ಮಾಜಿ ಶಾಸಕ ಸುಣಗಾರ ನಡೆ ಅನುಮಾನಕ್ಕೆಡೆ..?

ಶುಕ್ರವಾರ, ಏಪ್ರಿಲ್ 19, 2019
22 °C
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಜತೆ ಬಾಡೂಟ; ಶರಣಪ್ಪ ಮನೆಗೆ ದೌಡಾಯಿಸಿದ ಮೈತ್ರಿ ಮುಖಂಡರು

ಮಾಜಿ ಶಾಸಕ ಸುಣಗಾರ ನಡೆ ಅನುಮಾನಕ್ಕೆಡೆ..?

Published:
Updated:
Prajavani

ವಿಜಯಪುರ: ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಶಿಷ್ಯ ಎಂದೇ ಬಿಂಬಿಸಿಕೊಳ್ಳುವ, ಸಿಂದಗಿಯ ಮಾಜಿ ಶಾಸಕ ಶರಣಪ್ಪ ಸುಣಗಾರ ನಡೆ, ಇದೀಗ ಹಲ ಅನುಮಾನಕ್ಕೆಡೆ ಮಾಡಿಕೊಟ್ಟಿದೆ.

ತನ್ನ ಮನೆ ದೈವ ಚಿಕ್ಕಸಿಂದಗಿಯ ಲಕ್ಕಮ್ಮ ದೇವಿ ದೇಗುಲದಲ್ಲಿ ಮಂಗಳವಾರ ಸುಣಗಾರ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದರು. ಇದಕ್ಕೆ ಎಲ್ಲರಿಗೂ ಆಹ್ವಾನ ನೀಡಿದ್ದರು.

ಈ ಸಮಾರಂಭದಲ್ಲಿ ಬಿಜೆಪಿಯ ಹುರಿಯಾಳು ರಮೇಶ ಜಿಗಜಿಣಗಿ, ಮಾಜಿ ಶಾಸಕ ರಮೇಶ ಭೂಸನೂರ ತಮ್ಮ ಬೆಂಬಲಿಗರೊಟ್ಟಿಗೆ ಭಾಗಿಯಾಗಿದ್ದು, ಲೋಕಸಭಾ ಚುನಾವಣೆಯ ‘ಚಾಣಾಕ್ಷ್ಯ’ ರಾಜಕೀಯ ನಡೆ ಎಂದೇ ಬಿಂಬಿತಗೊಳ್ಳುತ್ತಿದೆ.

ದೇವಿಯ ವಿಶೇಷ ಪೂಜೆ ಮುಗಿದ ಬಳಿಕ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಎಡ ಬಲದಲ್ಲೇ ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ ಭೂಸನೂರ ಕುಳಿತು ‘ಬಾಡೂಟ’ ಸವಿದಿರುವುದು, ಮೈತ್ರಿ ಪಾಳೆಯ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಈ ಬೆಳವಣಿಗೆ ಬೆನ್ನಿಗೆ, ಸಿಂದಗಿ ಪಟ್ಟಣದಲ್ಲಿ ಬುಧವಾರ ಚುನಾವಣಾ ಕಾರ್ಯಾಲಯ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಸುನೀತಾ ಚವ್ಹಾಣ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಮುಖಂಡರಾದ ಅಶೋಕ ಮನಗೂಳಿ, ಆರ್‌.ಕೆ.ಪಾಟೀಲ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ನಿಂಗನಗೌಡ ಪಾಟೀಲ, ಸುಭಾಸ ಛಾಯಾಗೋಳ ಜತೆ ಸುಣಗಾರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದು, ಕುತೂಹಲ ಕೆರಳಿಸಿದೆ.

ಸುಣಗಾರ ಅನ್ಯ ಮನಸ್ಕ: ದಶಕಕ್ಕೂ ಹೆಚ್ಚಿನ ಅವಧಿ ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಘಟಕದ ಚುಕ್ಕಾಣಿ ಹಿಡಿದಿದ್ದ ಶರಣಪ್ಪ ಸುಣಗಾರ, ಹುದ್ದೆ ತಪ್ಪಿದ ಬಳಿಕ ಆಕ್ರೋಶಗೊಂಡಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಗದಿದ್ದಾಗಲೂ ಅಸಮಾಧಾನಿತಗೊಂಡಿದ್ದರು.

ಆ ಸಂದರ್ಭ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಿಸುವ ಭರವಸೆಯನ್ನು ಸ್ಥಳೀಯ ಮುಖಂಡರು, ರಾಜ್ಯದ ವರಿಷ್ಠರು ನೀಡಿದ್ದರಿಂದ ಕೊಂಚ ಸಮಾಧಾನಿತರಾಗಿದ್ದರು. ವಿವಿಧೆಡೆ ಸಂಚರಿಸಿ ತಮ್ಮ ಕೋಲಿ ಸಮಾಜದ ಮತಗಳನ್ನು ಕಾಂಗ್ರೆಸ್‌ಗೆ ತಂದುಕೊಡುವ ನಿಟ್ಟಿನಲ್ಲಿ ಶ್ರಮಿಸಿದ್ದರು.

ದೇವರಹಿಪ್ಪರಗಿ, ಸಿಂದಗಿ, ಇಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಲಿ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆಯಾ ಕ್ಷೇತ್ರದ ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಇದರ ಆಧಾರದಲ್ಲೇ ಕಾಂಗ್ರೆಸ್‌ ಸುಣಗಾರಗೆ ಹಲವು ಅವಕಾಶ ನೀಡಿತ್ತು.

ಈಚೆಗೆ ಸುಣಗಾರ ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗಿದ್ದರು. ಸಿಂದಗಿ ಬ್ಲಾಕ್‌ ಘಟಕವೂ ತನ್ನ ಕೈತಪ್ಪಿದ್ದರಿಂದ ಅಸಮಾಧಾನಿತರಾಗಿದ್ದರು. ಜಿಲ್ಲೆಯ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು.

ಈ ಎಲ್ಲದರ ನಡುವೆಯೂ ತನ್ನ ಗುರು ಭಕ್ತಿಗೆ ನಿಷ್ಠರಾಗಿ, ಮಲ್ಲಿಕಾರ್ಜುನ ಖರ್ಗೆ ಪರ ನೆರೆಯ ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಬೆಂಬಲಿಗರೊಟ್ಟಿಗೆ ಕೋಲಿ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ನಾಮಪತ್ರ ಸಲ್ಲಿಕೆ ಸಂದರ್ಭ ವಿಜಯಪುರದಲ್ಲಿ ಗೈರಾಗಿ, ಖರ್ಗೆ ಬಳಿಯೇ ಹಾಜರಾಗಿದ್ದರು ಎಂದು ಸುಣಗಾರ ಆಪ್ತ ವಲಯ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !