ಗುರುವಾರ , ಡಿಸೆಂಬರ್ 3, 2020
19 °C
ಕಣ್ಗಾವಲು ಉಪಗ್ರಹ, ಕ್ಷಿಪಣಿ ಉಡ್ಡಯನ ಹಾದಿ ಸುಗಮ

ಅಮೆರಿಕ ನಿರ್ಬಂಧ ತೆರವು | ಘನ ಇಂಧನ ರಾಕೆಟ್ ಬಳಕೆಗೆ ದಕ್ಷಿಣ ಕೊರಿಯಾಗೆ ಅನುಮತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸೋಲ್: ಬಾಹ್ಯಾಕಾಶ ಉಡಾವಣಾ ವಾಹನಗಳಿಗೆ ಘನ ಇಂಧನವನ್ನು ಬಳಸಲು ಅಮೆರಿಕ ಒಪ್ಪಿಗೆ ನೀಡಿದೆ ಎಂದು ದಕ್ಷಿಣ ಕೊರಿಯಾ ಮಂಗಳವಾರ ಹೇಳಿಕೊಂಡಿದೆ. ದಕ್ಷಿಣ ಕೊರಿಯಾ ತನ್ನ ಮೊದಲ ಕಣ್ಗಾವಲು ಉಪಗ್ರಹ ಉಡ್ಡಯನ ಮಾಡಲು ಮತ್ತು ಹೆಚ್ಚು ಶಕ್ತಿಶಾಲಿ ಕ್ಷಿಪಣಿಗಳನ್ನು ನಿರ್ಮಿಸುವ ತಂತ್ರಜ್ಞಾನವನ್ನು ರೂಪಿಸಲು ಈ ನಿರ್ಧಾರ ಅನುವು ಮಾಡಿಕೊಡಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 

ಘನ ಇಂಧನವು ರಾಕೆಟ್‌ಗೆ ಹೆಚ್ಚಿನ ಚಲನಶೀಲತೆಯನ್ನು ನೀಡುತ್ತದೆ. ಜೊತೆಗೆ ಉಡ್ಡಯನ ತಯಾರಿಯ ಸಮಯವನ್ನು ಕಡಿಮೆಗೊಳಿಸುತ್ತದೆ. ಘನ ಇಂಧನ ಬಳಕೆ ಮಾಡದಂತೆ ದಕ್ಷಿಣ ಕೊರಿಯಾ ಮೇಲೆ ಅಮೆರಿಕ ನಿರ್ಬಂಧ ವಿಧಿಸಿತ್ತು. ಬೃಹತ್ ಕ್ಷಿಪಣಿಗಳನ್ನು ಉತ್ಪಾದಿಸುವ ಮೂಲಕ ಪ್ರಾದೇಶಿಕವಾಗಿ ಶಸ್ತ್ರಾಸ್ತ್ರ ಸ್ಪರ್ಧೆ ಏರ್ಪಡುತ್ತದೆ ಎಂಬ ಕಾರಣಕ್ಕೆ ಅಮೆರಿಕ ಈ ನಿರ್ಧಾರ ತೆಗೆದುಕೊಂಡಿತ್ತು. 

ಆದರೆ ಇದೀಗ ಅಮೆರಿಕ ಹಾಗೂ ದಕ್ಷಿಣ ಕೊರಿಯಾ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದು, ನಿರ್ಬಂಧ ತೆರವುಗೊಳಿಸಲು ಒಪ್ಪಿಗೆ ಸಿಕ್ಕಿದೆ. 

‘ದೇಶದ ಸಂಶೋಧನಾ ಕೇಂದ್ರಗಳು, ಕಂಪನಿಗಳು ಘನ ಇಂಧನ ರಾಕೆಟ್ ಬಳಸಿಕೊಂಡು ಬಾಹ್ಯಾಕಾಶ ಉಡ್ಡಯನ ರಾಕೆಟ್‌ಗಳ ಅಭಿವೃದ್ಧಿ ಹಾಗೂ ಉತ್ಪಾದನೆಯಲ್ಲಿ ಇನ್ನುಮುಂದೆ ತೊಡಗಬಹುದು’ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಕಿಮ್ ಹ್ಯುನ್ ಚೊಂಗ್ ಅವರು ತಿಳಿಸಿದ್ದಾರೆ. 

ಆದರೆ, 800 ಕಿಲೋಮೀಟರ್‌ ವ್ಯಾಪ್ತಿ ಮೀರಿದ ಕ್ಷಿಪಣಿಗಳ ತಯಾರಿಕೆಗೆ ದಕ್ಷಿಣ ಕೊರಿಯಾ ಮೇಲೆ ಈಗಲೂ ನಿರ್ಬಂಧ ಮುಂದುವರಿದಿದೆ ಎಂದು ಪರಿಷ್ಕೃತ ಒಪ್ಪಂದ ಉಲ್ಲೇಖಿಸಿದೆ. ರಾಷ್ಟ್ರೀಯ ಭದ್ರತೆಗೆ ಅಗತ್ಯ ಎಂದಾದರೆ ದಕ್ಷಿಣ ಕೊರಿಯಾವು ಈ ಬಗ್ಗೆ ಅಮೆರಿಕ ಜೊತೆ ಮತ್ತೆ ಚರ್ಚೆ ನಡೆಸಲು ಅವಕಾಶವಿದೆ. 

ಸೇನಾ ಕಣ್ಗಾವಲು ಉಪಗ್ರಹಗಳ ಉಡ್ಡಯನಕ್ಕೆ ಘನ ಇಂಧನವನ್ನು ಬಳಸಿಕೊಳ್ಳಲು ದಕ್ಷಿಣ ಕೊರಿಯಾ ಉದ್ದೇಶಿಸಿದೆ. ಈವರೆಗೆ ಈ ಉದ್ದೇಶದ ಯಾವ ಉಪಗ್ರಹವನ್ನೂ ದಕ್ಷಿಣ ಕೊರಿಯಾ ಹೊಂದಿಲ್ಲ. 

ಉತ್ತರ ಕೊರಿಯಾದ ಚಲನವಲನಗಳನ್ನು ತಿಳಿದುಕೊಳ್ಳಲು ಎರಡು ಅಥವಾ ಮೂರು ಉಪಗ್ರಹಗಳನ್ನು ಉಡ್ಡಯನ ಮಾಡಬೇಕಿದೆ ಎಂದು ದಕ್ಷಿಣ ಕೊರಿಯಾ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಸಂಸ್ಥೆಯ ಕ್ಷಿಪಣಿ ತಜ್ಞ ಲೀ ಚೂನ್ ಅವರು ಅಭಿಪ್ರಾಯಪಟ್ಟಿದ್ದಾರೆ. 

ಅಮೆರಿಕದ ನೆಲವನ್ನು ಸ್ಪರ್ಶಿಸುವ ಸಾಮರ್ಥ್ಯದ ಮೂರು ಖಂಡಾಂತರ ಕ್ಷಿಪಣಿಗಳನ್ನು ಉತ್ತರ ಕೊರಿಯಾ 2017ರಲ್ಲಿ ಪರೀಕ್ಷಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು