‘ನಿಬಂಧನೆಗೆ ಜೋತು ಬೀಳದೆ ನೀರು ಕೊಡಿ’

7
ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ; ಜಿ.ಪಂ. ಅಧ್ಯಕ್ಷ ನೇದಲಗಿ ಸೂಚನೆ

‘ನಿಬಂಧನೆಗೆ ಜೋತು ಬೀಳದೆ ನೀರು ಕೊಡಿ’

Published:
Updated:
Prajavani

ವಿಜಯಪುರ: ‘ಒಬ್ಬ ವ್ಯಕ್ತಿಗೆ 15–20 ಲೀಟರ್‌ ನೀರು ಎಂಬ ನಿರ್ಬಂಧ ಬೇಡ. ಗೆರೆ ಕೊರೆದಂತೆ ಇಂತಿಷ್ಟೇ ನೀರು ನೀಡುತ್ತೇವೆ ಎಂಬ ಮನೋಭಾವನೆಯಿಂದ ಹೊರ ಬನ್ನಿ. ನಿಬಂಧನೆಗಳಿಗೆ ಜೋತು ಬೀಳದೆ ಸಮರ್ಪಕವಾಗಿ ನೀರು ಪೂರೈಸಿ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ತೀವ್ರ ಬರದ ಬಿಕ್ಕಟ್ಟಿನಲ್ಲಿ ಕುಂಟು ನೆಪ, ಸಬೂಬು ಹೇಳದೆ ಅವಶ್ಯವಿದ್ದೆಡೆ ನೀರು ಪೂರೈಸಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯ ಅಧಿಕಾರಿ ಈ ಸಂದರ್ಭ, ‘ಕೆಲ ಗ್ರಾಮ ಪಂಚಾಯ್ತಿಗಳು ನಾಲ್ಕೈದು ಜನರಿದ್ದರೂ ಸಹ ಜನವಸತಿ ಎಂದು ಬಿಂಬಿಸಿ ಟ್ಯಾಂಕರ್ ನೀರು ಕೇಳುತ್ತಿವೆ’ ಎನ್ನುತ್ತಿದ್ದಂತೆ, ನೇದಲಗಿ ಆಕ್ರೋಶ ವ್ಯಕ್ತಪಡಿಸಿದರು. ‘ನೀವ್ಯಾರು ಸ್ಥಳದಕ್ಕೆ ಭೇಟಿ ನೀಡಲ್ಲ. ವಾಸ್ತವಿಕತೆಯಿಂದ ದೂರವಿದ್ದೀರಿ. ಸಮಸ್ಯೆಯಿದ್ದಲ್ಲಿಗೆ ಹೋಗಿ ನೋಡಿ. ಆಗ ನಿಮಗೆ ಪರಿಸ್ಥಿತಿಯ ಅರಿವಾಗುತ್ತದೆ’ ಎಂದು ಹರಿಹಾಯ್ದರು.

‘ಇವಣಗಿ, ನರಸಲಗಿಯಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ನೀರು ಲಭ್ಯವಿದೆ. ಆದರೂ ಸಹ ಮೋಟರ್ ಅಳವಡಿಸಿಲ್ಲ. ಹೀಗಿದ್ದರೆ ಬೋರ್‌ವೆಲ್ ಕೊರೆಸಿದ್ದಾದರೂ ಏತಕ್ಕೆ ?’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಸಂತೋಷ ನಾಯ್ಕ್‌ ಅಸಮಾಧಾನ ವ್ಯಕ್ತಪಡಿಸಿದರು. ಮೊದಲು ಅಲ್ಲಿ ಮೋಟರ್‌–ಪಂಪ್ ಅಳವಡಿಸಿ ಎಂದು ನೇದಲಗಿ ಅಧಿಕಾರಿ ವರ್ಗಕ್ಕೆ ಸೂಚಿಸಿದರು.

‘ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಬಹುಹಳ್ಳಿ ಕುಡಿಯುವ ನೀರು ಯೋಜನೆಗಳು ಕಳೆದ ವರ್ಷದ ಫೆಬ್ರುವರಿ ತಿಂಗಳಲ್ಲಿಯೇ ಮುಗಿಯಬೇಕಿತ್ತು, ಆದರೆ ವರ್ಷ ಉರುಳಿದರೂ; ಇನ್ನೂ ಈ ಯೋಜನೆ ಅನುಷ್ಠಾನದ ಲಕ್ಷಣಗಳು ಗೋಚರಿಸುತ್ತಿಲ್ಲ. ಸರ್ಕಾರದ ದುಡ್ಡು ವ್ಯಯವಾಗುತ್ತಿದೆ, ಕುಡಿಯುವ ನೀರು ಸಹ ದೊರಕುತ್ತಿಲ್ಲ’ ಎಂದು ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದರು.

‘ಈಗಾಗಲೇ ಜಿಲ್ಲೆಯಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಕುಂಟೋಜಿ, ಪೀರಾಪುರ, ಧೂಳಖೇಡ, ಅಗರಖೇಡ, ಭುಯ್ಯಾರ, ತಿಕೋಟಾ, ನಾಗಠಾಣದಲ್ಲಿ ಎಂವಿಎಸ್‌ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕುಂಟೋಜಿ ಯೋಜನೆ 2018ರ ಏಪ್ರಿಲ್‌ಗೆ ಮುಗಿಯಬೇಕಿತ್ತು. ತಾಂತ್ರಿಕ ಕಾರಣ ಎದುರಾಗಿರುವುದರಿಂದ ವಿಳಂಬವಾಗಿತ್ತು. ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರಲಾಗಿದೆ’ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ವಿವರಣೆ ನೀಡಿದರು.

‘ಕೆಲವೊಂದು ತಾಂತ್ರಿಕ ತೊಂದರೆ ಇದ್ದ ಕಾರಣಕ್ಕೆ ವಿಳಂಬವಾಗಿದೆ ಎನ್ನುತ್ತೀರಿ. ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ಏಕೆ ತಂದಿಲ್ಲ ? ಶಾಸಕರಿಗೆ ಹೇಳಿದರೆ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಿಗೆ ಹೇಳಬಾರದು ಎಂಬ ನಿಯಮವಿದೆಯೇ ?’ ಎಂದು ದೇಸಾಯಿ ಗರಂ ಆದರು.

ನಿಯಮ ಉಲ್ಲಂಘನೆ

‘ನರೇಗಾ ಯೋಜನೆ ಕಾಮಗಾರಿಯಲ್ಲಿ, ಕಾರ್ಮಿಕರು ಹಾಗೂ ಮೆಟಿರಿಯಲ್ ಕಾಸ್ಟ್ ವಿಷಯದಲ್ಲಿ ನಿಯಮ ಉಲ್ಲಂಘನೆಯಾಗಿದೆ. ಗ್ರಾಮೀಣರ ಗುಳೆ ತಪ್ಪಿಸಲು, ಸರ್ಕಾರ ಕಾಮಗಾರಿಯಲ್ಲಿ ಶೇ 60 ಹಾಗೂ ಮೆಟಿರಿಯಲ್ ಕಾಸ್ಟ್ ಶೇ 40 ಮೀರದಂತೆ ಇರುವ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ನಮ್ಮ ಜಿಲ್ಲೆಯ ಯೋಜನೆಗಳನ್ನು ಬ್ಲಾಕ್ ಮಾಡಿದ್ದಾರೆ’ ಎಂದು ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಸಭೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !