ಬುಧವಾರ, ನವೆಂಬರ್ 13, 2019
21 °C
ಶಾಸಗಿ ಶಾಲಾ- ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆ

ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಶಿಕ್ಷಕರೂ ತಮ್ಮ ಬೋಧನಾ ಕೌಶಲವನ್ನು ಬದಲಾಯಿಸಿಕೊಂಡು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಬೇಕು’ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಶನಿವಾರ ಶಾಸಗಿ ಶಾಲಾ- ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ಶಿಕ್ಷಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ದೇಶದ ಏಳಿಗೆಗಾಗಿ ಶಿಕ್ಷಕರು ಮಕ್ಕಳಲ್ಲಿ ಶಿಸ್ತು, ಸಂಯಮ, ದೈವ ಭಕ್ತಿ, ಮಾನವೀಯ ಮೌಲ್ಯಗಳನ್ನು ಬೆಳೆಸಲು ಒತ್ತು ನೀಡಬೇಕು. ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಇದು ಕಳವಳದ ವಿಚಾರ. ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜತೆಯಲ್ಲೇ ಸಂಸ್ಕಾರ, ಮೌಲ್ಯಗಳ ಬಗ್ಗೆ ಮರೆಯದೆ ತಿಳಿಸಿಕೊಡಬೇಕು’ ಎಂದು ತಿಳಿಸಿದರು.

‘ಸಂಪತ್ತು ಕಳೆದುಕೊಂಡರೆ ಮತ್ತೆ ಗಳಿಸಬಹುದು, ಆರೋಗ್ಯ ಕಳೆದುಕೊಂಡರೆ ಮರಳಿ ಪಡೆಯಬಹುದು, ಆದರೆ, ನಡತೆ ಕಳೆದುಕೊಂಡಲ್ಲಿ ಅದನ್ನು ಮರಳಿ ಪಡೆಯಲಾಗುವುದಿಲ್ಲ. ಶಿಕ್ಷಣ, ಶಿಸ್ತು, ಸಂಪಾದಿಸಿದವನಿಗೆ ಸಮಾಜದಲ್ಲಿ ಸದಾ ಗೌರವ ಲಭಿಸುತ್ತದೆ ಎಂಬುದು ನಾವು ಮರೆಯಬಾರದು. ಗುರು ಹಿರಿಯರನ್ನು ವಿದ್ಯಾರ್ಥಿಗಳು ಗೌರವಿಸುವ ಗುಣ ರೂಢಿಸಿಕೊಳ್ಳಬೇಕು’ ಎಂದರು.

ಖಾಸಗಿ ಶಾಲಾ -ಕಾಲೇಜುಗಳ ಆಡಳಿತ ಮಂಡಳಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮಾತನಾಡಿ, ‘ತಮ್ಮ ಬದುಕಿನ ಮೂಲಕ ಶಿಕ್ಷಕರ ಮಹತ್ವವನ್ನು ಜಗತ್ತಿಗೆ ಸಾರಿದ ಸರ್ವಪಲ್ಲಿ ರಾಧಾಕೃಷ್ಣನ್ ಅವರು ನಮಗೆಲ್ಲ ಮಾದರಿಯಾಗಬೇಕು. ಶಿಕ್ಷಕರು ಸದಾ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆಯಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಖಾಸಗಿ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರ ಕುಟುಂಬಕ್ಕೆ ಸಂಘದ ವತಿಯಿಂದ ವಿಮಾ ಸೌಲಭ್ಯ ಒದಗಿಸಲಾಗುವುದು. ಅಕಾಲಿಕ ಮರಣ ಹೊಂದುವ ಶಿಕ್ಷಕರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಕುಟುಂಬದವರಿಗೆ ಕನಿಷ್ಠ ₹1 ಲಕ್ಷ ಸಹಾಯ ಧನ ನೀಡಲಾಗುತ್ತದೆ’ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕೆ.ವಿ ಮತ್ತು ಪಂಚಗಿರಿ ದತ್ತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ನ್ಯೂಹಾರಿಜೆನ್ ಪ್ರೌಢಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜಿ.ನಾಗೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಲಾ, ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಹೆನ್ರಿ ಪ್ರಸನ್ನಕುಮಾರ್, ಖಜಾಂಚಿ ವೈ.ವಿ.ಆನಂದ್, ಪದಾಧಿಕಾರಿಗಳಾದ ಶ್ರೀನಿವಾಸ್, ವರಮೂರ್ತಿ, ಚಂದ್ರಮೌಳಿ, ರಂಗನಾಥ್, ಹೇಮಾ, ಮಾಲತಿ, ನಾಗರಾಜ್, ಮಂಜುನಾಥ್, ಶಿವಣ್ಣ, ಪೃಥ್ವಿ, ಹರೀಶ್, ರಾಮಾಂಜಿನಪ್ಪ, ನಿರಂಜನ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)