ಶನಿವಾರ, ಜುಲೈ 31, 2021
25 °C

ಕೋವಿಡ್‌–19 | ಮಾಸ್ಕ್‌ ಧರಿಸಲು ಆರಂಭಿಸಿದ ಟ್ರಂಪ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇದೇ ಮೊದಲ ಬಾರಿಗೆ ಮಾಸ್ಕ್‌ ಧರಿಸಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ಶನಿವಾರ ಅವರು ಸೇನಾ ಆಸ್ಪತ್ರೆಗೆ ಭೇಟಿ ನೀಡಿದ್ದು, ಆ ಸಂದರ್ಭದಲ್ಲಿ ಅವರು ಆರೋಗ್ಯಾಧಿಕಾರಿಗಳ ಸಲಹೆಯ ಮೇರೆಗೆ ಮಾಸ್ಕ್‌ನಿಂದ ತಮ್ಮ ಬಾಯಿ ಹಾಗೂ ಮೂಗನ್ನು ಮುಚ್ಚಿಕೊಂಡಿದ್ದರು.

ಗಾಯಗೊಂಡಿರುವ ಸೈನಿಕರು ಹಾಗೂ ಕೋವಿಡ್‌–19 ಪೀಡಿತರ ಆರೈಕೆ ಮಾಡುತ್ತಿರುವ ವೈದ್ಯಕೀಯ ಕಾರ್ಯಕರ್ತರ ಆರೋಗ್ಯ ವಿಚಾರಿಸಲು ಅವರು ಸೇನಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಶ್ವೇತಭವನವನ್ನು ಬಿಡುವುದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನೀವು ಆಸ್ಪತ್ರೆಗೆ ಭೇಟಿ ನೀಡುತ್ತೀರಿ ಎಂದ ಮೇಲೆ ಮಾಸ್ಕ್‌ ಧರಿಸುವುದೇ ಉತ್ತಮ ಎಂಬುದು ನನ್ನ ಭಾವನೆ’ ಎಂದು ಕುಟುಕಿದ್ದರು. ಹೆಲಿಕಾಪ್ಟರ್‌ ಏರುವಾಗ ಅವರು ಮಾಸ್ಕ್‌ ಧರಿಸಿದ್ದರೂ, ಅದರಿಂದ ಇಳಿಯುವಾಗ ಮಾಸ್ಕ್‌ ತೆಗೆದಿರಿಸಿದ್ದು ಕಂಡುಬಂದಿತ್ತು.

ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಸೇರಿದಂತೆ ಅಮೆರಿಕದ ಬಹುತೇಕ ಎಲ್ಲಾ ನಾಯಕರೂ ಕೆಲವು ತಿಂಗಳುಗಳಿಂದ ಮಾಸ್ಕ್‌ ಧರಿಸಿಕೊಂಡೇ ಓಡಾಡುತ್ತಿದ್ದಾರೆ. ಅಷ್ಟೇ ಅಲ್ಲ, ಮಾಸ್ಕ್‌ ಧರಿಸುವಂತೆ ಸಾರ್ವಜನಿಕರಲ್ಲಿ ಮನವಿಯನ್ನೂ ಮಾಡುತ್ತಿದ್ದಾರೆ. ಆದರೆ, ಟ್ರಂಪ್‌ ಮಾತ್ರ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಮಾಧ್ಯಮಗೋಷ್ಠಿಗಳು, ಕೊರೊನಾ ವೈರಸ್‌ ಕಾರ್ಯಪಡೆಯ ಸಭೆಗಳಲ್ಲಿ, ರ್‍ಯಾಲಿ, ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ಅವರು ಮಾಸ್ಕ್‌ ಧರಿಸುತ್ತಿರಲಿಲ್ಲ. ಈಗ, ಅವರು ಮಾಸ್ಕ್‌ ಧರಿಸಿಲು ಆರಂಭಿಸಿದ್ದಾರೆ.

‘ಮಾಸ್ಕ್‌ ಧರಿಸಿದರೆ ಅವರು ದುರ್ಬಲ ಎಂಬಂತೆ ಪ್ರತಿಬಿಂಬಿತವಾಗಬಹುದು, ಆರ್ಥಿಕ ಚೇತರಿಕೆಗಿಂತ ಹೆಚ್ಚಾಗಿ ಸಾರ್ವಜನಿಕರ ಆರೋಗ್ಯದ ಬಗ್ಗೆ ಜನರಲ್ಲಿ ಭಯ ಮೂಡಬಹುದು ಎಂಬ ಭಾವನೆ ಟ್ರಂಪ್‌ ಅವರಲ್ಲಿತ್ತು’ ಎಂದು ಹೆಸರು ತಿಳಿಸಲು ಇಚ್ಛಿಸದ ಅವರ ಸಮೀಪವರ್ತಿಗಳು ಮಾಧ್ಯಮ ಸಂಸ್ಥೆಗಳಿಗೆ ತಿಳಿಸಿದ್ದಾರೆ.

ಆದರೆ, ಟ್ರಂಪ್‌ ಅವರು ಇನ್ನು ಮುಂದೆ ಎಲ್ಲಾ ಸಂದರ್ಭದಲ್ಲೂ ಮಾಸ್ಕ್‌ ಧರಿಸುವರೇ ಎಂಬುದು ಸ್ಪಷ್ಟವಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು