ಶುಕ್ರವಾರ, ಮಾರ್ಚ್ 5, 2021
30 °C
57 ದಿನಗಳ ಸುದೀರ್ಘ ಚಿಕಿತ್ಸೆ ಬಳಿಕ ಚೇತರಿಸಿದ ಒಂದೂವರೆ ವರ್ಷದ ಬಾಲಕ

ಮೃತ್ಯುಂಜಯನಾಗಿ ಮರಳಿದ ಮೋಹನಲಾಲ್‌

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ‘ಪವಿತ್ರವೆಂದು ಸೇವಿಸಿದ ಪ್ರಸಾದ ನನ್ನ ಗಂಡನ ಪ್ರಾಣವನ್ನೇ ಬಲಿ ತೆಗೆದುಕೊಂಡಿತು. ಕುಟುಂಬಕ್ಕೆ ಆಧಾರವಾಗಿದ್ದ ಗಂಡನನ್ನು ಕಳೆದುಕೊಂಡಿದ್ದೇನೆ. ಆದರೆ, ಆ ಭಗವಂತ ಮತ್ತೆ ಮೊಮ್ಮಗನನ್ನು ಗಂಡನ ರೂಪದಲ್ಲಿ ಬದುಕಿಸಿ ಕಳುಹಿಸಿದ್ದಾನೆ. ಅವನಿಗಾಗಿಯಾದರೂ ನಾನು ಬದುಕಬೇಕಿದೆ’ ಎಂದು ಹೇಳುವಾಗ ಮಲ್ಲಿಗಾ ಅವರಲ್ಲಿ ದುಃಖ ಉಮ್ಮಳಿಸಿ ಬರುತ್ತಿತ್ತು.

ತಾಲ್ಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮನ ದೇವಸ್ಥಾನದಲ್ಲಿ ಕಳೆದ ವರ್ಷದ ಡಿಸೆಂಬರ್‌ 14ರಂದು ಪ್ರಸಾದ ಸೇವಿಸಿ ಮೃತಪಟ್ಟವರ 17 ಜನರ ಪೈಕಿ ಎಂ.ಜಿ. ದೊಡ್ಡಿ ಗ್ರಾಮದ ಮಲ್ಲಿಗಾ ಪತಿ ಪಾಪಣ್ಣ ಅವರು ಒಬ್ಬರು.

ಪ್ರಸಾದ ಸೇವಿಸಿ ಮನೆಯ ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಪಾಪಣ್ಣ ಅವರು ಅದೇ ದಿನ ಕೊಳ್ಳೇಗಾಲದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪಾಪಣ್ಣ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಅವರ ಪತ್ನಿ ಮಲ್ಲಿಗಾ, ಸೊಸೆ ಸಂಗೀತಾ ಮತ್ತು ಮೊಮ್ಮಗ ಮೋಹನಲಾಲ್‌ ಅವರು ಮೈಸೂರಿನ ಆಸ್ಪತ್ರೆಗಳಿಗೆ ದಾಖಲಾಗಿದ್ದರು.

ಮೈಸೂರಿನ ಕೆ.ಆರ್‌. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಗೀತಾ ಹಾಗೂ ಮಲ್ಲಿಗಾ ಮನೆಗೆ ಬಂದಿದ್ದರು. ಒಂದೂವರೆ ವರ್ಷದ ಮೋಹನಲಾಲ್‌ ನಾರಾಯಣ ಹೃದಯಾಲಯದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಾ ಸುದೀರ್ಘ 57 ದಿನಗಳ ಕಾಲ ಚಿಕಿತ್ಸೆ ಪಡೆದು ಮೃತ್ಯುಂಜಯನಾಗಿ ಬಂದಿರುವುದು ದುರ್ಃತಪ್ತ ಕುಟುಂಬಕ್ಕೆ ತುಸು ನೆಮ್ಮದಿ ತಂದಿದೆ.

ಎಂ.ಜಿ ದೊಡ್ಡಿ ಗ್ರಾಮದ 25ಕ್ಕೂ ಹೆಚ್ಚು ಜನರು ಅಂದು ದೇವಸ್ಥಾನಕ್ಕೆ ತೆರಳಿ ಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದರು. ಇವರಲ್ಲಿ ಪಾಪಣ್ಣ ಹಾಗೂ ಮಗೇಶ್ವರಿ ಎಂಬುವವರು ಮೃತಪಟ್ಟು ಉಳಿದ ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮನೆಗಳಿಗೆ ವಾಪಸಾಗಿದ್ದಾರೆ. ಆದರೆ, ಪ್ರಸಾದ ಸೇವಿಸಿ ಸಾವಿನ ದವಡೆಯಿಂದ ಪಾರಾಗಿ ಬಂದಿರುವ ಮೋಹನಲಾಲ್‌, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿರುವ ಕೊನೆಯ ವ್ಯಕ್ತಿ. ಈಗ ಅವನನ್ನು ನೋಡಲು ಇಡೀ ಗ್ರಾಮದ ಜನರೇ ಮನೆಯತ್ತ ಬರುತ್ತಿದ್ದಾರೆ.

 ‘ಅಂದು ನಾನು ಮತ್ತು ಪತಿ ದೇವಸ್ಥಾನಕ್ಕೆ ಹೋಗಿದ್ದೆವು. ಅಲ್ಲೆ ಪ್ರಸಾದ ಸೇವಿಸಿ ಮನೆಗೂ ತಂದು ಮೊಮ್ಮಗ, ಸೊಸೆಗೂ ತಿನ್ನಿಸಿದೆ. ಅಷ್ಟರಲ್ಲಿ ಪತಿ ವಾಂತಿ ಮಾಡಿಕೊಳ್ಳಲು ಶುರು ಮಾಡಿದರು. ಅವರನ್ನು ಆಟೊದಲ್ಲಿ ಕರೆದುಕೊಂಡು ಹೋಗುತ್ತಿದ್ದಂತೆ ನನಗೂ ಪ್ರಜ್ಞೆ ತಪ್ಪಿತ್ತು. ಮರಳಿ ಪ್ರಜ್ಞೆ ಬಂದಾಗ ನಾನು ಕೆ.ಆರ್‌. ಆಸ್ಪತ್ರೆಯಲ್ಲಿದ್ದೆ. ಪಕ್ಕದಲ್ಲಿದ್ದವರು ನಿನ್ನ ಸೊಸೆ ಹಾಗೂ ಮೊಮ್ಮಗನು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನ ಪತಿ ಮೃತಪಟ್ಟಿದ್ದಾರೆ ಎಂದು ಹೇಳಿದಾಗ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಾಂಗಾಯಿತು’ ಎಂದು ಮಲ್ಲಿಗಾ ಅವರು ಘಟನೆಯನ್ನು ‘ಪ್ರಜಾವಾಣಿ’ ಮುಂದೆ ಬಿಚ್ಚಿಟ್ಟರು.

ಗಲ್ಲು ಶಿಕ್ಷೆ ವಿಧಿಸಬೇಕು: ‘ಪ್ರಸಾದ ತಿಂದು ನನ್ನ ಗಂಡ ಮೃತಪಟ್ಟಿದ್ದಾರೆ. ಇದಕ್ಕೆ ಸರ್ಕಾರ ಪರಿಹಾರ ರೂಪದಲ್ಲಿ ಹಣ ನೀಡಿದೆ. ಆದರೆ, ಆ ಹಣ ನನ್ನ ಗಂಡನ ಸ್ಥಾನ ತುಂಬಲು ಸಾಧ್ಯವೇ’ ಎಂಬುದು ಮಲ್ಲಿಗಾ ಅವರ ಪ್ರಶ್ನೆ.

‘ಪ್ರಸಾದಕ್ಕೆ ವಿಷ ಹಾಕಿದವರನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಯತ್ನಿಸುತ್ತಿದ್ದಾರಂತೆ. ಸರ್ಕಾರ ಅವರನ್ನು ಸುಮ್ಮನೆ ಬಿಡಬಾರದು. ಅಮಾಯಕರನ್ನು ಬಲಿ ತೆಗೆದುಕೊಂಡ ಅವರಿಗೆ ಗಲ್ಲು ಶಿಕ್ಷೆ ವಿಧಿಸಿಬೇಕು’ ಎಂದು ಅವರು  ಆಕ್ರೋಶ ವ್ಯಕ್ತಪಡಿಸಿದರು.

ನಂಬಿಕೆಯೇ ವಿಷವಾಯಿತು

ಆ ಗ್ರಾಮದ ಜನರು ಇನ್ನೂ ಆಘಾತದಿಂದ ಹೊರ ಬಂದಿಲ್ಲ. ನಂಬಿಕೆಯೇ ವಿಷವಾಯಿತು ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಈಗ ಮೊದಲಿನಷ್ಟು ಲವಲವಿಕೆಯಿಂದ ಇರಲು ಆಗುತ್ತಿಲ್ಲ. ಬಿಸಿಲಿಗೆ ಹೋದರೆ ಕಣ್ಣು ಮಂಜಾಗುತ್ತದೆ. ಕೂಲಿ ಕೆಲಸಕ್ಕೂ ಹೋಗುತ್ತಿಲ್ಲ. ದೇವಸ್ಥಾನಕ್ಕೆ ಹೋದರೆ ಪ್ರಸಾದ ಸೇವಿಸಿ ಬರುವುದು ನಮ್ಮ ನಂಬಿಕೆ. ಆದರೆ, ಆ ನಂಬಿಕೆಯೇ ವಿಷವಾಗಿ ಪರಿಣಮಿಸಿ ಇಷ್ಟು ಜನರ ಸಾವಿಗೆ ಕಾರಣವಾಗುತ್ತದೆ ಎಂದು ಭಾವಿಸಿರಲ್ಲಿಲ್ಲ. ಘಟನೆ ಸಂಭವಿಸಿದ ಬಳಿಕ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಲು ಭಯವಾಗುತ್ತಿದೆ’ ಎಂದು ಪ್ರಸಾದ ಸೇವಿಸಿ ಅಸ್ವಸ್ಥಗೊಂಡು ಬದುಕುಳಿದ ಸರಸಮ್ಮ ಹಾಗೂ ಕುಂಜಮ್ಮ ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.