ಬುಧವಾರ, ಏಪ್ರಿಲ್ 21, 2021
23 °C
ಲಾಲ್‌ಬಾಗ್‌ನಲ್ಲಿ ಸಂಭ್ರಮ

‘ಸುಗ್ಗಿ–ಹುಗ್ಗಿ’ ಸಡಗರ: ಎತ್ತಿನ ಬಂಡಿ ಏರಿದರು, ಸಜ್ಜಿಗೆ ಉಂಡಿ ತಿಂದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರಳಲ್ಲಿ ಝಣಝಣ ಗೆಜ್ಜೆ, ಕೊಂಬುಗಳಿಗೆ ಬಣ್ಣ ಬಣ್ಣದ ರಿಬ್ಬನ್, ಮೈಮೇಲೆ ಕಸೂತಿಮಯ ಹೊದಿಕೆ ಹೊದ್ದಿದ್ದ ಎತ್ತುಗಳು ತರಹೇವಾರಿ ಹೂ, ಅಲಂಕಾರದಿಂದ ಸಿಂಗಾರಗೊಂಡಿದ್ದ ಬಂಡಿಗೆ ಕೊರಳೊಡ್ಡಿ‌ದ್ದವು.

ಎತ್ತಿನ ಬಂಡಿ ಕಂಡೊಡನೆಯೇ ಹಿರಿಯರು–ಕಿರಿಯರು ಎನ್ನದೆ ಎಲ್ಲರೂ ಏರಿಯೇ ಬಿಟ್ಟರು. ಕಲಬುರ್ಗಿಯ ರೈತ ನಾಗಪ್ಪ ಅವರು ನೀಡುತ್ತಿದ್ದ ಸಜ್ಜಿಗೆ ಉಂಡೆ ತಿನ್ನುತ್ತಲೇ, ‘ವ್ಹಾ..... ಏನ್ ರುಚಿ!’ ಎಂದು ಉದ್ಗರಿಸಿದರು. ಹಲೇ....ಹಲೇ... ಎನ್ನುತ್ತ ಮಕ್ಕಳು ಕುಣಿದಾಡಿದರು. ಸೆಲ್ಫಿಗೆ ಫೋಸ್‌ ಕೊಟ್ಟರು.

ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ, ಬಿಬಿಎಂಪಿ ಸಹಯೋಗದಲ್ಲಿ ಲಾಲ್‌ಬಾಗ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸುಗ್ಗಿ- ಹುಗ್ಗಿ ಕಾರ್ಯಕ್ರಮದಲ್ಲಿ ಕಂಡುಬಂದ ಸಂಭ್ರಮದ ಪರಿ ಇದು. ಇಲ್ಲಿ ಗ್ರಾಮೀಣ ಲೋಕವೇ ಅನಾವರಣಗೊಂಡಿತ್ತು.

ಗ್ರಾಮೀಣ ಸೊಗಡಿನ ಸಂಕ್ರಾಂತಿಯ ಸಂಭ್ರಮ ಆಚರಿಸಲು ಬೆಳಿಗ್ಗೆಯಿಂದಲೇ ಜನ ಕುಟುಂಬ ಸಮೇತರಾಗಿ ಬಂದಿದ್ದರು. ಎಳ್ಳು–ಬೆಲ್ಲ ಹಂಚುವುದೇ ಸಂಕ್ರಾಂತಿ ಹಬ್ಬವೆಂದು ಭಾವಿಸಿದ್ದ ನಗರದ ಬಹುತೇಕ ಜನರಿಗೆ ಸಂಕ್ರಾಂತಿ ಆಚರಣೆಯ ವಿಧಿವಿಧಾನಗಳೇನು, ಏಕೆ ಈ ಹಬ್ಬ ಆಚರಿಸುತ್ತಾರೆ ಎಂಬ ಸಮಗ್ರ ಮಾಹಿತಿ ತಿಳಿಯಲು ಸುಗ್ಗಿ–ಹುಗ್ಗಿ ವೇದಿಕೆಯಾಯಿತು. ದಿನವಿಡೀ ನಡೆದ ಈ ಹಬ್ಬದಲ್ಲಿ ಜನ ಉತ್ಸಾಹದಿಂದ ಪಾಲ್ಗೊಂಡರು.

ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣದೆಡೆಗೆ ಪಥ ಬದಲಿಸುವುದೇ ಸಂಕ್ರಾಂತಿ. ರಾಜ್ಯದಾದ್ಯಂತ ಒಂದೊಂದು ಪ್ರದೇಶದಲ್ಲಿ ಒಂದು ರೀತಿಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಮಲೆನಾಡು, ಬಯಲುಸೀಮೆ, ಮೈಸೂರು, ಮಧ್ಯಕರ್ನಾಟಕ, ಕರಾವಳಿ ಹಾಗೂ ಮುಂಬೈ ಕರ್ನಾಟಕಗಳಲ್ಲಿ ಈ ಹಬ್ಬ ಆಚರಿಸುವ ಉದ್ದೇಶ ಒಂದೇ ಆಗಿದ್ದರೂ ಅಡುಗೆ, ಆಚರಣೆ ವಿಭಿನ್ನವಾಗಿರುತ್ತದೆ. ಈ ವೈವಿಧ್ಯಗಳನ್ನು ಈ ಕಾರ್ಯಕ್ರಮ ಪರಿಚಯಿಸಿತು. 

ರಾಜ್ಯದ ವಿವಿಧ ಪ್ರಾಂತ್ಯಗಳಲ್ಲಿ ಸಂಕ್ರಾಂತಿ ಆಚರಣೆಯ ಪರಿಚಯ ಹಾಗೂ ಅರಿವು ಮೂಡಿಸಲು ಸಾವಯವ ಫೆಡರೇಷನ್‌ ವತಿಯಿಂದ 8 ಮಳಿಗೆಯನ್ನು ತೆರೆಯಲಾಗಿತ್ತು. ಅವುಗಳಲ್ಲಿ ಸಾರ್ವಜನಿಕರಿಗೆ  ಆಯಾ ಪ್ರಾಂತ್ಯದ ಪ್ರಸಿದ್ಧ ತಿಂಡಿಗಳನ್ನು ಉಚಿತವಾಗಿ ಹಂಚಲಾಯಿತು. ಮರದ ನೇಗಿಲು, ಮರದ ಕುಂಟೆ, ಬಾಯಿ ಕುಕ್ಕೆ, ಕೂರಿಗೆ ಬಟ್ಟಲು... ಹೀಗೆ ಕೃಷಿ ಪರಿಕರಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.

ಹಬ್ಬದ ಖಾದ್ಯಗಳಾದ ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಎಳ್ಳುಂಡೆ, ಗುರೆಳ್ಳು, ಅಗಸಿ ಚಟ್ಟಿ ಪುಡಿ, ನವಣೆ ರೊಟ್ಟಿ, ಗೋವಿನ ಜೋಳದ ರೊಟ್ಟಿಗಳ ವಿಶೇಷತೆಯನ್ನು ಹೈದರಾಬಾದ್‌ ಕರ್ನಾಟಕ ಪ್ರಾಂತ್ಯದ ಮಳಿಗೆಯವರು ತಿಳಿಸಿದರು. ಇವುಗಳ ಖರೀದಿ ಭರಾಟೆಯೂ ಜೋರಾಗಿಯೇ ಇತ್ತು. 

ವೀರಗಾಸೆ, ಡೊಳ್ಳುಕುಣಿತ ಸೇರಿದಂತೆ ನಾಡಿನ ವಿವಿಧ ಜಾನಪದ ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸುತ್ತಿದ್ದಂತೆ ನೆರೆದವರು ಖುಷಿಯಿಂದ ಶಿಳ್ಳೆ ಹೊಡೆಯುತ್ತ ಹುರಿದುಂಬಿಸಿದರು. ಈ ಕಲಾ ಪ್ರದರ್ಶನಗಳು ಹಬ್ಬದ ಮೆರುಗು ಹೆಚ್ಚಿಸಿದವು.

ಕೆಎಂಎಫ್‌ ಸಂಸ್ಥೆಯಲ್ಲಿಯೂ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

‘ವಿದೇಶಿ ಧಾನ್ಯಗಳಿಂದ ಕಾಯಿಲೆ’

‘ಭತ್ತ, ಗೋಧಿಯಂತಹ ಧಾನ್ಯಗಳ ಸೇವನೆಯಿಂದ ಇಂದು ಸಕ್ಕರೆ, ರಕ್ತದೊತ್ತಡದಂತಹ ಕಾಯಿಲೆಗಳು ಬರುತ್ತಿವೆ’ ಎಂದು ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಕಳವಳ ವ್ಯಕ್ತಪಡಿಸಿದರು.

‘ಸಿರಿಧಾನ್ಯಗಳ ಬಳಕೆ‌ಯಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ರೈತಾಪಿ ವರ್ಗಕ್ಕೂ ನೆರವಾಗಬೇಕು. ಸಿರಿಧಾನ್ಯ, ಸಾವಯವ‌ ಕೃಷಿಗೆ ರಾಜ್ಯ ಸರ್ಕಾರ‌ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ’ ಎಂದರು.

ನಗರದೆಲ್ಲೆಡೆ ಸಂಕ್ರಾಂತಿ ಸಂಭ್ರಮ

ಸುಗ್ಗಿ ಕಾಲದ ಹಬ್ಬವಾದ ಸಂಕ್ರಾಂತಿಯನ್ನು ನಗರದ ಜನತೆ ಸಡಗರದಿಂದ ಆಚರಿಸಿದರು. ಬೆಳಿಗ್ಗೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿದವು.

ಮನೆ ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿಗಳು ರಾರಾಜಿಸಿದವು. ಬಾಗಿಲುಗಳಿಗೆ ತೋರಣ, ಹೂವಿನ ಅಲಂಕಾರ ಮಾಡಲಾಗಿತ್ತು. ಮಹಿಳೆಯರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಸಂಜೆ ಹೊತ್ತಿಗೆ ಹಿರಿ–ಕಿರಿಯರೆಲ್ಲರೂ ಸೇರಿ ಪರಸ್ಪರ ಎಳ್ಳು-ಬೆಲ್ಲ ಹಂಚಿಕೊಂಡು ಶುಭ ಕೋರಿದರು. ಮತ್ತೊಂದೆಡೆ ಗೋವುಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮಗಳು ನಡೆದವು. 

ಈ ಸಲುವಾಗಿ ದನ-ಕರುಗಳ ಕೊಂಬುಗಳಿಗೆ ಬಲೂನ್‌, ಮಿನುಗುವ ಬಣ್ಣದ ಪೇಪರ್ ಕಟ್ಟಿ ಸಿಂಗಾರ ಮಾಡಿದ್ದರು. ಇಂತಹ ವೈವಿಧ್ಯಮಯ ಆಚರಣೆಗಳಿಂದಾಗಿ ನಗರದಲ್ಲೂ ಹಬ್ಬದ ಸಡಗರ ಕಂಡುಬಂತು.

**

ನಗರದವರಿಗೆ ಗ್ರಾಮೀಣ ಸೊಬಗು ಪರಿಚಯಿಸಲು ಪ್ರತಿ ವರ್ಷ ಸುಗ್ಗಿ ಹುಗ್ಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ.

– ರಮೇಶ್‌, ಸಾವಯವ ಕೃಷಿಕ

ಹಳ್ಳಿಯ ಬದುಕು ಇಲ್ಲಿಯ ಮಂದಿಗೇನೂ ಗೊತ್ತಿಲ್ಲ. ಪ್ರತಿ ವರ್ಷ ನಮ್ಮ ನೆಲದ ಸಂಪ್ರದಾಯ ತಿಳಿಸಬೇಕು. ರೈತನ ಜೀವನ ಪರಿಚಯಿಸಲು ಇಲ್ಲಿಗೆ ಬರ್ತೀವಿ.

– ನಾಗಪ್ಪ, ಕಲಬುರ್ಗಿ ರೈತ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು