ಗುರುವಾರ , ಮೇ 28, 2020
27 °C

ಅಡವಿ ಅಡುಗೆಯ ಕಥಾನಕ...

ಚಿತ್ರ-ಲೇಖನ : ಶಿವಾನಂದ ಕಳವೆ Updated:

ಅಕ್ಷರ ಗಾತ್ರ : | |

Prajavani

ಮಲೆನಾಡು ಮಳೆ ಎಂಬೋ ಮನೆಯ ನೆಲೆ. ಮಳೆಗಾಲದ ಆರೇಳು ತಿಂಗಳು ಹಳ್ಳಿಗಳು ದ್ವೀಪವಾಗುತ್ತವೆ; ಸಂಪರ್ಕ ರಹಿತ ತಾಣಗಳಾಗುತ್ತವೆ. ಊಟಕ್ಕೆ ಉಪ್ಪು, ಬೆಂಕಿಪೊಟ್ಟಣ ಪಡೆಯುವುದಕ್ಕೂ ಹತ್ತಿಪ್ಪತ್ತು ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಸಾಗಬೇಕಾದ ಕಾಲವಿತ್ತು. ದಟ್ಟ ಅರಣ್ಯ, ನದಿ ಕಣಿವೆಗಳ, ಗುಡ್ಡಗಾಡಿನ ನೆಲೆಯಲ್ಲಿ ಕೃಷಿ ಬದುಕು ಸವಾಲು ಎದುರಿಸುತ್ತ ಬಂದಿದೆ. ‘ಅನ್ನ ಕಂಡ್ರೆ ಚಿನ್ನ ಕಂಡ್ಹಂಗೆ’ ಆಗ್ತಿತ್ತೆಂಬ ಕಷ್ಟದ ಕಾಲವದು. ಕೃಷಿ ಸುಧಾರಣೆಯಿಲ್ಲದೇ ಒಂದು ಎಕರೆ ಭತ್ತದ ಗದ್ದೆಯಲ್ಲಿ 6–8 ಚೀಲ ಮಾತ್ರ ಭತ್ತ ಬೆಳೆಯುತ್ತಿದ್ದರು. ವನ್ಯಜೀವಿಗಳ ಉಪಟಳದಿಂದ ಅಳಿದುಳಿದ ಉತ್ಪನ್ನದಲ್ಲಿ ಜೀವನ. ಒಂದು ಪಾಯಲಿ ಅಕ್ಕಿ ಅರ್ಧ ಅಣೆ ಕಡಿಮೆ ದರಕ್ಕೆ ಸಿಗುತ್ತದೆಂದು ದಿನಕ್ಕೆ 60–70 ಕಿಲೋ ಮೀಟರ್ ನಡೆದು ಹೊತ್ತು ತರುತ್ತಿದ್ದ ಸಾಹಸಗಳು ಹಸಿವು ಗೆದ್ದ ಬಡವರ ದಾರಿ ದಾಖಲೆಗಳು.

ಮುಖ್ಯ ಆಹಾರವಾದ ಅಕ್ಕಿಗೇ ಗತಿಯಿಲ್ಲದ ಕಾಲದಲ್ಲಿ ತರಕಾರಿ ಖರೀದಿಯ ಪ್ರಶ್ನೆ ಹುಟ್ಟುವುದಿಲ್ಲ. ಇಂಗು-ತೆಂಗು ಕೈಗೆಟುಕದ ಕಾಲದಲ್ಲಿ ಕಾಡಿನಲ್ಲಿ ಅಮ್ಮನ ಕೌಶಲ ಕಾಣಿಸಿದೆ. ಸೊಪ್ಪು, ಚಿಗುರು, ತೊಗಟೆ, ಬೇರು, ಕಾಯಿ, ಹಣ್ಣು, ಹೂವಿನಲ್ಲಿ ಅಡುಗೆ ತಯಾರಿ. ಕಾಡಿಗೆ ಹೋಗಿ ಕಣ್ಮುಚ್ಚಿ ಯಾವುದೋ ಸೊಪ್ಪು ತಂದರೆ ಮನೆಮಂದಿಯ ಆರೋಗ್ಯ ಹಾಳಾದೀತು, ವಿಷ ಫಲಗಳು ಜೀವ ತೆಗೆಯಬಹುದು. ಯಾವುದನ್ನು ಯಾವಾಗ ಬಳಸಬೇಕೆಂಬ ಪರಿಜ್ಞಾನ ಬೇಕು. ಮನೆಯ ಹಿರಿಯರು, ಅಕ್ಕಪಕ್ಕದವರು, ಸಂಬಂಧಿಕರು, ತವರಿನಲ್ಲಿ ಮಾಡಿ ಕಲಿತ ಅನುಭವದಲ್ಲಿ ಅಡುಗೆ ಕಲಿಯಬೇಕು. ದುಡಿದು ಬರುವ ಮನೆಮಂದಿಗೆ ಊಟ ರುಚಿಸಬೇಕು, ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಬೇಕು, ವಯಸ್ಸಾದವರು, ಗರ್ಭಿಣಿಯರ ಉದರ ಆರೋಗ್ಯ ರಕ್ಷಣೆಗೆ ಕಾಳಜಿ ಬೇಕು.


ಬಿದರಕ್ಕಿ ಮತ್ತು ಅನ್ನ

ಕಾಡೇ ತರಕಾರಿ ತೋಟ!
ಅಡುಗೆ ಮನೆಯೆಂಬ ಹೊಗೆಯ ನೆಲೆಯಲ್ಲಿ ಅಡಗಿದ ಅಮ್ಮಂದಿರು ತಲೆಮಾರಿನ ಆರೋಗ್ಯ ಮುನ್ನಡೆಸಿದ ಮಾರ್ಗ ಬಹುದೊಡ್ಡ ಕಾಡು ಕಥನ. ಓದು ಗೊತ್ತಿಲ್ಲ, ಜನಸಂಪರ್ಕವಿಲ್ಲ, ಬೆನ್ನಿಗಂಟಿದ ಬಡತನದಿಂದ ಮುಕ್ತಿಯಿಲ್ಲ. ಹೆರಿಗೆ, ಬಾಣಂತನ, ಸಾವು– ನೋವು ನುಂಗುತ್ತ ಬದುಕು ಸಾಗಿಸಬೇಕಿತ್ತು. ಆಗ ಸಸ್ಯಶಾಸ್ತ್ರಜ್ಞೆಯಾಗಿ, ವೈದ್ಯೆಯಾಗಿ, ಆಹಾರ ತಜ್ಞೆಯಾಗಿ, ಅಡುಗೆ ವೆಚ್ಚ ತಗ್ಗಿಸಿದ ಅರ್ಥಶಾಸ್ತ್ರಜ್ಞೆಯಾಗಿ ಬದುಕು ಕಟ್ಟಿದವರು ಅಮ್ಮಂದಿರು.

80 ವರ್ಷದ ಹಿಂದೆ ಊಟಕ್ಕೆ ತೊಗರಿ, ಹೆಸರು ಬೇಳೆ ಬಳಕೆ ಮಲೆನಾಡಿನಲ್ಲಿ ಕಡಿಮೆ. ಅಂಥವರನ್ನು ಶ್ರೀಮಂತರೆಂದು ಗುರುತಿಸಿ ತೊಗರಿಬೇಳೆ ಮನೆತನವೆಂದ ಉದಾಹರಣೆಯಿದೆ. ಹಲಸಿನ ಬೀಜ, ಹುರಳಿ ಕಾಳು ಬಳಸುತ್ತಿದ್ದರು. ಕರಾವಳಿಯಲ್ಲಿ ಬೆಳೆಯುವ ತೆಂಗು ಘಟ್ಟದ ಸೀಮೆಯಲ್ಲಿ ಇಲ್ಲ. ಹಲಸಿನಕಾಯಿ, ಮಾವು, ವಾಟೆ, ಮುರುಗಲು ಮುಂತಾದ ಕಾಡುಫಲಗಳನ್ನು ಅಡುಗೆಗೆ ಬಳಸಬೇಕು. ಇವುಗಳನ್ನು ಸಂಗ್ರಹಿಸಿ ಉಪ್ಪಿನಲ್ಲಿಟ್ಟು ಆಗಾಗ ಅಡುಗೆಗೆ ಉಪಯೋಗಿಸುತ್ತ ಮಳೆಗಾಲ ಕಳೆಯುತ್ತಿದ್ದರು. ಹೊಳೆದಂಡೆಯ ಅಪ್ಪೆಮಿಡಿ ಸಂಗ್ರಹಿಸಿ ಮಾಡುವ ಉಪ್ಪಿನಕಾಯಿ ತಯಾರಿಕೆ ವರ್ಷದ ಸಂಭ್ರಮ. ಊಟ, ಔಷಧಕ್ಕೆ ನೆರವಾಗುವ ಇದು ಅಮ್ಮನ ಕೈಚಳಕದ ಮಹತ್ವದ ಕೊಡುಗೆ. ಬೆಲ್ಲ, ಅಕ್ಕಿ, ಉಪ್ಪು, ಮೆಣಸು ಇಷ್ಟರಲ್ಲಿ ಅಡುಗೆ ತಯಾರಿಯ ವಿದ್ಯೆ ಕರಗತವಾಗಿತ್ತು.

ಮಳೆ ಆರಂಭದಲ್ಲಿ ಬಿದಿರು ಹಿಂಡಿನಲ್ಲಿ ಕಳಲೆ ಮೇಲೇಳುತ್ತದೆ. ಕಳಲೆ ಪಲ್ಯ, ಸಾಂಬಾರು, ಉಪ್ಪಿನಕಾಯಿ ಮಲೆನಾಡಿನ ಅಕ್ಕರೆಯ ಅಡುಗೆ. ಸವತೆಕಾಯಿ ತಂದು ಹೆಚ್ಚಿ ಅಡುಗೆ ತಯಾರಿಸಿದಷ್ಟು ಕಳಲೆ ಅಡುಗೆ ಸುಲಭವಲ್ಲ. ಇದರಲ್ಲಿರುವ ಸಯನೈಡ್ ವಿಷ ಜೀವ ತೆಗೆಯಬಹುದು! ಕಳಲೆ ಹೆಚ್ಚಿ ನೀರಲ್ಲಿ ನೆನೆಹಾಕಿ ಮೂರು– ನಾಲ್ಕು ದಿನ ನೀರು ಬದಲಿಸಿದ ಬಳಿಕ ರುಚಿ ರುಚಿಯ ಅಡುಗೆಗೆ ಬಳಸಲು ಸಿದ್ಧವಾಗುತ್ತದೆ. ಯೋಚಿಸಿ ನೋಡಿ, ಕಳಲೆಯಂತಹ ವಿಷಯುಕ್ತ ಪದಾರ್ಥವನ್ನು ಅಡುಗೆಗೆ ಸಂಸ್ಕರಿಸಿ ಬಳಸುವ ಕಾಲದ ಅನಿವಾರ್ಯತೆ ಹಿಂದೆ ಇತ್ತು. ಅಮ್ಮನ ಜಾಣ್ಮೆಯ ಮೂಲಕ ಕಳಲೆ ಅಡುಗೆ ಈಗ ಜನಪ್ರಿಯವಾಗಿದೆ.

ಪಾರಂಪರಿಕ ಅಡುಗೆ
ಕೆಸುವಿನ ಸೊಪ್ಪು ತುರಿಕೆಗೆ ಕುಖ್ಯಾತಿ. ಹಸಿಸೊಪ್ಪು ಜಗಿದರೆ ಜೀವನದಲ್ಲಿ ಮತ್ತೆ ಅದರತ್ತ ತಿರುಗಿ ನೋಡುವುದಿಲ್ಲ. ಪಲ್ಯ, ಕರಗಲಿ ಮುಂತಾದ ಪಾರಂಪರಿಕ ಅಡುಗೆ ಮಳೆಗಾಲದ ಆರಂಭಕ್ಕೆ ಬೇಕು. ಹುಳಿಪುಡಿ ( ಕಾಡಿನ ವಾಟೆಕಾಯಿಯ ಪುಡಿ), ಉಪ್ಪು ಸೇರಿಸಿ ಬೇಯಿಸಿದರೆ ತುರಿಕೆ ಮಾಯ. ಪುರಾಣ ದಾಖಲಿಸಿದ ತಾಳೆಗರಿ ಗ್ರಂಥ ಗಮನಿಸಿರಬಹುದು, ಅದು ಶ್ರೀತಾಳೆ ಮರದ ಎಲೆ. ಇದೇ ಶ್ರೀತಾಳೆಗೆ 60–70 ವರ್ಷವಾದಾಗ ಮರ ಕತ್ತರಿಸಿ ಅದರ ತಿರುಳು ಒಣಗಿಸಿ ಕುಟ್ಟಿ ತಯಾರಿಸಿದ ಹಿಟ್ಟು ಬರಗಾಲದ ಮುಖ್ಯ ಆಹಾರ. ತಾಳೆಗಂಜಿ ಕಣಿವೆ ಕಾಡಿನ ವನವಾಸಿಗರಲ್ಲಿ ಬಳಕೆಯಿತ್ತು. ಹಿಟ್ಟನ್ನು ನೀರಲ್ಲಿ ನೆನೆಹಾಕಿ ಆರೇಳು ಸಾರಿ ನೀರು ಬದಲಿಸಿದರೆ ಅದರಲ್ಲಿನ ಚೊಗರಿನ ಅಂಶ ಹೋಗಿ ಆಹಾರ ಯೋಗ್ಯವಾಗುತ್ತದೆ. ಅಬ್ಬರದ ಮಳೆಯ ಮಲೇರಿಯಾ ವಾತಾವರಣದಲ್ಲಿ ಬದುಕು ಸಾಗಿಸುವವರಿಗೆ ತಾಳೆ ಗಂಜಿ ಸೇವನೆ ಆಹಾರ- ಔಷಧವಾಗಿದೆ. ಹಲಸಿನ ಅಡುಗೆ ಉಂಡರೆ ಅಜೀರ್ಣ, ಮೈಯೆಲ್ಲ ಜಡ್ಡು. ಹಲಸಿನ ಪಲ್ಯಕ್ಕೆ ವಾಯುವಿಳಂಗದ ಸೊಪ್ಪು ಸೇರಿಸಿದರೆ ಉಂಡವರಿಗೆ ಜಡ್ಡಿನ ಸಮಸ್ಯೆಯಿಲ್ಲ. ಇದನ್ನು ತಯಾರಿಸಿ ಬಲ್ಲರು ನಮ್ಮ ಅಮ್ಮಂದಿರು.


ಕಾಡು ಫಲ

ಚಹ ಬಳಕೆ ಶುರುವಾಗಿ ಇಂದಿಗೆ ನೂರು ವರ್ಷವಾಗಿಲ್ಲ. ಇದಕ್ಕೂ ಪೂರ್ವದಲ್ಲಿ ಕುನ್ನೇರಲು ಕುಡಿಯ ಕಷಾಯ ಆರೋಗ್ಯಕ್ಕೂ ಜನಪ್ರಿಯವಾಗಿತ್ತು. ದೇಹ ತಂಪಾಗಿಸಲು ಒಂದೆಲಗದ ತಂಬುಳಿ, ಕೆಮ್ಮು ನಿವಾರಣೆಗೆ ಅತ್ತಿ ಚಕ್ಕೆಯ ಕಷಾಯ, ಎಲುವು ಗಟ್ಟಿಯಾಗಲು ಶಿವಣೆ ಸೊಪ್ಪಿನ ಕಷಾಯ, ಹೃದಯ ಸಮಸ್ಯೆಗೆ ಬಿಳಿಮತ್ತಿ ಚಕ್ಕೆ, ಮಳೆಯ ಅಬ್ಬರದಲ್ಲಿ ಕನ್ನೇಕುಡಿ ಕಟ್ನೆ ಊಟ ಚಿರಪರಿಚಿತ.

2008ರಲ್ಲಿ ಕೇರಳದ ಪಾಣಾಜೆ ವೈದ್ಯ ಮನೆತನದ ಮೂಲಿಕಾ ತಜ್ಞ ವೆಂಕಟ್ರಾಮ ದೈತೋಟ ಹಾಗೂ ಅವರ ಪತ್ನಿ ಜಯಲಕ್ಷ್ಮಿ ದೈತೋಟರ ಮಾರ್ಗದರ್ಶನದಲ್ಲಿ ಅಡವಿ ಅಡುಗೆ ಕಾರ್ಯಾಗಾರವನ್ನು ನಮ್ಮ ಮನೆಯಲ್ಲಿ ಸಂಘಟಿಸಿದ್ದೆ. ಆಗ 60 ಕ್ಕೂ ಹೆಚ್ಚು ಕಷಾಯ, 40 ಕ್ಕೂ ಹೆಚ್ಚು ತಂಬುಳಿಗಳ ಕುರಿತು ಮಾಹಿತಿ ದಾಖಲಾಗಿತ್ತು. ಕಾಡು ಸಸ್ಯಗಳನ್ನು ಬಳಸಿ ಪಡೆದ ಅಡುಗೆ ಜ್ಞಾನ ಆರೋಗ್ಯ ಸಂರಕ್ಷಣೆಯಲ್ಲಿ ಪ್ರಯೋಜನಕ್ಕೆ ಪಡೆದಿದೆ. ಕಾಡಿನ ಔಷಧಯುಕ್ತ ಸಸ್ಯ ಆಹಾರವಾಗಿದ್ದ ಕಾಲ ಬದಲಾಗಿದೆ. ಆದರೆ ಅರಣ್ಯದ ಜೊತೆಗೆ ಸಸ್ಯಜ್ಞಾನವೂ ನಶಿಸುತ್ತಿದೆ. ಕಾಲದ ಬಡತನದಲ್ಲಿ ಅರಳಿದ ಮಲೆನಾಡಿನ ಅಮ್ಮನು ಮಾಡುವ ಶ್ರೀಮಂತ ಅಡವಿ ಅಡುಗೆಯಲ್ಲಿ ಅರಣ್ಯ, ಆರೋಗ್ಯ ಸಂರಕ್ಷಣೆಯ ಸಂದೇಶವಿದೆ. ತಂಬುಳಿ, ಕಷಾಯಕ್ಕೆ ಬಳಸುವ ಸಸ್ಯವನಗಳ ನಿರ್ಮಾಣದಿಂದ ನಾಡಿನ ಆರೋಗ್ಯ ಜಾಗೃತಿಯ ಕಾರ್ಯ ನಡೆಯಬೇಕಿದೆ.

**

ಅಡವಿ ಅಡುಗೆ ಕಾರ್ಯಾಗಾರ: ಮಲೆನಾಡಿನ ಅಡವಿ ಸಸ್ಯಗಳ ಆಹಾರ ಜ್ಞಾನದ ಕುರಿತ ವಿಶೇಷ ಕಾರ್ಯಕ್ರಮ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾನ್ಮನೆ ನಿಸರ್ಗಜ್ಞಾನ ಕೇಂದ್ರದಲ್ಲಿ ಇದೇ ಫೆಬ್ರುವರಿ 16 ಮತ್ತು 17ರಂದು ನಡೆಯಲಿದೆ. ಸುವರ್ಣ ಸಹ್ಯಾದ್ರಿ ಹಾಗೂ ಬೆಂಗಳೂರಿನ ಸೆಲ್ಕೋ ಫೌಂಡೇಶನ್ ಕಾರ್ಯಕ್ರಮ ಸಂಘಟಿಸಿದ್ದು, ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಸಂಪರ್ಕ: ಮಂಜುನಾಥ ಭಾಗ್ವತ- 9880715857 / ಶ್ರೀಪಾದ ಗೌಡ- 9480379049

ಚಿತ್ರಗಳು: ಲೇಖಕರವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು