ಬೇಸಿಗೆ ಸೊಬಗು!

ಶನಿವಾರ, ಏಪ್ರಿಲ್ 20, 2019
29 °C

ಬೇಸಿಗೆ ಸೊಬಗು!

Published:
Updated:
Prajavani

ಚೈತ್ರ- ವೈಶಾಖ ಮಾಸಗಳು ವಸಂತ ಋತುವಿನ ಪ್ರಖರ ಮಾಸಗಳು. ಆದರೆ ಸುಂದರವೂ ಹೌದು!

ಬೆಂಗಳೂರಿನಲ್ಲಂತೂ ತಾಪಮಾನ 38 ಡಿ.ಸೆ ತಲುಪಿ ಸಾಕಪ್ಪ ಈ ಬೇಸಿಗೆ ಎನಿಸಿದೆ. ‘ಬೆಂಗಳೂರು ಹೀಗಿರಲಿಲ್ಲ’ ಎನ್ನುವ ಬೇಸರದ ನಿಟ್ಟುಸಿರು ಕೇಳಿಬರುತ್ತಿದೆ. ಮಾರ್ಚ್‌, ಏಪ್ರಿಲ್, ಮೇ ತಿಂಗಳುಗಳು ಬೇಸಿಗೆಯ ಬಿಸಿ ಮುಟ್ಟಿಸಿ, ಕಳೆದುಹೋದ ಚಳಿಗಾಲವೇ ಚೆನ್ನಾಗಿತ್ತು ಎಂತಲೋ, ಮುಂಬರುವ ಮಳೆಗಾಲದ ಹಿತವನ್ನು ನೆನೆಯುವಂತೆ ಮಾಡಿದೆ. ಆದರೆ ಬೇಸಿಗೆಯೂ ಸುಂದರವಾಗಿದೆ ಎಂಬುದನ್ನು ಅನೇಕರು ಅಂದುಕೊಳ್ಳುವುದೇ ಇಲ್ಲ.

ನಿಜ, ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚು. ಸೆಕೆ, ಏನೋ ಇರುಸುಮುರುಸು, ಕಾಯಿಲೆಗಳು ಜಾಸ್ತಿ, ಇತ್ಯಾದಿ ಇದ್ದದ್ದೇ. ಆದರೆ ಇವೆಲ್ಲವನ್ನೂ ಬದಿಗಿಟ್ಟು, ಸಾಧ್ಯವಾದಷ್ಟು ಉತ್ಸಾಹದಿಂದಿರಲು ಪ್ರಯತ್ನಿಸಬೇಕು.

ಬೇಸಿಗೆಯಲ್ಲಿ ಮುಂಜಾನೆಯ ತಂಪಾದ ಹೊತ್ತಿನಲ್ಲಿ ವಾಯುವಿಹಾರ ಮಾಡುತ್ತಾ, ಗೂಡು ಬಿಟ್ಟು ಹೊರ ಬರುವ ಹಕ್ಕಿಗಳ ಕಲರವ, ತಂಪಾದ ವಾತಾವರಣವನ್ನು ತನ್ನ ಕೆಂಪು ವರ್ಣದಿಂದ ಕಾವೇರಿಸುವ  ಸೂರ್ಯನ ಉದಯವನ್ನು ನೋಡಿ ಸವಿಯಬಹುದು. ಸೂರ್ಯೋದಯದ ಮನೋಹರ ದೃಶ್ಯ ನಮ್ಮಲ್ಲಿ ಇಡೀ ದಿನಕ್ಕೆ ಬೇಕಾದ ಆಹ್ಲಾದಮಯ ಮನಸ್ಥಿತಿ ಕೊಡುತ್ತದೆ.

ಅನೇಕ ಮರಗಳು ಹಣ್ಣೆಲೆ ಉದುರಿಸಿ ಚಿಗುರೆಲೆಗಳಿಂದ ಕಂಗೊಳಿಸುತ್ತ ಇರುವುದನ್ನು ನೋಡುವುದು ಕಣ್ಣಿಗೆ ತಂಪಲ್ಲವೇ. ಹಿಂದಿನ ಕಾಲದಲ್ಲಿ ಮುಂಜಾನೆಯೇ ಮನೆ ಹಿರಿಯ ಹೆಂಗಸರ ಜೊತೆಗೂಡಿ ಮಕ್ಕಳು, ಸಂಡಿಗೆ, ಉಪ್ಪಿನ ಕಾಯಿ ಮಾಡಲು ಸಹಾಯ ಮಾಡುತ್ತಿದ್ದರು. ಹಾಗೆ ಹಿರಿಯರ ಒಡನಾಟದಲ್ಲಿ ಎಷ್ಟೋ ವಿಷಯಗಳನ್ನು ತಿಳಿಯುತ್ತಿದ್ದರು. ಇದು ಈಗ ಅಪರೂಪವೇ! ಅಜ್ಜಿ -ತಾತನ ಮನೆಗೆ ಹೊಗುವುದಂತೂ, ಈಗಿನ ಅವಿಭಕ್ತ ಕುಟುಂಬದ ಎಷ್ಟೋ ಮಕ್ಕಳಿಗೆ ಗೊತ್ತೇಇಲ್ಲ!!

ಆದರೆ ಹೆತ್ತವರು, ಸಾಧ್ಯವಿದ್ದಲ್ಲಿ ತಮ್ಮ ಮಕ್ಕಳು ಅಜ್ಜಿ-ತಾತಂದಿರ ಜೊತೆ ಹಾಯಾಗಿ ಸಮಯ ಕಳೆಯಲು ಅನುವುಮಾಡಿಕೊಟ್ಟರೆ ಪರಸ್ಪರರ ಒಡನಾಟ ನೋಡಿ ಆನಂದಿಸಬಹುದು.ಇದು ಮಕ್ಕಳಿಗೆ ಜೀವನ ಪಾಠ ಹೇಳಿಕೊಟ್ಟಂತೆ.

ಮಧ್ಯಾಹ್ನದ ಹೊತ್ತಿನಲ್ಲಿ, ಮನೆಯಲ್ಲಿ ಇರುವವರು ವಿಧ ವಿಧವಾದ ತಂಪು ಪಾನೀಯಗಳನ್ನು ತಾವೇ ಸ್ವತಃ ತಯಾರಿಸಿ, ಮನೆ ಮಂದಿಗೆ ಕೊಟ್ಟು ತಾವು ಸವಿಯಬಹುದು. ವಿಟಮಿನ್–ಸಿ ಇರುವ ಹಣ್ಣುಗಳು ಹೆಚ್ಚು ಸಿಗುವ ಈ ಕಾಲದಲ್ಲಿ, ಬಗೆಬಗೆಯ ಪಾನೀಯಗಳ ಸ್ವಾದ ಸವಿಯಬಹುದು. ಜೊತೆಗೆ ನಾವುಗಳು ಅಪರೂಪವಾಗಿ ಬಳಸುವ ಬರ‍್ಲಿ ಅಥವಾ ಸಬ್ಬಕ್ಕಿ ಪಾನೀಯ ಮತ್ತು ರಾಗಿ ಅಂಬಲಿ ತಯಾರಿಸಿ ಸೇವಿಸಬಹುದು. ಅಷ್ಟೇ ಅಲ್ಲದೆ ಗೃಹಿಣಿಯರು, ಬಗೆಬಗೆಯ ಐಸ್ಕ್ರೀಂ ತಯಾರಿಸಿ ಮಕ್ಕಳಿಗೆ ತಿನ್ನಿಸಬಹುದು. ಇದರಿಂದ ಮನೆಯಲ್ಲಿ ತಯಾರಿಸಿದ ತೃಪ್ತಿ ಹಾಗೂ ಆರೋಗ್ಯಕರವಾದ್ದು ನೀಡಿದ ಖುಷಿ ಅವರಿಗಿರುವುದು.

ಸಂಜೆ ಸೊಬಗು, ಆಗಸದಲ್ಲಿನ ವಿವಿಧ ಬಗೆಯ ಮೋಡದ ಚಿತ್ತಾರ ನೋಡಿ ಆನಂದಿಸಲು ಬೇಸಿಗೆಯ ಶುಭ್ರ ಆಕಾಶಕ್ಕಿಂತ ಉತ್ತಮ ಸಮಯವಿಲ್ಲ ಎನ್ನಬಹುದು!

ಸಂಜೆ ಸಮಯವೂ ಅನೇಕರು ವಾಯುವಿಹಾರ ಮಾಡುವ ಅಭ್ಯಾಸವಿರುತ್ತದೆ. ಇತ್ತೀಚಿಗೆ ಅನೇಕ ಬಡಾವಣೆಗಳಲ್ಲಿ ಉತ್ತಮ ಪಾರ್ಕ್‌ಗಳನ್ನೂ ನೋಡಬಹುದು. ಅಲ್ಲಿ ವಾಕಿಂಗ್ ವೇಳೆ ಜನರ ಸಂಪರ್ಕ ಬೆಳೆದು ವಿಷಯ ವಿನಿಮಯವಾಗುವುದು. ಹಕ್ಕಿಗಳು ಸದ್ದುಮಾಡುತ್ತ ಗೂಡು ಸೇರಲು ಹಾರುವ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಕಚೇರಿ ಕಾಲೇಜುಗಳಿಂದ ‘ನಮ್ಮ ಮೆಟ್ರೋ’ದಲ್ಲಿ ವಾಪಸ್ಸಾಗುವವರು, ಮೊಬೈಲ್‌ನಲ್ಲಿ ಮುಖ ಹುದುಗಿಸದೆ, ಅವಕಾಶವಿದ್ದಲ್ಲಿ ಸೂರ್ಯಾಸ್ತದ ಸವಿಯನ್ನು ಆನಂದಿಸುತ್ತಾ ಪ್ರಯಾಣದ ಸುಖ ಅನುಭವಿಸಬಹುದು.

ಒಂದು ನಗರಕ್ಕೆ ಗಿಡಮರಗಳು ಯಾಕೆ ಬೇಕು? ನಾವು ಹಸಿರನ್ನು ಏಕೆ? ಹೇಗೆ? ಕಾಪಾಡಬೇಕು ಎನ್ನುವ ವಿಷಯದ ಕಡೆ ಬೇಸಿಗೆಯಲ್ಲಿ ನಮ್ಮ ಗಮನ ಹರಿಯುವುದು. ಕಿಲೋಮೀಟರು ಉದ್ದಕ್ಕೂ ಮರಗಳ ನೆರಳಿನಲ್ಲಿ ನಡೆದಾಗ ಆಗದ ಆಯಾಸ, ನೆರಳಿಲ್ಲದ ರಸ್ತೆಯಲ್ಲಿ ಒಂದು ಫರ್ಲಾಂಗ್‌ ದೂರವೂ ನಡಿಗೆ ಕಷ್ಟವೆನಿಸುವುದು. ಅದರಲ್ಲೂ ಬೇಸಿಗೆಯಲ್ಲಿ. ಆಗಲೇ ಪರಿಸರ ರಕ್ಷಣೆಯ ಕಾಳಜಿಯ ಬಿಸಿ ನಮಗೆ ತಟ್ಟುವುದು..

ಬೇಸಿಗೆಯಲ್ಲಿ ಕೆಲ ಜಾತಿಯ ಮರಗಳು ಎಲೆಗಳಿಲ್ಲದೆ ಬರೀ ಹೂಗಳಿಂದ ತುಂಬಿಕೊಂಡು ನೋಡಲು ಸುಂದರವಾಗಿರುವುದಲ್ಲದೆ, ರಸ್ತೆಯ ಅಂದವನ್ನು ಹೆಚ್ಚಿಸುವವು. ಅಂತಹ ಮರಗಳನ್ನು ನೋಡುವುದು ಕಣ್ಣಿಗೆ ಹಬ್ಬ!

ಮನೆಯ ಮುಂದಿನ ಅಂಗಳ, ಕಾಂಪೌಂಡ್ ಮೇಲೆ ಅಥವಾ ಅಪಾರ್ಟ್‌ಮೆಂಟ್‌ ಕಿಟಕಿಯಲ್ಲಿ ನೀರಿನ ಪಾತ್ರೆ ಇಟ್ಟರೆ, ಬಿಸಿಲಿಗೆ ಬಳಲಿದ ಪಾರಿವಾಳ, ಅಳಿಲುಗಳು ಅದನ್ನು ಕುಡಿಯುವುದನ್ನು ಮರೆಯಲ್ಲಿ ನೋಡಿ ಆನಂದಿಸಿ, ತೃಪ್ತ ಭಾವ ಹೊಂದಬಹುದು.

ರಾತ್ರಿಯ ಕತ್ತಲಲ್ಲಿ ತಾರಸಿ ಮೇಲೆ, ಬೇಸಿಗೆಯ ಹುಣ್ಣಿಮೆ ಊಟ ಸವಿಯಲು ಅವಕಾಶವಿದ್ದರೆ, ಮನೆಮಂದಿಯೆಲ್ಲ ಹರಟೆಗೆ ಕುಳಿತು ಕಳೆದುಹೋದ ಸವಿನೆನಪುಗಳ ಮೆಲುಕು ಹಾಕಬಹುದು.

ಒಟ್ಟಿನಲ್ಲಿ ಬಿಡುವಿಲ್ಲದ ದಿನಚರಿಯ ನಡುವೆ ಇಂಥ ಕೆಲವು ಸಣ್ಣಪುಟ್ಟ ಸಂತೋಷಗಳು ನಮ್ಮ ಕೈಜಾರಿ ಹೋಗದಂತೆ ಓಪ್ಟಿಮಿಸ್ಟಿಕ್ ಆಗಿ ಅನುಭವಿಸಬೇಕು!! ಆಗ ಬೇಸಿಗೆಯ ಸುಡುಸುಡು ವಾತಾವರಣದಲ್ಲೂ ತಂಪಾದ ಗಾಳಿಯ ಸುಖ ಸವಿಯಬಹುದು!

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !