ಕಬ್ಬಿನ ಸೋಗೆ ಮಾರಾಟ: ಕಾರ್ಮಿಕರಿಗೆ ಕೂಲಿಯ ಜೊತೆಗೆ ಹೆಚ್ಚುವರಿ ವರಮಾನ

ಬುಧವಾರ, ಮೇ 22, 2019
32 °C
ಜಾನುವಾರುಗಳಿಗೆ ಆಹಾರವಾಗುವ ಸೋಗೆ ಜಿಲ್ಲೆಯಲ್ಲಿ ಅಲ್ಲಲ್ಲಿ ಮಾರಾಟ

ಕಬ್ಬಿನ ಸೋಗೆ ಮಾರಾಟ: ಕಾರ್ಮಿಕರಿಗೆ ಕೂಲಿಯ ಜೊತೆಗೆ ಹೆಚ್ಚುವರಿ ವರಮಾನ

Published:
Updated:
Prajavani

ಚಾಮರಾಜನಗರ: ಕಬ್ಬು ತೋಟದ ಬಹುತೇಕ ಮಾಲೀಕರು ಜಮೀನಿನಲ್ಲಿ ವ್ಯರ್ಥವಾಗಿ ಬಿಡುವ ಅಥವಾ ಸುಟ್ಟು ಹಾಕುವ ಕಬ್ಬಿನ ಸೋಗೆ (ಕಬ್ಬು ಕತ್ತರಿಸಿದ ನಂತರ ಉಳಿಯುವ ತುದಿ ಭಾಗ) ಜಾನುವಾರುಗಳಿಗೆ ಆಹಾರವಾಗುತ್ತದೆ. ಅಷ್ಟೇ ಅಲ್ಲ, ಕೂಲಿ ಕಾರ್ಮಿಕರಿಗೆ ಹೆಚ್ಚಿನ ವರಮಾನವನ್ನೂ ತಂದುಕೊಡುತ್ತದೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಕಬ್ಬು ಬೆಳೆಯುವ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಟಾವಿನ ನಂತರ ಅದರ ಸೋಗೆಯ ಸದ್ಬಳಕೆ ಮಾಡುವವರು ತುಂಬಾ ಕಡಿಮೆ. ಈ ಸೋಗೆಯು ಕಬ್ಬು ಕಟಾವು ಮಾಡಿದ ಕೂಲಿ ಕಾರ್ಮಿಕರಿಗೆ ಮತ್ತೊಂದು ಆದಾಯದ ಮೂಲವಾಗುತ್ತಿದೆ. 

ತಾಲ್ಲೂಕಿನ ಹರದನಹಳ್ಳಿ, ಅಮಚವಾಡಿ, ಚಂದಕವಾಡಿ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ಭಾಗಗಳಲ್ಲಿ  ರಸ್ತೆ ಬದಿಗಳಲ್ಲಿ ಕಬ್ಬು ಸೋಗೆ ಕಟ್ಟನ್ನು ಮಾರಾಟ ಮಾಡುವವರು ಕಂಡು ಬರುತ್ತಾರೆ. ಮಾಲೀಕರ ಜಮೀನುಗಳಲ್ಲಿ ಕಬ್ಬು ಕಟಾವು ಮಾಡಿದ ನಂತರ ಅದರ ಸೋಗೆಯ ಮಾರಾಟ ಆರಂಭಿಸುತ್ತಾರೆ.

‘ಜಿಲ್ಲೆಯ ವ್ಯಾಪ್ತಿ ಕಬ್ಬು, ಭತ್ತ, ಮೆಕ್ಕೆ ಜೋಳ ಬೆಳೆಯಲಾಗುತ್ತದೆ. ಅನೇಕರು ಕಬ್ಬಿನ ಕಟಾವು ನಂತರ ಉಳಿಯುವ ಜೋಳದ ಕಡ್ಡಿ, ಕಬ್ಬಿನ ಸೋಗೆಯನ್ನು ಸುಟ್ಟು ಹಾಕುತ್ತಾರೆ. ಇಲ್ಲವೇ ಜಮೀನಿನಲ್ಲಿ ಹಾಗೆಯೇ ಬಿಡುತ್ತಾರೆ. ಕೂಲಿಗೆಂದು ಹೋಗುವ ನಾವು ರೈತರ ಜಮೀನುಗಳಲ್ಲಿ ಸಿಗುವ ಕಬ್ಬಿನ ಸೋಗೆಯನ್ನು ಸಂಗ್ರಹಿಸಿ ಮಾರಾಟಕ್ಕೆ ತರುತ್ತೇವೆ’ ಎಂದು ಸೋಗೆ ವ್ಯಾಪಾರಿ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೂಲಿ ₹200, ವ್ಯಾಪಾರ ₹400: ಕೂಲಿಗೆ ಹೋದರೆ ಅಲ್ಲಿ ₹200 ನೀಡುತ್ತಾರೆ. ಎರಡು ದಿನಗಳಿಗೊಮ್ಮೆ ಸೋಗೆ ತಂದು ಮಾರಾಟ ಮಾಡಿದರೆ ದಿನಕ್ಕೆ ₹ 400ರಿಂದ ₹500ರ ವರೆಗೆ ಸಿಗುತ್ತದೆ. ಸಣ್ಣ ಸೋಗೆ ಕಂತೆ ₹ 5 ರಿಂದ ಆರಂಭವಾಗಿ ದೊಡ್ಡ ತೊಂಡೆ ಇರುವಂತಹ ಸೋಗೆ ಕಂತೆಗೆ ₹ 50ರ ವರೆಗೂ ಬೆಲೆ ಇದೆ. ಒಮ್ಮೊಮ್ಮೆ ₹100ಕ್ಕೆ 3 ಕಂತೆ ಮಾರಾಟ ಮಾಡುತ್ತೇನೆ. ಪ್ರತಿದಿನ ಇಷ್ಟೇ ಮಾರಾಟ ಆಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಒಂದೇ ದಿನದಲ್ಲಿ ಕಂತೆಗಳನ್ನು ಖಾಲಿ ಮಾಡುತ್ತೇನೆ’ ಎಂದು ಅವರು ಹೇಳಿದರು.

ಹೆಚ್ಚು ಕಬ್ಬಿನ ಸೋಗೆ ಇದ್ದರೆ, ಹಲವರು ಸೇರಿ ಒಂದು ಆಟೊ ಮಾಡುತ್ತೇವೆ. ಅದರ ಬಾಡಿಗೆ ₹ 400ರಿಂದ ₹500 ಇರುತ್ತದೆ. ಎಲ್ಲರೂ ಸರಿದೂಗಿಸಿಕೊಂಡು ಸೋಗೆಯನ್ನು ತರುತ್ತೇವೆ. ಅರಕಲವಾಡಿ, ಹೊನ್ನಹಳ್ಳಿ ಹಾಗೂ ಜಿಲ್ಲೆಯ ಸುತ್ತಮುತ್ತಲ ಊರುಗಳಿಂದ ಸೋಗೆ ಖರೀದಿಗೆ ಬರುತ್ತಾರೆ. ನಾವು ಬ್ಯಾಡಮೂಡ್ಲು, ಕೋಡಿಮೋಳೆ, ಅಯ್ಯನಪುರ ಗ್ರಾಮಗಳ ಜಮೀನುಗಳಲ್ಲಿ ಕಬ್ಬಿನ ಕಟಾವು ಕೂಲಿಗೆ ಹೋಗಿ ಸೋಗೆ ಸಂಗ್ರಹಿಸಿಕೊಂಡು ಬರುತ್ತೇವೆ. ಮತ್ತೆ ಕೆಲವರು ಆಟೊದಲ್ಲಿ ಇಲ್ಲಿಗೆ ಮೇವಿನ ಕಡ್ಡಿ ತಂದು ಮಾರಾಟ ಮಾಡುವವರೂ ಇದ್ದಾರೆ’ ಎಂದು ಅವರು ವಿವರಿಸಿದರು.

ಜಮೀನು ಇಲ್ಲದ ರೈತರಿಗೆ ಅನುಕೂಲ: ಬೇಸಿಗೆಯಲ್ಲಿ ಕೊಳವೆಬಾವಿಯಲ್ಲಿ ನೀರಿಲ್ಲದೆ ಮೇವಿನ ಬೆಳೆ ಬೆಳೆಯದವರು ಹಾಗೂ ಜಮೀನು ಇಲ್ಲದೆ ಹಸು ಸಾಕಾಣೆ ಮಾಡುವ ಹೆಚ್ಚಿನ ರೈತರು ಇಲ್ಲಿ ಸೋಗೆ ಖರೀದಿಗೆ ಬರುತ್ತಾರೆ. ದ್ವಿಚಕ್ರ ವಾಹನ, ಆಟೋಗಳಲ್ಲಿ ಸೋಗೆ ಕಂತೆ ಕೊಂಡೊಯ್ಯುತ್ತಾರೆ.

ಎರಡು ದಿನಕ್ಕೆ ಒಮ್ಮೆ ಖರೀದಿ: ‘ನಮ್ಮ ಸುತ್ತಮುತ್ತಲ ಜಮೀನುಗಳಲ್ಲಿನ ಹೆಚ್ಚಿನ ರೈತರು ಕಬ್ಬನ್ನು ಬೆಳೆಯುತ್ತಾರೆ. ಅವರು ಹಸುಗಳನ್ನು ಸಾಕುವುದಿಲ್ಲ. ಅವರ ಜಮೀನುಗಳಲ್ಲಿ ಬದುಗಳಲ್ಲಿನ ಹುಲ್ಲು ಮೇವನ್ನು ಒಮ್ಮೊಮ್ಮೆ ತಂದು ಸಂಗ್ರಹಿಸಿಡುತ್ತೇನೆ. ಇದರೊಂದಿಗೆ ಕಬ್ಬಿನ ಸೋಗೆಯನ್ನು ಎರಡು ದಿನಗಳಿಗೊಮ್ಮೆ ಇಲ್ಲಿಂದಲೇ ಖರೀದಿ ಮಾಡಿ ಸಂಗ್ರಹಿಸಿಡುತ್ತೇನೆ. ಈ ಮೇವು ಎರಡು ದಿನ ಮಾತ್ರ ಹಸಿರಿರುತ್ತದೆ. ಹೆಚ್ಚು ದಿನ ಇಟ್ಟರೆ ಒಣಗುತ್ತದೆ. ಹಸುಗಳು ಮೇಯುವುದಿಲ್ಲ’‍ ಎಂದು ಎಂದು ಬಸವನಪುರ ರೈತ ಮಹೇಶ್‌ ‘ಪ್ರಜಾವಾಣಿ’ಗೆ ಹೇಳಿದರು. 

‘ಬಂಡವಾಳ ಇಲ್ಲದ ವ್ಯಾಪಾರ’

‘ಕೂಲಿ ಮುಗಿಸಿ ಬರುವಾಗ ಕಬ್ಬಿನ ಸೋಗೆ ಕಂತೆ ತರುತ್ತೇವೆ. ಯಾವುದೇ ಬಂಡವಾಳ ಹೂಡಿಕೆ ಇಲ್ಲ. ಜಮೀನು ಮಾಲೀಕರು ಉಚಿತವಾಗಿ ತೆಗೆದುಕೊಂಡು ಹೋಗುವುದಕ್ಕೆ ಬಿಡುತ್ತಾರೆ. ಹೆಚ್ಚು ಸೋಗೆ ಇದ್ದರೆ ಮಾತ್ರ ಆಟೊ ಬಾಡಿಗೆ ನೀಡುತ್ತೇನೆ. ಇಲ್ಲಿ ಬೇಸಿಗೆ, ಮಳೆಗಾಲ ಎಂಬ ಸೀಸನ್‌ ಇಲ್ಲ. ಪ್ರತಿದಿನ ವರ್ಷಪೂರ್ತಿ ಬೆಳಗ್ಗೆ ಸಂಜೆ ಕಬ್ಬಿನ ಸೋಗೆ, ಒಣಗಿದ ಜೋಳದ ದಂಡು, ಒಣಗಿದ ಮುಸುಕಿನ ಜೋಳದ ಮೇವು, ಭತ್ತದ ಒಣ ಹುಲ್ಲು, ರಾಗಿಯ ಒಣ ಹುಲ್ಲನ್ನು ಮಾರಾಟ ಮಾಡಲಾಗುತ್ತದೆ. ಬೇಸಿಗೆ ಸಮಯದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ರಾಶಿ ಸೋಗೆ ಮಾರಾಟ ಕಂಡುಬರುತ್ತದೆ. ಆದರೆ, ಈಗ ಎಳೆ ಕಬ್ಬಿನ ಸೋಗೆ ಮಾರಾಟವೇ ಹೆಚ್ಚು. ರೈತರು ದ್ವಿಚಕ್ರ ವಾಹನದಲ್ಲಿ ಬಂದು ಖರೀದಿಸುತ್ತಾರೆ’ ಎಂದು ವ್ಯಾಪಾರಿ ಕುಮಾರ್‌ ‘ಪ್ರಜಾವಾಣಿ’ಗೆ ಹೇಳಿದರು.

ಬಾಳೆ ಹೆಚ್ಚು, ಕಬ್ಬು ಕಡಿಮೆ: ‘ಇಂದು ಕಬ್ಬು ಬೆಳೆಯುವವರು ಕಡಿಮೆಯಾಗಿದ್ದಾರೆ. ಅನೇಕ ರೈತರು ಬಾಳೆ ಬೆಳೆಯಲು ಮುಂದಾಗಿದ್ದಾರೆ. ಇದರಿಂದ ಈ ವರ್ಷದ ಕಬ್ಬಿನ ಸೋಗೆ ಸಂಗ್ರಹಕ್ಕೆ ಹೆಚ್ಚಿನ ಪರಿಶ್ರಮ ವಹಿಸುತ್ತಿದ್ದೇನೆ. ಮುಂಜಾನೆ ಕೂಲಿಗೆ ಹೋಗಿಬಂದ ನಂತರ ಎಳೆ ಕಬ್ಬಿನ ಸೋಗೆ ವ್ಯಾಪಾರ ಮಾಡುತ್ತೇನೆ’ ಎನ್ನುತ್ತಾರೆ ಅವರು.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !