ಕಾರಾಗೃಹ ಶೋಧಿಸಿದ 300 ಪೊಲೀಸರು !

ಭಾನುವಾರ, ಏಪ್ರಿಲ್ 21, 2019
32 °C

ಕಾರಾಗೃಹ ಶೋಧಿಸಿದ 300 ಪೊಲೀಸರು !

Published:
Updated:
Prajavani

ಬೆಂಗಳೂರು: ರೌಡಿಗಳು ಜೈಲಿನಲ್ಲಿದ್ದುಕೊಂಡೇ ಲೋಕಸಭಾ ಚುನಾವಣೆಗೆ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ದೂರುಗಳು ಬಂದ ಬೆನ್ನಲ್ಲೇ ಮಂಗಳವಾರ ರಾತ್ರಿ ಸುಮಾರು 300 ಪೊಲೀಸರು ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ದಾಳಿ ನಡೆಸಿದರು.

ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ನೇತೃತ್ವದಲ್ಲಿ ಆರು ಡಿಸಿಪಿಗಳು, 15 ಎಸಿಪಿಗಳು, 30 ಇನ್‌ಸ್ಪೆಕ್ಟರ್‌ಗಳು, 12 ಶ್ವಾನದಳಗಳು ಸೇರಿದಂತೆ ಇತರೆ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಗುರುವಾರ ಸಂಜೆ 6.30ರ ಸುಮಾರಿಗೆ ಜೈಲು ಪ್ರವೇಶಿಸಿದ ಪೊಲೀಸರು, ರಾತ್ರಿ 10.30ರವರೆಗೂ ತಪಾಸಣೆ ನಡೆಸಿದರು.

‘15 ಮೊಬೈಲ್‌ಗಳು, ಚಾಕುಗಳು, ಕಟ್ಟಿಂಗ್ ಪ್ಲೇಯರ್, ನಗದು, ಗಾಂಜಾ, ಅದನ್ನು ಸೇದುವ ಚುಟ್ಟಾ ಹಾಗೂ ಪೆನ್‌ಡ್ರೈವ್‌ಗಳು ಸಿಕ್ಕಿವೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಯ ನೋಡಿ ದಾಳಿ: ‘ಎ’ ಬ್ಯಾರಕ್‌ ಕಟ್ಟಡದಲ್ಲಿ ಜಿಮ್‌, ಗಾಲಿ ಕುರ್ಚಿ ತಯಾರಿಕಾ ಘಟಕ, ಗ್ರಂಥಾಲಯ, ಯೋಗ ಕೇಂದ್ರ, ಪ್ರಾರ್ಥನಾ ಕೊಠಡಿ ಹಾಗೂ ಸಂಗೀತ ಶಾಲೆ ಇದೆ. ಕೈದಿಗಳು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ ನಡುವೆ ಅವುಗಳ ಸೌಲಭ್ಯ ಪಡೆಯುತ್ತಾರೆ. ಸಂಜೆ ನಂತರ ಸಿಬ್ಬಂದಿ ಕೈದಿಗಳ ತಲೆ ಎಣಿಸಿ ಬ್ಯಾರಕ್‌ಗಳಿಗೆ ಕಳುಹಿಸುತ್ತಾರೆ. ಈ ‌ಸಮಯದಲ್ಲೇ ದಾಳಿ ನಡೆಸಿದರೆ ನಿಷೇಧಿತ ವಸ್ತುಗಳನ್ನು ಬಚ್ಚಿಡಲು ಅವರಿಗೆ ಸಮಯ ಸಿಗುವುದಿಲ್ಲ. ಹೀಗಾಗಿ, ಅದೇ ಲೆಕ್ಕಚಾರ ಹಾಕಿಕೊಂಡು ದಾಳಿ ನಡೆಸಲಾಯಿತು ಎಂದು ಪೊಲೀಸರು ಹೇಳಿದರು.

ವಿಚಾರಣಾದೀನ ಕೈದಿಗಳು ಹಾಗೂ ಸಜಾಬಂದಿಗಳು ಸೇರಿ ಕಾರಾಗೃಹದಲ್ಲಿ ಸದ್ಯ 4,335 ಕೈದಿಗಳಿದ್ದು, ಎಲ್ಲರ ಬ್ಯಾರಕ್‌ಗಳನ್ನೂ ತಪಾಸಣೆ ನಡಸಲಾಯಿತು. ಬಂದಿಗಳು ಸಾಮಾನ್ಯವಾಗಿ ಗಾಂಜಾ ಪೊಟ್ಟಣಗಳನ್ನು ಸ್ನಾನದ ಕೋಣೆ ಅಥವಾ ಶೌಚಾಲಯಗಳಲ್ಲಿ ಬಚ್ಚಿಡುತ್ತಾರೆ. ಹೀಗಾಗಿ, ಕಾರಾಗೃಹದ 810 ಶೌಚಾಲಯ ಕೊಠಡಿಗಳಲ್ಲೂ ಶೋಧ ನಡೆಸಿ ಗಾಂಜಾ ಜಪ್ತಿ ಮಾಡಲಾಯಿತು ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !