ಮಂಗಳವಾರ, ನವೆಂಬರ್ 30, 2021
21 °C

ಎಚ್‌1ಬಿ ವೀಸಾ ವಿರುದ್ಧದ ಕಾರ್ಯಾದೇಶಕ್ಕೆ ಟ್ರಂಪ್ ಸಹಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ವಿದೇಶಿಗರು ಅಮೆರಿಕದಲ್ಲಿ ಉದ್ಯೋಗ ಮಾಡಲು ಅವಕಾಶ ಕಲ್ಪಿಸುವ ಎಚ್‌1–ಬಿ ವೀಸಾ ವಿರುದ್ಧದ ಕಾರ್ಯಾದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಸಹಿ ಹಾಕಿದ್ದು, ಇದರಿಂದ ಇಲ್ಲಿನ ಐಟಿ ಉದ್ಯೋಗಗಳ ಮೇಲೆ ಕಣ್ಣಿಟ್ಟಿದ್ದ ಭಾರತದ ಐಟಿ ವೃತ್ತಿಪರರಿಗೆ ಬಹುದೊಡ್ಡ ಆಘಾತ ಉಂಟಾಗಿದೆ.

ಎಚ್‌1ಬಿ ವೀಸಾ ವಿತರಣೆಯನ್ನು ವರ್ಷಾಂತ್ಯದವರೆಗೆ ರದ್ದುಗೊಳಿಸಬೇಕೆಂಬುದು ಅಮೆರಿಕ ಸರ್ಕಾರ ಆದೇಶ ಹೊರಡಿಸಿ ತಿಂಗಳು ಕಳೆಯುವಷ್ಟರಲ್ಲಿ ಟ್ರಂಪ್ ಈ ಕ್ರಮ ಕೈಗೊಂಡಿದ್ದಾರೆ.

ನವೆಂಬರ್‌ನಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಿಗದಿಯಾಗಿದೆ. ಮತ್ತೊಂದು ಅವಧಿಗೆ ಅಧ್ಯಕ್ಷರಾಗಲು ಬಯಸಿರುವ ಟ್ರಂಪ್‌, ಅಮೆರಿಕದಲ್ಲಿ ನಿರುದ್ಯೋಗ ತಗ್ಗಿಸಲು ಹಾಗೂ ವಿದೇಶಿಗರಿಂದ ಅಮೆರಿಕದ ಉದ್ಯೋಗಿಗಳಿಗೆ ಸಮಸ್ಯೆಯಾಗುವುದನ್ನು ತಪ್ಪಿಸಲು ಮುಂದಾಗಿದ್ದಾರೆ.

‘ಉದ್ಯೋಗದಲ್ಲಿ ಅಮೆರಿಕನ್ನರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು. ಕಠಿಣ ಪರಿಶ್ರಮದಿಂದ ದುಡಿಯುವ ಇಲ್ಲಿನ ನಾಗರಿಕರಿಗೆ ಅನ್ಯಾಯವಾಗಬಾರದು. ಈ ಕಾರಣದಿಂದಲೇ ಎಚ್‌1–ಬಿ ವೀಸಾ ವಿರುದ್ಧದ ಕಾರ್ಯಾದೇಶಕ್ಕೆ ಸಹಿ ಮಾಡುತ್ತಿದ್ದೇನೆ’ ಎಂದು ಟ್ರಂಪ್‌ ಮಾಧ್ಯಮದವರಿಗೆ ತಿಳಿಸಿದ್ದಾರೆ.

‘ಇನ್ನು ಮುಂದೆ ಅಮೆರಿಕದವರ ಕೆಲಸವನ್ನು ವಿದೇಶಿಗರು ಕಸಿದುಕೊಳ್ಳಲು ಸಾಧ್ಯವಿಲ್ಲ. ಈ ವೀಸಾದ ನಿಯಮಾವಳಿಗಳನ್ನು ಇನ್ನಷ್ಟು ಕಠಿಣಗೊಳಿಸಿದ್ದೇವೆ. ಅಮೆರಿಕದಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸಬಲ್ಲ, ವಿಶೇಷ ಪರಿಣತಿ ಹೊಂದಿರುವ ವಿದೇಶಿ ಉದ್ಯೋಗಿಗಳಿಗೆ ಮಾತ್ರ ಇನ್ನು ಮುಂದೆ ಈ ವೀಸಾ ನೀಡಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ನಮ್ಮ ಕಂಪನಿಯು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಸಾಧಿಸಿರುವ ವಿದೇಶಿ ಕಂಪನಿಗಳ ಶೇಕಡ 20 ಮಂದಿಗೆ ಉದ್ಯೋಗ ಕಲ್ಪಿಸಲಿದೆ ಎಂದು ಟೆನ್ನಿಸಿ ವ್ಯಾಲಿ ಅಥಾರಿಟಿ (ಟಿವಿಎ) ಸಂಸ್ಥೆ ತಿಳಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್‌ ‘ಟಿವಿಎ ನಿರ್ಧಾರದಿಂದ ಅಮೆರಿಕದ 200ಕ್ಕೂ ಅಧಿಕ ನುರಿತ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಅಪಾಯ ಇದೆ’ ಎಂದರು.

‘ಕೋವಿಡ್‌–19ನಿಂದಾಗಿ ಅಮೆರಿಕದಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲೇ ಟಿವಿಎ ಸಂಸ್ಥೆ ಹೊರಗುತ್ತಿಗೆ ನೀಡಲು ಮುಂದಾಗಿದೆ. ಇದರಿಂದ ದೇಶದ ಆಂತರಿಕ ಭದ್ರತೆಯ ಮಾಹಿತಿಗಳು ಸೋರಿಕೆಯಾಗುವ ಅಪಾಯವಿದೆ’ ಎಂದು ಶ್ವೇತ ಭವನವು ಇತ್ತೀಚೆಗೆ ಪ್ರಕಟಣೆಯಲ್ಲಿ ತಿಳಿಸಿತ್ತು. ‘ಟ್ರಂಪ್‌ ಅವರು ಈಗ ಕೈಗೊಂಡಿರುವ ನಿರ್ಧಾರದಿಂದಾಗಿ ಎಚ್‌1–ಬಿ ವೀಸಾದ ದುರುಪಯೋಗವನ್ನು ತಡೆಯಬಹುದು’ ಎಂದು ಶ್ವೇತ ಭವನದ ಪ್ರಕಟಣೆಯಲ್ಲಿ ಹೇಳಲಾಗಿದೆ.

’ಶೇಕಡ 75ರಷ್ಟು ಮಂದಿ ಭಾರತೀಯರು ಎಚ್‌1–ಬಿ ವೀಸಾ ಪಡೆದು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರಲ್ಲ’ ಎಂದು ವ್ಯಕ್ತಿಯೊಬ್ಬರು ಟ್ರಂಪ್‌ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ‘ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಇರುವವರಿಗೆ ಖಂಡಿತ ಅವಕಾಶ ನೀಡಲಾಗುತ್ತದೆ. ಸದ್ಯದಲ್ಲೇ ವಲಸೆ ಮಸೂದೆ ಬಗ್ಗೆಯೂ ಚರ್ಚಿಸಲಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು