‘ಐಡೆಕ್‌’ ಸೇರ್ಪಡೆಗೆ ಮೂಡದ ಸಹಮತ

7
ಉಪನಗರ ರೈಲು ಯೋಜನೆ: ಎಸ್‌ಪಿವಿ ರಚನೆ ವಿಳಂಬ

‘ಐಡೆಕ್‌’ ಸೇರ್ಪಡೆಗೆ ಮೂಡದ ಸಹಮತ

Published:
Updated:

ಬೆಂಗಳೂರು: ಉಪನಗರ ರೈಲು ಯೋಜನೆಯಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಸಂಸ್ಥೆಯನ್ನು (ಐಡೆಕ್‌) ಸೇರಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವು ರೈಲ್ವೆ ಇಲಾಖೆಯನ್ನು ಕೋರಿದೆ. ಈ ಸೇರ್ಪಡೆ ಕುರಿತು ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ನಡುವೆ ಸಹಮತ ಏರ್ಪಡದಿರುವುದು ಇಡೀ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. 

‘ಯೋಜನೆ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಸ್ಥಾಪಿಸಬೇಕು ಎಂದು ರೈಲ್ವೆ ಸಚಿವಾಲಯ ಕೋರಿತ್ತು. ಈ ನಡುವೆ ಐಡೆಕ್‌ ಅನ್ನು ಸೇರಿಸುವಂತೆ ರಾಜ್ಯ ಸರ್ಕಾರ ಕೋರಿದೆ. ಇವೆರಡೂ ಚರ್ಚೆಗಳ ನಡುವೆ ಎಸ್‌ಪಿವಿ ಸ್ಥಾಪನೆ ಮುಂದಕ್ಕೆ ಹೋಗುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.  

ಐಡೆಕ್‌ ಅನ್ನು ಈ ಯೋಜನೆ ವ್ಯಾಪ್ತಿಗೆ ಸೇರಿಸುವುದಕ್ಕೆ ರೈಲ್ವೆ ಇಲಾಖೆ ಒಪ್ಪುತ್ತಿಲ್ಲ. ‌

‘ಇಡೀ ಯೋಜನೆ ಕುರಿತು ಒಪ್ಪಂದವಾಗಿರುವುದು ರೈಲ್ವೆ ಸಚಿವಾಲಯ– ಕರ್ನಾಟಕ ಸರ್ಕಾರದ ನಡುವೆ. ಕರ್ನಾಟಕ ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆ–ರೈಡ್‌) ಇದರ ಅನುಷ್ಠಾನ ಏಜೆನ್ಸಿ. ಒಂದು ವೇಳೆ ಐಡೆಕ್‌ ಅನ್ನು ಸೇರಿಸಬೇಕಾದರೆ ಆ ಸಂಸ್ಥೆಯನ್ನು ಕೆ–ರೈಡ್‌ ಜೊತೆ ವಿಲೀನಗೊಳಿಸಬೇಕು. ಇದು ಸರಳ ಪ್ರಕ್ರಿಯೆ. ಆದರೆ, ವ್ಯವಸ್ಥೆಯೊಳಗಿನ ಹಿತಾಸಕ್ತಿಗಳು ಇದನ್ನು ವಿನಾಕಾರಣ ಎಳೆದಾಡುತ್ತಿವೆ’ ಎಂದು ಅಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರ ತ್ವರಿತವಾಗಿ ಎಸ್‌ಪಿವಿ ರಚಿಸಿ ಅದರ ಮೂಲಕ ಯೋಜನೆಯನ್ನು ಅನುಷ್ಠಾನಕ್ಕೆ ತಂದರೆ ಯಾವುದೇ ಗೊಂದಲ ಇರದು. ರೈಲ್ವೆ ಸಚಿವಾಲಯ ತನ್ನ ಪಾಲಿನ ಅನುದಾನ ಪಾವತಿಸಲು ಯಾವತ್ತೋ ಸಿದ್ಧವಾಗಿದೆ. ಇಂಥ ತಾಂತ್ರಿಕ ಅಡಚಣೆಗಳು ಯೋಜನೆಗೆ ತಡೆಯೊಡ್ಡಿವೆ’ ಎಂದು ಅಧಿಕಾರಿ ವಿವರಿಸಿದರು. 

‘ನಗರ ಭೂಸಾರಿಗೆ ಸಚಿವಾಲಯ (ಡಲ್ಟ್‌), ಐಡೆಕ್‌, ಕೆ–ರೈಡ್‌ ನಡುವೆ ಪರಸ್ಪರ ಸಮನ್ವಯ ಸಾಧಿಸಬೇಕಿದೆ. ರಾಜ್ಯ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಅವರು ತಿಳಿಸಿದರು.

ಎಸ್‌ಪಿವಿ ಏಕೆ?: ‘ದೇಶದ ಬೇರೆ ಬೇರೆ ನಗರಗಳಲ್ಲಿ ಸಬ್‌ಅರ್ಬನ್‌ ರೈಲು ಯೋಜನೆಗಳು ಎಸ್‌ಪಿವಿ ಮೂಲಕವೇ ಅನುಷ್ಠಾನಗೊಂಡಿವೆ. ಇಡೀ ಯೋಜನೆಯ ಸಮಗ್ರ ವಿವರ ಮತ್ತು ಮಾಹಿತಿ ಒಂದೇ ಅನುಷ್ಠಾನ ಸಂಸ್ಥೆಯಲ್ಲಿ ಇರುತ್ತದೆ’ ಎಂದು ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಆರ್‌.ಎಸ್‌.ಸಕ್ಸೇನಾ ಈ ಘಟಕದ ಮಹತ್ವ ವಿವರಿಸಿದರು.

‘ಬೆಂಗಳೂರಿನಲ್ಲಿ ಮೆಟ್ರೊ ರೈಲು ಇದೆ. ಎಲಿವೇಟೆಡ್‌ ಕಾರಿಡಾರ್‌ ಯೋಜನೆಯ ಪ್ರಸ್ತಾವವೂ ಇದೆ. ಬಸ್‌ ಸಾರಿಗೆಯೂ ಇದೆ. ಇಲ್ಲಿ ಯಾವ ಪ್ರದೇಶಕ್ಕೆ ಯಾವುದು ಸೂಕ್ತ, ಇತರ ಸಾರಿಗೆ ವ್ಯವಸ್ಥೆಗಳಿಗೆ ಪೂರಕವಾಗಿ ಉಪನಗರ ರೈಲು ಜಾಲವನ್ನು ರೂಪಿಸುವ ಬಗೆ ಹೇಗೆ ಎಂಬುದೂ ಮುಖ್ಯ. ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿದ ನಂತರವೇ ಯೋಜನೆ ಅನುಷ್ಠಾನಗೊಳಿಸಬೇಕು. ಇಲ್ಲವಾದರೆ ಸಾವಿರಾರು ಕೋಟಿ ರೂಪಾಯಿ ವ್ಯರ್ಥವಾಗುತ್ತದೆ. ಅದಕ್ಕಾಗಿ ಎಸ್‌ಪಿವಿ ರಚನೆಯಾಗಲೇ ಬೇಕು ಎಂದು ರೈಲ್ವೆ ಸಚಿವಾಲಯ ಕೋರಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಎದುರು ನೋಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘ಎಸ್‌ಪಿವಿ ಸ್ಥಾಪನೆ ಸಂಬಂಧಿಸಿದಂತೆ ಕೆ– ರೈಡ್‌, ಐಡೆಕ್‌, ರೈಲ್ವೆ ಇಲಾಖೆ ಅಧಿಕಾರಿಗಳ ನಡುವೆ ಇತ್ತೀಚೆಗೆ ಸಭೆ ನಡೆದಿದೆ. ರಾಜ್ಯ ಸರ್ಕಾರದ ಅಧಿಕಾರಿಗಳು ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಮೌಖಿಕ ಸಮ್ಮತಿ ಸೂಚಿಸಿದ್ದಾರೆ. ಆ ಬಳಿಕ ಯಾವುದೇ ಬೆಳವಣಿಗೆ ಆಗಿಲ್ಲ’ ಎಂದು ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು. 

‘ಬೆಂಗಳೂರಿನಿಂದ ರಾಮನಗರ, ತುಮಕೂರು, ಯಲಹಂಕ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಸಂಪರ್ಕಿಸುವ ಉಪನಗರ ರೈಲು ಯೋಜನೆ ನಗರದ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಗಣನೀಯ ಪಾತ್ರ ವಹಿಸಲಿದೆ’ ಎಂದು ಅವರು ತಿಳಿಸಿದರು.

ಸಿಟಿಜನ್ಸ್ ಫಾರ್‌ ಬೆಂಗಳೂರು (ಸಿಎಫ್‌ಬಿ), ಪ್ರಜಾರಾಗ್‌, ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆಗಳು ಸೇರಿ ಇತ್ತೀಚೆಗೆ ‘ಮೊದಲು ರೈಲು ಬೇಕು’ ಅಭಿಯಾನ ನಡೆಸಿದ್ದವು. ಈಗಾಗಲೇ ಇರುವ ರೈಲು ಮಾರ್ಗಗಳನ್ನೇ ಬಳಸಿಕೊಂಡು ಉಪನಗರ ರೈಲು ಯೋಜನೆಯನ್ನು ಜಾರಿಗೆ ತರಬೇಕು ಎಂಬುದು ಈ ಸಂಘಟನೆಗಳ ಒತ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !