ಮಂಗಳವಾರ, ನವೆಂಬರ್ 12, 2019
26 °C

ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಯತ್ನ

Published:
Updated:

ಚಾಮರಾಜನಗರ: ಗಂಡನ ವರ್ತನೆಗೆ ಬೇಸತ್ತು ನಗರದ ಅಂಬೇಡ್ಕರ್‌ ಬಡಾವಣೆಯ ಮಹಿಳೆಯೊಬ್ಬರು ಶನಿವಾರ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ನಂತರ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬಡಾವಣೆಯ ನಿವಾಸಿ ಗೋವಿಂದರಾಜು ಎಂಬುವವರ ಪತ್ನಿ ಗೀತಾ (31) ಹಾಗೂ ಮಕ್ಕಳಾದ ರವಿತೇಜ (3) ಮತ್ತು ಶ್ರೀರಂಗ (2) ವಿಷ ಸೇವಿಸಿದ್ದರಿಂದ  ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಗೋವಿಂದರಾಜು ಅವರು ಪತ್ನಿ ಗೀತಾ ಹಾಗೂ ಮಕ್ಕಳ ಜೊತೆ ಊಟಿಯ ಕಾಫಿ ಎಸ್ಟೇಟ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ನಂತರ ಗೀತಾ ಅವರು ಇಬ್ಬರು ಮಕ್ಕಳೊಂದಿಗೆ ನಗರಕ್ಕೆ ವಾಪಸ್‌ ಆಗಿದ್ದರು. 

ಕುಟುಂಬದ ನಿರ್ವಹಣೆಗಾಗಿ ಗೋವಿಂದರಾಜು ಅವರು ಹಣ ಕಳುಹಿಸುತ್ತಿರಲಿಲ್ಲ ಎನ್ನಲಾಗಿದೆ. ಹಾಗಾಗಿ, ಮಕ್ಕಳೊಂದಿಗೆ  ವಾಪಸ್‌ ಊಟಿಗೆ ಬರುವುದಾಗಿ ಗೀತಾ ತಿಳಿಸಿದ್ದರು. ಇದಕ್ಕೆ ಗೋವಿಂದರಾಜು ಒಪ್ಪಿರಲಿಲ್ಲ ಎಂದು ಗೊತ್ತಾಗಿದೆ. ಹಲವು ಸಮಯದಿಂದ ಇಬ್ಬರ ನಡುವೆ ಈ ವಿಷಯದಲ್ಲಿ ಜಗಳ ಆಗುತ್ತಿತ್ತು. ಇದರಿಂದ ಬೇಸತ್ತು ಗೀತಾ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದರು ಎನ್ನಲಾಗಿದೆ. 

ಶನಿವಾರ ವಿಷಕುಡಿದು ಅಸ್ವಸ್ಥರಾಗಿದ್ದ ಮೂವರನ್ನೂ ನೆರೆಮನೆಯವರು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಮಕ್ಕಳಿಬ್ಬರನ್ನು ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಗೀತಾ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮಹಿಳಾ ಠಾಣೆಯ ಎಎಸ್‌ಐ ರಾಧಾ ಮತ್ತು ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಮಹಿಳೆಯ ಹೇಳಿಕೆ ಪಡೆದಿದ್ದಾರೆ.

ಗೋವಿಂದರಾಜು ಅವರು ನೀಡುತ್ತಿದ್ದ ಮಾನಸಿಕ ಹಿಂಸೆಗೆ ಬೇಸತ್ತು ಈ ರೀತಿ ಮಾಡಿದ್ದಾಗಿ ಗೀತಾ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)