ರೈತರ ಸಾಲ ಮನ್ನಾ ಮಾದರಿ ಅಧ್ಯಯನ: ಫಲಾನುಭವಿಗಳ ಗುರುತಿಸಲು ತಂತ್ರಾಂಶ

7
ಪ್ರಕ್ರಿಯೆಗೆ ಬೇಕು 2–3 ತಿಂಗಳು

ರೈತರ ಸಾಲ ಮನ್ನಾ ಮಾದರಿ ಅಧ್ಯಯನ: ಫಲಾನುಭವಿಗಳ ಗುರುತಿಸಲು ತಂತ್ರಾಂಶ

Published:
Updated:

ಬೆಂಗಳೂರು: ರೈತರ ಸಾಲ ಮನ್ನಾ ಯೋಜನೆಯ ಪ್ರಯೋಜನವನ್ನು ಅರ್ಹರಲ್ಲದವರು ಪಡೆಯುವುದನ್ನು ತಪ್ಪಿಸಲು ಹಾಗೂ ಅರ್ಹ ಫಲಾನುಭವಿಗಳನ್ನು ಗುರುತಿಸಲು ತಂತ್ರಾಂಶ (ಸಾಫ್ಟ್‌ವೇರ್‌) ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೆಲವು ರೈತರು ನಾಲ್ಕೈದು ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದಾರೆ. ಬೇರೆಯವರ ಹೆಸರಿನಲ್ಲಿ ಕೃಷಿ ಸಾಲ ಪಡೆದವರೂ ಇದ್ದಾರೆ. ಒಂದಕ್ಕಿಂತ ಹೆಚ್ಚು ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರೆ ಒಂದು ಬ್ಯಾಂಕಿನ ಸಾಲ ಮಾತ್ರ ಮನ್ನಾ ಆಗಲಿದೆ. ಇದನ್ನು ಗುರುತಿಸಲು ತಂತ್ರಾಂಶ ನೆರವಾಗಲಿದೆ. ಆಧಾರ್‌ ಹಾಗೂ ಆರ್‌ಟಿಸಿ (ಪಹಣಿ) ನೆರವಿನಿಂದ ಇದನ್ನು ಗುರುತಿಸಲಾಗುತ್ತದೆ. ಇದರಿಂದ ನಕಲಿ ಫಲಾನುಭವಿಗಳು ಯೋಜನೆಯ ಲಾಭ ಪಡೆಯುವುದು ತಪ್ಪಲಿದೆ.

ರಾಜ್ಯ ಸರ್ಕಾರದ ಇ–ಆಡಳಿತ ಇಲಾಖೆ ತಂತ್ರಾಂಶ ಅಭಿವೃದ್ಧಿಪಡಿಸಲಿದೆ. ಇಲಾಖೆಯ ಅಧಿಕಾರಿಗಳ ಜತೆಗೆ ಆರ್ಥಿಕ ಇಲಾಖೆಯ ಅಧಿಕಾರಿಗಳು ಚರ್ಚಿಸಿದ್ದು, ಕೆಲವೇ ದಿನಗಳಲ್ಲಿ ತಂತ್ರಾಂಶ ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದಾರೆ ಎಂದು‌ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ರೈತರ ₹ 2 ಲಕ್ಷವರೆಗಿನ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಜೆಟ್‌ನಲ್ಲಿ ‍ಪ್ರಕಟಿಸಿದ್ದರು. ಸಹಕಾರ ಬ್ಯಾಂಕುಗಳ ಒಟ್ಟು ₹9,448.61 ಕೋಟಿ ಸಾಲ ಮನ್ನಾ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸಹಕಾರ ಬ್ಯಾಂಕುಗಳಲ್ಲಿ ಸಾಲ ಪಡೆದಿರುವ 20.38 ಲಕ್ಷ ರೈತರು ಸಾಲ ಮನ್ನಾ ಸೌಲಭ್ಯದ ಪ್ರಯೋಜನ ಪಡೆಯಲಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾಕ್ಕೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗುತ್ತದೆ ಎಂದೂ ಕುಮಾರಸ್ವಾಮಿ ಬುಧವಾರ ತಿಳಿಸಿದ್ದಾರೆ.

‘ಸಚಿವ ಸಂಪುಟ ಒಪ್ಪಿಗೆ ನೀಡಿದ ಕೂಡಲೇ ಸಾಲ ಮನ್ನಾ ಆಗುವುದಿಲ್ಲ. ಅದು ಪ್ರಕ್ರಿಯೆ ಭಾಗ ಅಷ್ಟೇ. ಸಾಲ ಮನ್ನಾ ಆಗಲು ಕನಿಷ್ಠ 2–3 ತಿಂಗಳುಗಳು ಬೇಕಾಗುತ್ತದೆ’ ಎಂದು ಅಧಿಕಾರಿ ತಿಳಿಸಿದರು.

‘ಮಹಾರಾಷ್ಟ್ರ, ಉತ್ತರ ಪ್ರದೇಶ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸಾಲ ಮನ್ನಾ ಮಾದರಿಗಳ ಅಧ್ಯಯನಕ್ಕೆ ಹಿರಿಯ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಮಹಾರಾಷ್ಟ್ರದಲ್ಲಿ ತಂತ್ರಾಂಶ ಅಭಿವೃದ್ಧಿಪಡಿಸಲಾಗಿತ್ತು. ಮಾಹಿತಿ ತುಂಬಲು ರೈತರಿಗೇ ತಿಳಿಸಲಾಗಿತ್ತು. ಇದರಿಂದ ಸಾಕಷ್ಟು ಗೊಂದಲಗಳು ಉಂಟಾಗಿದ್ದವು. ಉತ್ತರ ಪ್ರದೇಶದಲ್ಲಿ ಯಾವುದೇ ಸಿದ್ಧತೆ ಮಾಡಿಕೊಳ್ಳದೆ ಮನ್ನಾ ಮಾಡಲಾಗಿತ್ತು. ಅಲ್ಲಿ ಇನ್ನೂ ಸಾವಿರಾರು ರೈತರಿಗೆ ಸಾಲ ಮನ್ನಾದ ಪ್ರಯೋಜನ ಸಿಕ್ಕಿಲ್ಲ. ತೆಲಂಗಾಣ ಹಾಗೂ ಆಂಧ್ರಪ್ರದೇಶಗಳ ಮಾದರಿಗಳ ಅಧ್ಯಯನ ನಡೆಸಲಿದ್ದೇವೆ. ನಮ್ಮಲ್ಲೂ ಅಂತಹ ಗೊಂದಲಗಳಿಗೆ ಎಡೆ ಮಾಡಿಕೊಡಬಾರದು ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಸ್ವಲ್ಪ ಕಾಲಾವಕಾಶ ತೆಗೆದುಕೊಂಡು ವ್ಯವಸ್ಥಿತವಾಗಿ ಯೋಜನೆ ಜಾರಿ ಮಾಡಲು ಯೋಜಿಸಿದ್ದೇವೆ. ಯೋಜನೆ ಅನುಷ್ಠಾನಕ್ಕೆ ಮತ್ತೊಂದು ಸಮಿತಿಯನ್ನು ರಚಿಸಲಾಗುವುದು’ ಎಂದು ಅವರು ಹೇಳಿದರು.

‘ರಾಷ್ಟ್ರೀಕೃತ ಬ್ಯಾಂಕುಗಳ ಜತೆಗೆ ಹಲವು ಸುತ್ತುಗಳ ಮಾತುಕತೆ ನಡೆಸಲಾಗಿದೆ. ಹೆಚ್ಚಿನ ಬ್ಯಾಂಕುಗಳು ಸುಸ್ತಿದಾರರ ಮಾಹಿತಿ ನೀಡಿವೆ. 2–3 ಬ್ಯಾಂಕುಗಳು ಸಮಗ್ರ ಮಾಹಿತಿ ನೀಡಿಲ್ಲ. ಸ್ವಲ್ಪ ಕಾಲಾವಕಾಶ ಕೇಳಿವೆ. ಈ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲದ ಮೊತ್ತ ₹ 34 ಸಾವಿರ ಕೋಟಿಯಷ್ಟಿದೆ. ಬ್ಯಾಂಕುಗಳು ಸಾಲಗಾರರಿಗೆ ಏಕಕಂತಿನ ಪಾವತಿ ಯೋಜನೆಯಡಿ ಶೇ 50ರಷ್ಟು ವಿನಾಯಿತಿ ನೀಡಿದ ಉದಾಹರಣೆಗಳು ಇವೆ. ಅದೇ ರೀತಿ, ರಾಜ್ಯ ಸರ್ಕಾರಕ್ಕೂ ವಿನಾಯಿತಿ ನೀಡುವಂತೆ ಕೋರಿದ್ದೇವೆ. ಇದಕ್ಕೆ ಅವರು ಒಪ್ಪಿದರೆ ಸಾಲ ಮನ್ನಾದಿಂದ ಸರ್ಕಾರದ ಬೊಕ್ಕಸದ ಮೇಲೆ ಬೀಳುವ ಹೊರೆ ಕಡಿಮೆ ಆಗಲಿದೆ’ ಎಂದು ಅವರು ಮಾಹಿತಿ ನೀಡಿದರು.

‘ರಾಷ್ಟ್ರೀಕೃತ ಬ್ಯಾಂಕುಗಳಿಗೆ ಮರುಪಾವತಿ ಮಾಡಲು ಬಜೆಟ್‌ನಲ್ಲಿ ₹6,500 ಕೋಟಿ ಇಡಲಾಗಿದೆ. ಉಳಿದ ಮೊತ್ತವನ್ನು ನಾಲ್ಕು ವರ್ಷಗಳಲ್ಲಿ ಬ್ಯಾಂಕುಗಳಿಗೆ ಪಾವತಿಸಲಾಗುತ್ತದೆ. ಬಾಕಿ ಉಳಿಯುವ ಮೊತ್ತಕ್ಕೆ ಬಡ್ಡಿ ನೀಡಲು ಸಹ ಒಪ್ಪಿದ್ದೇವೆ. ಬಡ್ಡಿ ಮೊತ್ತ ₹500 ಕೋಟಿಯಿಂದ ₹600 ಕೋಟಿಗಳಷ್ಟು ಆಗಬಹುದು. ಇದಕ್ಕೆ ಬ್ಯಾಂಕುಗಳು ಸಹಮತ ವ್ಯಕ್ತಪಡಿಸಿವೆ’ ಎಂದು ಅವರು ಹೇಳಿದರು.

‘ಇಲಾಖೆಗಳ ಅನುದಾನ ಕಡಿತ ಇಲ್ಲ’

‘ಸಾಲ ಮನ್ನಾ ಮೊತ್ತ ಭರಿಸಲು ಈ ವರ್ಷ ವಿವಿಧ ಇಲಾಖೆಗಳ ಅನುದಾನವನ್ನು ಕಡಿತ ಮಾಡುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪಾವತಿಗೆ ಹಣ ಮೀಸಲು ಇರಿಸಲಾಗಿದೆ. ಹಾಗಾಗಿ, ಯಾವುದೇ ಸಮಸ್ಯೆ ಇಲ್ಲ. ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಮೊತ್ತ ಭರಿಸಲು ಸಂಪನ್ಮೂಲ ಕ್ರೋಡೀಕರಿಸಬೇಕಿದೆ. ಸಾಮಾನ್ಯವಾಗಿ, ಇಲಾಖೆಗಳಲ್ಲಿ ಖರ್ಚಾಗದ ಹಣವನ್ನು ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಈ ಸಲ ಅದನ್ನು ಸಹಕಾರ ಇಲಾಖೆಗೆ ವರ್ಗಾಯಿಸಲು ಯೋಜಿಸಿದ್ದೇವೆ’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಅಂಕಿ ಅಂಶಗಳು

* ₹ 49 ಸಾವಿರ ಕೋಟಿ ರೈತರ ಸಾಲ ಮನ್ನಾ ಮೊತ್ತ

* ₹ 34 ಸಾವಿರ ಕೋಟಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ

* ₹ 9,448.61 ಕೋಟಿ ಸಹಕಾರಿ ಬ್ಯಾಂಕುಗಳ ಸಾಲ

* 45 ಲಕ್ಷ ಪ್ರಯೋಜನ ಪಡೆಯುವ ರೈತರು

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !