ಭಾನುವಾರ, ಜೂಲೈ 5, 2020
22 °C
ಔಷಧ ತಯಾರಿಕೆಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ

ಕೋವಿಡ್‌ಗೆ ಕಾರಣವಾಗುವ ಆರು ಜೀವಕಣಗಳ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಕೋವಿಡ್‌–19ಗೆ ಒಳಗಾದವರ ಪ್ರತಿರಕ್ಷಣಾ ಕ್ರಮದ ಅಧ್ಯಯನ ನಡೆಸಿದ ವಿಜ್ಞಾನಿಗಳು, ಇಂಥ ರೋಗಿಗಳಲ್ಲಿ ವಿಶಿಷ್ಟ ಮಾದರಿಯ ಆರು ಜೀವಕಣಗಳು ಇರುವುದನ್ನು ಪತ್ತೆ ಮಾಡಿದ್ದಾರೆ. ಈ ರೋಗಕ್ಕೆ ಔಷಧವನ್ನು ಕಂಡುಹಿಡಿಯುವ ದಿಕ್ಕಿನಲ್ಲಿ ಈ ಅಧ್ಯಯನವು ದೊಡ್ಡ ಪ್ರಮಾಣದಲ್ಲಿ ನೆರವಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಕೋವಿಡ್‌–19ಗೆ ತುತ್ತಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿದ ಬ್ರಿಟನ್ನಿನ ಲಾಸನ್‌ ಹೆಲ್ತ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿಗಳು, ಈ ಎಲ್ಲಾ ರೋಗಿಗಳಲ್ಲಿ ಜನಸಾಮಾನ್ಯರಲ್ಲಿ ಕಾಣಿಸದಂಥ ಆರು ವಿಶಿಷ್ಟ ಅಣುಗಳು ಇರುವುದನ್ನು ಪತ್ತೆ ಮಾಡಿದ್ದಾರೆ.

‘ಕೋವಿಡ್‌ಗೆ ಒಳಗಾದ ಕೆಲವರ ದೇಹದ ರೋಗನಿರೋಧಕ ವ್ಯವಸ್ಥೆಯು ರೋಗಾಣುವಿನ ವಿರುದ್ಧ ಅತಿಯಾದ ಪ್ರತಿಕ್ರಿಯೆ ವ್ಯಕ್ತಪಡಿಸಿ, ದೇಹದೊಳಗೆ ಸೈಟೊಕಿನ್‌ ಬಿರುಗಾಳಿ ಎಬ್ಬಿಸುತ್ತದೆ. ಇದರ ಪರಿಣಾಮ, ಉರಿಯೂತದಿಂದಾಗಿ ದೇಹದ ಆರೋಗ್ಯಕರ ಕೋಶಗಳಿಗೆ ಹಾನಿಯಾಗುತ್ತವೆ. ಈ ಉರಿಯೂತಕ್ಕೆ ಕಾರಣವೆನೆಂದು ತಿಳಿಯದೆಯೇ ವೈದ್ಯರು ಅದನ್ನು ಕಡಿಮೆ ಮಾಡುವ ಪ್ರಯತ್ನ ನಡೆಸುತ್ತಾರೆ’ ಎಂದು ವಿಜ್ಞಾನಿಗಳು ವರದಿಯಲ್ಲಿ ಹೇಳಿದ್ದಾರೆ.

‘ಯಾವುದಕ್ಕೆ ಚಿಕಿತ್ಸೆ ನೀಡಬೇಕು ಎಂಬುದನ್ನು ನಾವು ಅಧ್ಯಯನದ ಮೂಲಕ ಮೊದಲಬಾರಿಗೆ ಕಂಡುಕೊಂಡಿದ್ದೇವೆ. ಇದು ಔಷಧ ಪತ್ತೆ ಮಾಡುವ ದಿಕ್ಕಿನಲ್ಲಿ ಸಹಾಯಕವಾಗಲಿದೆ’ ಎಂದು ವಿಜ್ಞಾನಿ ಫ್ರೇಸರ್‌ ತಿಳಿಸಿದ್ದಾರೆ.

ಈ ವಿಜ್ಞಾನಿಗಳು 30 ಮಂದಿಯ ಮಾದರಿಗಳ ಅಧ್ಯಯನ ನಡೆಸಿ ವರದಿ ತಯಾರಿಸಿದ್ದಾರೆ. ಕೋವಿಡ್‌–19ಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ 10 ಮಂದಿ, ಇತರ ಕಾಯಿಲೆಗಳನ್ನು ಹೊಂದಿ ಆಸ್ಪತ್ರೆಗೆ ದಾಖಲಾದ 10 ಮಂದಿ ಹಾಗೂ 10 ಮಂದಿ ಆರೋಗ್ಯಕರ ಜನರನ್ನು  ಅಧ್ಯಯನಕ್ಕೆ ಒಳಪಡಿಸಿ ಈ ವರದಿ ತಯಾರಿಸಿದ್ದಾಗಿ ವಿಜ್ಞಾನಿಗಳು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು