ಬಿದಿರು ಇವರ ಬದುಕಿನ ಉಸಿರು...

ಭಾನುವಾರ, ಏಪ್ರಿಲ್ 21, 2019
32 °C
ಬಿದಿರಿನ ಉತ್ಪನ್ನಗಳ ತಯಾರಿಕೆಯಲ್ಲೇ ಜೀವನ ಕಟ್ಟಿಕೊಂಡ ಸಿದ್ದರಾಜು, ಪರದೆ ತಯಾರಿಯಲ್ಲಿ ಸಿದ್ಧಹಸ್ತ

ಬಿದಿರು ಇವರ ಬದುಕಿನ ಉಸಿರು...

Published:
Updated:
Prajavani

ಚಾಮರಾಜನಗರ: ನಗರದ ಶಂಕರಪುರ ಬಡಾವಣೆಯ ಮೇದಾರ ಬೀದಿಯ ನಿವಾಸಿಗಳು ಬಿದಿರು ನಂಬಿ ಬದುಕು ನಡೆಸುತ್ತಿದ್ದಾರೆ.

ಈಗಿನ ಕೆಲವರು ಕೂಲಿಗೆ ಹೋಗುತ್ತಾರೆ. ಮೊರ ತಯಾರಿಕೆ ಮತ್ತು ಮಾರಾಟ ಮೇದಾರ ಸಮುದಾಯದವರ ಜೀವನ. ಇದರೊಂದಿಗೆ ಬಿದಿರಿನ ಬೀಸಣಿಗೆ, ಬುಟ್ಟಿ ತಯಾರಿಸಿ ಹೊರಗೆ ಮಾರಾಟ ಮಾಡುತ್ತಾರೆ. ಇಲ್ಲಿನ ಸಿದ್ದರಾಜು ಅವರು 10 ವರ್ಷಗಳಿಂದ ಅವುಗಳೊಂದಿಗೆ ‘ಬಿದಿರು ಪರದೆ’ (ಬಿದಿರಿನ ಸ್ಕ್ರೀನ್‌) ತಯಾರಿಕೆಯಲ್ಲಿ ನಿರತರಾಗಿದ್ದಾರೆ.

4ನೇ ತರಗತಿ ಓದಿರುವ ಸಿದ್ದರಾಜುಗೆ ಈಗ 65 ವರ್ಷ. ಇಳಿವಯಸ್ಸಿನಲ್ಲೂ ಬಿ.ರಾಚಯ್ಯ ಜೋಡಿರಸ್ತೆಯಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜಿನ ಕಾಂಪೌಂಡ್‌ ಬಳಿ ಬಿದಿರಿನ ಪರದೆ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಇವರ ನಿತ್ಯ ಕಾಯಕ ಆರಂಭವಾಗಿ ಸಂಜೆ 6 ಗಂಟೆಗೆ ಮುಗಿಯುತ್ತದೆ. ವಂಶಪಾರಂಪರ್ಯ ಬಂದ ಕಾಯಕವನ್ನು ಈ ಕಾಲಘಟ್ಟಕ್ಕೆ ತಕ್ಕಂತೆ (ಮೊರ, ಬುಟ್ಟಿಯಿಂದ ಬಿದಿರು ಪರದೆವರೆಗೆ) ಅಳವಡಿಸಿಕೊಂಡು ಅವರು ಮುಂದುವರಿಸುತ್ತಾ ಇದ್ದಾರೆ. 

ಏನೇನು ತಯಾರಿ?: ಸಿದ್ದರಾಜು ಅವರು ಬಿದಿರಿನ ಪರದೆ, 16ರಿಂದ 20 ಅಡಿ ಉದ್ದದ ಏಣಿ (₹350ರಿಂದ ₹500), ಚಾಪೆ (₹40ರಿಂದ ₹50), ಬೀಸಣಿಗೆ (₹20) ತಯಾರಿಸುತ್ತಾರೆ. ಇವರ ಬಳಿ ಬೇಡಿಕೆ ಇರುವುದು ಬಿದಿರಿನ ಪರದೆಗೆ.

ಬೆಂಗಳೂರಿನಲ್ಲಿ ತರಬೇತಿ: ಸಿದ್ದರಾಜು ಅವರು 10 ವರ್ಷಗಳ ಹಿಂದೆ ಸಂಬಂಧಿಕರ ಮನೆಗೆಂದು ಬೆಂಗಳೂರಿಗೆ ಹೋದಾಗ ಅಲ್ಲಿ ಬಿದಿರಿನಿಂದ ಪರದೆ ತಯಾರಿಸುವ ತರಬೇತಿ ಪಡೆದರು. ಅಂದಿನಿಂದ ಜೀವನದಲ್ಲಿ ಬದಲಾವಣೆಯಾಯಿತು. ಆರ್ಥಿಕವಾಗಿ ಕೊಂಚವೇ ಸದೃಢರಾಗತೊಡಗಿದರು.

ಅವರೇ ಸ್ವತಃ ಮಾರುಕಟ್ಟೆಯಿಂದ ನೈಲಾನ್‌ ದಾರ, ಬಣ್ಣ ತರುತ್ತಾರೆ. ಪರದೆಗೆ ಬಣ್ಣಗಳಿಂದ ಅಲಂಕಾರ ಮಾಡಿ ಆಕರ್ಷಿಸುತ್ತಾರೆ. ಇವರು ತಯಾರಿಸುವ ಬಿದಿರಿನ ಪರದೆಗೆ ಬೇಡಿಕೆ ಎಷ್ಟಿದೆ ಎಂದರೆ, ಗ್ರಾಹಕರೇ ಬಂದು ಮುಂಗಡ ಕೊಟ್ಟು ಪರದೆ ತಯಾರಿಸಲು ಹೇಳುತ್ತಾರೆ.

ಕೊಡಗು, ಮೈಸೂರಿನ ಬಿದಿರು: ‘ಜಿಲ್ಲೆಯಲ್ಲಿ ಬಿದಿರು ಸಿಗುತ್ತಿಲ್ಲ. ಆದ್ದರಿಂದ, ಕೊಡಗು– ಮೈಸೂರಿನಿಂದ ಬಿದಿರು ತರುತ್ತೇವೆ. ಒಂದು ಬಂಬುಗೆ ₹ 350ರಿಂದ ₹450 ಖರ್ಚಾಗುತ್ತದೆ. ಒಂದು ಬಿದಿರಿನ ಪರದೆಗೆ ₹ 1,400ರಿಂದ 1,550ರ ವರೆಗೂ ಮಾರಾಟ ಮಾಡುತ್ತೇನೆ. ಎರಡು ಬಿದಿರು ಬಂಬುಗಳಿಂದ ಒಂದು ಪರದೆ ತಯಾರಿಸಬಹುದು. ದಿನಕ್ಕೆ ₹ 400 ಸಂಪಾದನೆಯಾಗುತ್ತದೆ. ಕೆಲವೊಮ್ಮೆ ಅಷ್ಟೂ ಸಿಗುವುದಿಲ್ಲ. ₹ 100 ಖರ್ಚು ಮಾಡಿ ₹ 300 ಉಳಿಸುತ್ತೇನೆ’ ಎಂದು ಸಿದ್ದರಾಜು ‘ಪ್ರಜಾವಾಣಿ’ಗೆ ಹೇಳಿದರು.

ಹೆಣ್ಣುಮಕ್ಕಳಿಗೆ ಶಿಕ್ಷಣ: ‘ನನಗೆ ನಾಲ್ವರು ಹೆಣ್ಣು ಮಕ್ಕಳು. ನರ್ಸಿಂಗ್‌, ಪದವಿ, ಡಿಇಡಿ, ಎಸ್‌ಎಸ್‌ಎಲ್‌ಸಿ ಮಾಡಿದ್ದಾರೆ. ಎಲ್ಲರಿಗೂ ಶಿಕ್ಷಣ ಕೊಡಿಸಿದ್ದೇನೆ. ಮೂವರಿಗೆ ಮದುವೆ ಮಾಡಿದ್ದೇನೆ. ಒಬ್ಬಳು ಡಿಇಡಿ ಮಾಡುತ್ತಿದ್ದಾಳೆ. ಹೆಣ್ಣುಮಕ್ಕಳು ಮನೆಗೆ ಬಂದಾಗ ಬಿಡುವಿನ ವೇಳೆಯಲ್ಲಿ ಮೊರ, ಬುಟ್ಟಿ ತಯಾರಿಕೆಗೆ ಸಹಾಯ ಮಾಡುತ್ತಾರೆ. ನಮ್ಮ ಮಕ್ಕಳು ಈ ಕಾಯಕವನ್ನು ಮುಂದುವರಿಸಬೇಕು ಎಂಬ ಆಸೆಯೂ ಇದೆ. ಉಳಿಸಿಕೊಳ್ಳುವುದು ಅವರ ವಿವೇಚನೆಗೆ ಬಿಟ್ಟಿದ್ದೇನೆ’ ಎನ್ನುತ್ತಾರೆ ಅವರು.  

ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಬಳಿಕ ಮೇದಾರರಿಗೆ ಸಂಕಷ್ಟ

ಜಿಲ್ಲೆಯಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿದ ಬಳಿಕ ಮೇದಾರ ಸಮುದಾಯದವರಿಗೆ ಬಿದಿರು ಪೂರೈಕೆ ಕಡಿತಗೊಂಡಿತು. 

‘ನಾವು ಕೊಡಗು, ಮೈಸೂರಿನಿಂದ ಬಿದಿರು ತರಿಸಿಕೊಳ್ಳುತ್ತಿದ್ದೇವೆ. ಆರ್ಥಿಕ ಹೊರೆಯೂ ಹೆಚ್ಚಾಗುತ್ತಿದೆ. ಈ ಮೊದಲು ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಪ್ರದೇಶಗಳ ಕಾಡಿನಿಂದ ಬಿದಿರು ಪೂರೈಕೆಯಾಗುತ್ತಿತ್ತು. ಆಗ ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡುತ್ತಿದ್ದರು. ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆಯಾದ ದಿನದಿಂದ ಬೇರೆ ಕಡೆಯಿಂದ ಬಿದಿರು ತರಿಸಿಕೊಂಡು ಅದೇ ಮಾರ್ಗದಲ್ಲಿ ಸಂಚರಿಸುವ ವೇಳೆ ಇಲಾಖೆಯ ಸಿಬ್ಬಂದಿ ಅವರಿಗೆ ಮಾಹಿತಿ ನೀಡಿ ಬರುವಂತಹ ಪರಿಸ್ಥಿತಿ ಎದುರಾಗಿದೆ. ಹೆಚ್ಚಿನ ಪ್ರಮಾಣದಲ್ಲೂ ಬಿದಿರನ್ನು ತರುವಂತಿಲ್ಲ. ಈಗ ಸ್ವಲ್ಪ ತೊಂದರೆ ಎದುರಾಗಿದೆ’ ಎಂದು ಇದೇ ಸಮುದಾಯದ ಕೊಳ್ಳೇಗಾಲದ ಕೆ.ಎಸ್.ಸಿದ್ದರಾಜು ‘ಪ್ರಜಾವಾಣಿ’ಗೆ ಹೇಳಿದರು.

ಸರ್ಕಾರದ ನೆರವು ಅಗತ್ಯ: ‘ಬಿದಿರನ್ನೇ ನಂಬಿ ಕಾಯಕ ನಡೆಸುವ ಮೇದಾರರಿಗೆ ಸರ್ಕಾರದ ನೆರವು, ಸವಲತ್ತುಗಳು ಅಗತ್ಯವಿದೆ. ಸಮರ್ಪಕ ಬಿದಿರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆರ್ಥಿಕವಾಗಿ ಸದೃಢರನ್ನಾಗಿಸಲು ಜಿಲ್ಲಾಡಳಿತ ಕೂಡ ಸ್ಥಳೀಯವಾಗಿ ಮೂಲಸೌಲಭ್ಯ ಒದಗಿಸಲು ಮುಂದಾಗಬೇಕು’ ಎನ್ನುತ್ತಾರೆ ಅವರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !