ಗುರುವಾರ , ನವೆಂಬರ್ 21, 2019
23 °C
ನಿರ್ವಹಣೆ ಕಾಣದೆ ಉರಿಯುವುದೇ ಮರೆತ ಬೀದಿ ದೀಪಗಳು, ರಾತ್ರಿ ವೇಳೆ ಹೊರ ಹೋಗಲು ಅಂಜುವ ಜನರು

ಬುಡ್ಡಿ ದೀಪಗಳಂತೆ ಉರಿಯುವ ಬೀದಿದೀಪಗಳು

Published:
Updated:
Prajavani

ಚಿಕ್ಕಬಳ್ಳಾಪುರ: ಅಲಂಕಾರಕ್ಕೆ ಅಳವಡಿಸಿದಂತೆ ಕಾಣುವ ಕಂಬಗಳು, ಬುಡ್ಡಿ ದೀಪಗಳಂತೆ ಅಲ್ಲೊಂದು ಇಲ್ಲೊಂದು ಉರಿಯುವ ಬೀದಿದೀಪಗಳು, ಮೂಲೆ ಮೂಲೆ ತಿರುಗಿದರೂ ಕತ್ತಲ ಕೂಪದ ದರ್ಶನ.

ದಿನವಿಡೀ ಜಗತ್ತು ಬೆಳಗುವ ಸೂರ್ಯ ಸಂಜೆ ಪಶ್ಚಿಮ ದಿಕ್ಕಿನಲ್ಲಿ ಲೀನವಾಗುತ್ತಿದ್ದಂತೆ ನಗರದ ಪ್ರಮುಖ ರಸ್ತೆಗಳು ಸೇರಿದಂತೆ ವಿವಿಧ ಬಡಾವಣೆ ಒಳಹೊಕ್ಕು ನೋಡಿದರೆ ಕಾಣುವ ಅಂದಕಾರದ ಚಿತ್ರಣವಿದು. ರಾತ್ರಿಯಾದರೆ ಸಾಕು ನಗರದ ಬಹುತೇಕ ರಸ್ತೆಗಳು, ಬಡಾವಣೆಗಳು ಕತ್ತಲಲ್ಲಿ ಮುಳುಗುತ್ತವೆ.

ನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೀದಿ ದೀಪಗಳು ನಿರ್ವಹಣೆ ಕಾಣದೆ ಉರಿಯುತ್ತಲೇ ಇಲ್ಲ. ಪರಿಣಾಮ ನಗರ ಕಗ್ಗತ್ತಲಲ್ಲಿ ಮುಳುಗು
ವಂತಾಗಿದೆ. ರಾತ್ರಿಯಾದರೆ, ಮಹಿಳೆಯರು, ಮಕ್ಕಳು, ವೃದ್ಧರು ರಸ್ತೆಗೆ ಬರಲು ಭಯಪಡುವಂತಹ ವಾತಾವರಣ ಇದೆ.

ನಗರಸಭೆ ವ್ಯಾಪ್ತಿಯಲ್ಲಿ 31ವಾರ್ಡ್‌ಗಳಿವೆ. ಯಾವುದೇ ಭಾಗಕ್ಕೆ ಹೋದರೂ ಕೆಟ್ಟುನಿಂತಿರುವ ಬೆಳಕು ನೀಡದ ಬೀದಿ ದೀಪಗಳನ್ನು ಕಾಣಬಹುದು. ಅಷ್ಟರಮಟ್ಟಿಗೆ ಬೀದಿದೀಪಗಳ ಸಮಸ್ಯೆ ಇದೆ ಎನ್ನುವುದು ನಾಗರಿಕರ ಆರೋಪ. ಪ್ರಮುಖ ರಸ್ತೆ, ವೃತ್ತಗಳಲ್ಲೂ ಈ ಅವ್ಯವಸ್ಥೆ ಕಂಡುಬರುತ್ತಿರುವುದು ಅಚ್ಚರಿಗೆ ಕಾರಣವಾಗುತ್ತಿದೆ. ಇದನ್ನು ಸರಿಪಡಿಸಲು ಸ್ಥಳೀಯ ಸಂಸ್ಥೆ ಮಾಡುತ್ತಿರುವುದಾದರೂ ಏನು ಎನ್ನುವ ಪ್ರಶ್ನೆಯೂ ಮೂಡುವಂತಹ ಪರಿಸ್ಥಿತಿ ಇದೆ.

ಹೃದಯ ಭಾಗದಲ್ಲೇ ಕತ್ತಲು: ನಗರದ ಹೃದಯ ಭಾಗ ಎನಿಸಿಕೊಂಡಿರುವ ಖಾಸಗಿ ಬಸ್‌ ನಿಲ್ದಾಣವೇ ಸಂಜೆಯಾದರೆ ಸಾಕು ಕತ್ತಲಲ್ಲಿ ಮುಳುಗುತ್ತದೆ. ನಿಲ್ದಾಣ ಎರಡು ಕಡೆಗಳಲ್ಲಿ ಮತ್ತು ಸಮೀಪದಲ್ಲಿಯೇ ಪಿಎಲ್‌ಡಿ ಬ್ಯಾಂಕ್ ಆವರಣದ ಬಳಿ ಒಂದು ಕಡೆ ಹೈಮಾಸ್ಟ್‌ ದೀಪಗಳ ಕಂಬಗಳನ್ನು ಅಳವಡಿಸಲಾಗಿದೆ. ಈ ಪೈಕಿ ಎರಡು ಕಂಬಗಳಲ್ಲಿ ಮಿಣುಕು ದೀಪಗಳಂತೆ ಒಂದೆರಡು ದೀಪಗಳು ಮಾತ್ರ ಬೆಳಗುತ್ತವೆ.

ಉಳಿದಂತೆ ನಗರದ ಅತಿ ಜನಸಂದಣಿ ಪರಿಸರವೇ ಕತ್ತಲಮಯವಾಗಿರುತ್ತದೆ. ಖಾಸಗಿ ಬಸ್‌ಗಳಿಗಾಗಿ ಕಾಯುವ ಪ್ರಯಾಣಿಕರು, ಹೊರಗಡೆಯಿಂದ ನಗರಕ್ಕೆ ಬರುವವರು ರಾತ್ರಿಯಾದರೆ ಇಲ್ಲಿ ಪರದಾಡುವ ಸ್ಥಿತಿ ಇದೆ. ಮಳಿಗೆಗಳ ಹರಾಜು ವ್ಯಾಜ್ಯದಿಂದ ನಿಲ್ದಾಣ ಸರಿಯಾಗಿ ಬಳಕೆ ಕಾಣದೆ ಮೊದಲೇ ಪುಂಡಪೋಕರಿಗಳ ಅಡ್ಡಾದಂತಾಗಿದೆ. ರಾತ್ರಿ ವೇಳೆ ನಿಲ್ದಾಣ ಕುಡುಕರ ತಾಣವಾಗಿ ಪರಿವರ್ತನೆಯಾಗುತ್ತದೆ ಎನ್ನುವುದು ಪ್ರಯಾಣಿಕರ ಬೇಸರ.

ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಎಂ.ಜಿ.ರಸ್ತೆ ರಾತ್ರಿ ವೇಳೆ ಬಹುಪಾಲು ಅಕ್ಷರಶಃ ಅಂಧಕಾರದಲ್ಲಿ ಮುಳುಗಿರುತ್ತದೆ. ಗೌರಿಬಿದನೂರಿಗೆ ಸಂಪರ್ಕ ಕಲ್ಪಿಸುವ ಈ ಮುಖ್ಯ ರಸ್ತೆಯಲ್ಲಿಯೇ ಎಪಿಎಂಸಿ ಮಾರುಕಟ್ಟೆ, ಜಿಲ್ಲಾ ಆಸ್ಪತ್ರೆ ಇದೆ. ಸದಾ ಜನದಟ್ಟಣೆಯಿಂದ ಕೂಡಿರುವ ಈ ರಸ್ತೆಯಲ್ಲಿ ನೂರಾರು ಕಂಬಗಳು ಗೋಚರಿಸುತ್ತವೆ. ಬೆರಳಿಕೆ ಕಂಬಗಳಲ್ಲಿ ಮಾತ್ರ ದೀಪಗಳು ಹೊತ್ತಿಕೊಂಡಿರುತ್ತವೆ.

ನನೆಗುದಿಗೆ ಬಿದ್ದ ಹೆದ್ದಾರಿ ವಿಸ್ತರಣೆ ಕಾರ್ಯ, ಪೈಪ್‌ಲೈನ್ ಅಳವಡಿಸಲು ಅಗೆದ ರಸ್ತೆ, ಅರೆ ಕಡಿದ ಮರಗಳು, ಮೊಣಕಾಲುದ್ದ ನಿರ್ಮಾಣಗೊಂಡ ಹೊಸ ಮ್ಯಾನ್‌ಹೋಲ್‌ಗಳು, ಇಕ್ಕೆಲದಲ್ಲಿರುವ ಲೆಕ್ಕವಿಲ್ಲದಷ್ಟು ಗುಂಡಿಗಳು ಈ ರಸ್ತೆಯಲ್ಲಿ ಹಗಲಿನಲ್ಲಿಯೇ ಪಾದಚಾರಿಗಳನ್ನು ಹೈರಾಣು ಮಾಡುತ್ತವೆ. ರಾತ್ರಿ ವೇಳೆಯಲ್ಲಂತೂ ಈ ರಸ್ತೆಯಲ್ಲಿ ಹೋಗುವವರ ಪಾಡು ಹೇಳತೀರದು. ಈ ದಾರಿಯಲ್ಲಿ ಬಿದ್ದು ಗಾಯಗೊಂಡವರ ಸಂಖ್ಯೆ ಅಗಣಿತ ಎನ್ನುತ್ತಾರೆ ಸ್ಥಳೀಯರು.

ಈ ಒಂದೇ ರಸ್ತೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೈಭೀಮ್ ಪದವಿ ಬಾಲಕರ ವಿದ್ಯಾರ್ಥಿ ನಿಲಯ, ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಇವೆ. ರಾತ್ರಿ ವೇಳೆ ಕಗ್ಗತ್ತಲ ಕಾರಣಕ್ಕೆ ವಿದ್ಯಾರ್ಥಿಗಳು ನಿಲಯದ ಆಚೆಗೆ ಹೊರ ಬರಲು ಅಂಜುವ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲಾ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಕೂಡ ಕೆಲವೇ ಕಂಬಗಳ ಕೆಳಗೆ ಬೆಳಕಿನ ಬಿಂಬಗಳು ಗೋಚರಿಸುತ್ತವೆ.

ನಗರದ ಮತ್ತೊಂದು ಪ್ರಮುಖ ರಸ್ತೆಯಾದ ಬಿ.ಬಿ.ರಸ್ತೆ ಉದ್ದಕ್ಕೂ ಬೀದಿದೀಪಗಳ ಕಂಬಗಳು ಕಾಣುತ್ತವೆ. ಅವುಗಳಲ್ಲಿ ಬಹುತೇಕ ದೀಪಗಳು ರಾತ್ರಿ ಬೆಳಗುತ್ತವೆ. ಆದರೆ. ಇನ್‌ಕ್ಯಾಂಡಿಸೆಂಡ್, ಸಿಎಫ್‌ಎಲ್‌ ಬಲ್ಬ್‌ಗಳ ಆ ಮಂದ ಬೆಳಕು ಸವಾರರಿಗಾಗಲಿ, ಪಾದಚಾರಿಗಳಿಗಾಗಿ ನಿಶ್ಚಳವಾಗಿ ದಾರಿ ತೋರಿಸುತ್ತವೆಯೇ ಎಂದು ಜನರನ್ನು ಪ್ರಶ್ನಿಸಿದರೆ ನಿರಾಶೆಯ ಉತ್ತರ ದೊರೆಯುತ್ತದೆ.

ನಗರದ ಹೊಸ ಬಡಾವಣೆಗಳು ಮಾತ್ರವಲ್ಲದೆ ಹಳೆಯ ಸಾಕಷ್ಟು ಬಡಾವಣೆಗಳಲ್ಲಿ ಜನರು ರಾತ್ರಿ ವೇಳೆ ಮನೆಯಿಂದ ಹೊರಗೆ ಬರಲು ಅಳಕುವ ಸ್ಥಿತಿ ನಿರ್ಮಾಣವಾಗುತ್ತಿದೆ. ಧೋ ಎಂದು ಮಳೆ ಸುರಿದರೆ ರಸ್ತೆಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ಮಡುಗಟ್ಟಿ ನಿಲ್ಲುವ ನೀರಿನ ನಡುವೆ ಮನೆ ಸೇರುವುದರ ಒಳಗೆ ಜನರು ಹೈರಾಣಾಗಿ ಹಿಡಿಶಾಪ ಹಾಕುವ ದೃಶ್ಯಗಳು ಸಾಮಾನ್ಯವಾಗಿವೆ.

‘ನಗರಸಭೆಯವರು ಕಸ ತೆಗೆಸುವುದು, ನೀರು ಬಿಡುವುದಷ್ಟೇ ತಮ್ಮ ಕೆಲಸ ಎಂದು ಭಾವಿಸಿಕೊಂಡದಂತಿದೆ. ಪರಿಣಾಮ, ಬೀದಿದೀಪಗಳ ಬಗ್ಗೆ ಗಮನ ಹರಿಸುವವರೇ ಇಲ್ಲದಂತಾಗಿದೆ. ಬಹಳಷ್ಟು ಕಡೆಗಳಲ್ಲಿ ಪಾದಚಾರಿ ಮಾರ್ಗಗಳಲ್ಲಿ ಮಂದ ಬೆಳಕು ಕೂಡ ಇಲ್ಲದಂತಹ ದುಃಸ್ಥಿತಿ. ಕೆಲವೇ ಕೆಲವು ರಸ್ತೆಗಳಲ್ಲಿ ಮಾತ್ರವೇ ಬೀದಿದೀಪಗಳು ಸಮರ್ಪಕವಾಗಿವೆ. ಉಳಿದಂತೆ ನಿರ್ವಹಣೆ ಕೊರತೆ ಎದ್ದು ಕಾಣುತ್ತದೆ’ ಎನ್ನುತ್ತಾರೆ ಚಾಮರಾಜಪೇಟೆ ನಿವಾಸಿ ಸಿರಾಜ್.

ಮನೆಯಿಂದ ಹೊರಗೆ ಹೋಗಲು ಭಯ

ರಾತ್ರಿಯಾದರೆ ಮನೆಯಿಂದ ಹೊರಗೆ ಮಕ್ಕಳನ್ನು ಕರೆದುಕೊಂಡು ಹೋಗಲು ಭಯವಾಗುತ್ತದೆ. ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಿ ರಾತ್ರಿ ಮನೆಗೆ ವಾಪಾಸಾಗುತ್ತಿದ್ದರೆ ಕತ್ತಲೆ ಭಯಕ್ಕೆ ಯಾವಾಗ ಮನೆ ಸೇರಿಕೊಳ್ಳುತ್ತೆವೋ ಎಂಬ ಆತಂಕ ಮೂಡುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾರ್ಗ ವಿದ್ಯುತ್ ಮಾರ್ಗ ಅಳವಡಿಸಿದವರಿಗೆ ನೂರಾರು ರೂಪಾಯಿಯ ಬಲ್ಪ್‌ಗಳನ್ನು ಅಳವಡಿಸುವುದು ಕಷ್ಟವೆ?

ಅಪ್ಸಾನಾ, ದರ್ಗಾ ಮೊಹಲ್ಲಾ ನಿವಾಸಿ

***

ಜೀವ ಕೈಯಲ್ಲಿ ಹಿಡಿದು ಸಾಗುವ ಸ್ಥಿತಿ

ರಾತ್ರಿಯಾದರೆ ಸಾಕು ಎಂ.ಜಿ.ರಸ್ತೆಯಲ್ಲಿ ಸಂಚರಿಸುವವರ ಪಾಡು ದೇವರಿಗೆ ಪ್ರೀತಿ ಎನ್ನುವಂತಿರುತ್ತದೆ. ಕತ್ತಲ ದಾರಿಯಲ್ಲಿ ಗುಂಡಿಗಳು, ಮಲಗಿರುವ ಬೀದಿನಾಯಿಗಳು ಕಾಣದೆ ಜನ ಪರದಾಡುತ್ತಿರುತ್ತಾರೆ. ಪಾದಚಾರಿ ಮಾರ್ಗದಲ್ಲಿ ನಡೆದಾಡಲು ಸಾಧ್ಯವಿಲ್ಲ. ರಸ್ತೆಯಲ್ಲಿ ಹೆಜ್ಜೆ ಹಾಕಲು ವೇಗವಾಗಿ ಬರುವ ವಾಹನಗಳ ಭಯ. ಜೀವ ಕೈಯಲ್ಲಿ ಹಿಡಿದು ಸಾಗುವ ಸ್ಥಿತಿಯಿದೆ. ನನ್ನನ್ನು ಸೇರಿದಂತೆ ಆ ರಸ್ತೆಯ ರಸ್ತೆಗುಂಡಿಗಳಲ್ಲಿ ಗಾಡಿ ಹಾಕಿಕೊಂಡು ಬಿದ್ದವರಿಗೆ ಲೆಕ್ಕವಿಲ್ಲ.

ಎಂ.ಮಹೇಶ್‌, ಜೈಭಿಮ್ ನಗರ ನಿವಾಸಿ

***

ಕತ್ತಲ ಗವಿಯಾಗುವ ಎಪಿಎಂಸಿ

ಹೂವು, ತರಕಾರಿ ವಹಿವಾಟಿನಲ್ಲಿ ತನ್ನದೇ ಆದ ಹಿರಿಮೆ ಹೊಂದಿರುವ ನಗರದ ಎಪಿಎಂಸಿ ಕೂಡ ಅಂಧಕಾರಕ್ಕೆ ಹೊರತಾಗಿಲ್ಲ. ರಾತ್ರಿಯಾದರೆ ಸಾಕು ಇಡೀ ಎಪಿಎಂಸಿ ಪ್ರಾಂಗಣ ಕತ್ತಲ ಗವಿಯಾಗುತ್ತದೆ. ಮೊದಲ ಅಡ್ಡ ರಸ್ತೆಯಲ್ಲಿ ಕಚೇರಿ ಎದುರು ಎರಡ್ಮೂರು ಕಂಬಗಳಲ್ಲಿ ಉರಿಯುವ ದೀಪಗಳನ್ನು ಹೊರತುಪಡಿಸಿದರೆ ಇಡೀ ಮಾರುಕಟ್ಟೆ ತುಂಬಾ ಕರಾಳ ಕಗ್ಗತ್ತಲೇ ಆವರಿಸಿಕೊಂಡು ಒಳಗೆ ಹೆಜ್ಜೆ ಇಡಲು ಅಂಜಿಸುತ್ತದೆ.

ಪ್ರತಿಕ್ರಿಯಿಸಿ (+)