ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿನ ಸಿದ್ಧಾಂತ ಕೆಲಸಮಾಡಿಲ್ಲ; ಚೀನಾ ವಿರುದ್ಧದ ನೀತಿ ಬದಲಿಸಬೇಕಾಗಿದೆ: ಅಮೆರಿಕ

Last Updated 7 ಜುಲೈ 2020, 6:17 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಚೀನಾದ ಆರ್ಥಿಕತೆಯನ್ನು ಮುಕ್ತಗೊಳಿಸಿದರೆ ಅಲ್ಲಿಯ ಜನರಿಗೆ ಹೆಚ್ಚಿನ ರಾಜಕೀಯ ಸ್ವಾತಂತ್ರ್ಯ ಲಭಿಸಬಹುದೆಂಬ ಭಾವನೆಯಿಂದ ಅಮೆರಿಕವು ಚೀನಾಗೆ ನೆರವಾಗಿತ್ತು. ಆದರೆ, ಈ ನೀತಿ ಕೆಲಸಮಾಡಿಲ್ಲ. ಆದ್ದರಿಂದ ಚೀನಾದ ವಿರುದ್ಧ ಈಗಬೇರೆ ಮಾರ್ಗವನ್ನು ಅನುಸರಿಸಬೇಕಾಗಿದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಹೇಳಿದ್ದಾರೆ.

‘ಆರ್ಥಿಕತೆಯು ಮುಕ್ತಗೊಂಡಂತೆ ಚೀನಾದ ಜನರಿಗೆ ಹೆಚ್ಚು ರಾಜಕೀಯ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳು ಲಭಿಸುತ್ತವೆ ಎಂಬ ನಂಬಿಕೆ ಹುಸಿಯಾಗಿದೆ. ಈ ಸಿದ್ಧಾಂತ ಕೆಲಸಮಾಡಿಲ್ಲ. ಹಿಂದೆಆಡಳಿತ ನಡೆಸಿದವರನ್ನು ನಾನು ಟೀಕಿಸತ್ತಿಲ್ಲ. ಆದರೆ, ಅಮೆರಿಕವು ಈಗ ಬೇರೆ ದಾರಿಯನ್ನು ಹಿಡಿಯಬೇಕಾಗಿದೆ ಅಷ್ಟೇ. ಮುಂದಿನ ಹಾದಿ ಯಾವುದಿರಬೇಕು ಎಂಬುದನ್ನು ಅಧ್ಯಕ್ಷ ಟ್ರಂಪ್‌ ಅವರು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಟ್ರಂಪ್‌ಗಿಂತ ಹಿಂದೆ ಅಧಿಕಾರ ನಡೆಸಿದ ಡೆಮಾಕ್ರೆಟ್‌ ಮತ್ತು ರಿಪಬ್ಲಿಕನ್‌ ಪಕ್ಷಗಳ ಅಧ್ಯಕ್ಷರುಗಳು ಅಮೆರಿಕದ ಜತೆ ವ್ಯಾಪಾರ ಸಂಬಂಧಗಳನ್ನು ಹೊಂದಲು ಚೀನಾಗೆ ಅವಕಾಶ ನೀಡಿದರು. ಇದರಿಂದಾಗಿ ಮಧ್ಯಮ ವರ್ಗದ ಲಕ್ಷಾಂತರ ಅಮೆರಿಕನ್ನರು ಉದ್ಯೋಗ ಕಳೆದುಕೊಳ್ಳುವಂತಾಯಿತು. ಈ ನೀತಿಯಿಂದಾಗಿ ಅಮೆರಿಕಕ್ಕೆ ಆರ್ಥಿಕ ಹಾನಿಯಾಗಿದ್ದು ಒಂದೆಡೆಯಾದರೆ, ಚೀನಾ ಸರ್ಕಾರವು ತನ್ನ ಜನರನ್ನೂ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬುದು ಇನ್ನೊಂದು ಸಮಸ್ಯೆ. ಹಳೆಯ ನೀತಿಯು ಈ ಅವಳಿ ಸಮಸ್ಯೆಗಳಿಗೆ ಕಾರಣವಾಗಿದೆ’ ಎಂದು ಪಾಂಪಿಯೊ ಹೇಳಿದರು.

‘ಚೀನಾ ಜಾರಿ ಮಾಡಿದ ರಾಷ್ಟ್ರೀಯ ಭದ್ರತಾ ಕಾನೂನು, ಹಾಂಗ್‌ಕಾಂಗ್‌ನ ನಾಗರಿಕರ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ. ಚೀನಾದ ಜನರೂ ಯಶಸ್ವಿಯಾಗಬೇಕು, ಅವರು ಒಳ್ಳೆಯ ಜೀವನ ನಡೆಸಬೇಕು ಮತ್ತು ಅಮೆರಿಕದ ಜತೆ ಒಳ್ಳೆಯ ಬಾಂಧವ್ಯ ಹೊಂದಬೇಕು ಎಂದು ನೀವು ಭಾವಿಸುತ್ತೀರಿ. ಆದರೆ ಕಮ್ಯುನಿಸ್ಟ್‌ ಆಡಳಿತ ಏನು ಮಾಡುತ್ತಿದೆ, ಸರ್ವಾಧಿಕಾರಿ ಆಡಳಿತ ಜನರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದೂ ನಮಗೆ ತಿಳಿದಿದೆ. ಅದನ್ನೇ ಈಗ ಚೀನಾದಲ್ಲಿ ನೋಡುತ್ತಿದ್ದೇವೆ. ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ ಹೆಚ್ಚಾಗಿದೆ. ಈ ತಪ್ಪು ನಡವಳಿಕೆಯನ್ನು ಸರಿಪಡಿಸಲು ನಮ್ಮಿಂದ ಸಾಧ್ಯವಾದ ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡುತ್ತೇವೆ’ ಎಂದರು.

ಚೀನಾದಲ್ಲಿ ಒತ್ತಾಯಪೂರ್ವಕವಾಗಿ ಸಂತಾನಶಕ್ತಿಹರಣ, ಜನನ ನಿಯಂತ್ರಣ ಹಾಗೂ ಗರ್ಭಪಾತಗಳನ್ನು ಮಾಡಿಸಲಾಗುತ್ತದೆ ಎಂಬ ವರದಿಗಳಿಗೆ ಪ್ರತಿಕ್ರಿಯೆ ನೀಡುತ್ತಾ, ‘ಈ ವಿಚಾರಗಳಿಗೆ ಸಂಬಂಧಿಸಿದ ಎಲ್ಲಾ ಬೆಳವಣಿಗೆಗಳ ಮೇಲೆ ಕಣ್ಣಿಡಲಾಗುವುದು ಮತ್ತು ಅವರ ಕೃತ್ಯಗಳಿಗೆ ಅವರನ್ನು ಹೊಣೆಯಾಗಿಸಲಾಗುವುದು. ನಾಗರಿಕರ ಬಗ್ಗೆ ನಮಗಿರುವ ಕಾಳಜಿಯನ್ನು ಬೆಂಬಲಿಸುತ್ತಲೇ, ಚೀನಾದ ಕಮ್ಯುನಿಸ್ಟ್‌ ಪಕ್ಷದ ಇಂಥ ಕೃತ್ಯಗಳಿಗೂ ಬೆಂಬಲವಾಗಿ ನಿಲ್ಲುವ ಯಾವ ಉದ್ಯಮಿಯನ್ನೂ ಸ್ವೀಕರಿಸಲಾಗದು. ಅಂಥವರು ಬೆಲೆ ತೆರಬೇಕಾಗುತ್ತದೆ. ಯಾರೇ ಆಗಲಿ, ಏಕಕಾಲದಲ್ಲಿ ಈ ಎರಡೂ ಚಿಂತನೆಗಳನ್ನು ಹೊಂದಲು ಸಾಧ್ಯವಿಲ್ಲ. ಇಂಥವರಿಗೆ ಅಮೆರಿಕ ಬೆಂಬಲ ನೀಡುವುದಿಲ್ಲ’ ಎಂದು ಪಾಂಪಿಯೊ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT