ಭಾನುವಾರ, ಸೆಪ್ಟೆಂಬರ್ 19, 2021
29 °C

ಕಾಡಶೆಟ್ಟಿಹಳ್ಳಿ ಶಾಲೆ ಕಥೆ ಕೇಳಿ

ಟಿ.ಎಚ್.ಪಂಚಾಕ್ಷರಯ್ಯ Updated:

ಅಕ್ಷರ ಗಾತ್ರ : | |

Prajavani

ಈ ಹಳ್ಳಿಯಲ್ಲಿನ ಮನೆಗಳ ಸಂಖ್ಯೆ 80. ಜನರ ಸಂಖ್ಯೆ 200. ಇಡೀ ಊರು ತಡಕಾಡಿದರೂ ಪ್ರಾಥಮಿಕ ಶಾಲೆ ಕಲಿಯುವ ಮಕ್ಕಳ ಸಂಖ್ಯೆ 32 ದಾಟಿಲ್ಲ. ಆದರೆ ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ ಮಾತ್ರ 280ಕ್ಕೂ ಹೆಚ್ಚು! ಈಗಲೂ ದಾಖಲಾತಿ ಸಮಯದಲ್ಲಿ ಈ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಸರತಿಯಲ್ಲಿ ನಿಲ್ಲುತ್ತಾರೆ!

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು ಕಾಡಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಮರ್ಥ್ಯವಿದು. ಇದು ನಾಲ್ಕೈದು ವರ್ಷಗಳಿಂದ ಈ ಶಾಲೆಯಲ್ಲಿ ಕಂಡು ಬಂದ ಮಹತ್ತರ ಬದಲಾವಣೆ.

ಈ ಸರ್ಕಾರಿ ಶಾಲೆಯಲ್ಲಿ ಎಲ್ಲ ವರ್ಗದ ಮಕ್ಕಳೂ ಓದುತ್ತಿದ್ದಾರೆ. 2015-16ನೇ ವರ್ಷದಿಂದೀಚೆಗೆ ಶಾಲಾ ದಾಖಲಾತಿ ದುಪ್ಪಟ್ಟಾಗಿದೆ. ರಚನಾತ್ಮಕ ಹಾಗೂ ಚಟುವಟಿಕೆ ಆಧಾರಿತ ಶಿಕ್ಷಣ ನೀಡಲು ಶಾಲೆಯ ಶಿಕ್ಷಕರು ಅನುಸರಿಸಿದ ಕ್ರಮಗಳು ಈ ಬದಲಾವಣೆಗೆ ಕಾರಣವಾಗಿದೆ. ಶಾಲೆಯ ಉನ್ನತೀಕರಣದ ಪರಿಣಾಮ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಲು ದೌಡಾಯಿಸುತ್ತಿದ್ದಾರೆ.  ಖಾಸಗಿ ಶಾಲೆ ತೊರೆದು ಈ ಸರ್ಕಾರಿ ಶಾಲೆಗೆ ಸೇರಿಸುವವರೂ ಇದ್ದಾರೆ. ಅಷ್ಟೇ ಅಲ್ಲ, ‘ಇಂಥ ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳು ಓದುತ್ತಿದ್ದಾರೆ’ ಎಂದು ಪೋಷಕರು ತಮ್ಮ ನೆಂಟರಿಷ್ಟರಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. 

ಇಷ್ಟೆಲ್ಲಾ ಹೇಗೆ ಸಾಧ್ಯವಾಯಿತು

ಗ್ರಾಮಪಂಚಾಯಿತಿ ಸದಸ್ಯರ ಒಕ್ಕೂಟದ ರಾಜ್ಯಘಟಕದ ಅಧ್ಯಕ್ಷ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಕೆ.ಎಸ್.ಸತೀಶ್ ಈ ಶಾಲೆಯ ಉನ್ನತೀಕರಣಕ್ಕೆ ಕೈ ಜೋಡಿಸಿದ್ದಾರೆ. ಅವರ ಪ್ರಯತ್ನಕ್ಕೆ ಶಾಲೆಯ ಶಿಕ್ಷಕರು ಹೆಗಲು ಕೊಟ್ಟಿದ್ದಾರೆ. ಹೀಗಾಗಿ ಎರಡನೇ ಬಾರಿಗೆ ಗ್ರಾ. ಪಂ ಸದಸ್ಯರಾಗಿ ಆಯ್ಕೆಯಾಗಿರುವ ಸತೀಶ್, ಶಿಕ್ಷಕರ ಸಹಕಾರದೊಂದಿಗೆ ಶಾಲೆಯ ಅಭಿವೃದ್ಧಿಗೆ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ.

ಇವರೆಲ್ಲರ ಪ್ರಯತ್ನಗಳ ಜತೆಗೆ, ಬಿ.ಜಯಶ್ರೀ ಅವರು ರಾಜ್ಯಸಭಾ ಸದಸ್ಯರಿದ್ದಾಗ ಈ ಶಾಲೆಯ ಶೈಕ್ಷಣಿಕ ಪ್ರಗತಿ ಗಮನಿಸಿ ₹1.30ಕೋಟಿ ಅನುದಾನ ನೀಡಿದ್ದಾರೆ. ಇದರ ನೆರವಿನಲ್ಲಿ ಬಯಲು ರಂಗಮಂದಿರ, ಗ್ರಂಥಾಲಯ, ಭಾಷಾ ಪ್ರಯೋಗಾಲಯ, ಒಳಾಂಗಣ ರಂಗಮಂದಿರ ನಿರ್ಮಾಣವಾಗಿದೆ. ಇದರ ಜತೆಗೆ ಒರಾಕಲ್ ಸಂಸ್ಥೆ, ರೀಜನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್, ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್, ಶಾಲೆಯ ಹಳೇ ವಿದ್ಯಾರ್ಥಿ ಸಂಘ, ಶಾಲಾ ಅಭಿವೃದ್ಧಿ ಸಂಸ್ಥೆಯೂ ಈ ಶಾಲೆಯ ಬೆಳವಣಿಗೆಗೆ ಸಹಕಾರ ನೀಡಿವೆ.

ಈ ಶಾಲೆಯಲ್ಲಿ ಏನೇನಿದೆ?

ಎರಡು ಎಕರೆ ವಿಸ್ತೀರ್ಣ ಶಾಲಾ ಆವರಣ ಇದೆ. 13 ತರಗತಿ ಕೊಠಡಿಗಳಿದ್ದು, ಕಂಪ್ಯೂಟರ್ ಲ್ಯಾಬ್, ಸೋಲಾರ್ ವಿದ್ಯುತ್, ಸ್ಮಾರ್ಟ್ ಕ್ಲಾಸ್, ಪ್ರತ್ಯೇಕ ಶೌಚಾಲಯ, 5ಸಾವಿರ ಪುಸ್ತಕಗಳ ಸಂಗ್ರಹವಿರುವ ಗ್ರಂಥಾಲಯ, ಭಾಷಾ ಪ್ರಯೋಗಾಲಯ, ಬಯಲು ರಂಗಮಂದಿರ, ಕ್ರೀಡಾಂಗಣವಿದೆ. 96*26 ಅಡಿ ವಿಸ್ತಾರದಲ್ಲಿ ಜಿ.ವಿ.ಮಾಲತಮ್ಮ ರಂಗಮಂದಿರ(ಡಾ.ಗುಬ್ಬಿ ವೀರಣ್ಣ ಮಗಳು) ಮಕ್ಕಳ ಭವಿಷ್ಯ ರೂಪಿಸುತ್ತಿದೆ.

ಕಾಡಶೆಟ್ಟಿಹಳ್ಳಿ ಮಾತ್ರವಲ್ಲ, ಸುತ್ತಲಿನ ಐದು ಗ್ರಾಮಪಂಚಾಯಿತಿಗಳ ವ್ಯಾಪ್ತಿಯ 32 ಹಳ್ಳಿಗಳ ಮಕ್ಕಳು ಈ ಶಾಲೆಗೆ ಬರುತ್ತಿದ್ದಾರೆ. 20 ಕಿಲೋಮೀಟರ್ ದೂರದಿಂದ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿಗೆ ಕಳುಹಿಸುತ್ತಿದ್ದಾರೆ. ಶಾಲೆಯಲ್ಲಿರುವ ಶೈಕ್ಷಣಿಕ ವಾತಾವರಣ ಗಮನಿಸಿರುವ ಪೋಷಕರು, ತಾವೇ ಜವಾಬ್ದಾರಿ ತೆಗೆದುಕೊಂಡು ಶಾಲಾವಾಹನ ಮಾಡಿ ಮಕ್ಕಳನ್ನು ಕಳುಹಿಸುತ್ತಿದ್ದಾರೆ.

ಪುಟ್ಟ ‘ಮಕ್ಕಳ ಗ್ರಂಥಾಲಯ’

ಶಾಲೆಯಲ್ಲಿ ಐದು ಸಾವಿರ ಪುಸ್ತಕಗಳಿರುವ ಸುಸಜ್ಜಿತ ಗ್ರಂಥಾಲಯ ವಿದೆ. ಈ ಗ್ರಂಥಾಲಯವನ್ನು ವಿದ್ಯಾರ್ಥಿಗಳೇ ನಿರ್ವಹಣೆ ಮಾಡುತ್ತಾರೆ. ಶಿಕ್ಷಕರು ‘ಇಂತಹ ಪುಸ್ತಕವನ್ನೇ ಓದಬೇಕು’ ಎನ್ನುವ ನಿಯಮವನ್ನು ಹೇರುವುದಿಲ್ಲ. ಗ್ರಂಥಾಲಯದ ಆವರಣ ಹೊಕ್ಕರೆ ಪುಸ್ತಕ ಓದುವ ಹವ್ಯಾಸ ಬೆಳೆಸುವಂತಹ ನಿಶ್ಯಬ್ಧ ಮತ್ತು ಆಹ್ಲಾದಕರ ವಾತಾವರಣವಿದೆ.

ವಿಶೇಷ ಏನೆಂದರೆ, ಈ ಶಾಲೆಯಲ್ಲಿ ಓದಿ ಮುಂದಿನ ತರಗತಿಗೆ ತೇರ್ಗಡೆಯಾಗುವ ವಿದ್ಯಾರ್ಥಿಗಳಿಂದ, ಹಿಂದಿನ ವರ್ಷದ ಪುಸ್ತಕಗಳನ್ನು ಬಳಸಿಕೊಂಡು, ಶೈಕ್ಷಣಿಕ ವರ್ಷದ ಆರಂಭದಲ್ಲೇ ಬೋಧನೆ ಶುರು ಮಾಡುತ್ತಾರೆ. ಹೀಗಾಗಿ, ಸಕಾಲಕ್ಕೆ ಪುಸಕ್ತ ಭಾಗ್ಯ ಲಭ್ಯವಾಗಲಿಲ್ಲ ಎನ್ನುವ ಕೊರಗು ಮಕ್ಕಳ ಪೋಷಕರಿಗೆ ಕಾಡದಂತೆ ಮಾಡಿದ್ದಾರೆ.

ಗಾಂಧೀಜಿ 150ನೇ ಜನ್ಮವರ್ಷಾಚರಣೆ

ಗಾಂಧಿಜಿಯವರ 100ನೇ ಜನ್ಮವರ್ಷಾಚರಣೆ ನೆನಪಲ್ಲಿ ನಿರ್ಮಿಸಿದ ಶಾಲಾ ಕಟ್ಟಡದಲ್ಲೇ ಗಾಂಧೀಜಿಯವರ 150ನೇ ಜನ್ಮವರ್ಷಾಚರಣೆ ಕಾರ್ಯಕ್ರಮ ನಡೆಯುತ್ತಿದೆ. ಮಕ್ಕಳಿಗಾಗಿ ಈ ಕೊಠಡಿಯನ್ನು ವಿಶಿಷ್ಟವಾಗಿ ವಿನ್ಯಾಸ ಮಾಡಿದ್ದಾರೆ.

ಪ್ರತಿ ತಿಂಗಳು ಮಕ್ಕಳಿಗೆ ಮತ್ತು ಪೋಷಕರಿಗೆ, ಗ್ರಾಮಸ್ಥರಿಗೆ ಗಾಂಧಿ ಕನಸಿನ ಗ್ರಾಮವಿಕಾಸದ ಹಾದಿಯನ್ನು ತಿಳಿಸಿ ಹೇಳುತ್ತಿದ್ದಾರೆ. ಬೆಂಗಳೂರಿನ ಗಾಂಧಿ ಅಧ್ಯಯನ ಕೇಂದ್ರದವರು ಇದೇ ಮೊದಲ ಭಾರಿಗೆ ಪ್ರಾಥಮಿಕ ಶಾಲೆಯೊಂದರಲ್ಲಿ ‘ಗಾಂಧಿ ಅಧ್ಯಯನ ಪೀಠ’ ತೆರೆಯಲು ಆಸಕ್ತಿ ತೋರಿದ್ದಾರೆ.  

ಮಕ್ಕಳಿಗೆ ಬಾಲ್ಯದಲ್ಲೇ ಸಂಶೋಧನೆ, ಪ್ರಬಂಧ ಮಂಡನೆ ಕಲಿಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ಇದೊಂದು ರೀತಿಯ ಪ್ರಯೋಗ. ಈ ಮೂಲಕ ಮಕ್ಕಳು ಸ್ಥಳೀಯ ಇತಿಹಾಸ, ಸಂಸ್ಕೃತಿ, ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳುತ್ತಿದ್ದಾರೆ.

ಇದಕ್ಕಾಗಿ ಶಾಲೆಯ ಆವರಣದಲ್ಲಿ ಹುಣಸೆ ಮರದಡಿಯಲ್ಲಿ ‘ಕಲಾಂ ಕಟ್ಟೆ’ ಎಂಬ ವೇದಿಕೆ ಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ ಮಕ್ಕಳು ಈ ಅಂಗಳದಲ್ಲೇ ಕುಳಿತು ಕಲಿಯುತ್ತಾರೆ. ಈ ಮೂಲಕ ನಾಲ್ಕು ಗೋಡೆಗಳಾಚೆಗೂ ಕಲಿಕೆ ವಿಸ್ತರಣೆಗೊಂಡಿದೆ.  .

ಮಕ್ಕಳಿಗೆ ಪ್ರವಾಸ ಭಾಗ್ಯ, ರಂಗಭೂಮಿ ಶಿಕ್ಷಣಕ್ಕಾಗಿ ಗೌರವ ಶಿಕ್ಷಕರ ನೇಮಕ, ಚಿತ್ರಕಲೆ, ಸಂಗೀತ ಅಭ್ಯಾಸಕ್ಕಾಗಿ ಸಂಪನ್ಮೂಲ ವ್ಯಕ್ತಿಗಳ ಬಳಕೆ.. ಹೀಗೆ ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ವೈವಿಧ್ಯಮಯ ಚಟುವಟಿಕೆಗಳನ್ನು ರೂಪಿಸಲಾಗಿದೆ.

ಎರಡು ವಿಭಾಗದ ಅಂಗನವಾಡಿ

ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಎರಡು ವಿಭಾಗದಲ್ಲಿ (ಎ–1, ಎ–2) ಅಂಗನವಾಡಿಗಳು ನಡೆಯುತ್ತಿದ್ದು, ಜತೆಗೆ ಎರಡು ಪೂರ್ವ ಪ್ರಾಥಮಿಕ ಶಾಲೆಗಳಿವೆ. ಅದರಲ್ಲಿ ಒಟ್ಟು 60 ಮಕ್ಕಳಿದ್ದಾರೆ. ಇದು ಗುಬ್ಬಿ ತಾಲ್ಲೂಕಿನಲ್ಲೇ ಅತಿ ಹೆಚ್ಚು ಮಕ್ಕಳು ದಾಖಲಾಗಿರುವ ಅಂಗನವಾಡಿ ಶಾಲೆ.

ಈ ಶಾಲೆಗಳಿಗೆ ಬೇಕಾದ ಪಠ್ಯಕ್ರಮವನ್ನು ಶಾಲೆಯ ಶಿಕ್ಷಕರು, ಗ್ರಾ.ಪಂ ಸದಸ್ಯ ಸತೀಶ್ ಹಾಗೂ ವಕೀಲ ರಾಘವೇಂದ್ರ ಅವರು ರೂಪಿಸಿದ್ದಾರೆ. ಈ ಶಾಲೆಗಳಲ್ಲಿ ಅಂಗನವಾಡಿ ಶಿಕ್ಷಕರ ಜತೆಗೆ, ಅತಿಥಿ ಶಿಕ್ಷಕರನ್ನು ಆಹ್ವಾನಿಸಿ, ಕನ್ನಡ, ಇಂಗ್ಲಿಷ್ ಎರಡು ಭಾಷೆಗಳನ್ನೂ ಕಲಿಸಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು