ದುಬಾರಿ ದುನಿಯಾದಲ್ಲೂ ಬಿರುಸಿನ ವಹಿವಾಟು

7
ಹೂವಿನ ಬೆಲೆ ಗಗನಮುಖಿ; ಬಜಾರ್‌ನಲ್ಲಿ ವಿಭಿನ್ನ ಅಲಂಕಾರಿಕ ವಸ್ತುಗಳು

ದುಬಾರಿ ದುನಿಯಾದಲ್ಲೂ ಬಿರುಸಿನ ವಹಿವಾಟು

Published:
Updated:
Deccan Herald

ವಿಜಯಪುರ: ಗಣೇಶೋತ್ಸವಕ್ಕೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಲಂಕಾರಿಕ ವಸ್ತುಗಳು ಸೇರಿದಂತೆ, ಹೂವಿನ ಬೆಲೆ ಗಗನಮುಖಿಯಾಗಿವೆ. ಗೌರಿ ಸುತನ ಪೂಜೆಗಾಗಿ ದುಬಾರಿ ದುನಿಯಾವನ್ನು ಲೆಕ್ಕಿಸದೆ, ಬಜಾರ್‌ಗಿಳಿದ ಜನಸ್ತೋಮ ಬುಧವಾರ ಮುಸ್ಸಂಜೆ ಭರ್ಜರಿ ಖರೀದಿ ನಡೆಸಿತು.

ಗಣೇಶ ಪ್ರತಿಷ್ಠಾಪನೆ ಈ ಭಾಗದಲ್ಲಿ ಪೂರ್ವಿಕರ ಕಾಲದಿಂದಲೂ ನಡೆದು ಬಂದಿರುವ ಸಂಪ್ರದಾಯ. ಪ್ರತಿ ವರ್ಷವೂ ತಮಗೆ ಎಷ್ಟೇ ಕಷ್ಟ–ನಷ್ಟಗಳಿದ್ದರೂ ಯಾವುದನ್ನೂ ಲೆಕ್ಕಿಸದೆ, ಪದ್ಧತಿಗೆ ಚ್ಯುತಿ ಬಾರದಂತೆ ಗಣೇಶ ಕೂಡಿಸುವುದು ವಾಡಿಕೆ. ಇದರ ಪಾಲನೆಗಾಗಿ ಭಕ್ತ ಸಮೂಹ ಬಜಾರ್‌ನಲ್ಲಿ ವಹಿವಾಟು ನಡೆಸಿತು.

ಸಾರ್ವಜನಿಕ ಗಣೇಶೋತ್ಸವಕ್ಕೆ ಅಗತ್ಯವಿರುವ ವಿಭಿನ್ನ ಬಗೆಯ ಅಲಂಕಾರಿಕ ಸಾಮಗ್ರಿ ಖರೀದಿಗಾಗಿ ಗಜಾನನ ತರುಣ ಮಂಡಳಿಯ ಸದಸ್ಯರು ಅಂಗಡಿ, ಅಂಗಡಿ ಅಲೆದರು. ಮನೆಯಲ್ಲಿ ಕೂಡಿಸುವವರು ಸಹ ಹಿಂದೆ ಬೀಳಲಿಲ್ಲ. ಹೂವು, ಹಣ್ಣು, ಬಾಳೆ ಕಂದು, ಮಾವಿನ ತೊಳಲು, ಕಬ್ಬು, ಪೂಜಾ ಸಾಮಾಗ್ರಿಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸಿದರು.

‘ಹಿಂದಿನ ವರ್ಷಕ್ಕಿಂತ ಈ ಬಾರಿ ಬಗೆ ಬಗೆಯ ಅಲಂಕಾರಿಕ ವಸ್ತುಗಳು ಮಾರುಕಟ್ಟೆಗೆ ಬಂದಿವೆ. ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದ್ರೂ ವ್ಯಾಪಾರದ ಮೇಲೆ ಪರಿಣಾಮ ಬೀರಿಲ್ಲ. ಗ್ರಾಹಕರು ಉತ್ಸಾಹದಿಂದಲೇ ತಮಗೆ ಬೇಕಾದ ಅಲಂಕಾರಿಕ ವಸ್ತುಗಳನ್ನು ಖರೀದಿಸಿದರು. ಜಾಲರ್‌ ಬಾಲ್‌, ಬಲೂನ್‌, ಹಣೆಕಟ್‌, ಟೊಪ್ಪಿಗೆಗಳಿಗೆ ಭಾರಿ ಬೇಡಿಕೆಯಿದೆ’ ಎಂದು ಅಲಂಕಾರಿಕ ವಸ್ತುಗಳ ವ್ಯಾಪಾರಿ ಶಫೀಕ್‌ ತುರಕಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಡಿ ₹ 20ರಿಂದ ₹ 250, ಜರಾ ₹ 30ರಿಂದ ₹ 250, ಜಾಲರ ಬಾಲ್‌ ₹ 10ರಿಂದ ₹ 40, ಕಿರೀಟ ₹ 60 ರಿಂದ ₹ 350, ಶಲ್ಯ ₹ 20, ಮುತ್ತಿನ ಹಾರ ₹ 20ರಿಂದ ₹ 500, ಬಲೂನ್‌ ₹ 10ರಿಂದ ₹ 30 ಒಂದು ಪಾಕೆಟ್‌ಗೆ, ತೋರಣ ₹ 50ರಿಂದ ₹ 150, ಛತ್ರಿ ₹ 200ರಿಂದ ₹ 500, ಸಿಂಹಾಸನ ₹ 1800ರಿಂದ ₹ 8500ರ ಧಾರಣೆಯಂತೆ’ ಮಾರಾಟ ಮಾಡಿದೆ ಎಂದು ಅವರು ಹೇಳಿದರು.

‘ಒಂದು ಕೆ.ಜಿ. ಸುಗಂಧಿ ಹೂವಿಗೆ ₹ 200, ಸೇವಂತಿ ₹ 160, ಗುಲಾಬಿ ₹ 200, ಚೆಂಡು ಹೂ ₹ 50 ಇದ್ದರೆ, ಹಾರ ₹ 50ರಿಂದ ₹ 200ರವರೆಗೆ ಮಾರಾಟವಾದವು. ಬೇಡಿಕೆಯಷ್ಟು ಹೂವು ಮಾರುಕಟ್ಟೆಗೆ ಬಾರದಿದ್ದರಿಂದ 20 ದಿನದ ಹಿಂದೆ ನಡೆದ ವರಮಹಾಲಕ್ಷ್ಮೀ ಹಬ್ಬಕ್ಕಿಂತ, ಗಣೇಶ ಚತುರ್ಥಿಗೆ ಒಂದು ಕೆ.ಜಿ.ಗೆ ₹ 50ರ ಆಸುಪಾಸು ಬೆಲೆ ಹೆಚ್ಚಳಗೊಂಡಿದೆ. ಬೆಂಗಳೂರು, ಮೀರಜ್‌, ಪುಣೆಯಿಂದ ಹೂವು ತಂದು ಮಾರಾಟ ಮಾಡಿದೆ’ ಎಂದು ಹೂವಿನ ವ್ಯಾಪಾರಿ ಮಹಿಬೂಬ್‌ ಶೇಖ್‌ ತಿಳಿಸಿದರು.

‘ಬೆಲೆ ದುಪ್ಪಟ್ಟಾಗಿದೆ. ಆದರೂ ಗಣೇಶ ಪ್ರತಿಷ್ಠಾಪನೆಗಾಗಿ ಹಣ್ಣು, ಕಾಯಿ, ಹೂವು, ಅಲಂಕಾರಿಕ ವಸ್ತುಗಳನ್ನು ಖರೀದಿಸಿದ್ದೇವೆ. ₹ 1000ದಿಂದ ₹ 1500 ಅಂದಾಜು ಲೆಕ್ಕ ಹಾಕಿದ್ದೆವು. ಆದರೆ ₹ 3500 ಖರ್ಚಾಯಿತು. ವಸ್ತುಗಳಲ್ಲದೇ ಗಣೇಶ ಮೂರ್ತಿಗೂ ಸಹಿತ ಭಾರಿ ಧಾರಣೆಯಿದೆ. ಹೋದ ವರ್ಷ 4.5 ಅಡಿ ಎತ್ತರದ ಮೂರ್ತಿಗೆ ₹ 4800 ಕೊಟ್ಟಿದ್ದೆವು. ಈ ಸಲ 5 ಅಡಿಗೆ ಬರೋಬ್ಬರಿ ₹ 11000 ಕೊಟ್ಟೆವು’ ಎಂದು ತಿಡಗುಂದಿಯ ವಿಶಾಲ ಕಟ್ಟಿಮನಿ, ಚಂದ್ರಶೇಖರ ವಾಘ್ಮೋರೆ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !