ಡಯಾಬಿಟಿಸ್ ಹೊಸ ಕಾಯಿಲೆಯೇನೂ ಅಲ್ಲ: ಇನ್ಸುಲಿನ್ ಜೀವರಕ್ಷಕನ ಜೀವನಗಾಥೆ

7

ಡಯಾಬಿಟಿಸ್ ಹೊಸ ಕಾಯಿಲೆಯೇನೂ ಅಲ್ಲ: ಇನ್ಸುಲಿನ್ ಜೀವರಕ್ಷಕನ ಜೀವನಗಾಥೆ

Published:
Updated:
Deccan Herald

1917ರ ಆಗಸ್ಟಿನಲ್ಲಿ ಎಲಿಜಬೆತ್ ಹ್ಯೂಸ್ ತನ್ನ ಹತ್ತನೆಯ ಹುಟ್ಟುಹಬ್ಬ ಆಚರಿಸಿದಾಗ ಮುಂದಿನ ದಿನಗಳ ಬಗೆಗೆ ಎಷ್ಟು ಯೋಚಿಸಿದ್ದಳೋ ತಿಳಿಯದು. ಬೆಲೂನು, ಕೇಕ್, ಸ್ನೇಹಿತರು, ಮನೆ-ಮಂದಿಯೊಂದಿಗೆ ಸಂತೋಷವಾಗಿಯೇ ಇದ್ದಿರಬಹುದು. ಅವಳ ಅಪ್ಪ ಚಾರ್ಲ್ಸ್ ಹ್ಯೂಸ್, ನ್ಯೂಯಾರ್ಕ್ ರಾಜ್ಯದ ಗವರ್ನರ್ ಆಗಿದ್ದವನು. ನಂತರ ಅಮೆರಿಕದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಆಗಿದ್ದವನು. ಮುಂದೆ, ಅದೇ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಆದವನು. ಅಮೆರಿಕದ ವಿದೇಶಾಂಗ ಸಚಿವನಾದವನು. ಅಮೆರಿಕದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿ ಕೂದಲೆಳೆಯ ಅಂತರದಲ್ಲಿ ಸೋತವನು.

ಅಂತಹ ಪ್ರಮುಖ, ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಎಲಿಜಬೆತ್ ತನ್ನ ಜೀವನದ ಮೊದಲ ದಶಕವನ್ನು ಬಾಲ್ಯದ ಸಂತಸ, ಸ್ನೇಹಿತರೊಂದಿಗೆ ಚೇಷ್ಟೆ-ಹುಡುಗಾಟಗಳಲ್ಲಿ - ತನ್ನ ಓರಗೆಯ ಉಳಿದ ಮಕ್ಕಳಂತೆ - ಕಳೆದಿರಬಹುದು. ಆದರೆ, ಅವಳ ಹನ್ನೊಂದನೆಯ ಹುಟ್ಟುಹಬ್ಬದ ಹೊತ್ತಿಗೆ ವಿಧಿ ಬೇರೇನೋ ಬರೆದಿತ್ತು. ಆಟವಾಡಿ ಬಂದವಳು, ಲೀಟರುಗಟ್ಟಲೆ ನೀರು ಕುಡಿದರೂ ತಣಿಯದ ತೃಷೆ. ಎಷ್ಟು ತಿಂದರೂ ಮಣಿಯದ ಹಸಿವು. ಏನೇ ಸೇವಿಸಿದರೂ ಸೋರುವ ಜರಡಿಯಾಯಿತು ಅವಳ ದೇಹ. ಹುಡುಗಾಟದ ಹುಮ್ಮಸ್ಸಿನ ಬದಲು ಸದಾ ಸುಸ್ತು. ಅವಳಿಗೆ ಡಯಾಬಿಟಿಸ್ ಇರುವ ಸಂಗತಿ ಗೊತ್ತಾದಾಗ ಮರಣ ದೂರವೇನೂ ಇರಲಿಲ್ಲ.

ಹಾಗೆ ನೋಡಿದರೆ, ನೂರು ವರ್ಷಗಳ ಹಿಂದಿನ ಆ ಕಾಲಕ್ಕೂ ಡಯಾಬಿಟಿಸ್ ಹೊಸ ಕಾಯಿಲೆಯೇನೂ ಅಲ್ಲ. ಈಜಿಪ್ಟಿನಲ್ಲಿ ಮೂರೂವರೆ ಸಾವಿರ ವರ್ಷಗಳ ಹಿಂದೆಯೇ ಅದರ ಬಗೆಗೆ ಬರೆದಿದ್ದರು. ಎರಡೂವರೆ ಸಾವಿರ ವರ್ಷಗಳ ಹಿಂದೆ ನಮ್ಮ ಭಾರತದಲ್ಲಿಯೇ, ಡಯೆಟ್ ಮೂಲಕ ಮಧುಮೇಹವನ್ನು ನಿಯಂತ್ರಿಸುವ ಪದ್ಧತಿ ಇತ್ತು.

ಆದರೂ, ಡಯಾಬಿಟಿಸ್‌ನ ಕಾರಣಗಳು ಸರಿಯಾಗಿ ಯಾರಿಗೂ ಪೂರ್ತಿಯಾಗಿ ತಿಳಿದಿರಲಿಲ್ಲ. ಅದರಲ್ಲೂ, ಬಾಲ್ಯದಲ್ಲೇ ಬಂದೆರಗುವ ಟೈಪ್-1 ಡಯಾಬಿಟಿಸ್ ಮರಣ ದಂಡನೆಗಿಂತ ಕಡಿಮೆ ಏನೂ ಇರಲಿಲ್ಲ. ಟೈಪ್-1 ಡಯಾಬಿಟಿಸ್ ಇದೆ ಎಂದು ಗೊತ್ತಾದ ಮೇಲೆ, ಅದು ಇರುವ ಮಕ್ಕಳು ಹೆಚ್ಚೆಂದರೆ ಒಂದು ವರ್ಷ ಬದುಕುತ್ತಿದ್ದರು. ಮುಕ್ಕಾಲು ಪಾಲು ಮಕ್ಕಳು ಆರು ತಿಂಗಳು ಸಹ ಬದುಕುತ್ತಿರಲಿಲ್ಲ.

ಪ್ಯಾಂಕ್ರಿಯಾಸ್, ನಮ್ಮ ಎದೆಯಾಳದಲ್ಲಿ ಹುದುಗಿರುವ ಅಂಗ. ಕ್ರಿ.ಪೂ. ಮೂರನೆಯ ಶತಮಾನದಲ್ಲಿ, ಇಂದಿನ ಈಜಿಪ್ಟಿನ ಅಲೆಕ್ಸಾಂಡ್ರಿಯಾದಲ್ಲಿ ವೈದ್ಯಕೀಯ ಶಾಲೆಯನ್ನು ಸ್ಥಾಪಿಸಿದ ಗ್ರೀಕ್ ವೈದ್ಯ, ದೇಹಶಾಸ್ತ್ರಜ್ಞ ಹೆರಾಫಸ್ ಮೊದಲ ಬಾರಿಗೆ ಇದರ ಇರುವಿಕೆ ಪತ್ತೆಹಚ್ಚಿದನೆಂಬ ನಂಬಿಕೆ ಇದೆ. ನಂತರ ಸುಮಾರು 400 ವರ್ಷಗಳ ಕಾಲ ಇದರ ಬಗೆಗೆ ಯಾರೂ ಅಷ್ಟೊಂದು ತಲೆ ಕೆಡಿಸಿಕೊಂಡಂತಿಲ್ಲ. ಕ್ರಿ.ಶ. ಒಂದು ಅಥವಾ ಎರಡನೆಯ ಶತಮಾನದಲ್ಲಿ, ಇಂದಿನ ಟರ್ಕಿಯಲ್ಲಿದ್ದ ಇನ್ನೊಬ್ಬ ವೈದ್ಯ/ದೇಹಶಾಸ್ತ್ರಜ್ಞ ರೂಫಸ್ ಇದಕ್ಕೆ ‘ಪ್ಯಾಂಕ್ರಿಯಾಸ್’ ಎಂಬ ನಾಮಕರಣ ಮಾಡಿದ. ‘ಪ್ಯಾಂಕ್ರಿಯಾಸ್’ ಎಂದರೆ ಗ್ರೀಕ್ ಭಾಷೆಯಲ್ಲಿ ‘ಬರೀ ಮಾಂಸ’ ಅಥವಾ ‘ಪೂರ್ತಿ ಮಾಂಸ’ ಎಂಬ ಅರ್ಥವಿದೆ.

ಹೆಸರಿಟ್ಟಿದ್ದಾಯಿತು. ಆದರೆ, ಪ್ಯಾಂಕ್ರಿಯಾಸ್ ಕೆಲಸವಾದರೂ ಏನು? ಕ್ರಿ.ಶ. ಮೊದಲನೆಯ ಶತಮಾನದಲ್ಲಿ ರೋಮನ್ ಗ್ಲೇಡಿಯೇಟರ್‌ಗಳಿಗೆ ವೈದ್ಯನಾಗಿದ್ದ ಕ್ಲಾಡಿಯಸ್ ಗೇಲೆನ್ ಪ್ರಕಾರ: ಪ್ಯಾಂಕ್ರಿಯಾಸ್ ತನ್ನ ಸುತ್ತಮುತ್ತಲಿನ ರಕ್ತನಾಳಗಳನ್ನು ರಕ್ಷಿಸುವ ದಿಂಬು ಮಾತ್ರ! ಈ ಗೇಲೆನ್ ಅಂತಿಂಥವನಲ್ಲ; ಡಾಕ್ಟರ್, ಸರ್ಜನ್ ಮಾತ್ರವಲ್ಲದೆ ದೊಡ್ಡ ಫಿಲಾಸಫರ್ ಕೂಡ! ವೈದ್ಯಕೀಯ ವಿಜ್ಞಾನದಲ್ಲಿ, ಅವನ ಕಾಲದಲ್ಲಿ ಅವನಿಗಿಂತ ಹೆಸರು ಮಾಡಿದವರು ಯಾರೂ ಇದ್ದಂತಿಲ್ಲ. ಅವನ ಥಿಯರಿಗಳು ಸುಮಾರು ಸಾವಿರ ವರ್ಷಗಳ ಕಾಲ ಪಾಶ್ಚಿಮಾತ್ಯ ವೈದ್ಯ ವಿಜ್ಞಾನದ ಅಡಿಪಾಯಗಳಾಗಿದ್ದವು. ಅವನು ಪ್ಯಾಂಕ್ರಿಯಾಸ್ ಬಗೆಗೆ ಹೇಳಿದ್ದನ್ನು ಪ್ರಶ್ನಿಸಲು 1,300 ವರ್ಷಗಳೇ ಬೇಕಾಯಿತು.

ಯೋಹಾನ್ ಜಾರ್ಜ್ ವಿರ್ಸ್ಂಗ್ ಮೂಲತಃ ಜರ್ಮನಿಯವನು. ಆದರೆ, ಇಟಲಿಯ ಪಾಡುವ ನಗರದಲ್ಲಿ ದೇಹಶಾಸ್ತ್ರಜ್ಞನಾಗಿದ್ದ. 1642ರಲ್ಲಿ ಪಾಡುವನಗರದಲ್ಲಿ ಕೊಲೆಗಾರನೊಬ್ಬನಿಗೆ ಮರಣದಂಡನೆ ಶಿಕ್ಷೆ ನೀಡಲಾಯಿತು. ಕೊಲೆಗಾರನ ದೇಹ ವಿಚ್ಛೇದಿಸುವ (ಡಿಸೆಕ್ಟ್) ಅವಕಾಶ ವಿರ್ಸಂಗ್‌ಗೆ ಒದಗಿತು. ಪ್ಯಾಂಕ್ರಿಯಾಸಿನಲ್ಲಿ ಒಂದು ನಾಳ (ಡಕ್ಟ್) ಇರುವುದನ್ನು ವಿರ್ಸಂಗ್ ಕಂಡುಕೊಂಡ. ಗೇಲೆನ್ನನ ದಿಂಬಿನ ಥಿಯರಿ ಚಪ್ಪಟೆಯಾಯಿತು. (ಕೊಲೆಗಾರನ ದೇಹದಲ್ಲಿ ಪ್ಯಾಂಕ್ರಿಯಾಸಿನ ನಾಳವನ್ನು ಕಂಡುಕೊಂಡ ವಿರ್ಸಂಗ್‌, ಒಂದು ವರ್ಷದ ನಂತರ ತಾನೇ ಕೊಲೆಯಾದದ್ದು ಒಂದು ವಿಪರ್ಯಾಸ!)

ಹತ್ತೊಂಬತ್ತನೆಯ ಶತಮಾನದ ಹೊತ್ತಿಗಾಗಲೇ ಮೈಕ್ರೋಸ್ಕೋಪ್ ಕಂಡುಹಿಡಿದು ಕೆಲವು ಶತಮಾನಗಳೇ ಆಗಿದ್ದವು. ಆದರೂ ಯಾರೂ ಪ್ಯಾಂಕ್ರಿಯಾಸನ್ನು ಮೈಕ್ರೋಸ್ಕೋಪಿನಲ್ಲಿ ಸೂಕ್ಷ್ಮವಾಗಿ ನೋಡಿರಲಿಲ್ಲವೋ ಅಥವಾ ನೋಡಿದ್ದರೂ ಅವರಿಗೆ ಅಂತಹ ಹೊಸದೇನೂ ಕಂಡಿರಲಿಲ್ಲವೋ ಗೊತ್ತಿಲ್ಲ. ಆದರೆ 1869ರಲ್ಲಿ, ಜರ್ಮನಿಯ ಬರ್ಲಿನ್ ಪೆಥಾಲಜಿ ಇನ್‌ಸ್ಟಿಟ್ಯೂಟಿನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಪಾಲ್ ಲಾಂಗೆರ್ಹಾನ್ಸ್ ಕಣ್ಣಿಗೆ, ಪ್ಯಾಂಕ್ರಿಯಾಸ್ ನಡುವೆ ಅಲ್ಲಲ್ಲಿ ದ್ವೀಪ ಸಮೂಹಗಳಂತೆ ಕಾಣುವ, - ಪ್ಯಾಂಕ್ರಿಯಾಸಿನ ಇತರೆ ಜೀವಕೋಶಗಳಿಗಿಂತ ಬೇರೆಯೇ ತೆರನಾಗಿ ಕಾಣುವ - ಸೆಲ್ ಸಮೂಹಗಳು ಕಂಡವು. ಇಂದು ಅವುಗಳನ್ನು ಐಲೆಟ್ಸ್ ಆಫ್ ಲಾಂಗೆರ್ಹಾನ್ಸ್ ಎನ್ನುತ್ತಾರೆ.

ಐಲೆಟ್ಸ್ ಆಫ್ ಲಾಂಗೆರ್ಹಾನ್ಸ್ ಇರುವಿಕೆ ಗೊತ್ತಾಯಿತಾದರೂ, ಪ್ಯಾಂಕ್ರಿಯಾಸಿನ ಒಟ್ಟು ಭಾಗದ ಶೇಕಡ ಒಂದೋ-ಎರಡೋ ಅಷ್ಟೇ ಇರುವ ಈ ದ್ವೀಪ ಸಮೂಹಗಳು, ಪ್ಯಾಂಕ್ರಿಯಾಸಿನ ರಕ್ತದ ಹರಿವಿನಲ್ಲಿ ಶೇಕಡ ಹತ್ತರಿಂದ-ಹದಿನೈದರಷ್ಟನ್ನು ಪಡೆಯುವುದರ ಹಿಂದಿನ ಪ್ರಾಮುಖ್ಯತೆಯನ್ನು ಅರಿಯಲು ಇನ್ನೂ ಕೆಲವು ದಶಕಗಳೇ ಬೇಕಾದವು. 1899ರಲ್ಲಿ ಫ್ರಾನ್ಸಿನ ಯೂನಿವರ್ಸಿಟಿ ಆಫ್ ಸ್ಟ್ರಾಸ್‌ಬರ್ಗ್‌ನಲ್ಲಿ ವಿಜ್ಞಾನಿಯಾಗಿದ್ದ ಆಸ್ಕರ್ ಮಿಂಕೋವ್‌ಸ್ಕಿ ಒಂದು ಪ್ರಯೋಗ ಮಾಡಿದ: ಕೆಲವು ನಾಯಿಗಳಿಗೆ ಶಸ್ತ್ರ ಚಿಕಿತ್ಸೆಮಾಡಿ ಅವುಗಳ ಪ್ಯಾಂಕ್ರಿಯಾಸ್‌ಗಳನ್ನು ಕಿತ್ತೊಗೆದ; ನಾಯಿಗಳಿಗೆ ಡಯಾಬಿಟಿಸ್ ಬಂತು. ಮತ್ತಷ್ಟು ಪ್ರಯೋಗಗಳಿಂದ ಐಲೆಟ್ಸ್ ಆಫ್ ಲಾಂಗೆರ್ಹಾನ್ಸ್ ಮತ್ತು ಡಯಾಬಿಟಿಸ್ ನಡುವೆ ಇರುವ ಸಂಬಂಧ ಹೊರಬಿತ್ತು. ಈ ಲಾಂಗೆರ್ಹಾನ್ಸ್ ದ್ವೀಪ ಸಮೂಹಗಳಿಂದ ಒಸರುವ ಒಂದು ರೀತಿಯ ದ್ರವಕ್ಕೆ ‘ಇನ್ಸುಲಿನ್’ ಎಂದು ಹೆಸರಿಟ್ಟವನು ಬ್ರಿಟಿಷ್ ವಿಜ್ಞಾನಿ ಎಡ್ವರ್ಡ್ ಆಲ್ಬರ್ಟ್ ಶಾರ್ಪಿ-ಶೇಫ್ಹರ್. (ಇನ್ಸುಲಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ ದ್ವೀಪ ಎಂದರ್ಥ)

ಇನ್ಸುಲಿನ್ ನಮ್ಮ ದೇಹದಲ್ಲಿ ಸೃಷ್ಟಿಯಾಗುವ ಅತಿ ಮುಖ್ಯ ಹಾರ್ಮೋನುಗಳಲ್ಲಿ ಒಂದು. ಅದರ ಮುಖ್ಯ ಕೆಲಸ: ನಾವು ಉಣ್ಣುವ ಆಹಾರ - ಅದರಲ್ಲೂ, ನಮ್ಮ ರಕ್ತದಲ್ಲಿನ ಗ್ಲುಕೋಸನ್ನು - ನಮ್ಮ ದೇಹಕ್ಕೆ ಬೇಕಾದ ಶಕ್ತಿಯಾಗಿಸುವ ಪ್ರಕ್ರಿಯೆಯನ್ನು ನಿಯಂತ್ರಿಸುವುದು.

ಇನ್ಸುಲಿನ್ ಇಲ್ಲದಿದ್ದರೆ ನಿಶ್ಶಕ್ತಿ ಗ್ಯಾರಂಟಿ. ಜೊತೆಗೇ, ರಕ್ತದಲ್ಲಿನ ಸಕ್ಕರೆ - ಗ್ಲುಕೋಸ್ - ಅಂಶ ಹೆಚ್ಚಿ, ಅದು ಮೂತ್ರದಲ್ಲೂ ಸೇರಿ, ಮಧುಮೇಹ/ಸಿಹಿಮೂತ್ರವಾಗಿ ಪರಿಣಮಿಸುತ್ತದೆ. ಇದು ಹಾಗೇ ಬಿಟ್ಟರೆ ದೇಹ ಸೊರಗಿ, ಕರಗಿ ಮರಣದ ಬಾಗಿಲಿನ ಕದ ತಟ್ಟಲು ಹೆಚ್ಚು ಸಮಯ ಬೇಕಿಲ್ಲ. ಇದೇ ಡಯಾಬಿಟಿಸ್.

ದೇಶ-ಕಾಲಗಳನ್ನು ಮೀರಿ ಕಾಡಿದ್ದ ಡಯಾಬಿಟಿಸ್ಸಿನ ಹಿಂದಿನ ರಹಸ್ಯ - ಹಲವು ಸಾವಿರ ವರ್ಷಗಳ ನಂತರ - ಕೊನೆಗೂ ಗೊತ್ತಾಯಿತಾದರೂ, ಇಪ್ಪತ್ತನೆಯ ಶತಮಾನದ ಆದಿ ಭಾಗದಲ್ಲಿ ಡಯಾಬಿಟಿಸ್ ರೋಗಿಗಳಿಗೆ ಅದರಿಂದ ಪ್ರಯೋಜನವೇನೂ ಆಗಲಿಲ್ಲ. 1918ರಲ್ಲಿ ಹನ್ನೊಂದು ವರ್ಷದ ಎಲಿಜಬೆತ್‌ಗೆ ಡಯಾಬಿಟಿಸ್ ಇರುವ ವಿಷಯ ಗೊತ್ತಾದಾಗ, ಅವಳ ಸಾವು ಹೆಚ್ಚೇನೂ ದೂರ ಇರಲಿಲ್ಲ; ಕೆಲವು ತಿಂಗಳು ಮಾತ್ರ ಉಳಿದಿತ್ತು.

ಎಲಿಜಬೆತ್‌ಳ ತಂದೆ-ತಾಯಿ, ಅವಳನ್ನು ಆ ಕಾಲದ ಪ್ರಖ್ಯಾತ ಡಯಾಬಿಟಿಸ್ ವೈದ್ಯ ಡಾ. ಫ್ರೆಡ್‌ರಿಕ್ ಆಲೆನ್ ಬಳಿಗೆ ಕರೆದೊಯ್ದರು. ಅವನು ಅಮೆರಿಕದ ನ್ಯೂಜೆರ್ಸಿ ರಾಜ್ಯದ ಮಾರಿಸ್ ಟೌನ್ ಎಂಬಲ್ಲಿ ಆಸ್ಪತ್ರೆ ನಡೆಸುತ್ತಿದ್ದ. ಅದರ ವಿಶೇಷತೆ: ಆರು ತಿಂಗಳಲ್ಲಿ ಸಾಯುವ ಮಕ್ಕಳು ಒಂದು ವರ್ಷದವರೆಗೆ ಬದುಕುತ್ತಿದ್ದರು. ಅವನ ಔಷಧ: ಹೊಟ್ಟೆಯನ್ನು ಬೆನ್ನಾಗಿಸುವಂತಹ ಉಪವಾಸ. ಅವನ ಆಸ್ಪತ್ರೆಗೆ ಸೇರುತ್ತಿದ್ದ ಎಷ್ಟೋ ಮಕ್ಕಳು ಡಯಾಬಿಟಿಸ್ ಅವರನ್ನು ಕೊಲ್ಲುವ ಮೊದಲೇ ಹಸಿವಿನಿಂದ ಸಾಯುತ್ತಿದ್ದರು. ಹಸಿವು ತಾಳಲಾರದೇ ಕೆಲವು ಮಕ್ಕಳು ಟೂತ್‌ಪೇಸ್ಟ್ ತಿಂದರೆ, ಡಯಾಬಿಟಿಸ್ಸಿನಿಂದ ಕುರುಡಾಗಿದ್ದ ಹದಿನಾಲ್ಕು ವರ್ಷದ ಹುಡುಗನೊಬ್ಬ ತನ್ನ ಸಾಕು ಪಕ್ಷಿಯ ಬೋನಿನಿಂದ ಧಾನ್ಯದ ಕಾಳು ಹೆಕ್ಕಿ ತಿಂದದ್ದೂ ಇದೆ. (ಆ ಹುಡುಗ ಹೆಚ್ಚು ದಿನ ಬದುಕಲಿಲ್ಲ; ಹಸಿವಿನ ಉಪವಾಸ ಅವನನ್ನು ಕೊಂದಿತು). ಪ್ರತಿ ದಿನ, ತೂಕದ ಮಾಪನ ಮತ್ತು ಬ್ಲಡ್ ಗ್ಲುಕೋಸ್ ಟೆಸ್ಟ್. ಮಕ್ಕಳೇನಾದರೂ ಕದ್ದು ತಿಂದಿದ್ದರೆ ಸಿಕ್ಕಿ ಬೀಳುವುದು ಗ್ಯಾರಂಟಿ. ಶಿಕ್ಷೆ: ಮತ್ತಿಷ್ಟು ಕಠಿಣ ಉಪವಾಸ.

ಡಯಾಬಿಟಿಸ್‌ಗೆ ಉಪವಾಸದ ಚಿಕಿತ್ಸೆ ಕಂಡುಕೊಂಡವನು ಫ್ರೆಂಚ್ ಔಷಧ ಶಾಸ್ತ್ರಜ್ಞ ಅಪೊಲ್ಲಿನೇರ್ ಬೂಷಾರ್ದ್. 1871ರಲ್ಲಿ ಜರ್ಮನರು ಪ್ಯಾರಿಸಿಗೆ ಮುತ್ತಿಗೆ ಹಾಕಿದರು. ಯುದ್ಧದ ಸಮಯ. ಆಹಾರದ ಕೊರತೆ. ಎಲ್ಲೆಡೆ ಹಸಿವಿನ ಹಾಹಾಕಾರ. ಆದರೆ, ಬೂಷಾರ್ದ್ ಒಂದು ವಿಷಯ ಗಮನಿಸಿದ - ಡಯಾಬಿಟಿಸ್ ರೋಗಿಗಳ ಆರೋಗ್ಯ ಉತ್ತಮವಾಗತೊಡಗಿತ್ತು! ಇದನ್ನು ಅವನು ಪ್ರಕಟಿಸಿದಾಗ, ಡಯಾಬಿಟಿಸ್ ನಿಯಂತ್ರಣಕ್ಕೆ ಉಪವಾಸ (ಮತ್ತು ನಿಯಮಿತ ವ್ಯಾಯಾಮ) ಮದ್ದೆಂಬ ಸಂಗತಿ ಇಡೀ ಯೂರೋಪ್ ಮತ್ತು ಅಮೆರಿಕದಲ್ಲಿ ಹರಡಲು ಹೆಚ್ಚು ಸಮಯ ಬೇಕಾಗಲಿಲ್ಲ. 1919ರ ಹೊತ್ತಿಗೆ (ಎಲಿಜಬೆತ್, ಡಾ.ಆಲೆನ್‌ನ ಪೇಷೆಂಟ್ ಆದ ವರ್ಷ) ಡಯಾಬಿಟಿಸ್ ನಿಯಂತ್ರಣಕ್ಕಿದ್ದ ಒಂದೇ ಮದ್ದು - ಉಪವಾಸ. ಈ ಉಪವಾಸ ಚಿಕಿತ್ಸೆಯನ್ನು ಮಕ್ಕಳಿಗೆ ಕಟ್ಟುನಿಟ್ಟಾಗಿ ನೀಡುವಲ್ಲಿ ಡಾ. ಅಲೆನ್‌ಗಿಂತ ಕಠಿಣ ವೈದ್ಯರಾರೂ ಅಮೆರಿಕದಲ್ಲಿ ಆ ಕಾಲದಲ್ಲಿ ಇರಲಿಲ್ಲ.

ಡಾ. ಅಲೆನ್ ಕಟ್ಟುನಿಟ್ಟಿನ ಕಠಿಣ ವೈದ್ಯನಾದರೆ, ಹನ್ನೊಂದು ವರ್ಷದ ಎಲಿಜ಼ಬೆತ್ ಒಬ್ಬಳು ಆದರ್ಶ-ರೋಗಿ. ವೈದ್ಯನ ಮಾತೇ ವೇದವಾಕ್ಯವೆಂದು ನಂಬಿದವಳು. ಅದಕ್ಕಿಂತ ಮುಖ್ಯವಾಗಿ ಬದುಕಿನ ಆಶೆಯಿದ್ದವಳು; ಸಾಯಲು ಸಿದ್ಧವಿಲ್ಲದಿದ್ದವಳು. ತನ್ನ ಬದುಕಿಗಾಗಿ ಹೋರಾಡುತ್ತಾ, ತಂದೆ-ತಾಯಿ-ಮನೆಯವರಿಂದ ದೂರಾಗಿ ಡಾ. ಅಲೆನ್ನನ ಆಸ್ಪತ್ರೆಯಲ್ಲಿ ವರ್ಷಗಳ ಕಾಲ ಕಳೆದರೂ ಎಲಿಜ಼ಬೆತ್ ಎಂದೂ ಹತಾಶಳಾಗಲಿಲ್ಲ. ಆಸ್ಪತ್ರೆಯಿಂದ ತನ್ನ ತಾಯಿಗೆ ಅವಳು ಬರೆದ ಕಾಗದಗಳಲ್ಲಿ - ಚಿಕ್ಕ ವಯಸ್ಸಿಗೇ ಮನೆಯವರಿಂದ ದೂರವಾಗಿದ್ದ ಅವಳು ಕೆಲವೊಮ್ಮೆ ದಿನಕ್ಕೆ ಎರಡು-ಮೂರು ಪತ್ರಗಳನ್ನು ಬರೆಯುತ್ತಿದ್ದಳು - ಪೂರ್ಣ ಗುಣಮುಖಳಾಗಿ ತನ್ನ ಮದುವೆ, ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುವ ಬಗೆಗೆ ಬರೆಯುತ್ತಿದ್ದಳು. ಆದರೆ ಆಸ್ಪತ್ರೆಯಲ್ಲಿನ ವಾಸ್ತವ: ಬರ್ತ್‌ಡೇ ಕೇಕ್ ಎಂದರೆ, ಕಾರ್ಡ್‌ಬೋರ್ಡ್ ಡಬ್ಬಕ್ಕೆ ಬಣ್ಣದ ಪೇಪರ್ ಅಂಟಿಸಿ ಮೇಲೊಂದು ಕ್ಯಾಂಡಲ್ ಇಡುವುದು!

ಎಲಿಜ಼ಬೆತ್ತಳ ಆಶಾವಾದದ ಹಿಂದೆ, ಅವಳ ವಯಸ್ಸಿಗೆ ತಕ್ಕ ಮುಗ್ಧತೆ ಇದ್ದರೆ, ಡಾ. ಅಲೆನ್ನನ ಕಾಠಿಣ್ಯದ ಹಿಂದೆ ಒಂದು ಆಶಾವಾದ ಇತ್ತು. ಈಗಾಗಲೇ ಡಯಾಬಿಟಿಸ್ಸಿನ ರಹಸ್ಯ ಗೊತ್ತಾಗಿ ಹಲವು ದಶಕಗಳೇ ಸಂದಿದ್ದವು. ಅದಕ್ಕೆ ತಕ್ಕ ಮದ್ದು ಹೊರಬರಲು ಹೆಚ್ಚು ಸಮಯ ಬೇಕಿಲ್ಲವೆಂದೇ ಅವನು ನಂಬಿದ್ದ. ಹೀಗಾಗಿ, ಡಯಾಬಿಟಿಸ್ ರೋಗಿಗಳ ಸಾವನ್ನು ಒಂದು ದಿನ ದೂರ ತಳ್ಳಲು ಸಾಧ್ಯವಿದ್ದರೆ, ಅದಕ್ಕಾಗಿ ಎಂತಹ ಕಠಿಣ ಚಿಕಿತ್ಸೆ ನೀಡಲೂ ಅವನು ಸಿದ್ಧನಿದ್ದ. ಎಷ್ಟೋ ಜನ ಅವನ ಚಿಕಿತ್ಸಾ ವಿಧಾನವನ್ನು ಚಿತ್ರಹಿಂಸೆ ಎಂದೇ ಭಾವಿಸಿದ್ದರು.

ಆದರೆ, ಡಾ. ಆಲೆನ್‌ನ ನಂಬಿಕೆಯ ಹಿಂದೆ ಕೊಂಚ ವಾಸ್ತವವೂ ಇತ್ತು. ಡಯಾಬಿಟಿಸ್ ನಿಯಂತ್ರಿಸುವ ಜೀವೌಷಧ ಇನ್ಸುಲಿನ್ ಸಂಬಂಧಿತ ಪ್ರಯೋಗಗಳು ಯುರೋಪ್, ಅಮೆರಿಕದ ಹಲವು ಪ್ರಯೋಗಶಾಲೆಗಳಲ್ಲಿ ನಡೆಯುತ್ತಿದ್ದವು. ಹಲವಾರು ವಿಜ್ಞಾನಿಗಳು, ಇನ್ಸುಲಿನ್ ಉತ್ಪಾದಿಸುವ ಅಥವಾ ಪ್ರಾಣಿಗಳಿಂದ ಬೇರ್ಪಡಿಸುವ ಪ್ರಯತ್ನದಲ್ಲಿ ಇದ್ದರು. ಆದರೆ, ಯಾರೂ ಯಶಸ್ವಿಯಾಗಿರಲಿಲ್ಲ. ಯಶಸ್ವಿಯಾಗಿದ್ದರೆ, ಅದು ಬೇರಾರಿಗೂ ತಿಳಿದಿರಲಿಲ್ಲ.

ಮೊದಲನೆಯ ಜಾಗತಿಕ ಯುದ್ಧ ಆಗಷ್ಟೇ ಮುಗಿದಿತ್ತು. ವಿಶ್ವದೆಲ್ಲೆಡೆಯಿಂದ ಯೂರೋಪಿನ ರಣರಂಗಕ್ಕೆ ಬಂದಿದ್ದ ಸೇನೆಗಳು ತಮ್ಮ ತಮ್ಮ ದೇಶಗಳಿಗೆ ಮರಳುತ್ತಿದ್ದವು. ಅವುಗಳಲ್ಲಿ ಕೆನಡಾದಿಂದ ಫ್ರಾನ್ಸ್‌ಗೆ ಬಂದಿದ್ದ ಸೇನೆಯೂ ಒಂದು. ಡಾ. ಫ್ರೆಡರಿಕ್ ಬ್ಯಾಂಟಿಂಗ್ ಈ ಸೇನಾ ಪಡೆಯಲ್ಲಿ ಇದ್ದ.

27 ವರ್ಷದ ಬ್ಯಾಂಟಿಂಗಿನಲ್ಲಿ ಹೇಳಿಕೊಳ್ಳುವಂತಹ ವಿಶೇಷತೆ ಏನೂ ಇರಲಿಲ್ಲ. 1891ರಲ್ಲಿ, ಕೆನಡಾದ ಆಲಿಸ್ಟನ್ ಎಂಬ ಸಣ್ಣ ಊರಿನಲ್ಲಿ ಹುಟ್ಟಿದ್ದ ಅವನು, ಅಲ್ಲಿಯೇ ಹೈಸ್ಕೂಲು ಮುಗಿಸಿ, ಟೊರಾಂಟೊ ಯೂನಿವರ್ಸಿಟಿಯನ್ನು ಸೇರಿದಾಗ 19 ವರ್ಷ. ಪೇಂಟಿಂಗಿನಲ್ಲಿ ಆಸಕ್ತಿ ಇತ್ತು. ಜನರಲ್ ಆರ್ಟ್ಸ್ ಪದವಿ ಪಡೆಯಲು ನಿಶ್ಚಯಿಸಿದ. ಮೊದಲ ವರ್ಷದ ಪರೀಕ್ಷೆಯಲ್ಲಿ ಡುಮ್ಕಿ ಹೊಡೆದ. ಆರ್ಟ್ಸ್ ಸರಿ ಹೋಗಲಿಲ್ಲ. ಡಾಕ್ಟರ್ ಆಗಲು ನಿರ್ಧರಿಸಿ, ಮೆಡಿಕಲ್ ಸೀಟ್‌ಗೆ ಅಪ್ಲೈ ಮಾಡಿದ. ಯೂನಿವರ್ಸಿಟಿಯವರು ಸೀಟ್ ಕೊಡಲಿಲ್ಲ. ಅವನ ಕಲಾಭ್ಯಾಸ ಮತ್ತೊಂದು ವರ್ಷ ಮುಂದುವರೆಯಿತು. ಮತ್ತೆ ಪರೀಕ್ಷೆ. ಮತ್ತೆ ಫೇಲು. ಇನ್ನೊಮ್ಮೆ ಮೆಡಿಕಲ್ ಸೀಟಿಗೆ ಪ್ರಯತ್ನ. ಈ ಸಲ ಸೀಟ್ ಸಿಕ್ಕಿತು. ಎರಡು ವರ್ಷ ಮೆಡಿಕಲ್ ಓದಿದ. ಅದು ಮುಗಿಸುವ ಮುನ್ನವೇ ಮಿಲಿಟರಿ ಸೇರಲು ಅರ್ಜಿ ಹಾಕಿದ. ಅವರು ಸೇರಿಸಿಕೊಳ್ಳಲಿಲ್ಲ. ಕೆಲವು ತಿಂಗಳು ಬಿಟ್ಟು ಮತ್ತೆ ಪ್ರಯತ್ನಿಸಿದ. ಮತ್ತೆ ನಕಾರ. ಒಂದು ವರ್ಷದ ನಂತರ ಮಗದೊಮ್ಮೆ ಪ್ರಯತ್ನಿಸಿದ. ಅಷ್ಟರಲ್ಲಾಗಲೇ, ಮೊದಲ ಮಹಾಯುದ್ಧ ಪೂರ್ಣ ಭರಾಟೆಯಲ್ಲಿ ಸಾಗಿತ್ತು. ‘ಸೇನೆಗೆ ಸೇರ್ತೀನಿ’ ಅನ್ನೋವವರನ್ನು ‘ಬೇಡ’ ಎನ್ನುವ ಪರಿಸ್ಥಿತಿಯಲ್ಲಿ ಅಂತೂ ಕೆನಡಾ ಇರಲಿಲ್ಲ. ಅದರಲ್ಲೂ, ರಣರಂಗದಲ್ಲಿ ವೈದ್ಯರ ಕೊರತೆ ಕಾಡುತ್ತಿತ್ತು. ಈ ಸಲ ಅವನ ಅರ್ಜಿ ಫಲಿಸಿತು. ಅಷ್ಟೇ ಅಲ್ಲ, ಅವನ ವೈದ್ಯಕೀಯ ವಿದ್ಯಾಭ್ಯಾಸವನ್ನು ತರಾತುರಿಯಲ್ಲಿ ಮುಗಿಸಿ ಮಿಲಿಟರಿ ವೈದ್ಯನಾಗಿ ಸೇರುವ ಅವಕಾಶ ಅವನಿಗೆ ಸಿಕ್ಕಿತು.

ಕ್ರಿ.ಶ. 1919. ಅತ್ತ ಅಮೆರಿಕದ ನ್ಯೂಜೆರ್ಸಿಯಲ್ಲಿ ಹನ್ನೊಂದು ವರ್ಷದ ಎಲಿಜ಼ಬೆತ್ ತನ್ನ ಜೀವನದ ಕೊನೆಯ ತಿಂಗಳುಗಳನ್ನು ಕಳೆಯಲು ಡಾ. ಆಲೆನ್‌ನ ಫಿಸಿಯಾಟ್ರಿಕ್ ಇನ್‌ಸ್ಟಿಟ್ಯೂಟ್ ಸೇರಿದರೆ, ಇತ್ತ ಕೆನಡಾದಲ್ಲಿ, ಆಗಷ್ಟೇ ಯುದ್ಧದಿಂದ ಬಂದಿದ್ದ ಬ್ಯಾಂಟಿಂಗ್, ಅರ್ಧ ಮುಗಿದಿದ್ದ ಮೆಡಿಕಲ್ ಟ್ರೇನಿಂಗನ್ನು ಪೂರ್ಣಮಾಡಿ ಹೊಸ ಜೀವನ ಪ್ರಾರಂಭಿಸಲು, ಯೂನಿವರ್ಸಿಟಿ ಆಫ್ ಟೊರಾಂಟೊಗೆ ಸೇರಿಕೊಂಡ. ಒಂದು ವರ್ಷದ ನಂತರ ಟ್ರೇನಿಂಗೇನೋ ಮುಗಿಯಿತು. ಆದರೆ ಕೆಲಸ ಸಿಗಲಿಲ್ಲ. ಹತ್ತಿರದ ಇನ್ನೊಂದು ಊರಿಗೆ ಹೋಗಿ ಪ್ರೈವೇಟ್ ಪ್ರಾಕ್ಟೀಸ್ ಶುರು ಹಚ್ಚಿದ. ಅದೂ ಯಶಸ್ವಿಯಾಗಲಿಲ್ಲ. ಅದೇ ಊರಿನ ಕಾಲೇಜೊಂದರಲ್ಲಿ ಪಾರ್ಟ್ ಟೈಮ್ ಅಧ್ಯಾಪಕನಾಗಿ ಸೇರಿಕೊಂಡ. ಸಮಯ ಸಿಕ್ಕಾಗ - ಸಮಯಕ್ಕೇನೂ ಕೊರತೆ ಇರಲಿಲ್ಲ - ರಿಸರ್ಚ್ ಪೇಪರುಗಳನ್ನು ಓದಲು ಪ್ರಾರಂಭಿಸಿದ.

ಎಡ್ವರ್ಡ್ ಆಲ್ಬರ್ಟ್ ಶಾರ್ಪಿ-ಶೇಫರ್ (‘ಇನ್ಸುಲಿನ್’ ಹೆಸರಿಟ್ಟವನು), ಮಿಂಕೋವ್‌ಸ್ಕಿ ಮತ್ತಿತರರು ಬರೆದಿದ್ದ ರಿಸರ್ಚ್ ಪೇಪರ್‌ಗಳು ಅವನ ಗಮನ ಸೆಳೆದವು. ಡಯಾಬಿಟಿಸ್/ಇನ್ಸುಲಿನ್ ಬಗೆಗೆ ಮತ್ತಷ್ಟು, ಮಗದಷ್ಟು ಓದಲು ಪ್ರಾರಂಭಿಸಿದ. ಇನ್ಸುಲಿನ್, ಡಯಾಬಿಟಿಸನ್ನು ನಿಯಂತ್ರಿಸುವುದು ಈಗಾಗಲೇ ಗೊತ್ತಿದ್ದ ವಿಚಾರ. ಎಷ್ಟೋ ವಿಜ್ಞಾನಿಗಳು, ಪ್ಯಾಂಕ್ರಿಯಾಸಿನಿಂದ ಇನ್ಸುಲಿನ್ ಸಂಗ್ರಹಿಸಿ ಅದನ್ನು ಡಯಾಬಿಟಿಸ್ ಚಿಕಿತ್ಸೆಗೆ ಉಪಯೋಗಿಸುವ ಆಲೋಚನೆಯಲ್ಲಿದ್ದರು. ಪ್ಯಾಂಕ್ರಿಯಾಸನ್ನು ಅರೆದು ಅದರಿಂದ ಇನ್ಸುಲಿನ್ ತೆಗೆಯುವ ಪ್ರಯತ್ನ ನಡೆಯುತ್ತಲೇ ಇತ್ತು. ಆದರೆ, ಒಂದು ಸಮಸ್ಯೆ: ಪ್ಯಾಂಕ್ರಿಯಾಸ್ ಬರೀ ಇನ್ಸುಲಿನ್ ಅಷ್ಟೇ ಸೃಷ್ಟಿಸುವುದಿಲ್ಲ; ಜೀರ್ಣಕ್ರಿಯೆಗೆ ಬೇಕಾದ ಇನ್ನೂ ಹಲವು ರಾಸಾಯನಿಕಗಳನ್ನು ಸೃಷ್ಟಿಸುತ್ತದೆ. ಪ್ಯಾಂಕ್ರಿಯಾಸ್ ಅರೆದಾಗ, ಇವೆಲ್ಲಾ ಒಟ್ಟಿಗೆ ಸೇರಿ ಇನ್ಸುಲಿನ್ ಸಿಗದಂತಾಗುತ್ತಿತ್ತು.

ಡಾ. ಮೋಸೆಸ್ ಬ್ಯಾರನ್ ಎನ್ನುವ ಅಮೆರಿಕನ್ ವೈದ್ಯ ಆಗಷ್ಟೇ ಬರೆದಿದ್ದ ಪೇಪರ್ ಒಂದು ಬ್ಯಾಂಟಿಂಗ್‌ನ ಕಣ್ಣಿಗೆ ಬಿತ್ತು. ಅದರಲ್ಲಿ, ಪ್ಯಾಂಕ್ರಿಯಾಟಿಕ್ ಡಕ್ಟ್ (ಪ್ಯಾಂಕ್ರಿಯಾಸ್ ನಡುವೆ ಇರುವ ನಾಳ) ಅನ್ನು ಕಟ್ಟಿಹಾಕಿದಾಗ, ಕೆಲವು ದಿನಗಳ ನಂತರ ಪ್ಯಾಂಕ್ರಿಯಾಸಿನ ಉಳಿದ ಜೀವಕೋಶಗಳು ಸಾಯುತ್ತವಾದರೂ, ಐಲೆಟ್ಸ್ ಆಫ್ ಲಾಂಗೆರ್ಹಾನ್ಸ್ (ಇನ್ಸುಲಿನ್ ಸೃಷ್ಟಿಸುವ ಜೀವಕೋಶಗಳು) ಬದುಕುಳಿಯುವ ವಿಚಾರ ಅದರಲ್ಲಿತ್ತು. ಅಕ್ಟೋಬರ್ 31, 1920ರ ರಾತ್ರಿ ಬ್ಯಾಂಟಿಂಗ್‌ಗೆ ನಿದ್ದೆ ಬರಲಿಲ್ಲ. ಅವನಿಗೊಂದು ಹೊಳಹು ದಕ್ಕಿತು: ಪ್ಯಾಂಕ್ರಿಯಾಸಿನಲ್ಲಿ ಸೃಷ್ಟಿಯಾಗುವ ಇತರೆ ಜೀರ್ಣಕಾರಕ ರಸಗಳು, ಇನ್ಸುಲಿನ್ ಜೊತೆ ಮಿಶ್ರಣವಾಗುತ್ತಿವೆ. ಆ ಜೀರ್ಣಕಾರಕ ರಸಗಳ ಉತ್ಪತ್ತಿಯನ್ನು ತಡೆದರೆ, ಇನ್ಸುಲಿನ್ ಸಂಗ್ರಹಿಸಬಹುದು. 25 ಪದಗಳ ನೋಟ್ ಒಂದನ್ನು ಬರೆದಿಟ್ಟ: ‘ಡಯಾಬಿಟಿಸ್. ನಾಯಿಗಳ ಪ್ಯಾಂಕ್ರಿಯಾಟಿಕ್ ಡಕ್ಟನ್ನು ಕಟ್ಟಿಹಾಕು. ಪ್ಯಾಂಕ್ರಿಯಾಸ್ ಜೀವಕೋಶಗಳು ಸತ್ತು, ಐಲೆಟ್ಸ್ ಆಫ್ ಲಾಂಗೆರ್ಹಾನ್ಸ್ ಉಳಿಯುವವರೆಗೆ ನಾಯಿಗಳನ್ನು ಬದುಕುಳಿಸು. ಬ್ಲಡ್ ಗ್ಲುಕೋಸ್ ನಿಯಂತ್ರಿಸುವ ಇನ್ಸುಲಿನನ್ನು ಅದರಿಂದ ತೆಗೆಯಲು ಪ್ರಯತ್ನಿಸು.’ (ಇದು ಭಾವಾರ್ಥ. ಮೂಲದಲ್ಲಿ: ‘Diabetus. Ligate pancreatic ducts of dog. Keep dogs alive till acini degenerate leaving Islets. Try to isolate the internal secretion of these to relieve glucosurea.’)

ಆ ಇಪ್ಪತ್ತೈದು ಪದಗಳ ಸಣ್ಣ, ಸರಳ, ನೋಟ್ ಲಕ್ಷಾಂತರ ಮಂದಿಯ ಜೀವ ಉಳಿಸುವ ಯಶಸ್ವಿ ಪ್ರಯತ್ನಕ್ಕೆ ನಾಂದಿಯಾಯಿತು.

ಬ್ಯಾಂಟಿಂಗ್, ತನ್ನ ಆ ನೋಟನ್ನು ಮತ್ತಷ್ಟು ವಿಸ್ತರಿಸಿ, ಯೂನಿವರ್ಸಿಟಿ ಆಫ್ ಟೊರಾಂಟೊದಲ್ಲಿ ಶರೀರಶಾಸ್ತ್ರ ಪ್ರಯೋಗಾಲಯದ ಮುಖ್ಯಸ್ಥನಾಗಿದ್ದ ಡಾ.ಜೆ.ಜೆ.ಆರ್. ಮೆಕ್ಲಾಡನಿಗೆ ಪತ್ರವೊಂದನ್ನು ಬರೆದ: ನನಗೊಂದು ಆಲೋಚನೆ ಇದೆ. ನಿಮ್ಮ ಪ್ರಯೋಗಶಾಲೆಯಲ್ಲಿ ನಾಯಿಗಳ ಪ್ಯಾಂಕ್ರಿಯಾಸಿನಿಂದ ಇನ್ಸುಲಿನ್ ತೆಗೆಯುವ ಪ್ರಯೋಗ ನಡೆಸಲು ಅನುಮತಿ ಸಿಗಬಹುದೇ?

ಆದರೆ, ಈ ಡಾ. ಮೆಕ್ಲಾಡ್, ಬ್ಯಾಂಟಿಂಗ್ ತರಹದವನಲ್ಲ. ಬ್ಯಾಂಟಿಂಗ್ ತನ್ನ ವಿದ್ಯಾಭ್ಯಾಸವನ್ನು ಫೇಲ್ ಆಗುತ್ತಾ ಹೇಗೋ ಮುಗಿಸಿ, ಕೆಲಸ ಸಿಗದೆ, ಪ್ರೈವೇಟ್ ಪ್ರಾಕ್ಟೀಸಿನಲ್ಲೂ ಸೋತವನಾದರೆ, ಮೆಕ್ಲಾಡ್ ತನ್ನ ಇಡೀ ಜೀವನದಲ್ಲಿ ಯಶಸ್ಸುಗಳನ್ನೇ ಕಂಡವನು; ಸ್ಕಾಟ್ಲೆಂಡ್, ಇಂಗ್ಲೆಂಡ್, ಜರ್ಮನಿ, ಅಮೆರಿಕ, ಕೆನಡಾ ಹೀಗೆ ಹಲವಾರು ದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಓದಿದವನು. ಎರಡೆರಡು ಪಿ.ಎಚ್.ಡಿ. ಪದವಿ ಪಡೆದಿದ್ದವನು. ವಿಜ್ಞಾನಿಯಾಗಿ, ಪ್ರೊಫೆಸರ್ ಆಗಿ ಹೆಸರು ಮಾಡಿದ್ದವನು.

ಬ್ಯಾಂಟಿಂಗ್‌ನ ಪತ್ರಕ್ಕೆ ಮೆಕ್ಲಾಡ್‌ನ ಉತ್ತರ: ‘ಸಾಧ್ಯವಿಲ್ಲ’.

ಕೆಲವು ತಿಂಗಳ ನಂತರ ಮೆಕ್ಲಾಡ್ ಮನಸ್ಸು ಬದಲಾಯಿಸಿದ. ಯೂನಿವರ್ಸಿಟಿಗೆ ಬೇಸಿಗೆಯ ರಜಾ ಸಮಯ. ಮೆಕ್ಲಾಡ್ ಎಂಟು ವಾರಗಳ ಕಾಲ ರಜೆಯ ಮೇಲೆ ಹೋಗುವವನಿದ್ದ. ಆ ಎಂಟು ವಾರ, ತನ್ನ ಪ್ರಯೋಗಶಾಲೆಯನ್ನು ಬ್ಯಾಂಟಿಂಗ್ ಉಪಯೋಗಿಸುವುದಕ್ಕೆ ಒಪ್ಪಿಗೆಯನ್ನಿತ್ತ. ಲ್ಯಾಬರೇಟರಿ ಜೊತೆಗೆ 10 ನಾಯಿಗಳು, ಮೆಕ್ಲಾಡ್‌ನ ಇಬ್ಬರು ಅಸಿಸ್ಟೆಂಟುಗಳಲ್ಲಿ ಒಬ್ಬರು. ಯಾವುದೇ ಸಂಬಳ ಇಲ್ಲ. ಮೆಕ್ಲಾಡ್‌ನ ಅಸಿಸ್ಟೆಂಟ್‌ಗಳು ಕಾಯಿನ್ ಟಾಸ್ ಮಾಡಿದರು. ಆ ಇಬ್ಬರು ಅಸಿಸ್ಟೆಂಟುಗಳಲ್ಲಿ ಒಬ್ಬನಾದ ಚಾರ್ಲ್ಸ್ ಬೆಸ್ಟ್, ಬ್ಯಾಂಟಿಂಗ್‌ನ ಸಹಾಯಕನಾಗಿ ನೇಮಕವಾದ.

ಡಯಾಬಿಟಿಸ್, ಹಲವು ಸಾವಿರ ವರ್ಷಗಳಿಂದ ಗೊತ್ತಿದ್ದ ರೋಗ. ಆದರೆ, ಅದನ್ನು ನಿಯಂತ್ರಿಸುವ ಮದ್ದನ್ನು ಕಂಡುಹಿಡಿಯಲು ಸಿಕ್ಕ ಸಮಯ ಎಂಟು ವಾರ ಮಾತ್ರ. ಬ್ಯಾಂಟಿಂಗ್ ಮತ್ತು ಬೆಸ್ಟ್ ಹಗಲೂ ರಾತ್ರಿ ಎನ್ನದೆ ಕೆಲಸ ಮಾಡಲು ಶುರು ಹಚ್ಚಿದರು. ಹಲವಾರು ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿ ಪ್ಯಾಂಕ್ರಿಯಾಸ್ ತೆಗೆದರು. ಆ ನಾಯಿಗಳ ಬ್ಲಡ್ ಶುಗರ್ ಹೆಚ್ಚಾಯಿತು. ಅವುಗಳಿಗೆ ಡಯಾಬಿಟಿಸ್ ಬಂತು. ಇನ್ನಷ್ಟು ನಾಯಿಗಳ ಪ್ಯಾಂಕ್ರಿಯಾಟಿಕ್ ಡಕ್ಟನ್ನು ಬ್ಯಾಂಟಿಂಗಿನ ಆಲೋಚನೆಯತೆ ಕಟ್ಟಿಹಾಕಿದರು. ಅವನು ಯೋಚಿಸಿದಂತೆ, ಕೆಲವು ವಾರ ಬಿಟ್ಟು, ಆ ಪ್ಯಾಂಕ್ರಿಯಾಸ್‌ಗಳನ್ನು ಹೊರ ತೆಗೆದು ಅದರಿಂದ ಇನ್ಸುಲಿನ್ ಸಂಗ್ರಹಿಸುವ ಪ್ರಯತ್ನ ಪ್ರಾರಂಭವಾಯಿತು. ಆ ಸಂಗ್ರಹಿಸಿದ ದ್ರವ್ಯವನ್ನು ಡಯಾಬಿಟಿಸ್ ಪೀಡಿತ ನಾಯಿಗಳಿಗೆ ಇಂಜೆಕ್ಟ್ ಮಾಡಿ, ಅವುಗಳ ಬ್ಲಡ್ ಶುಗರ್ ಲೆವೆಲ್ ಕಡಿಮೆ ಮಾಡುವ ಪ್ರಯೋಗ ಅವಿರತವಾಗಿ ನಡೆಯಿತು. ಆದರೆ ನಾಯಿಗಳು ಸತ್ತವು, ಅಷ್ಟೇ. ಪ್ರಯೋಗ ಮಾತ್ರ ಯಶಸ್ವಿಯಾಗಲಿಲ್ಲ. ಮೆಕ್ಲಾಡ್ ಕೊಟ್ಟಿದ್ದ ಎಂಟು ವಾರದ ಗಡುವು ಮುಗಿಯುತ್ತಾ ಬಂತು. ಪ್ರಯೋಗಕ್ಕೆ ಇನ್ನಷ್ಟು ನಾಯಿಗಳು ಬೇಕು. ಮೊದಲೇ ಜೇಬು ಕಾಲಿಯಿದ್ದ ಬ್ಯಾಂಟಿಂಗ್, ತನ್ನ ಕಾರು ಮಾರಿ, ಮತ್ತಷ್ಟು ನಾಯಿಗಳನ್ನು ಕೊಳ್ಳಬೇಕಾಯಿತು.

ಜುಲೈ, 27, 1921. ಡಾ.ಫ್ರೆಡರಿಕ್ ಬ್ಯಾಂಟಿಂಗ್ ಮತ್ತು ಆತನ ಅಸಿಸ್ಟೆಂಟ್ ಡಾ.ಚಾರ್ಲ್ಸ್ ಬೆಸ್ಟ್ ಕೊನೆಗೂ ಯಶಸ್ವಿಯಾದರು. ಡಯಾಬಿಟಿಸ್ಸಿನಿಂದ ಸೊರಗಿ, ಸುಸ್ತಾಗಿ ಮಲಗಿದ್ದ ನಾಯಿಯೊಂದು, ಇಂಜೆಕ್ಷನ್ ನೀಡಿದ ಕೆಲವೇ ಸಮಯಕ್ಕೆ ಪವಾಡ ಸದೃಶವಾಗಿ ಎದ್ದು ನಿಂತು ಬಾಲ ಅಲ್ಲಾಡಿಸಲು ಪ್ರಾರಂಭಿಸಿತು!

ಕೆಲವು ದಿನಗಳ ನಂತರ ಡಾ.ಮೆಕ್ಲಾಡ್ ರಜೆ ಮುಗಿಸಿ ಬಂದಾಗ, ಬ್ಯಾಂಟಿಂಗ್ ಮತ್ತು ಬೆಸ್ಟ್ ತಮ್ಮ ಯಶಸ್ವಿ ಪ್ರಯೋಗದ ವಿಷಯ ಅವನಿಗೆ ತಿಳಿಸಿದರು. ಆದರೆ, ಮೆಕ್ಲಾಡ್ ಅದನ್ನು ನಂಬಲಿಲ್ಲ. (ಇದು ಮೆಕ್ಲಾಡ್ ಮತ್ತು ಬ್ಯಾಂಟಿಂಗ್ ಮಧ್ಯೆ ಜೀವನ ಪೂರ್ತಿ ವಿರಸಕ್ಕೆ ಕಾರಣವಾಯಿತು). ತನ್ನ ಮುಂದೆ ಮತ್ತೆ ಪ್ರಯೋಗ ಮಾಡಿ ತೋರಿಸುವಂತೆ ಕೇಳಿದ. ಬ್ಯಾಂಟಿಂಗ್ ಮತ್ತು ಬೆಸ್ಟ್ ಮತ್ತೆ ತಮ್ಮ ಪ್ರಯೋಗಗಳನ್ನು ಮಾಡಿ ಮೆಕ್ಲಾಡ್‌ಗೆ ತಮ್ಮ ಫಲಿತಾಂಶ ತೋರಿಸಲು ಒಪ್ಪಿದರು. ಆದರೆ ಕೆಲವು ಕಂಡೀಷನ್‌‌ಗಳು - ಮುಖ್ಯವಾಗಿ ಬ್ಯಾಂಟಿಂಗ್‌ ಮತ್ತು ಬೆಸ್ಟ್‌ಗೆ ಸಂಬಳ ಕೊಡಬೇಕು!

ಅವರು ಮತ್ತೆ ಮಾಡಿದ ಪ್ರಯೋಗಗಳು ಮೊದಲಿಗೆ ಯಶಸ್ವಿಯಾಗಲಿಲ್ಲ. ಹಲವು ಸಂಶೋಧನೆಗಳನ್ನು ಮಾಡಿ ಪಳಗಿದ್ದ ಡಾ.ಮೆಕ್ಲಾಡ್‌ಗೆ ಅದರ ಹಿಂದಿನ ಕಾರಣ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ; ಅವರು ಸಂಗ್ರಹಿಸುತ್ತಿದ್ದ ಇನ್ಸುಲಿನ್ ಶುದ್ಧವಾಗಿರಲಿಲ್ಲ. ಅವನು ಪ್ರಯೋಗದ ವಿಧಾನದಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದ. ಎಲ್ಲಕ್ಕಿಂತ ಮುಖ್ಯವಾಗಿ, ಜೇಮ್ಸ್ ಕಾಲಿಪ್ ಎಂಬ ನುರಿತ ಬಯೋಕೆಮಿಸ್ಟ್‌ನನ್ನು ತಮ್ಮ ತಂಡಕ್ಕೆ ಕರೆತಂದ. ನಾಯಿಗಳ ಪ್ಯಾಂಕ್ರಿಯಾಸಿನಿಂದ ತೆಗೆದ ಇನ್ಸುಲಿನ್ ಅನ್ನು ಮತ್ತಷ್ಟು ಶುದ್ಧೀಕರಿಸುವಲ್ಲಿ, ಕಾಲಿಪ್ ಯಶಸ್ವಿಯಾದ. ಒಟ್ಟಾರೆ ಪ್ರಯೋಗವೂ ಯಶಸ್ವಿಯಾಯಿತು.

ಈ ವೇಳೆಗಾಗಲೇ, ಬೇಸಿಗೆ ಮುಗಿದಿತ್ತು. ಚಳಿಗಾಲ ಶುರುವಾಗಿತ್ತು. ಮೆಕ್ಲಾಡ್, ಬ್ಯಾಂಟಿಂಗ್, ಬೆಸ್ಟ್ ಮತ್ತು ಕಾಲಿಪ್ ತಂಡ, ಲ್ಯಾಬರೇಟರಿ ಪ್ರಾಣಿಗಳ ಮೇಲೆ ಮತ್ತಷ್ಟು ಬಾರಿ ಪ್ರಯೋಗಗಳನ್ನು ಮಾಡಿ ತಮ್ಮ ಫಲಿತಾಂಶ ಧೃಡೀಕರಿಸಿಕೊಂಡರು. ಆದರೆ, ಈ ಇನ್ಸುಲಿನ್ ಮಾನವರಲ್ಲಿ ಕೆಲಸ ಮಾಡುತ್ತಾ?!!

ಜನವರಿ, 1922. ಟೊರಾಂಟೋದಲ್ಲಿ ಕೊರೆಯುವ ಚಳಿ. ಎಲ್ಲೆಡೆ ಸ್ನೋ ಮತ್ತು ಐಸ್. ಹೊತ್ತಾಗುವ ಮೊದಲೇ ಅಸ್ತಂಗತನಾಗುವ ಸೂರ್ಯ. ಲೆನಾರ್ಡ್ ಥಾಂಪ್ಸನ್‌ನ ಬದುಕು ಸಹ ಹೊತ್ತಿಗೆ ಮೊದಲೇ ಅಸ್ತಂಗತವಾಗುವ ಕಾಲ ಸಮೀಪಿಸಿತ್ತು. ಆ ಥಾಂಪ್ಸನ್ ಹದಿನಾಲ್ಕರ ಹುಡುಗ. ಡಯಾಬಿಟಿಸ್ ಇದ್ದದ್ದು ಗೊತ್ತಾಗಿ ಮೂರು ವರ್ಷಗಳಾಗಿತ್ತು. ಬರೀ ಎಲುಬು-ಚರ್ಮದ ಅವನ ದೇಹ (ಡಯಾಬಿಟಿಕ್) ಕೋಮಾಗೆ ಜಾರಿತ್ತು.

ಟೈಪ್-1 ಡಯಾಬಿಟಿಸ್ಸಿನ ಲೀಲೆಗೆ ಈಗಾಗಲೇ ಬಲಿಪಶುವಾಗಿದ್ದ ಥಾಂಪ್ಸನ್‌ಗಿಂತ - ಇತಿಹಾಸದಲ್ಲೇ ಮೊದಲ ಬಾರಿ ಮಾಡುತ್ತಿದ್ದ ಮಾನವ ಇನ್ಸುಲಿನ್ ಎಕ್ಸ್‌ಪೆರಿಮೆಂಟಿಗೆ - ಉತ್ತಮ ಪ್ರಯೋಗ ಪಶು ಬೇಕೇ?! ಜನವರಿ 11, 1922ರಂದು, ಅವನ ಅಪ್ಪನ ಒಪ್ಪಿಗೆಯ ನಂತರ ನಾಯಿಯಿಂದ ತೆಗೆದ ಇನ್ಸುಲಿನ್ ಅನ್ನು ಅವನಿಗೆ ಕೊಡಲಾಯಿತು. ಪರಿಸ್ಥಿತಿ ಬಿಗಡಾಯಿಸಿತು. ಅಲರ್ಜಿಕ್ ರಿಯಾಕ್ಷನ್!

ಆ ವರ್ಷದ ಫೆಬ್ರವರಿಯ ವೇಳೆಗೆ ಜೇಮ್ಸ್ ಕಾಲಿಪ್, ನಾಯಿಯಿಂದ ತೆಗೆದ ಆ ಇನ್ಸುಲಿನ್ ಅನ್ನು ಮತ್ತಷ್ಟು ಶುದ್ಧೀಕರಿಸಿದ್ದ. ಈ ಸಲಿ, ಪ್ರಯೋಗ ಯಶಸ್ವಿಯಾಯಿತು. ಥಾಂಪ್ಸನ್‌ನ ಡಯಾಬಿಟಿಸ್ ನಿಯಂತ್ರಣಕ್ಕೆ ಬಂತು. ಮೂಳೆ-ತೊಗಲುಗಳ ಕೋಮಾದಲ್ಲಿದ್ದವನು, ಕೆಲವೇ ವಾರಗಳಲ್ಲಿ ತನ್ನ ವಯಸ್ಸಿನವರೊಂದಿಗೆ ಆಡುವಂತಾದ. (ಕೊನೆಗೊಂದು ದಿನ ಲೆನಾರ್ಡ್ ಥಾಂಪ್ಸನ್ ಸತ್ತಾಗ, ಅವನ ವಯಸ್ಸು ಇಪ್ಪತ್ತೇಳು. ಸಾವಿನ ಕಾರಣ ನ್ಯುಮೋನಿಯಾ)

ಅದೇ ವರ್ಷ ಮೇ ತಿಂಗಳಿನಲ್ಲಿ, ಮೆಕ್ಲಾಡ್ ಮತ್ತು ಬ್ಯಾಂಟಿಂಗ್ ಅಮೆರಿಕದಲ್ಲಿ ನಡೆದ ಮೆಡಿಕಲ್ ಕಾನ್ಫರೆನ್ಸ್ ಒಂದರಲ್ಲಿ, ಡಯಾಬಿಟಿಸ್ ನಿಯಂತ್ರಣದಲ್ಲಿ ತಾವು ಪಡೆದ ಯಶಸ್ಸನ್ನು ಪ್ರಕಟಿಸಿದರು. ಅವರು ವಾಪಸು ಟೊರಾಂಟೋಗೆ ಬರುವ ವೇಳೆಗೆ ಪತ್ರಗಳ ಹೊಳೆಯೇ ಹರಿದಿತ್ತು. ವಿಶ್ವದ ಎಲ್ಲೆಡೆಯಿಂದ, ಡಯಾಬಿಟಿಸ್ಸಿನಿಂದ ಪೀಡಿತರಾಗಿದ್ದ ಮಕ್ಕಳ ತಂದೆ ತಾಯಂದಿರು ತಮ್ಮ ಮಕ್ಕಳ ಜೀವ ಉಳಿಸುವಂತೆ ಬ್ಯಾಂಟಿಂಗ್‌ಗೆ ಮೊರೆ ಹೊಕ್ಕರು. ಅವರಲ್ಲಿ, ಎಲಿಜ಼ಬೆತ್ತಳ ತಾಯಿ ಸಹ ಒಬ್ಬಳು.

ಅಮೆರಿಕದ ಎಲೈ-ಲಿಲಿ ಔಷಧ ಕಂಪನಿ, ಬ್ಯಾಂಟಿಂಗ್‌ನನ್ನು ಸಂಪರ್ಕಿಸಿ, ಇನ್ಸುಲಿನ್ ಸಂಗ್ರಹಿಸುವ ವಿಧಾನವನ್ನು ತಮಗೆ ಮಾರುವಂತೆ ಕೇಳಿಕೊಂಡರು. ಆದರೆ, ಲಾಭದ ಇಷ್ಟವಿಲ್ಲದ ಅವನು ಅದಕ್ಕೆ ಒಪ್ಪಲಿಲ್ಲ. ಜೊತೆಗೆ, ಅದು ಅಮೆರಿಕದ ಕಂಪನಿ ಬೇರೆ. ಅವನು ಕೆನಡಾದವನು. ಬದಲಿಗೆ, ಬ್ಯಾಂಟಿಂಗ್-ಮೆಕ್ಲಾಡ್ ಆ ಪೇಟೆಂಟನ್ನು, ಯೂನಿವರ್ಸಿಟಿ ಆಫ್ ಟೊರಾಂಟೋಗೆ ಕೇವಲ ಒಂದು ಡಾಲರ್‌ಗೆ ನೀಡಿದರು.

ಆ ವೇಳೆಗೆ, ಎಲಿಜ಼ಬೆತ್, ಡಾ.ಅಲೆನ್‌ನ ಆಸ್ಪತ್ರೆ ಸೇರಿ ಸುಮಾರು ಮೂರು ವರ್ಷವಾಗಿತ್ತು. ಐದು ಅಡಿ ಎತ್ತರದ ಹದಿನಾಲ್ಕರ ಹುಡುಗಿಯಾಗಿದ್ದ ಅವಳ ತೂಕ ಇಪ್ಪತ್ತು ಕೆ.ಜಿ.ಗೆ ಇಳಿದಿತ್ತು. ಇನ್ನು ಹೆಚ್ಚು ಕಾಲ ಅವಳು ಬದುಕುಳಿಯುವ ಯಾವುದೇ ಲಕ್ಷಣ ಇರಲಿಲ್ಲ. ಅವಳ ಅಮ್ಮ ಬ್ಯಾಂಟಿಂಗ್‌ಗೆ ಈಗಾಗಲೇ ಬರೆದ ಪತ್ರಕ್ಕೆ ಅವನಿಂದ ಬಂದ ಉತ್ತರ: ನಕಾರ.

ನಾಯಿಗಳ ಪ್ಯಾಂಕ್ರಿಯಾಸಿನಿಂದ ಇನ್ಸುಲಿನ್ ಸಂಗ್ರಹಿಸುವುದರಲ್ಲಿ, ಮೆಕ್ಲಾಡ್-ಬ್ಯಾಂಟಿಂಗ್ ಯಶಸ್ವಿಯಾಗಿದ್ದರೂ, ಜಗತ್ತಿನೆಲ್ಲೆಡೆಯಿಂದ ಬರುತ್ತಿದ್ದ ಮೊರೆಗಳನ್ನು ನೀಗಿಸಲು ಬೇಕಾದಷ್ಟು ಇನ್ಸುಲಿನ್ ಸೃಷ್ಟಿಸಲು ಅವರ ಪ್ರಯೋಗಶಾಲೆ ಖಂಡಿತಾ ಸನ್ನದ್ಧವಾಗಿರಲಿಲ್ಲ. ಕೈ ಬೆರಳಿನಷ್ಟು ಸಂಖ್ಯೆಯ ರೋಗಿಗಳಿಗೆ ಸಾಕಾಗುವಷ್ಟು ಇನ್ಸುಲಿನ್ ಮಾತ್ರ ಅವರು ಸಂಗ್ರಹಿಸಬಲ್ಲವರಾಗಿದ್ದರು.

1922ರ ಆಗಸ್ಟರ ಹೊತ್ತಿಗೆ, ಎಲಿಜ಼ಬೆತ್ ಆರೋಗ್ಯ ಮತ್ತಷ್ಟು ಬಿಗಡಾಯಿಸಿತ್ತು. ಅವಳ ಅಮ್ಮ ಇನ್ನಷ್ಟು ಕಾಲ ಕಾಯಲು ಸಿದ್ಧಳಿರಲಿಲ್ಲ. ಎಲಿಜ಼ಬೆತ್ತಳನ್ನು ಟೊರಾಂಟೋಗೆ ಕರೆತಂದಳು.

ಆಗಸ್ಟ್ 15, 1922. ಕೊನೆಗೂ, ಎಲಿಜ಼ಬೆತ್ ಡಯಾಬಿಟಿಸ್ಸಿನಿಂದ ಸ್ವತಂತ್ರಳಾಗುವ ಪ್ರಕ್ರಿಯೆ ಪ್ರಾರಂಭವಾಯಿತು. ಆ ದಿನ ಅವಳಿಗೆ ಮೊದಲ ಬಾರಿಗೆ ಇನ್ಸುಲಿನ್ ಇಂಜೆಕ್ಟ್ ಮಾಡಲಾಯಿತು. ಇನ್ಸುಲಿನ್ ತನ್ನ ಮ್ಯಾಜಿಕ್ ಮಾಡಲು ಹೆಚ್ಚು ಕಾಲ ಬೇಕಾಗಲಿಲ್ಲ. ಒಂದು ವಾರದ ನಂತರ ಡಾ. ಬ್ಯಾಂಟಿಂಗ್ ಬ್ರೆಡ್ ತಿನ್ನಬಹುದೆಂದು ಅವಳಿಗೆ ತಿಳಿಸಿದಾಗ, ಅವಳಿಗೆ ನಂಬಲಾಗಲಿಲ್ಲ; ಅವಳು ಬ್ರೆಡ್ ತಿಂದು ಮೂರುವರೆ ವರ್ಷ ಮೀರಿತ್ತು.

ಪ್ರಯೋಗಶಾಲೆಯ ನಾಯಿಗಳಿಂದ ಇನ್ಸುಲಿನ್ ತೆಗೆಯುವುದರ ಬದಲು, ಕಸಾಯಿ ಖಾನೆಗಳಿಗೆ ಬರುತ್ತಿದ್ದ ದನ, ಹಂದಿಗಳ ದೇಹದಿಂದ ಪ್ಯಾಂಕ್ರಿಯಾಸ್ ತೆಗೆದು, ಅದರಿಂದ ಇನ್ಸುಲಿನ್ ಸಂಗ್ರಹಿಸುವ ಪ್ರಯತ್ನದಲ್ಲೂ ಈ ನಾಲ್ಕು ಜನರ ತಂಡ ಯಶಸ್ವಿಯಾಯಿತು. ಆದರೆ, ವಿಶ್ವದ ಕೋನೆ-ಕೋನೆಗಳಿಂದ ಬರುತ್ತಿದ್ದ ಇನ್ಸುಲಿನ್ ಡಿಮ್ಯಾಂಡ್ ನೀಗಿಸಲು ಅವರ ಪ್ರಯೋಗಶಾಲೆಗೆ ಸಾಧ್ಯವೇ ಇರಲಿಲ್ಲ. ಆ ಕಾಲದಲ್ಲಾಗಲೇ ಜಗತ್ತಿನ ದೊಡ್ಡ ಔಷಧ ತಯಾರಣಾ ಕಂಪೆನಿಯಾಗಿದ್ದ ಎಲೈ-ಲಿಲಿ ಸಂಸ್ಥೆ, ಇನ್ಸುಲಿನ್ ಸಂಗ್ರಹಿಸುವ ವಿಧಾನವನ್ನು, ಯೂನಿವರ್ಸಿಟಿ ಆಫ್ ಟೊರಾಂಟೊ ಇಂದ ಪಡೆಯಿತು. ಪ್ರತಿ ವರ್ಷ ಸಾವಿರಾರು ಟನ್ ಪ್ರಾಣಿಗಳ ಪ್ಯಾಂಕ್ರಿಯಾಸ್ ಸಂಗ್ರಹಿಸಿ ಅದರಿಂದ್ ಲೀಟರುಗಟ್ಟಲೆ ಇನ್ಸುಲಿನ್ ತೆಗೆಯುವುದರಲ್ಲಿ ಎಲೈ-ಲಿಲಿ ಯಶ ಕಂಡಿತು. (ಕೆಲವು ದಶಕಗಳ ನಂತರ, ಪ್ರಾಣಿಗಳ ಪ್ಯಾಂಕ್ರಿಯಾಸಿನಿಂದ ಸಂಸ್ಕರಿಸದ, ಸಿಂಥೆಟಿಕ್ ಇನ್ಸುಲಿನ್ ಉತ್ಪಾದಿಸುವ ವಿಧಾನವನ್ನು ಎಲೈ-ಲಿಲಿ ಸಂಸ್ಥೆಯ ವಿಜ್ಞಾನಿಗಳು ಕಂಡುಹಿಡಿದರು)

1923ರಲ್ಲಿ, ಮೆಕ್ಲಾಡ್ ಮತ್ತು ಬ್ಯಾಂಟಿಂಗ್ ನೊಬೆಲ್ ಪ್ರಶಸ್ತಿಗೆ ಭಾಜನರಾದರು. ಆ ವೇಳೆಗಾಗಲೇ ಅವರಿಬ್ಬರ ಸಂಬಂಧ ಹಳಸಿತ್ತು. ಬ್ಯಾಂಟಿಂಗ್ ಪ್ರಕಾರ, ಮೆಕ್ಲಾಡ್ ಆ ಪ್ರಶಸ್ತಿಗೆ ಅರ್ಹನಿರಲಿಲ್ಲ. ಡಾ.ಬ್ಯಾಂಟಿಂಗ್ ತನಗೆ ಬಂದ ಹಣದಲ್ಲಿ ಅರ್ಧವನ್ನು ತನ್ನ ಅಸಿಸ್ಟೆಂಟ್ ಡಾ.ಬೆಸ್ಟ್‌ಗೆ ಕೊಟ್ಟರೆ, ಡಾ.ಮೆಕ್ಲಾಡ್ ತನಗೆ ದೊರೆತ ಹಣದಲ್ಲಿ ಅರ್ಧವನ್ನು ಇನ್ಸುಲಿನ್ ಶುದ್ಧೀಕರಿಸುವಲ್ಲಿ ಯಶಸ್ವಿಯಾದ ಜೇಮ್ಸ್ ಕಾಲಿಪ್ ಜೊತೆ ಹಂಚಿಕೊಂಡ.

ಇತಿಹಾಸದ ಅಪ್ರತಿಮ ಸಂಶೋಧನೆಗಳಲ್ಲಿ ಇನ್ಸುಲಿನ್ ಒಂದು. ತನ್ನ ಸುಮಾರು ನೂರು ವರ್ಷಗಳ ಚರಿತ್ರೆಯಲ್ಲಿ, ಲಕ್ಷಾಂತರ ಜನರ ಜೀವ ಉಳಿಸಿದ ಜೀವೌಷಧವೇ ಅದು ಎನ್ನಬಹುದು. ಸಾವಿನ ಮನೆಯ ಬಾಗಿಲು ತಟ್ಟಿದ್ದ, ಎಲಿಜ಼ಬೆತ್‌ಳಂತಹ ಎಷ್ಟೋ ಮಕ್ಕಳು ತುಂಬು ಜೀವನ ಜೀವಿಸಲು ಅದರಿಂದ ಸಾಧ್ಯವಾಯಿತು. ಎಲಿಜ಼ಬೆತ್, ಆಗಸ್ಟ್, 15, 1922ರಲ್ಲಿ ಮೊದಲಬಾರಿಗೆ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಂಡಳು. 1981ರಲ್ಲಿ, ತನ್ನ ಎಪ್ಪತ್ತುನಾಲ್ಕನೆಯ ವಯಸ್ಸಿನಲ್ಲಿ ಅವಳು ನಿಧನಳಾದಾಗ ಜೀವನದಾದ್ಯಂತ, ಅವಳು ಸುಮಾರು 42,000 ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಂಡಿದ್ದಳು; ಕಾಲೇಜು ಕಂಡಳು. ಮದುವೆಯಾದಳು. ಮಕ್ಕಳಾದವು. ಮೊಮ್ಮಕ್ಕಳ ಜೊತೆಗೂ ಆಡಿದ್ದಳು.

Tags: 

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !