ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಕೆರಳಿಸಿರುವ ಮಾಜಿ, ಹಾಲಿ ಶಾಸಕರು

ನಿಂಗಪ್ಪ ಅವರನ್ನು ಸೆಳೆಯಲು ಬಿಜೆಪಿ, ಜೆಡಿಎಸ್‌ ಯತ್ನ, ಷಡಕ್ಷರಿ ಹಾದಿ ನಿಗೂಢ, ಬಂಡಾಯದತ್ತ ರಾಮಸ್ವಾಮಿ ಗೌಡ
Last Updated 18 ಏಪ್ರಿಲ್ 2018, 11:11 IST
ಅಕ್ಷರ ಗಾತ್ರ

ತುಮಕೂರು: ಟಿಕೆಟ್‌ ಸಿಗದ ಕಾರಣಕ್ಕಾಗಿ ಸುದ್ದಿಯಲ್ಲಿರುವ ಕಾಂಗ್ರೆಸ್‌ನ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಎಚ್‌.ನಿಂಗಪ್ಪ, ಕುಣಿಗಲ್‌ನ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ, ತಿಪಟೂರು ಶಾಸಕ ಕೆ.ಷಡಕ್ಷರಿ ಹಾಗೂ ಬಿಜೆಪಿಯ ಮಾಜಿ ಶಾಸಕ ಸೊಗಡು ಶಿವಣ್ಣ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಯಾವ ನಡೆ ತುಳಿಯುತ್ತಾರೆ ಎಂಬ ಕೂತೂಹಲ ಕೆರಳಿದೆ.

ಹಾಲಿ ಶಾಸಕರಾಗಿದ್ದರೂ ಟಿಕೆಟ್‌ ಸಿಗದೆ ಪರಿತಪಿಸುತ್ತಿರುವ ಷಡಕ್ಷರಿ ಪರ ಆ ಕ್ಷೇತ್ರದಲ್ಲಿ ಸ್ವಲ್ಪ ಅನುಕಂಪ ಕಂಡುಬಂದಿದೆ. ಜಿಲ್ಲೆಯ ಬೇರೆಲ್ಲ ಶಾಸಕರಿಗೆ ಕೊಟ್ಟಿರುವಾಗ ಇವರೊಬ್ಬರಿಗೆ ಏಕೆ  ಈ ರೀತಿ ಮಾಡಬೇಕಿತ್ತು. ಕೊಬ್ಬರಿ ಬೆಲೆ ವಿಷಯ ಹಾಗೂ ನೊಣವಿನ ಕೆರೆಯಿಂದ ತಿಪಟೂರಿಗೆ ಕುಡಿಯುವ ನೀರಿನ ವಿಚಾರದಲ್ಲಿ ಸ್ವಲ್ಪ ಟೀಕೆಗೆ ಒಳಗಾಗಿದ್ದರೂ ಕ್ಷೇತ್ರದಲ್ಲಿ ಒಂದಿಷ್ಟು ಕೆಲಸ ಮಾಡಿಸಿದ್ದಾರೆ. ಅವರಿಗೆ ಟಿಕೆಟ್‌ ಕೊಡಬೇಕಾಗಿತ್ತು ಎಂದು ಅವರ ವಿರೋಧಿಗಳು ಸಹ ಹೇಳುತ್ತಿದ್ದಾರೆ.

ಟಿಕೆಟ್‌ ಘೋಷಣೆಯಾದ ಬಳಿಕ ಷಡಕ್ಷರಿ ತಿಪಟೂರಿನಲ್ಲಿ ಕಾಣಿಸಿಕೊಂಡಿಲ್ಲ. ಅವರ ಹಿಂಬಾಲಕರೇ ಸೇರಿ ತಿಪಟೂರು ಬಂದ್‌ ನಡೆಸಿದ್ದಾರೆ. ಮೈಸೂರು ಸೇರಿರುವ ಅವರಿಗೆ ಅಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವ ಪ್ರಯತ್ನ ಸಫಲವಾಗಿಲ್ಲ. ಅವರಿಗೆ ಏಕೆ ಟಿಕೆಟ್‌ ತಪ್ಪಿತು ಎಂಬ ಗೊಂದಲ, ಸಂದೇಹ ಅವರ ಹಿಂಬಾಲಕರಲ್ಲಿ ಮನೆ ಮಾಡಿದೆ.

’ತಿಪಟೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಶಿಧರ್‌ ಅವರು ಟಿಕೆಟ್‌ ಬಯಸಿ ಅರ್ಜಿ ಹಾಕಿದ್ದು  ಟಿಕೆಟ್‌ ತಪ್ಪಲು ಕಾರಣ. ಅವರು ಅರ್ಜಿ ಹಾಕದಿದ್ದರೆ ಷಡಕ್ಷರಿ ಅವರಿಗೇನೆ ಟಿಕೆಟ್‌ ಸಿಗುತ್ತಿತ್ತು’ ಎಂಬ ಗಾಳಿಸುದ್ದಿ ಹರಿಬಿಡಲಾಗಿದೆ.

’ಸಮೀಕ್ಷೆ ಪ್ರಕಾರ ಷಡಕ್ಷರಿ ಅವರಿಗೆ ಟಿಕೆಟ್‌ ಸಿಗಲಾರದು. ಅನಾರೋಗ್ಯ, ಅವರ ವೈಯಕ್ತಿಕ ಸಂಬಂಧವೊಂದು ಸಾರ್ವಜನಿಕಗೊಂಡ ಕಾರಣದಿಂದಲೂ ಟಿಕೆಟ್‌ ಕೈತಪ್ಪಬಹುದು. ಹೀಗಾಗಿ ತಮಗೆ ಟಿಕೆಟ್ ಸಿಗಬಹುದು ಎಂಬ ಆಸೆಯಲ್ಲಿ ಶಶಿಧರ್‌ ಕೊನೆ ಗಳಿಗೆಯಲ್ಲಿ ಬೆಂಗಳೂರಿನ ಕಾಂಗ್ರೆಸ್‌ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿ ಬಂದಿದ್ದರು. ಟಿಕೆಟ್‌ ಸಿಗದೆ ಇರುವ ಹಿಂದೆ ಶಶಿಧರ್‌ ಕಾರಣರಲ್ಲ’ ಎಂದು ಕಾಂಗ್ರೆಸ್‌ನ ಹೆಸರು ಹೇಳಲಿಚ್ಛಿಸದ ಹಿರಿಯ ಮುಖಂಡರೊಬ್ಬರು ತಿಳಿಸಿದರು.

’ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರೊಂದಿಗೆ ಶಶಿಧರ್‌ ಸಂ‍ಪರ್ಕದಲ್ಲಿ ಇದ್ದದ್ದು ನಿಜ. ಆದರೆ ಶಾಸಕರಿಗೆ ಟಿಕೆಟ್‌ ನೀಡದಂತೆ ಅವರೆಂದೂ ಒತ್ತಾಯಿಸಿರಲಿಲ್ಲ. ಅವರಿಗೆ ಕೊಡದಿದ್ದರೆ ಮಾತ್ರ ನನಗೊಂದು ಅವಕಾಶ ಮಾಡಿ
ಕೊಡಿ ಎಂದಿದ್ದರು. ಬಿ.ನಂಜಾಮರಿ ಅವರಿಗೆ ಟಿಕೆಟ್‌ ಸಿಕ್ಕಿರುವ ಹಿಂದೆ ಮುಖ್ಯಮಂತ್ರಿ ಆಸಕ್ತಿ ತೋರಿದ್ದು ಕಾರಣ’ ಎಂದು ಅವರು ಹೇಳಿದರು.

ಷಡಕ್ಷರಿ ಅವರು ಬಂಡಾಯವಾಗಿ ನಿಲ್ಲುವಂತೆ ಅವರ ಹಿಂಬಾಲಕರು ಒತ್ತಡ ಹೇರಬಹುದು. ಆದರೆ ಸದ್ಯದ ಸ್ಥಿತಿಯಲ್ಲಿ ಅವರ ಸ್ಪರ್ಧೆ ಅನುಮಾನ ಎಂದೂ ಹೇಳಲಾಗುತ್ತಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಚ್‌.ನಿಂಗಪ್ಪ ಅವರನ್ನು ಸೆಳೆಯಲು ಬಿಜೆಪಿ ಮತ್ತು ಜೆಡಿಎಸ್‌ ವರಿಷ್ಠರು ಸತತ ಪ್ರಯತ್ನ ನಡೆಸಿದ್ದಾರೆ. ನಿಂಗಪ್ಪ ಅವರಿಗೆ ಟಿಕೆಟ್‌ ಸಿಗಲಿಲ್ಲ ಎಂಬ ಸುದ್ದಿ ಸಿಕ್ಕ ಕ್ಷಣವೇ  ಬಿಜಿಪಿ ಮುಖಂಡರೊಬ್ಬರು ಅವರಿಗೆ ಕರೆ ಮಾಡಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ.

ಬಿಜೆಪಿ ಹಿರಿಯ ಮುಖಂಡರಾದ ಆರ್‌.ಅಶೋಕ್‌, ಶೋಭಾ ಕರಂದ್ಲಾಜೆ ಸಹ ಪಕ್ಷಕ್ಕೆ ಬರುವಂತೆ ಕೋರಿದ್ದಾರೆ. ಶಾಸಕ ಬಿ.ಸುರೇಶ್‌ಗೌಡ ಸಹ ಸಂಪರ್ಕದಲ್ಲಿದ್ದು, ಅವರನ್ನು ಸೆಳೆಯಲು ತೀವ್ರ ಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

’ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಸಹ ಕರೆ ಮಾಡಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಚುನಾವಣೆ ಘೋಷಣೆಗೆ ಮುನ್ನವೇ ನಿಂಗಪ್ಪ ಅವರನ್ನು ಪಕ್ಷಕ್ಕೆ ಬರುವಂತೆ ಕೋರಿದ್ದರು. ಆದರೆ ಅವರು ನಿರಾಕರಿಸಿದ್ದರು. ಅವರ ರಾಜಕೀಯ ಭವಿಷ್ಯಕ್ಕೆ ಗೌರಿಶಂಕರ್‌ ಕಂಟಕ ತಂದರು. ಹೀಗಾಗಿ ಯಾವುದೇ ಕಾರಣಕ್ಕೂ ಜೆಡಿಎಸ್‌ ಸೇರಲಾರರು’ ಎಂದು ಅವರ ಸಮೀಪವರ್ತಿಯೊಬ್ಬರು ತಿಳಿಸಿದರು.

ಬಂಡಾಯವಾಗಿ ನಿಲ್ಲುವಂತೆ ಕಾಂಗ್ರೆಸ್‌ನ ಕೆಲವು ಮುಖಂಡರು ಅವರನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಈ ಸಾಧ್ಯತೆ ಕಡಿಮೆ. ಕಾಂಗ್ರೆಸ್‌ ಪರವಾಗಿ ಪ್ರಚಾರ ಮಾಡದೆ ದೂರ ಉಳಿಯಬಹುದು ಎಂದು ಅವರು ಹೇಳಿದರು.

ಮೊದಲಿನಿಂದಲೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿರೋಧಿ ಪಾಳೆಯದಲ್ಲೇ ಗುರುತಿಸಿಕೊಂಡು ಬಂದಿದ್ದ ಸೊಗಡು ಶಿವಣ್ಣ ಅವರಿಗೆ ಟಿಕೆಟ್‌ ತಪ್ಪುವುದು ನಿಚ್ಚಳವಾಗಿತ್ತು. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಹಾಗೂ ಅವರ ಅನೇಕ ರಾಜಕೀಯ ಸಂಕಷ್ಟಗಳ ಸಮಯದಲ್ಲಿ ಮಾಜಿ ಸಂಸದ ಜಿ.ಎಸ್‌.ಬಸವರಾಜ್‌ ಅವರೊಂದಿಗೆ ಗಟ್ಟಿಯಾಗಿ ನಿಂತಿದ್ದರು. ಹೀಗಾಗಿ ಅವರ ಪುತ್ರ ಜ್ಯೋತಿ ಗಣೇಶ್‌ ಅವರನ್ನು ಯಡಿಯೂರಪ್ಪ ಸುಲಭವಾಗಿ ಬಿಟ್ಟುಕೊಡುವುದಿಲ್ಲ ಎಂಬುದು ಬಿಜೆಪಿಯ ಎಲ್ಲರಿಗೂ ತಿಳಿದಿತ್ತು.

’ಶಿವಣ್ಣ ರಾಜಕೀಯ ಭವಿಷ್ಯ ಸದ್ಯಕ್ಕೆ ಮಂಕಾದಂತೆ ತೋರುತ್ತಿದೆ. ಅವರೇ ಹೇಳಿಕೊಂಡಿರುವಂತೆ ಇದು ಅವರ ಕೊನೆಯ ಚುನಾವಣೆ ಆಗಿತ್ತು. ಅವರ ಹಿಂಬಾಲಕರು ಅವರನ್ನು ಬಂಡಾಯವಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಶಿವಣ್ಣ ತಮ್ಮ ನಡೆಯ ಬಗ್ಗೆ ತುಟಿ ಬಿಚ್ಚಿಲ್ಲ. ಇನ್ನೆರಡು ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಬಹುದು’ ಎಂದು ಅವರ ನಿಕಟವರ್ತಿಯೊಬ್ಬರು’ ತಿಳಿಸಿದರು.

ಜಿಲ್ಲಾ ಅಧ್ಯಕ್ಷರ ಹುದ್ದೆ ಆಮಿಷ

ಟಿಕೆಟ್‌ ಸಿಗದೆ ಮುನಿಸಿಕೊಂಡಿರುವ ಕುಣಿಗಲ್‌ ಕ್ಷೇತ್ರದ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡ ಅವರನ್ನು ಸಚಿವ ಡಿ.ಕೆ.ಶಿವಕುಮಾರ್‌ ಬೆಂಗಳೂರಿನ ಅವರ ಮನೆಯಲ್ಲಿ ಮಂಗಳವಾರ ಭೇಟಿ ಮಾಡಿ ಮನವೊಲಿಸಲು ಯತ್ನಿಸಿದ್ದಾರೆ.

’ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ ನೀಡುತ್ತೇವೆ. ಇಲ್ಲವಾದರೆ ಮುಂದೆ ವಿಧಾನ ಪರಿಷತ್ ಸದಸ್ಯರಾಗಿ  ಮಾಡುತ್ತೇವೆ. ಅಭ್ಯರ್ಥಿ ಡಾ.ರಂಗನಾಥ್ ಅವರನ್ನು ಬೆಂಬಲಿಸುವಂತೆ ಕೋರಿದರು’ ಎಂದು ರಾಮಸ್ವಾಮಿ ಗೌಡ ಅವರ ನಿಕಟವರ್ತಿಯೊಬ್ಬರು ತಿಳಿಸಿದರು.

’ಈ ಆಮಿಷಗಳಿಗೆ ಅವರು ಬಗ್ಗಲಿಲ್ಲ. ಟಿಕೆಟ್‌ ನೀಡಬೇಕು. ಇಲ್ಲದಿದ್ದರೆ ಬಂಡಾಯವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಹಿಂಬಾಲಕರ ಒತ್ತಡ, ಮುಂದಿನ ರಾಜಕೀಯ ಭವಿಷ್ಯದ ಕಾರಣ ಬಂಡಾಯವಾಗಿ ಸ್ಪರ್ಧೆ ಮಾಡಬಹುದು’ ಎಂದು ತಿಳಿಸಿದರು.

ಕೇಳದದಿದ್ದರೂ ಸಿಕ್ಕ ಟಿಕೆಟ್‌!

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗಲಿಲ್ಲ ಎಂದು ಮಾಜಿ–ಹಾಲಿ ಶಾಸಕರು ಬೀದಿ ರಂಪಾಟ ಮಾಡುತ್ತಿದ್ದರೆ, ಅತ್ತ ಬಿಜೆಪಿಯಲ್ಲಿ ಕೇಳದಿದ್ದರೂ ಟಿಕೆಟ್‌ ನೀಡಿದ್ದಾರೆ.

ವಿಧಾನ ಪರಿಷತ್‌ ಮಾಜಿ ಸದಸ್ಯ, ಜೆಡಿಎಸ್‌ನಿಂದ ಬಿಜೆಪಿ ಸೇರಿದ್ದ ಡಾ.ಎಂ.ಆರ್‌. ಹುಲಿನಾಯ್ಕರ್‌ ಕೇಳದೆ ಇದ್ದರೂ ಟಿಕೆಟ್‌ ಪಡೆದಿರುವ ಅದೃಷ್ಟವಂತರು.

ಬಿಜೆಪಿಗೆ ನೆಲೆ ಇಲ್ಲದ ಮಧುಗಿರಿಯಿಂದ ಅವರು ನಿಲ್ಲುವುದಿಲ್ಲ ಎಂದು ಹೇಳಿದ್ದರೂ ಅವರಿಗೆ ಟಿಕಟ್‌ ಘೋಷಿಸಲಾಗಿದೆ. ಜಿಲ್ಲಾ ಕೋರ್‌ ಕಮಿಟಿ ಅವರ ಹೆಸರನ್ನು ಸೂಚಿಸಿತ್ತು ಎನ್ನಲಾಗಿದೆ.

ಪಕ್ಷದ ಆದೇಶ ಪಾಲಿಸಲು ಆಗದೆ ಹುಲಿನಾಯ್ಕರ್‌ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಮಧುಗಿರಿಯಿಂದ ಕರೆ ಮಾಡಿದವರಿಗೆಲ್ಲ ನಾನು ನಿಲ್ಲುತ್ತಿಲ್ಲ ಎಂದು ಹೇಳಿ ಹೇಳಿ ಅವರಿಗೆ ಸಾಕಾಗಿದೆ.

ಟಿಕೆಟ್‌ ಬೇಕೆಂದು ಕೇಳುತ್ತಿರುವ ಮಧುಗಿರಿಯ ರಮೇಶ್‌ ರೆಡ್ಡಿ, ಹೇಮಾಸುಧಾರೆಡ್ಡಿ, ಡಾ.ಸೌಜನ್ಯ ಅವರಲ್ಲಿ ಯಾರಿಗಾದರೂ ಕೊಟ್ಟರೆ ಸಾಕೆಂದು ಪಕ್ಷದ ಕಡೆ ನೋಡುತ್ತಿದ್ದಾರೆ. ಮೂರನೇ ಪಟ್ಟಿಯಲ್ಲಿ ಹುಲಿನಾಯ್ಕರ್‌  ಬದಲಿಗೆ ಈ ಮೂವರಲ್ಲಿ ಯಾರಿಗಾದರೂ ಟಿಕೆಟ್‌ ಸಿಗಬಹುದಾಗಿದೆ. ಬಹುತೇಕ ರಮೇಶ್‌ ರೆಡ್ಡಿ ಅವರಿಗೆ ಕೊಡಬಹುದು ಎಂದು ತಿಳಿದುಬಂದಿದೆ.

ಬಿಜೆಪಿ ಟಿಕೆಟ್‌ ಕಡೆ ಡಿಕೆಶಿ ಆಪ್ತ

ಸಚಿವ ಡಿ.ಕೆ.ಶಿವಕುಮಾರ್‌ (ಡಿಕೆಶಿ) ಅವರ ಆಪ್ತ, ಪಾವಗಡದಲ್ಲಿ ಸೋಲಾರ್‌ ಪಾರ್ಕ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಕ್ರೆಡಲ್‌ ಮಾಜಿ ನಿರ್ದೇಶಕ ಬಲರಾಂ ಕಾಂಗ್ರೆಸ್‌ ಟಿಕೆಟ್‌ ಸಿಗದ ಕಾರಣ ಏಕಾಏಕಿ ಬಿಜೆಪಿ ಸೇರಿದ್ದಾರೆ.

ಡಿಕೆಶಿ ಅವರು ಟಿಕೆಟ್‌ ಕೊಟ್ಟೇ ಕೊಡಿಸುತ್ತಾರೆ ಎಂಬ ಆಸೆಯಲ್ಲಿ ಕೆಲಸಕ್ಕೆ ರಾಜೀನಾಮೆ ಕೊಡುವ ಮುನ್ನವೇ ಪಾವಗಡದಲ್ಲಿ ಪ್ರಚಾರ ನಡೆಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಈಗ ಬಿಜೆಪಿ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಮೂರನೇ ಪಟ್ಟಿಯಲ್ಲಿ ಇವರಿಗೆ ಟಿಕೆಟ್‌ ಘೋಷಣೆಯಾಗುವುದು ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT