ಮುಜರಾಯಿ ಇಲಾಖೆ ವಶಕ್ಕೆ ಮಾರಮ್ಮ ದೇವಸ್ಥಾನ

7
ಸುಳ್ವಾಡಿಗೆ ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ಭೇಟಿ

ಮುಜರಾಯಿ ಇಲಾಖೆ ವಶಕ್ಕೆ ಮಾರಮ್ಮ ದೇವಸ್ಥಾನ

Published:
Updated:
Prajavani

ಹನೂರು: ತಾಲ್ಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮನ ದೇವಾಲಯಕ್ಕೆ ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ಅವರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ನಂತರ ಮಾತನಾಡಿದ ಅವರು, ‘ಮಾರಮ್ಮನ ದೇವಾಲಯದಲ್ಲಿ ನಡೆದ ವಿಷ ಪ್ರಸಾದ ದುರಂತ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿ ಇಂತಹ ದುರ್ಘಟನೆ ಎಲ್ಲಿಯೂ ನಡೆದಿಲ್ಲ. ಮುಖ್ಯಮಂತ್ರಿಗಳು ಈಗಾಗಲೇ ಮೃತಪಟ್ಟ ಕುಟುಂಬಗಳಿಗೆ ತಲಾ ₹ 5 ಲಕ್ಷ ಘೋಷಣೆ ಮಾಡಿದ್ದಾರೆ. ಪ್ರಕರಣದಲ್ಲಿ ಈಗಾಗಲೇ 17 ಜನರು ಮೃತಪಟ್ಟಿದ್ದಾರೆ. ಇಂತಹ ಭೀಕರ ದುರ್ಘಟನೆ ಯಾವ ದೇವಾಲಯಗಳಲ್ಲಿಯೂ ಸಂಭವಿಸಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಮುಜರಾಯಿ ಇಲಾಖೆ ವಶಕ್ಕೆ: ಮಾರಮ್ಮನ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರ್ಪಡೆಗೊಳಿಸುವ ಸಂಬಂಧ ಈಗಾಗಲೇ ಸ್ಥಳೀಯ ಶಾಸಕರು, ದೇವಸ್ಥಾನದ ಟ್ರಸ್ಟಿಗಳು ಹಾಗೂ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಂಕ್ಷಿಪ್ತವಾಗಿ ವರದಿ ನೀಡಿದ್ದಾರೆ. ಶೀಘ್ರದಲ್ಲೇ ದೇವಾಲಯವನ್ನು ಮುಜರಾಯಿ ಇಲಾಖೆಗೆ ವಶಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಾಂತ್ವನ: ವಿಷ ಪ್ರಸಾದದಲ್ಲಿ ಸಾವನ್ನಪ್ಪಿದ ಸುಳ್ವಾಡಿ ಗ್ರಾಮದ ನಾಗೇಶ್ ಕುಟುಂಬಕ್ಕೆ ಸಚಿವರು ಸಾಂತ್ವನ ಹೇಳಿದರು. ನಂತರ ಕೋಟೆಪೋದೆ ಗ್ರಾಮದ ಕೃಷ್ಣ ನಾಯಕ ಹಾಗೂ ಮೈಲಿಬಾಯಿ ಕುಟುಂಬದ ಪುತ್ರಿಯರನ್ನು ಭೇಟಿ ಮಾಡಿದರು. ಅವರಿಗೆ ಬಂಜಾರ ಅಭಿವೃದ್ಧಿ ನಿಗಮದ ವತಿಯಿಂದ ₹ 1 ಲಕ್ಷ ಪರಿಹಾರವನ್ನು ಕೊಡಿಸುವ ಭರವಸೆ ನೀಡಿದರು.

ತಾಂಡಾಗಳ ಅಭಿವೃದ್ಧಿಗೆ ಕ್ರಮ: ಕೋಟೆಪೋದೆ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಲಂಬಾಣಿ ಜನಾಂಗದವರು, ನಮ್ಮ ತಾಂಡಾಗಳಿಗೆ ಸೂಕ್ತವಾದ ರಸ್ತೆಗಳ ಅಗತ್ಯವಿದೆ, ಸೇವಾಲಾಲ್ ದೇವಸ್ಥಾನ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, 3 ತಾಂಡಾಗಳು ಸೇರಿ ಸಂಘ–ಸಂಸ್ಥೆಗಳನ್ನು ರಚಿಸಿಕೊಂಡರೆ ಸರ್ಕಾರದ ಅನುದಾನವನ್ನು ನೇರವಾಗಿ ತಲುಪಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸೇವಾಲಾಲ್ ದೇವಸ್ಥಾನವನ್ನು ಎರಡು ಕಡೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಿಮ್ಮ ಗ್ರಾಮದಲ್ಲಿ ಸ್ಥಳಾವಕಾಶ ಮಾಡಿಕೊಟ್ಟರೆ ₹ 10 ಲಕ್ಷ ಅನುದಾನವನ್ನು ನೀಡಲಾಗುವುದು. ರಸ್ತೆ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಈ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಶಾಸಕ ನರೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ಬಸವರಾಜು, ಲೇಖಾ, ಮರಗದಮಣಿ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಹರೀಶ್‌ ಕುಮಾರ್‌, ಉಪ ವಿಭಾಗಾಧಿಕಾರಿ ಪೌಜಿಯ ತರುನ್ನಮ್, ತಹಶಿಲ್ದಾರರಾದ ರಾಯಪ್ಪ ಹುಣಸಗಿ, ಶಿವರಾಮ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜೇಂದ್ರ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !