ಬಿಡಾಡಿ ದನಗಳಿಂದ ಪ್ರಾಣಕ್ಕೆ ಕುತ್ತು

7
ಕ್ರಮಕ್ಕೆ ಮುಂದಾಗದ ಪಾಲಿಕೆ; ಸಾರ್ವಜನಿಕರ ಆಕ್ರೋಶ

ಬಿಡಾಡಿ ದನಗಳಿಂದ ಪ್ರಾಣಕ್ಕೆ ಕುತ್ತು

Published:
Updated:
ಕಲಬುರ್ಗಿಯ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಬಿಡಾಡಿ ದನಗಳು ನಿಂತಿರುವುದು

ಕಲಬುರ್ಗಿ: ನಗರದ ಪ್ರಮುಖ ರಸ್ತೆ, ವೃತ್ತ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಓಡಾಡುವ ಬಿಡಾಡಿ ದನಗಳಿಂದ ಪಾದಚಾರಿಗಳು ಮತ್ತು ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ರಾಮಮಂದಿರ ವೃತ್ತ, ರಾಷ್ಟ್ರಪತಿ ವೃತ್ತ, ಎಂಎಸ್‌ಕೆ ಮಿಲ್, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ವೃತ್ತ, ಎಂಎಸ್‌ಕೆ ಮಿಲ್ ರಸ್ತೆ, ಸೂಪರ್ ಮಾರ್ಕೆಟ್ ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಬಿಡಾಡಿ ದನಗಳು ಗುಂಪು ಗುಂಪಾಗಿ ಬೀಡುಬಿಟ್ಟಿವೆ. ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯ ಮಧ್ಯದ ವಿಭಜಕದಲ್ಲಿ ಇಂತಹ 7–8 ದನಗಳನ್ನು ಪ್ರತಿ ನಿತ್ಯ ಕಾಣಬಹುದಾಗಿದೆ.

ನಗರದ ನೂತನ ವಿದ್ಯಾಲಯ ಕಾಂಪ್ಲೆಕ್ಸ್ ಎದುರುಗಡೆ ಈಚೆಗಷ್ಟೇ ಹಸುವೊಂದು ಅಡ್ಡ ಬಂದ ಪರಿಣಾಮ ಎಂಎಸ್‌ಕೆ ಮಿಲ್‌ ನಿವಾಸಿ ಸಮೀರ್ ಎಂಬುವರು ಬೈಕ್‌ನಿಂದ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರು. ಇವರ ಹಿಂದುಗಡೆಯಿಂದ ವೇಗದಲ್ಲಿ ಬರುತ್ತಿದ್ದ ಇಬ್ಬರು ಬೈಕ್ ಸವಾರರು ಇವರ ಮೇಲೆಯೇ ಬೈಕ್ ಚಲಾಯಿಸಿಕೊಂಡು ಹೋದ ಪರಿಣಾಮ ತೀವ್ರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಮಕ್ಕಳು ಶಾಲೆಯಿಂದ ಬರುವಾಗ ದನಗಳು ಎದುರಿಗೆ ಬರುತ್ತವೆ. ಅನೇಕ ಕಡೆ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ವಯಸ್ಸಾದವರು ಪಾದಚಾರಿ ಮಾರ್ಗದಲ್ಲಿ ಸಂಚರಿಸುವುದೇ ದುಸ್ತರ ಎಂಬಂತಹ ಸ್ಥಿತಿ ಇದೆ. ಆದ್ದರಿಂದ ಬಿಡಾಡಿ ದನಗಳ ನಿಯಂತ್ರಣಕ್ಕೆ ಪಾಲಿಕೆ ಮುಂದಾಗಬೇಕು’ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

‘ಈ ಮೊದಲು ಪಾಲಿಕೆ ಆಯುಕ್ತರಾಗಿದ್ದ ಪಿ.ಸುನಿಲ್‌ಕುಮಾರ್ ಅವರು ಬಡಾವಣೆಗಳಿಗೆ ಭೇಟಿ ನೀಡುತ್ತಿದ್ದರು. ಸಾರ್ವಜನಿಕರ ಕುಂದು ಕೊರತೆ ಆಲಿಸುತ್ತಿದ್ದರು. ಅವರ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಸಮಸ್ಯೆಗಳನ್ನು ಕಳುಹಿಸಿದರೆ ತಕ್ಷಣ ಸ್ಪಂದಿಸುತ್ತಿದ್ದರು. ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಬಗೆಹರಿಸುತ್ತಿದ್ದರು. ಆದರೆ ಈಗ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಹೀಗಾಗಿ ಸಾರ್ವಜನಿಕರ ಗೋಳು ಕೇಳುವವರೇ ಇಲ್ಲದಂತಾಗಿದೆ’ ಎಂದು ಸಂಘಟನೆಗಳ ಮುಖಂಡರು ದೂರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !