ಕ್ಲಿಕ್‌ ಕ್ಲಿಕ್‌ ಕಥೆ

7

ಕ್ಲಿಕ್‌ ಕ್ಲಿಕ್‌ ಕಥೆ

Published:
Updated:
Deccan Herald

1971ರ ಒಂದು ಕತೆ. ಗುಂಡೂರಾಯರು ಯುವಜನ ಸೇವಾ ಸಚಿವರಾಗಿದ್ದರು. ವಿಧಾನಸಭೆ ಕಲಾಪದಲ್ಲಿ ಸಚಿವರ ಮೇಲೆ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದ್ದವು. ಇಲಾಖೆಯಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ ಎಂಬುದು ಆರೋಪ. ಕಲಾಪ ಮುಗಿದ ಬಳಿಕ ಗುಂಡೂರಾಯರು ಯುವಜನ ಸೇವಾ ಇಲಾಖೆಯ ಕಡತಗಳಲ್ಲಿ ದಾಖಲುಗೊಂಡಿದ್ದ ಹತ್ತಾರು ಯುವಕರನ್ನು ಕರೆದು ‘ನೋಡ್ರಪ್ಪಾ ತಕ್ಷಣ ಒಂದಷ್ಟು ಸೊಸೈಟಿಗಳನ್ನು ಹುಟ್ಟುಹಾಕಿ ಏನಾದರೂ ಕೆಲಸ ಮಾಡಬೇಕು’ ಎಂದು ಸೂಚಿಸಿದರು. ರಾತ್ರಿ ಬೆಳಗಾಗುವುದರೊಳಗೆ ಕೆಲವು ಸಂಘಟನೆಗಳು ಶುರುವಾದವು. 

‘ಯೂತ್‌ ರೈಟರ್ಸ್‌ ಆ್ಯಂಡ್‌ ಆರ್ಟಿಸ್ಟ್‌ ಗಿಲ್ಡ್‌’, ‘ಕರ್ನಾಟಕ ಕಾರ್ಟೂನಿಸ್ಟ್‌ ಅಸೋಸಿಯೇಷನ್‌’ ಮತ್ತು ‘ಯೂತ್‌ ಫೋಟೊಗ್ರಫಿಕ್‌ ಸೊಸೈಟಿ’ (ವೈಪಿಎಸ್‌) ಹುಟ್ಟಿದ್ದು ಹಾಗೆ. ಈ ಮೂರೂ ಸಂಘಟನೆಗಳ ಆರಂಭಕ್ಕೆ ಕಾರಣರಾದವರು ಈಗ ಅಂತರರಾಷ್ಟ್ರೀಯ ಮಾನ್ಯತೆ ಪಡೆದಿರುವ ಹಿರಿಯ ಛಾಯಾಗ್ರಾಹಕ ಎಂ.ವಿಶ್ವನಾಥ್‌ ಪ್ರಮುಖರು. ಬರವಣಿಗೆ, ವ್ಯಂಗ್ಯಚಿತ್ರ ಮತ್ತು ಛಾಯಾಗ್ರಹಣ ಅವರ ನೆಚ್ಚಿನ ಕ್ಷೇತ್ರಗಳು. ಈಗ ಮೂರೂ ಸಂಘಟನೆಗಳಿಗೆ 47ರ ಹರೆಯ.

ವಿಶ್ವನಾಥ್‌ ಅವರು ತಮ್ಮ ಛಾಯಾಗ್ರಹಣದ ಪ್ರೀತಿ ಮತ್ತು ಈ ಜಗತ್ತಿನ ಅಪರೂಪದ ಸಂಗತಿಗಳನ್ನು ಮೆಲುಕು ಹಾಕಿದ್ದಾರೆ.

‘ದೊಡ್ಡಬಳ್ಳಾಪುರದಲ್ಲಿ ಹುಟ್ಟಿ, ರಾಮನಗರದಲ್ಲಿ ಬೆಳೆದು, ಬೆಂಗಳೂರಿನ ಬಸವೇಶ್ವರನಗರದಲ್ಲಿ ನೆಲೆಸಿದವನು ನಾನು. ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಪದವಿ ಮುಗಿಸಿದೆ. ಬರವಣಿಗೆ ಮತ್ತು ವ್ಯಂಗ್ಯಚಿತ್ರದಲ್ಲಿ ಆಸಕ್ತಿ ಇದ್ದುದರಿಂದ ಪ್ರಜಾವಾಣಿ, ಸುಧಾ ಪತ್ರಿಕೆಗಳಿಗೆ ಬರೆದು ಅಲ್ಪಸ್ವಲ್ಪ ಸಂಪಾದನೆ ಮಾಡಿಕೊಳ್ಳುತ್ತಿದ್ದೆ. ಪದವಿ ಮುಗಿದ ತಕ್ಷಣ ಎನ್.ಜಿ.ಇ.ಎಫ್‌.ನಲ್ಲಿ ಡಿಸೈನ್‌ ಎಂಜಿನಿಯರ್‌ ಆಗಿ ನೌಕರಿ ಸಿಕ್ಕಿತು. ಅಷ್ಟು ದಿನ ಫೋಟೊಗ್ರಫಿಯ ಬಗ್ಗೆ ತೀವ್ರವಾದ ಆಸಕ್ತಿ ಇದ್ದರೂ ಬಡತನದಿಂದಾಗಿ ಕ್ಯಾಮೆರಾ ಕೊಳ್ಳುವ ಕನಸು ಕಾಣುವಂತೆಯೂ ಇರಲಿಲ್ಲ. ನೌಕರಿ ಸಿಕ್ಕಿದ ಮೇಲೆ, ನನ್ನ ಕೈಗೆಟಕುವ ಬೆಲೆಯ ಕ್ಯಾಮೆರಾ ಖರೀದಿಸಿದೆ. 

ಆಗಲೇ ಹೇಳಿದಂತೆ ವೈಪಿಎಸ್‌ ಆರಂಭಗೊಂಡಿದ್ದು ರಾಜಕಾರಣದ ತುರ್ತಿಗಾಗಿ. ಆದರೆ ತಂಡದ ಸದಸ್ಯರಿಗೆ ಫೋಟೊಗ್ರಫಿಯ ಗಂಧಗಾಳಿ ಇರಲಿಲ್ಲ! ಬೆಳಕಿನ ಸಂಯೋಜನೆಯೇ ಫೋಟೊಗ್ರಫಿ ಎಂಬ ಮೂಲ ಜ್ಞಾನವೇ ಇರಲಿಲ್ಲ. ಆ ಕಾಲಕ್ಕೆ ಸಿ.ರಾಜಗೋಪಾಲ್‌, ಎಂ.ವೈ.ಘೋರ್ಪಡೆ, ವಿ.ಹನುಮಂತರಾವ್‌, ಟಿ.ಎನ್.ಎ. ಪೆರುಮಾಳ್‌, ಡಾ.ಜಿ.ಥಾಮಸ್, ಡಾ.ಡಿ.ವಿ.ರಾವ್‌ ಹೆಸರಾಂತ ಛಾಯಾಗ್ರಾಹಕರಾಗಿದ್ದರು. ಫೋಟೊಗ್ರಫಿ ಬಗ್ಗೆ ಲವಲೇಷ ಗೊತ್ತಿಲ್ಲದ ನಮ್ಮ ಮತ್ತು ನಮ್ಮ ವೇದಿಕೆ ಬಗ್ಗೆ ಅವರಿಗೆ ಅಸಡ್ಡೆ.

ನಾನು ಛಾಯಾಗ್ರಹಣ ಆರಂಭಿಸಿದ ಕಾಲದಲ್ಲಿ ಫೋಟೊ ತೆಗೆಯುವುದು, ಕ್ಯಾಮೆರಾ ಹಾಗೂ ರೋಲ್‌ ಖರೀದಿಸುವುದು ದೊಡ್ಡ ಸಂಗತಿ.  ಸ್ಟುಡಿಯೊಗಳಲ್ಲಿನ ‘ಡಾರ್ಕ್‌ ರೂಮ್‌’ಗಳು ನಮ್ಮಂತವರಿಗೆ ಜಾದೂ ಜಗತ್ತು. ಅಲ್ಲಿಗೆ ಯಾರಿಗೂ ಪ್ರವೇಶವಿರಲಿಲ್ಲ. ಹಾಗಾಗಿ, ಫಿಲ್ಮ್‌ ಪ್ರಿಂಟ್‌ ಹಾಕುವುದನ್ನು ಕಲಿಯಬೇಕು ಎಂದು ನಾವೆಲ್ಲರೂ ದುಡ್ಡು ಹೊಂದಿಸಿ ವೈಪಿಎಸ್‌ ಕಚೇರಿಯಲ್ಲೇ ‘ಡಾರ್ಕ್‌ ರೂಮ್‌’ ಆರಂಭಿಸಿದೆವು. ಅದು ನಮ್ಮ ಧ್ಯೇಯದತ್ತ ಇಟ್ಟ ಮೊದಲ ಹೆಜ್ಜೆಯಾಗಿತ್ತು. ಆಮೇಲೆ, ಪ್ರತಿ ಕ್ಲಿಕ್‌ಗಳು ಫೋಟೊ ಆಗಿ ಈಚೆ ಬಂದಾಗಲೂ ನಮ್ಮ ತಪ್ಪುಗಳನ್ನು ನಾವೇ ಪತ್ತೆ ಹಚ್ಚಿ ಚರ್ಚಿಸಿ ತಿದ್ದಿಕೊಳ್ಳುತ್ತಾ ಬಂದೆವು. 

ಛಾಯಾಗ್ರಹಣ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ತೀರ್ಮಾನದೊಂದಿಗೆ ನೌಕರಿಗೆ ರಾಜೀನಾಮೆ ನೀಡಿದೆ. ಅಷ್ಟು ಹೊತ್ತಿಗೆ ಕೆಲವು ಪ್ರತಿಷ್ಠಿತ ವೇದಿಕೆಗಳು ನನ್ನ 3,500ಕ್ಕೂ ಹೆಚ್ಚು ಫೋಟೊಗಳನ್ನು ಮಾನ್ಯ ಮಾಡಿದ್ದವು. ಇದನ್ನು ‘ಅಸ್ಸೆಪ್ಟೆನ್ಸ್‌’ ಎನ್ನುತ್ತೇವೆ. ಒಂದಷ್ಟು ಪ್ರಶಸ್ತಿಗಳೂ ಬಂದಿದ್ದವು. ಫೋಟೊಗ್ರಫಿಕ್‌ ಸೊಸೈಟಿ ಆಫ್‌ ಅಮೆರಿಕ, ರಾಯಲ್‌ ಫೋಟೊಗ್ರಫಿಕ್‌ ಸೊಸೈಟಿ ಆಫ್‌ ಲಂಡನ್‌, ಫ್ರಾನ್ಸ್‌ನ ಇಂಟರ್‌ನ್ಯಾಷನಲ್‌ ಡಿ–ಲಾ ಆರ್ಟ್‌ ಫೋಟೊಗ್ರಫಿಕ್‌ ಮತ್ತು ಕ್ಯಾಲಿಫೋರ್ನಿಯಾದ ಇಮೇಜ್‌ ಕೊಲೀಗ್‌ ಸೊಸೈಟಿ– ಇವು ಜಾಗತಿಕವಾಗಿ ಫೋಟೊಗ್ರಫಿಯನ್ನು ಮಾನ್ಯತೆ ಮಾಡುವ ವೇದಿಕೆಗಳು. ಬೆಂಗಳೂರು ಸೇರಿದಂತೆ ನಮ್ಮ ರಾಜ್ಯದ ಹಲವಾರು ಛಾಯಾಗ್ರಾಹಕರು ಈ ವೇದಿಕೆಗಳಲ್ಲಿ ಗುರುತಿಸಿಕೊಂಡಿರುವುದು ನಮಗೆ ಹೆಮ್ಮೆ‘.

ಛಾಯಾಗ್ರಹಣಕ್ಕೆ ಈಗ ಜಾಣ್ಮೆ ಬೇಡ!

‘ಡಿಜಿಟಲ್‌ ಫೋಟೊಗ್ರಫಿ ಎಂಬುದು ಛಾಯಾಗ್ರಹಣ ಕ್ಷೇತ್ರದ ದುರಂತವಾಗಿ ಪರಿಣಮಿಸಿದೆ. ಯಾಕೆಂದರೆ, ಸ್ಟಿಲ್‌ ಫೋಟೊಗ್ರಫಿಯಲ್ಲಿ ಛಾಯಾಗ್ರಾಹಕನ ತಂತ್ರಗಾರಿಕೆ, ಜಾಣ್ಮೆಯೇ ಪ್ರತಿ ಕ್ಲಿಕ್‌ನ ನಿರ್ಧಾರಕ ಅಂಶಗಳಾಗಿರುತ್ತವೆ. ಮೂರು ಬಣ್ಣಗಳನ್ನು ಸಂಯೋಜಿಸಿ ಒಂದು ಬಣ್ಣ ಹೊರಹೊಮ್ಮಿಸುವ ತಂತ್ರಜ್ಞಾನವೇ ಸ್ಟಿಲ್‌ ಫೋಟೊಗ್ರಫಿಯ ಮೂಲಾಧಾರವಾಗಿತ್ತು. 

‘ಡಿಜಿಟಲ್‌ ಕ್ಯಾಮೆರಾಗಳು ಬಂದ ಮೇಲೆ ಫೋಟೊಗ್ರಫಿಯ ಮೂಲ ಪರಿಕಲ್ಪನೆಯೇ ಬದಲಾಗಿದೆ. ಶೇ 80ರಷ್ಟು ಕಲೆಗಾರಿಕೆ, ಕಸಬುದಾರಿಕೆ, ತಂತ್ರಗಾರಿಕೆ ಸ್ವತಃ ಕ್ಯಾಮೆರಾದಲ್ಲಿ ಇನ್‌ಬಿಲ್ಟ್‌ ಆಗಿ ಬರುತ್ತವೆ. ಹಾಗಾಗಿ ಈಗ ಕ್ಯಾಮೆರಾಗಳೇ ನಿಜವಾದ ಫೋಟೊಗ್ರಾಫರ್‌ಗಳು. ಮೊಬೈಲ್‌ ಕ್ಯಾಮೆರಾಗಳಲ್ಲೂ ಈಗ ಉನ್ನತ ಗುಣಮಟ್ಟದ ಫೋಟೊಗಳನ್ನು ತೆಗೆಯಬಹುದು. ಇದು ಸ್ಟಿಲ್‌ ಕ್ಯಾಮೆರಾಗಳಿಗೆ ದೊಡ್ಡ ಹೊಡೆತ ನೀಡಿದೆ. ಇದಕ್ಕೆ ಪರಿಹಾರವಿಲ್ಲ. ಆದರೆ ಹವ್ಯಾಸಿಗಳಾದರೂ ಈ ತಂತ್ರಗಾರಿಕೆಯನ್ನು ಉಳಿಸಬೇಕಾಗಿದೆ. ಯಾಕೆಂದರೆ ಸ್ಟಿಲ್‌ ಕ್ಯಾಮೆರಾ ಛಾಯಾಗ್ರಹಣ ಕ್ಷೇತ್ರ ಜೀವಂತವಾಗಿ ಉಳಿದಿರುವುದು ಹವ್ಯಾಸಿಗಳಿಂದ’. 

ಎಂ.ವಿಶ್ವನಾಥ್‌ ಅವರ ಸಂಪರ್ಕಕ್ಕೆ: 97310 60603; yourviswanath@gmail.com

***

ಛಾಯಾಗ್ರಹಣದ ಇತಿಹಾಸ

* ಛಾಯಾಗ್ರಹಣವನ್ನು ಅರ್ಥ ಮಾಡಿಕೊಳ್ಳುವ ಕಸರತ್ತುಗಳು ಜಗತ್ತಿನಲ್ಲಿ ಆರಂಭವಾದುದು 16ನೇ ಶತಮಾನದಲ್ಲಿ. ಅದಕ್ಕೊಂದು ವ್ಯಾಖ್ಯೆ ಸಿಕ್ಕಿದ್ದು 1839ರ ಆಗಸ್ಟ್‌ 19ರಂದು.

ಫ್ರಾನ್ಸ್‌ನಲ್ಲಿ ಅಂದು ನಡೆದಿದ್ದ ‘ಕಾಂಗ್ರೆಸ್‌ ಆಫ್‌ ಸೈಂಟಿಸ್ಟ್‌’ ಎಂಬ ಸಮಾವೇಶದಲ್ಲಿ ಲೂಯಿಸ್‌ ಡಾಗ್ಯೂರ್ ಎಂಬ ಫ್ರೆಂಚ್‌ ನಾಗರಿಕ, ಇಮೇಜನ್ನು ರಾಸಾಯನಿಕ ಪ್ರಕ್ರಿಯೆಗೊಳಪಡಿಸಿ ಸ್ಟಿಲ್‌ ಪಡೆಯುವ ವಿಧಾನವನ್ನು ವಿವರಿಸಿದ. ಈ ಕೌತುಕಕ್ಕೆ ತಲೆದೂಗಿದ ಫ್ರಾನ್ಸ್‌ ಸರ್ಕಾರ ಆಗಸ್ಟ್‌ 19ನ್ನು ಛಾಯಾಗ್ರಹಣ ದಿನವಾಗಿ ಘೋಷಿಸಿತು. ಯಾಕೆಂದರೆ, 2,300 ವರ್ಷಗಳ ಹಿಂದೆಯೇ ಛಾಯಾಗ್ರಹಣದ ಬಗ್ಗೆ ನಡೆದಿದ್ದ ಅಧ್ಯಯನಕ್ಕೆ ಅಂದು ಅಲ್ಪವಿರಾಮ ಕೊಡಲಾಗಿತ್ತು.

* Photography (ಫೋಟೊಗ್ರಫಿ) ಪದ ಗ್ರೀಕ್‌ ಮೂಲದ್ದು. Photo ಮತ್ತು Graphe ಪದಗಳ ಸಂಯೋಜನೆ. ಗ್ರೀಕ್‌ನಲ್ಲಿ ಫೋಟೊ ಎಂದರೆ ಬೆಳಕು, ಗ್ರೇಫ್‌ ಎಂದರೆ ಗೆರೆ ಎಳೆಯುವುದು ಎಂದರ್ಥ. ಒಟ್ಟಾದಾಗ ಬೆಳಕನ್ನು ಗೆರೆಗಳ ಮೂಲಕ ಪ್ರತಿನಿಧಿಸುವುದು ಅಥವಾ ಬೆಳಕಿನ ಗೆರೆ ಬರೆಯುವುದು (Drawing the light).

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !