ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರೀಕ್ಷೆಯಲ್ಲಿ ಅಮೆರಿಕ, ಭಾರತ ಮುಂದು: ಟ್ರಂಪ್‌

Last Updated 22 ಜುಲೈ 2020, 6:05 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಕೋವಿಡ್‌ ಸೋಂಕು ಪರೀಕ್ಷೆಯಲ್ಲಿ ಅಮೆರಿಕವು ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಭಾರತ ಇದೆ’ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಕೊರೊನಾ ವಿರುದ್ಧ ತನ್ನ ಆಡಳಿತ ಯಾವ ರೀತಿಯಲ್ಲಿ ಹೋರಾಡುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತಾ ಈ ವಿಚಾರ ತಿಳಿಸಿದ ಅವರು, ‘ಕಳೆದುಕೊಂಡ ಪ್ರತಿಯೊಂದು ಅಮೂಲ್ಯ ಜೀವದ ಬಗ್ಗೆಯೂ ನಾವು ಸಂತಾಪ ವ್ಯಕ್ತಪಡಿಸುತ್ತೇವೆ. ನಾವು ಲಸಿಕೆಯನ್ನು ಅಭಿವೃದ್ಧಿಪಡಿಸಿ, ಕೊರೊನಾವನ್ನು ಓಡಿಸುತ್ತೇವೆ ಎಂದು ಮೃತಪಟ್ಟ ಪ್ರತಿಯೊಬ್ಬರ ಗೌರವಾರ್ಥವಾಗಿ ನಾವು ಪ್ರತಿಜ್ಞೆ ಮಾಡುತ್ತೇವೆ. ಲಸಿಕೆ ಕಂಡುಹಿಡಿಯುವ ದಿಕ್ಕಿನಲ್ಲಿ ನಾವು ಗಮನಾರ್ಹ ಸಾಧನೆ ಮಾಡುತ್ತಿದ್ದೇವೆ. ಜನರು ನಿರೀಕ್ಷಿಸಿರುವುದಕ್ಕಿಂತ ಮುಂಚಿತವಾಗಿಯೇ ಲಸಿಕೆ ಬಿಡುಗಡೆಯಾಗುವ ಸಾಧ್ಯತೆ ಇದೆ’ ಎಂದರು.

ಅಮೆರಿಕದಲ್ಲಿ ಈವರೆಗೆ 38 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು,1.40 ಲಕ್ಷಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ.

‘ಕೋವಿಡ್‌ ಪರೀಕ್ಷೆಯಲ್ಲಿ ನಾವು ಮುಂಚೂಣಿಯಲ್ಲಿದ್ದು, ಸುಮಾರು ಐದು ಕೋಟಿ ಪರೀಕ್ಷೆಗಳನ್ನು ಮಾಡಿದ್ದೇವೆ. ಭಾರತದಲ್ಲಿ 1.20 ಕೋಟಿಪರೀಕ್ಷೆಗಳು ನಡೆದಿವೆ.ಇದನ್ನು ಬಿಟ್ಟರೆ ಉಳಿದ ದೇಶಗಳು 40ರಿಂದ 70 ಲಕ್ಷಗಳ ಆಸುಪಾಸಿನಲ್ಲಿ ಪರೀಕ್ಷೆಗಳನ್ನು ನಡೆಸಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

‘ಈ ಚೀನಾ ವೈರಸ್‌ ಅತ್ಯಂತ ಅಪಾಯಕಾರಿಯಾದುದು. ಅದನ್ನು ಚೀನಾದಿಂದ ಹೊರಬರಲು ಬಿಡಬಾರದಾಗಿತ್ತು. ಈಗ ಇಡೀ ಜಗತ್ತು ಸಂಕಷ್ಟ ಅನುಭವಿಸುತ್ತಿದೆ. ಇದು ಯಾರನ್ನು ಗುರಿಯಾಗಿಸುತ್ತಿದೆ, ಹೇಗೆ ನಿರ್ವಹಿಸಬೇಕು ಎಂಬುದು ಈಗ ನಮಗೆ ಮನವರಿಕೆಯಾಗಿದೆ. ನಾವು ಅತ್ಯಂತ ಶಕ್ತಿಶಾಲಿಯಾದ ಕಾರ್ಯಯೋಜನೆಯನ್ನು ರೂಪಿಸುತ್ತಿದ್ದೇವೆ’ ಎಂದು ಟ್ರಂಪ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT