ಜನಪದ ಕಲಾವಿದರ ಸಮೀಕ್ಷೆ ಶೀಘ್ರ ಪೂರ್ಣ

ಗುರುವಾರ , ಜೂಲೈ 18, 2019
29 °C
ಕನ್ನಡ ಜಾನಪದ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್‌. ಬಾಲಾಜಿ ಹೇಳಿಕೆ

ಜನಪದ ಕಲಾವಿದರ ಸಮೀಕ್ಷೆ ಶೀಘ್ರ ಪೂರ್ಣ

Published:
Updated:
Prajavani

ಹುಬ್ಬಳ್ಳಿ: ಕರ್ನಾಟಕ ಕನ್ನಡ ಜಾನಪದ ಪರಿಷತ್‌ ವತಿಯಿಂದ ಜನಪದ ಕಲಾವಿದರ ಸಮೀಕ್ಷೆಯನ್ನು ಮಾಡಲಾಗುತ್ತಿದ್ದು, ಈಗಾಗಲೇ 15 ಜಿಲ್ಲೆಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಉಳಿದ ಜಿಲ್ಲೆಗಳಲ್ಲೂ ಸಮೀಕ್ಷೆ ನಡೆಸಿ, ವರ್ಷಾಂತ್ಯದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ’ ಎಂದು ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್‌. ಬಾಲಾಜಿ ತಿಳಿಸಿದರು.

ಗೋಕುಲ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡ ಜಾನಪದ ಪರಿಷತ್‌ ಸಂಸ್ಥಾಪನಾ ದಿನಾಚರಣೆ ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘15 ವರ್ಷಗಳ ಹಿಂದೆ, ಕನ್ನಡ ಸಾಹಿತ್ಯ ಅಕಾಡೆಮಿ ವತಿಯಿಂದ ಸಮೀಕ್ಷೆ ಮಾಡಲಾಗಿತ್ತು. ಪ್ರಸ್ತುತ ನಿಖರ ಅಂಕಿ ಅಂಶಗಳನ್ನು ಸಂಗ್ರಹಿಸಿ, ಅರ್ಹ ಜನಪದ ಕಲಾವಿದರಿಗೆ ಮಾಸಾಶನ ಮತ್ತು ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸಮೀಕ್ಷಾ ಕಾರ್ಯ ಕೈಗೆತ್ತಿಗೊಂಡಿದ್ದೇವೆ. ಶೇ 20 ಕಲಾವಿದರಿಗೆ ಮಾತ್ರ ಮಾಸಾಶನ ಸಿಗುತ್ತಿರುವುದು ಕಂಡು ಬಂದಿದೆ. ಉಳಿದವರಿಗೂ ಸೌಲಭ್ಯ ಕಲ್ಪಿಸಲು ಬದ್ಧವಾಗಿದ್ದೇವೆ’ ಎಂದು ಹೇಳಿದರು.

‘ಗೊಂಬೆಯಾಟ ಬಹುತೇಕ ನಶಿಸಿ ಹೋಗಿದೆ. ಮದುವೆ ಮನೆಗಳಿಗೆ ಇಂದು ಸೋಬಾನೆ ಕಲಾವಿದರನ್ನು ಕರೆಯದೆ, ಆರ್ಕೆಸ್ಟ್ರಾ ಕಲಾವಿದರಿಗೆ ಮಣೆ ಹಾಕಲಾಗುತ್ತಿದೆ. ಗಡಿ, ಧರ್ಮ, ಜಾತಿಗಳಿಲ್ಲದ ಜನಪದ ಕಲೆ ಉಳಿಯಬೇಕಾದರೆ ‘ಜಾನಪದ ಕಲಾವಿದರ ಅಭಿವೃದ್ಧಿ ಪ್ರಾಧಿಕಾರ’ ರಚನೆಯಾಗಬೇಕು ಎಂದು ಒತ್ತಾಯಿಸಿದರು.

ಮಾಸಾಶನ ನೀಡಲಿ:

ಕನ್ನಡ ಜಾನಪದ ಪರಿಷತ್‌ನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಎಚ್‌.ಆನಂದಪ್ಪ (ಜೋಗಿ) ಮಾತನಾಡಿ, ‘ಮಾಸಾಶನ ಪಡೆಯಲು ಜನಪದ ಕಲಾವಿದರಿಗೆ 58 ವರ್ಷ ತುಂಬಿರಬೇಕು ಎಂಬ ನಿಯಮವಿದೆ. ಮೂರು ವರ್ಷ ಕಡಿತಗೊಳಿಸಿ 55 ವರ್ಷಕ್ಕೆ ನಿಗದಿಗೊಳಿಸಿದರೆ ಸಂಕಷ್ಟದಲ್ಲಿರುವ ಕಲಾವಿದರಿಗೆ ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಮಾಸಾಶನಕ್ಕಾಗಿ ಅರ್ಜಿ ಹಾಕಲು 2 ವರ್ಷ, ಸಂದರ್ಶನಕ್ಕೆ 2 ವರ್ಷ ಮತ್ತು ಮಾಸಾಶನ ಕೈಗೆ ಸಿಗುವ ವೇಳೆಗೆ ಮತ್ತೆರಡು ವರ್ಷ ಎಂದರೂ, ಆ ವೇಳೆಗೆ ಕಲಾವಿದನಿಗೆ 64 ವರ್ಷ ಆಗಿರುತ್ತದೆ. ಆ ವಯಸ್ಸಿಗೆ ಎಷ್ಟೋ ಕಲಾವಿದರು ಸತ್ತೇ ಹೋಗಿರುತ್ತಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಸನ್ಮಾನ:

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಪವನ ಬ್ಯಾಹಟ್ಟಿ ಮತ್ತು ಸವಿತಾ ನಾಯ್ಕರ್‌ ಅವರನ್ನು ಅಭಿನಂದಿಸಲಾಯಿತು. ಕರಡಿ ಮಜಲು ಕಲಾವಿದ ಮುದುಕಪ್ಪ ಬಡಿಗೇರಿ, ಜನಪದ ಕಲಾವಿದೆ ಸರೋಜಮ್ಮ ಹಳ್ಳಿಕೇರಿ, ಗೊರವರ ಕುಣಿತದ ಕಲಾವಿದ ಹನುಮಂತಪ್ಪ ನಾಯ್ಕರ್‌, ಚಿತ್ರಕಲಾವಿದ ಎಂ.ನಾರಾಯಣ ಹಾಗೂ ರಾಯಣ್ಣ ಬಳಗದ ಶಿವಣ್ಣ ಅವರನ್ನು ಸನ್ಮಾನಿಸಲಾಯಿತು.

ಕನ್ನಡ ಜಾನಪದ ಪರಿಷತ್‌ ಜಿಲ್ಲಾ ಕಾರ್ಯದರ್ಶಿ ಡಾ.ಮಾಲತೇಶ್ವರ ಬಾರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಮಾಜಿ ಸದಸ್ಯ ರಾಮಣ್ಣ ಬಡಿಗೇರ, ಎಪಿಎಂಸಿ ಸದಸ್ಯ ಬಸವರಾಜ ಸಂಕಪ್ಪ ನಾಯ್ಕರ್‌, ಪರಿಷತ್‌ನ ಖಜಾಂಜಿ ಡಾ.ಗಂಗಾಧರ ಗರಗ, ಜಂಟಿ ಕಾರ್ಯದರ್ಶಿ ಡಾ.ಎಸ್‌.ಜಿ.ಬಸವರಾಜ ಹಾಗೂ ಗ್ರಾಮಸ್ಥರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !