ನ್ಯಾಯಾಂಗ ಬಂಧನ ಜನವರಿ 29ರವರೆಗೆ ವಿಸ್ತರಣೆ

7
ವಿಡಿಯೊ ಕಾನ್ಫರೆನ್ಸ್‌ ಮೂಲಕ ಆರೋಪಿಗಳನ್ನು ಹಾಜರು ಪಡಿಸಿದ ಪೊಲೀಸರು

ನ್ಯಾಯಾಂಗ ಬಂಧನ ಜನವರಿ 29ರವರೆಗೆ ವಿಸ್ತರಣೆ

Published:
Updated:

ಚಾಮರಾಜನಗರ: ಹನೂರು ತಾಲ್ಲೂಕು ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷ ಪ್ರಸಾದ ಪ್ರಕರಣದ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ಜನವರಿ 29ರವರೆಗೆ ವಿಸ್ತರಿಸಲಾಗಿದೆ.

ಆರೋಪಿಗಳಾದ ಇಮ್ಮಡಿ ಮಹಾದೇವಸ್ವಾಮಿ, ಅಂಬಿಕಾ, ಡೊಡ್ಡಯ್ಯ ಮತ್ತು ಮಾದೇಶ ಅವರ ನ್ಯಾಯಾಂಗ ಬಂಧನದ ಅವಧಿ ಬುಧವಾರಕ್ಕೆ ಮುಕ್ತಾಯವಾಗಿತ್ತು. ಹಾಗಾಗಿ, ಪೊಲೀಸರು ಅವರನ್ನು ಮೈಸೂರು ಕಾರಾಗೃಹದಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ. ಬಸವರಾಜ ಅವರ ಮುಂದೆ ಹಾಜರು ಪಡಿಸಿದರು.

ಬಾರದ ವಕೀಲರು: ಆರೋಪಿಗಳ ಪರ ವಕಾಲತ್ತು ವಹಿಸಲು ಯಾವ ವಕೀಲರೂ ಬಂದಿರಲಿಲ್ಲ. 

‘ನಿಮ್ಮ ಪರವಾಗಿ ವಾದ ಮಂಡಿಸಲು ನೀವು ವಕೀಲರನ್ನು ನೇಮಕ ಮಾಡಿದ್ದೀರಾ? ಅಥವಾ ನ್ಯಾಯಾಲಯವೇ ನೇಮಕ ಮಾಡಬೇಕಾ’ ಎಂದು ನ್ಯಾಯಾಧೀಶರು ಆರೋಪಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಮ್ಮಡಿ ಮಹಾದೇವಸ್ವಾಮಿ, ‘ನಾನು ವಕೀಲರೊಬ್ಬರನ್ನು ಕಳಿಸಿದ್ದೇನೆ’ ಎಂದು ಹೇಳಿದರು. 

‘ವಕೀಲರ ಹೆಸರೇನು? ಯಾವ ಊರಿನವರು’ ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ, ‘ಸಿದ್ಧಾರ್ಥ ಎಂಬ ಮಡಿಕೇರಿ ವಕೀಲರನ್ನು ಕಳುಹಿಸಿದ್ದೇನೆ’ ಎಂದು ಮಹಾದೇವಸ್ವಾಮಿ ಉತ್ತರಿಸಿದರು.

10 ದಿನ ಅವಕಾಶ ಕೊಡಿ: ‘ವಕೀಲರನ್ನು ನೇಮಕ ಮಾಡಿಕೊಳ್ಳುತ್ತೀರಾ’ ಎಂದು ಉಳಿದ ಮೂವರು ಆರೋಪಿಗಳನ್ನು ಜಿ. ಬಸವರಾಜ ಅವರು ಕೇಳಿದರು.

‘ಮಾಡಿಕೊಳ್ಳುತ್ತೇವೆ. 10 ದಿನಗಳ ಅವಕಾಶ ಕೊಡಿ’ ಎಂದು ಮೂವರು ಹೇಳಿದರು.

ನಂತರ, ನ್ಯಾಯಾಧೀಶರು ಇದೇ 29ರಂದು ಮತ್ತೆ ಆರೋಪಿಗಳನ್ನು ಹಾಜರುಪಡಿಸುವಂತೆ ಸೂಚಿಸಿದರು.

ಕರೆದುಕೊಂಡು ಬಾರದ ಪೊಲೀಸರು: ಸೂಕ್ಷ್ಮ ಪ್ರಕರಣವಾಗಿರುವುದರಿಂದ ಭದ್ರತೆಯ ಕಾರಣಕ್ಕಾಗಿ ಮೈಸೂರು ಕೇಂದ್ರ ಕಾರಾಗೃಹದಲ್ಲಿರುವ  ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆದುಕೊಂಡು ಬಾರದೆ, ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರು ಪಡಿಸಿದರು.

ಚಾಮರಾಜನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಆರೋಪಿಗಳನ್ನು ವಿಚಾರಣೆಗಾಗಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು ಇದೇ ಮೊದಲು.

ಎರಡು ದಿನಗಳ ಹಿಂದೆ ಬಂದಿದ್ದ ವಕೀಲರು

ವಕೀಲರೊಬ್ಬರು ಎರಡು ದಿನಗಳ ಹಿಂದೆ ನ್ಯಾಯಾಲಯಕ್ಕೆ ಬಂದು ಪ್ರಕರಣದ ಬಗ್ಗೆ ಮಾಹಿತಿ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ವಕೀಲರೊಬ್ಬರು ಬಂದಿದ್ದರಂತೆ. ನಾನು ಆ ದಿನ ಇರಲಿಲ್ಲ. ಅವರೊಂದಿಗೆ ಮುಖಾಮುಖಿ ಭೇಟಿ ನಡೆದಿಲ್ಲ’ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಲೋಲಾಕ್ಷಿ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !