ಏಕಾಏಕಿ ಬ್ರೇಕ್‌: 18 ಚಾಲಕರಿಗೆ ನೋಟಿಸ್‌

7
ಆ್ಯಕ್ಸಿಲರೇಟರ್‌ ಜೋರಾಗಿ ಒತ್ತಿದರೂ ಕಷ್ಟ ಎನ್ನುತ್ತಿದ್ದಾರೆ ಬಿಎಂಟಿಸಿ ಸಿಬ್ಬಂದಿ

ಏಕಾಏಕಿ ಬ್ರೇಕ್‌: 18 ಚಾಲಕರಿಗೆ ನೋಟಿಸ್‌

Published:
Updated:

ಬೆಂಗಳೂರು: ‘ನೀವು ಬಸ್‌ ಚಾಲನೆ ವೇಳೆ 71 ಬಾರಿ ಏಕಾಏಕಿ ಬ್ರೇಕ್‌ ಹಾಕಿದ್ದೀರಿ. ಅಷ್ಟೇ ಬಾರಿ ವಾಹನದ ಆ್ಯಕ್ಸಿಲರೇಟರ್‌ನ್ನು ಜೋರಾಗಿ ಒತ್ತಿದ್ದೀರಿ. ನಿಮ್ಮ ಮೇಲೇಕೆ ಕ್ರಮ ಕೈಗೊಳ್ಳಬಾರದು...?’ 

– ಹೀಗೊಂದು ನೋಟಿಸ್‌ ಬಿಎಂಟಿಸಿ ಚಾಲಕರಿಗೆ ನೀಡಲಾಗಿದೆ. ಉತ್ತರಹಳ್ಳಿ ಘಟಕದ ವ್ಯವಸ್ಥಾಪಕರು 18 ಚಾಲಕರಿಗೆ ಅವರು ಬ್ರೇಕ್‌ ಹಾಕಿದ, ಆ್ಯಕ್ಸಿಲರೇಟರ್‌ ಜೋರಾಗಿ ಒತ್ತಿದ ವಿವರಗಳ ಸಹಿತ ನೋಟಿಸ್‌ ನೀಡಿದ್ದಾರೆ.

ಒಂದೇ ಬಸ್‌ನ ಎರಡು ಪಾಳಿಗಳ ಚಾಲಕರಿಗೂ ನೋಟಿಸ್‌ ನೀಡಲಾಗಿದೆ. ‘ಇಂಟಲಿಜೆಂಟ್‌ ಟ್ರಾನ್ಸ್‌ಪೋರ್ಟ್‌ ಸಿಸ್ಟಂ’ ನೀಡಿದ ಮಾಹಿತಿ ಆಧಾರದಲ್ಲಿ ಈ ನೋಟಿಸ್‌ ನೀಡಲಾಗಿದೆ ಎಂದು ನಿಗಮ ಸಮರ್ಥಿಸಿಕೊಂಡಿದೆ. 

45, 33, 41 ಬಾರಿ ಬ್ರೇಕ್‌ ಹಾಕಿದ, 35, 24, 29 ಬಾರಿ ಆ್ಯಕ್ಸಿಲರೇಟರ್‌ ಜೋರಾಗಿ ಒತ್ತಿದ ಲೆಕ್ಕಾಚಾರಗಳನ್ನು ಆಯಾ ಚಾಲಕರಿಗೆ ನೀಡಲಾಗಿದೆ.

‘ಏಕಾಏಕಿ ಬ್ರೇಕ್‌ ಹಾಕುವುದರಿಂದ ಪ್ರಯಾಣಿಕರು ಗಾಬರಿಗೊಳಗಾಗುತ್ತಾರೆ. ಮುಗ್ಗರಿಸಿ ಬೀಳುವ ಸಾಧ್ಯತೆಯೂ ಇದೆ. ದಿಢೀರ್‌ ಬ್ರೇಕ್‌ ಮತ್ತು ಅನಗತ್ಯವಾಗಿ ಆ್ಯಕ್ಸಿಲರೇಟರ್‌ ಒತ್ತುವುದರಿಂದ ಮೈಲೇಜ್‌ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗಲಿದೆ. ಅದಕ್ಕಾಗಿ ಚಾಲಕರಿಗೆ ನೋಟಿಸ್‌ ಕೊಡಲಾಗಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್‌ ವಿ.ಪ್ರಸಾದ್‌ ಹೇಳಿದರು.  

ಚಾಲಕರು ಹೇಳುವುದೇನು?: ‘ಬೆಂಗಳೂರಿನ ದಟ್ಟಣೆಯಲ್ಲಿ ಬ್ರೇಕ್‌ ಹಾಕುವ ಸಂದರ್ಭವನ್ನು ಮೊದಲೇ ಊಹೆ ಮಾಡಲು ಸಾಧ್ಯವೇ ಇಲ್ಲ. ದಿಢೀರ್‌ ಬ್ರೇಕ್‌ ಹಾಕದಿದ್ದರೆ ಅಪಘಾತ ತಪ್ಪಿಸುವುದಾದರೂ ಹೇಗೆ? ಅಪಘಾತವಾದರೆ ಕೆಲಸಕ್ಕೆ ಸಂಚಕಾರ. ಬ್ರೇಕ್‌ ಹಾಕಿದರೆ
ಅದಕ್ಕೂ ನೋಟಿಸ್‌. ನಾವು ಹೇಗೆ ಕೆಲಸ ಮಾಡಬೇಕು’ ಎಂದು ಚಾಲಕರು ಅಳಲು ತೋಡಿಕೊಂಡರು.

‘ಎಂಜಿನ್‌ ಜೋರಾಗಿ ಚಾಲನೆ ಮಾಡುವುದರಿಂದ ಬ್ರೇಕ್‌ ಸಿಲಿಂಡರ್‌ಗೆ ಗಾಳಿ ಪಂಪ್‌ ಆಗುತ್ತದೆ. ಇಲ್ಲಿ ಗಾಳಿ ತುಂಬಿ ಒತ್ತಡ ಇದ್ದಾಗಲಷ್ಟೇ ಬ್ರೇಕ್‌ ಕಾರ್ಯನಿರ್ವಹಿಸುತ್ತದೆ. ಪ್ರತಿ ಬಾರಿ ಬ್ರೇಕ್‌ ಒತ್ತಿದಾಗ ಸುಮಾರು 5 ಪೌಂಡ್‌ಗಳಷ್ಟು ಗಾಳಿ ಕಡಿಮೆಯಾಗುತ್ತದೆ. ಅದು ಮತ್ತೆ ತುಂಬಬೇಕಾದರೆ ಎಂಜಿನ್‌ ಅನ್ನು ಜೋರಾಗಿ ಚಾಲನೆ ಮಾಡಲು ಆ್ಯಕ್ಸಿಲರೇಟರ್‌ ಒತ್ತಬೇಕಾಗುತ್ತದೆ. ಹೀಗೆ ಇವು ಒಂದಕ್ಕೊಂದು ಸಂಬಂಧಪಟ್ಟಿದೆ. ವಿಷಯ ಹೀಗಿರುವಾಗ ಇದಕ್ಕೂ ನೋಟಿಸ್‌ ಕೊಟ್ಟಿದ್ದಾರೆ’ ಎಂದು ಸಿಐಟಿಯುನ ಕಾರ್ಮಿಕ
ಮುಖಂಡ ಯೋಗೀಶ್‌ ಗೌಡ ಮಾಹಿತಿ ನೀಡಿದರು.

‘ನಿರ್ದಿಷ್ಟ ಮಾರ್ಗದ ವಾಹನಗಳ ಎಲ್ಲ ಪಾಳಿಯ ಚಾಲಕರಿಗೆ ನೋಟಿಸ್ ನೀಡಲಾಗಿದೆ. ಹಾಗಿದ್ದರೆ ಒಂದೇ ವಾಹನದಲ್ಲಿ ಎಲ್ಲ ಚಾಲಕರೂ ತಪ್ಪು ಮಾಡಲು ಸಾಧ್ಯವೇ? ಇಲ್ಲಿ ವಾಹನಗಳಲ್ಲೇ ದೋಷವಿದೆ. ಮೈಲೇಜ್‌ ಸಮಸ್ಯೆ ಕುರಿತು ಕಂಪನಿಗಳಿಗೆ ದೂರು ನೀಡಿದಾಗ ಅವರು ಚಾಲಕರ ಮೇಲೆ ತಪ್ಪು ಹೊರಿಸಿರುವ ಸಾಧ್ಯತೆಯಿದೆ’ ಎಂದು ಅವರು ಶಂಕೆ ವ್ಯಕ್ತಪಡಿಸಿದರು.

***

ತಾಂತ್ರಿಕ ದಾಖಲೆಗಳ ಆಧಾರದಲ್ಲಿ ನೋಟಿಸ್‌ ಕೊಡಲಾಗಿದೆ. ಚಾಲಕರು ನಮಗೆ ವಿವರಣೆ ಕೊಡಲಿ. ಆಮೇಲೆ ಏನು ಮಾಡಬೇಕೋ ನೋಡೋಣ.

-ಎನ್‌.ವಿ.ಪ್ರಸಾದ್‌, ವ್ಯವಸ್ಥಾಪಕ ನಿರ್ದೇಶಕ ಬಿಎಂಟಿಸಿ

ನಿಗಮದ 6 ಸಾವಿರ ಬಸ್‌ಗಳ ಪೈಕಿ ಈ 18 ಬಸ್‌ಗಳ ಚಾಲಕರಷ್ಟೇ ಬ್ರೇಕ್‌ ಹಾಕಿದ್ದೇ? ಉಳಿದ ಚಾಲಕರು ದಿಢೀರ್‌ ಬ್ರೇಕ್‌ ಹಾಕುವುದೇ ಇಲ್ಲವೇ? ಆ ವಾಹನಗಳು ಅಷ್ಟು ದಕ್ಷವೇ?

– ಯೋಗೀಶ್‌ ಗೌಡ, ಕಾರ್ಮಿಕ ಮುಖಂಡ

ಬರಹ ಇಷ್ಟವಾಯಿತೆ?

 • 9

  Happy
 • 3

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !