ರ‍್ಯಾಂಕ್‌ ಬಂದಷ್ಟೇ ಖುಷಿ ತಂದಿದೆ ದಸರಾ ಆಹ್ವಾನ: ಸುಧಾಮೂರ್ತಿ

7
ಮಾಧ್ಯಮ ಸಂವಾದದಲ್ಲಿ ಮನದಾಳದ ಮಾತು

ರ‍್ಯಾಂಕ್‌ ಬಂದಷ್ಟೇ ಖುಷಿ ತಂದಿದೆ ದಸರಾ ಆಹ್ವಾನ: ಸುಧಾಮೂರ್ತಿ

Published:
Updated:

ಬೆಂಗಳೂರು: ‘ದಸರಾ ಹಬ್ಬದ ಉದ್ಘಾಟನೆಗೆ ಆಹ್ವಾನ ನೀಡಿರುವುದು ಆಶ್ಚರ್ಯದ ಸಂಗತಿ. ದಿಗ್ಗಜರಿಗೆ ದೊರೆತಿದ್ದ ಅವಕಾಶ ನನಗೆ ಸಿಕ್ಕಿರುವುದು ಆಶ್ಚರ್ಯದ ಜೊತೆಗೆ ಖುಷಿಯೂ ತಂದಿದೆ’ ಎಂದು ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸಂತಸ ವ್ಯಕ್ತಪಡಿಸಿದರು.

ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ‘ಮಾಧ್ಯಮ ಸಂವಾದ ಕಾರ್ಯಕ್ರಮ’ದಲ್ಲಿ ಅವರು ಮಾತಾನಾಡಿದರು.

‘ಬರಗೂರು ರಾಮಚಂದ್ರಪ್ಪ, ಗಿರೀಶ ಕಾರ್ನಾಡ, ಚಂದ್ರಶೇಖರ ಪಾಟೀಲ ಸೇರಿದಂತೆ ಮಹಾನ್ ವ್ಯಕ್ತಿಗಳು ದಸರಾ ಉದ್ಘಾಟಿಸಿದ್ದಾರೆ. ಈ ಆಹ್ವಾನದಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಮೊದಲ ರ‍್ಯಾಂಕ್ ಪಡೆದಷ್ಟು ಸಂತೋಷ ತಂದಿದೆ. ಇದು ದೇವರು ನೀಡಿದ ಭಾಗ್ಯ ಎಂದಷ್ಟೇ ಹೇಳಲಾರೆ‌’ ಎಂದು ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.

'ಮೊದಲಿಗೆ ದಸರಾ ಕಣ್ತುಂಬಿಕೊಂಡಿದ್ದು 1958ರಲ್ಲಿ. ತಂದೆ- ತಾಯಿಯೊಂದಿಗೆ ಹೋಗಿದ್ದೆ. ಆಗ ನನಗಿನ್ನೂ ಚಿಕ್ಕ ವಯಸ್ಸು. ಜಂಬೂ ಸವಾರಿಗೆ ಮಾಡಿದ್ದ ಅಲಂಕಾರ, ಸಂಸ್ಕೃತಿ, ಪೂಜಾ ಕಾರ್ಯಕ್ರಮ, ಅಲ್ಲಿನ ವಾತಾವರಣ ಅದ್ಭುತವಾಗಿತ್ತು.‌ ಆಟಿಕೆಗಳನ್ನು ಕೊಳ್ಳಬೇಕೆಂಬ ಆಸೆಯಿದ್ದರೂ ಸುಮ್ಮನಿರಬೇಕಾಗಿತ್ತು. ಏಕೆಂದರೆ ತಂದೆ ಏನನ್ನೂ ಕೊಡಿಸುತ್ತಿರಲಿಲ್ಲ' ಎಂದು ನಗೆ ಬೀರಿದರು.

‘ಕೃಷ್ಣರಾಜಸಾಗರ, ದೀಪದ ಅಲಂಕಾರ, ಬನ್ನಿಮಂಟಪ ಒಟ್ಟಾರೆ ಮೈಸೂರು ಸುತ್ತಿರುವ ಸನ್ನಿವೇಶಗಳು ಈಗಲೂ ಕಣ್ಣ ಮುಂದಿವೆ. ಅಲ್ಲದೆ ಅಲ್ಲಿನ ಪ್ರವಾಸದ ಕುರಿತು ತಾಯಿ ಪ್ರಬಂಧ ಬರೆಸಿದ್ದರು’ ಎಂದು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.

‘ಬೆಂಗಳೂರಿನಲ್ಲಿ ಸ್ವಚ್ಛತೆ ಹಾಗೂ ವಾಹನ ದಟ್ಟಣೆಗಳು ನಿಯಂತ್ರಿಸಲು ಸರಿಯಾಗಿ ನಿಯಮ ಪಾಲನೆ ಮಾಡಿದರೆ ಸಾಕು. ವಿದೇಶಗಳಲ್ಲಿ ರಸ್ತೆಗಳು ಸ್ವಚ್ಛವಾಗಿರುತ್ತವೆ, ದಟ್ಟಣೆ ಇರುವುದಿಲ್ಲ. ಏಕೆಂದರೆ ಅಲ್ಲಿನ ಜನರು ಅನುಸರಿಸುವ ಕಾನೂನು ನಿಯಮ ಪಾಲನೆಗಳೇ ಕಾರಣ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನನಗೆ ಯಾರು ಆದರ್ಶರಲ್ಲ. ಒಬ್ಬ ವ್ಯಕ್ತಿಯ ಮಾರ್ಗದರ್ಶಕರನ್ನಾಗಿಸಿಕೊಂಡರೆ ಅವರನ್ನು ತೀರ ಹತ್ತಿರದಿಂದ ಕಂಡ ತಕ್ಷಣ ಇಂತಹ ವ್ಯಕ್ತಿಯ ಆದರ್ಶಗಳನ್ನು ನಾನು ಅನುಸರಿಸಿದೆನಾ ಎಂಬುದು ಅನಿಸಬಹುದು. ಆದ್ದರಿಂದ ನಾನು ಇಚ್ಚಿಸುವ ಕೆಲಸವನ್ನೇ ಆದರ್ಶವಾಗಿಟ್ಟುಕೊಂಡೆ’ ಎಂದು ನುಡಿದರು.

‘ಸರ್ಕಾರ ತರುವ ಯೋಜನೆಗಳು ಜನರ ಒಳಿತಿಗಾಗಿ. ಕೆಲವೊಂದು ಯೋಜನೆಗಳು ಅನುಷ್ಠಾನಕ್ಕೂ ಬರುವುದಿಲ್ಲ. ಒಂದು ಕೈಯಲ್ಲಿ ಚಪ್ಪಾಳೆ ಹೊಡೆಯಲು ಸಾಧ್ಯವೇ. ಅದೇ ರೀತಿ ಸರ್ಕಾರವೇ ಎಲ್ಲವೂ ಮಾಡಲು ಸಾಧ್ಯವಾಗುವುದಿಲ್ಲ. ನಾವೂ ಕೈ ಜೋಡಿಸಿದರೆ ಉತ್ತಮ. ರಾಜಕೀಯ ಪ್ರವೇಶಿಸುವ ಆಸಕ್ತಿ ಇಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 17

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !