದುರಿಸುತ್ತಿವೆ. ಮುಖ್ಯವಾಗಿ ಆರೋಗ್ಯ ವ್ಯವಸ್ಥೆ, ಅಸಮರ್ಪಕ ನೀರು ಪೂರೈಕೆ, ಶೌಚಾಲಯ ಅವ್ಯವಸ್ಥೆ ಮೊದಲಾದ ಸವಾಲುಗಳು ಇವೆ. ಇಂತಹ ಅವ್ಯವಸ್ಥೆಗಳು ಹೆಚ್ಚಿರುವ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹೆಚ್ಚು ಆಳವಾಗಿ ಬೇರೂರಿದೆ’ ಎಂದು ಪ್ರಸ್ತಾಪಿಸಿದೆ.

‘ಮುಖ್ಯವಾಗಿ ಸಮಾಜದ ಅಂಚಿನಲ್ಲಿನಲ್ಲಿರುವ ಸಮುದಾಯಗಳು ಒಳಗೊಂಡಂತೆ ಗರ್ಭಿಣಿಯರು, ನವಜಾತ ಶಿಶುಗಳು ಹಾಗೂ ಹೆರಿಗೆ ವೇಳೆ ತಾಯಂದಿರ ಮರಣದ ಮೇಲೆ ಇದು ಹೆಚ್ಚು ಪ್ರಭಾವ ಬೀರುತ್ತದೆ ಎಂಬುದಕ್ಕೆ ಹೊಸ ಪುರಾವೆಗಳು ಲಭ್ಯವಾಗಿವೆ. ಮುಂಬೈನಲ್ಲಿ, ಏಪ್ರಿಲ್ ಮಧ್ಯಭಾಗದಲ್ಲಿ ಶೇ 30ರಷ್ಟು ಕಂಟೇನ್ಮೆಂಟ್ ‌ಪ್ರದೇಶಗಳು ಅಲ್ಲಿನ ಕೊಳಗೇರಿಗಳಲ್ಲಿ ಇದ್ದವು. ಶೇ 60ರಷ್ಟು ಕಂಟೇನ್ಮೆಂಟ್ ಪ್ರದೇಶಗಳು ಕೊಳಗೇರಿಗಳ 100 ಮೀಟರ್ ದೂರದಲ್ಲಿದ್ದವು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಕಲುಷಿತ ವಾತಾವರಣ ಹಾಗೂ ವಾಯುಮಾಲಿನ್ಯದಂತಹ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಬೇಕಾದರೆ, ನಗರಗಳಲ್ಲಿ ಪರಿವರ್ತನೆ ತರಲು ತುರ್ತಾಗಿ ಕಾರ್ಯಪ್ರವೃತ್ತರಾಗಬೇಕಾದ ಅಗತ್ಯವಿದೆ. ನಗರಗಳಿಗೆ ಹೊಸ ರೂಪ ನೀಡುವ ಬಗ್ಗೆ ಮರುಚಿಂತಿಸುವ ಸಮಯ ಬಂದಿದೆ’ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT