ಮತ ಜಾಗೃತಿಯ ಹಬ್ಬದಲ್ಲಿ ಒಗ್ಗೂಡಿದ ಮಹಿಳೆಯರು

ಬುಧವಾರ, ಏಪ್ರಿಲ್ 24, 2019
34 °C
ಜಿಲ್ಲಾ ಸ್ವೀಪ್‌ ಸಮಿತಿಯಿಂದ ಆಯೋಜಿನೆ, ಜನರಿಂದ ಭಾರಿ ಸ್ಪಂದನೆ, ಕ್ರೀಡಾಂಗಣದಲ್ಲಿ ಸ್ತ್ರೀ ಸಾಗರ

ಮತ ಜಾಗೃತಿಯ ಹಬ್ಬದಲ್ಲಿ ಒಗ್ಗೂಡಿದ ಮಹಿಳೆಯರು

Published:
Updated:
Prajavani

ಚಾಮರಾಜನಗರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಮಹತ್ವ ತಿಳಿಸಿ ಅರಿವು ಮೂಡಿಸುವ ಸಲುವಾಗಿ ಗುರುವಾರ ಹಮ್ಮಿಕೊಂಡಿದ್ದ ಸ್ವಸಹಾಯ ಮಹಿಳಾ ಸಂಘಗಳ ಮತದಾನ ‘ಜಾಗೃತಿ ಸಮಾವೇಶ’ದಲ್ಲಿ  ಸುಮಾರು 5 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಅಂಗವಿಕಲರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 

ಹಲವಾರು ವಿಶಿಷ್ಟ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ ಮತದಾನ ಜಾಗೃತಿ ಮೂಡಿಸಲಾಯಿತು. ಮಹಿಳಾ ಸದಸ್ಯರು ಕೇಸರಿ, ಬಿಳಿ, ಹಸಿರು ಬಣ್ಣದ ಸೀರೆ ಧರಿಸಿ ರಾಷ್ಟ್ರಧ್ವಜ ಮಾದರಿಯಲ್ಲಿ ನಿಂತಿದ್ದರು, ಶಾಲಾ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಬ್ಯಾಂಡ್ ನುಡಿಸಿದರು. ಗೊರವರ ಕುಣಿತ, ಗೊರುಕನ ಕುಣಿತ, ನಾದಸ್ವರ, ಡೊಳ್ಳು ಕುಣಿತ, ಗಾರುಡಿ ಗೊಂಬೆ, ವೀರಗಾಸೆ, ಬೀಸು ಕಂಸಾಲೆ, ಹುಲಿ ವೇಷದಾರಿ ಸೇರಿದಂತೆ ಅನೇಕ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮತದಾನದ ಪ್ರಾಮುಖ್ಯವನ್ನು ಸಾರಿದವು. 

ಡ್ರೋನ್‌ ಕ್ಯಾಮೆರಾ, ವಿಡಿಯೊ, ಛಾಯಾಚಿತ್ರ ಪ್ರದರ್ಶನ: ಡ್ರೋನ್‌ ಕ್ಯಾಮೆರಾ ಬಳಸಿ ಎಲ್‌ಸಿಡಿ ಪರದೆಯ ಮೂಲಕ ಸ್ವೀಪ್ ಚಟುವಟಿಕೆಗಳ ವಿಡಿಯೊ, ಛಾಯಾಚಿತ್ರಗಳನ್ನು ಹಾಡಿನ ಹಿನ್ನಲೆಯಲ್ಲಿ ಪ್ರದರ್ಶಿಸಲಾಯಿತು. ಬೆಳಗ್ಗೆ 6ಗಂಟೆಯಿಂದಲೇ ಮಹಿಳೆಯರು ಕ್ರೀಡಾಂಗಣದಲ್ಲಿ ನೆರೆದಿದ್ದರು. ಜಿಲ್ಲೆಯ ವಿವಿಧ ಗ್ರಾಮಗಳಿಂದ ಸ್ವ ಸಹಾಯ ಗುಂಪು, ಸಂಘ– ಸಂಸ್ಥೆಗಳ ಮಹಿಳೆಯರು, ಜಿಲ್ಲೆ, ತಾಲ್ಲೂಕು ವ್ಯಾಪ್ತಿಯ ಅಂಗವಿಕಲರ ಸಂಘದ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಿದ್ದರು.

ತ್ರಿವರ್ಣ ಟೋಪಿ: ಬಿಸಿಲ ತಾಪದಿಂದ ರಕ್ಷಸಿಕೊಳ್ಳಲು ಎಲ್ಲ ಮಹಿಳೆಯರಿಗೂ ಕೆಸರಿ, ಬಿಳಿ, ಹಸಿರು ಬಣ್ಣದ ಕಾಗದದ ಟೋಪಿ ನೀಡಲಾಗಿತ್ತು. 

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು, ‘ಮತದಾನದಿಂದ ಯಾರೊಬ್ಬರೂ ವಂಚತರಾಗಬಾರದು. ಮುಖ್ಯವಾಗಿ ಮಹಿಳೆಯರೆಲ್ಲರೂ ತಪ್ಪದೇ ಮತ ಚಲಾಯಿಸಬೇಕು’ ಎಂದು ಹೇಳಿದರು.

‘ಏಪ್ರಿಲ್‌ 18ರಂದು ಮತದಾನ ನಡೆಯಲಿದೆ. ಯಾರೂ ಕೂಡ ಆ ದಿನವನ್ನು ಮರೆಯಬಾರದು. ಅಂದು ಎಲ್ಲರೂ ಮತ ಚಲಾಯಿಸಬೇಕು. ಈ ಉದ್ದೇಶದಿಂದ ಜಿಲ್ಲೆಯ ಎಲ್ಲ ಸ್ವಸಹಾಯ, ಸಂಘ– ಸಂಸ್ಥೆಗಳ ಮಹಿಳೆಯರನ್ನು ಕರೆಸಿ ಮತ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಜಾಗೃತಿ ಜಾಥಾ: ಸಮಾವೇಶದ ನಂತರ ನೆರೆದಿದ್ದ ಎಲ್ಲ ಅಂಗವಿಕಲರು ತ್ರಿಚಕ್ರ ವಾಹನಗಳ ಮೂಲಕ ಕ್ರೀಡಾಂಗಣ, ನಂಜನಗೂಡು ರಸ್ತೆ ಮಾರ್ಗ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದವರೆಗೆ ವಾಹನ ಚಲಾಯಿಸಿ ಮತದಾನ ಜಾಗೃತಿ ಮೂಡಿಸಿದರು.

ಇದೇ ಸಂದರ್ಭದಲ್ಲಿ ಕಾವೇರಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್.ಲತಾಕುಮಾರಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್, ಲೋಕಸಭಾ ಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕರಾದ ಕಪ ಕೋಲಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಕೈಮಗ್ಗದ ರೇಷ್ಮೆ ಸೀರೆ ಬಿಡುಗಡೆ

ಕೊಳ್ಳೆಗಾಲದ ಕೈಮಗ್ಗ ನೇಕಾರರು ತಯಾರಿಸಿದ ಮತದಾನ ಸಹಾಯವಾಣಿ, ಆ್ಯಪ್‌, ಮತಯಂತ್ರಗಳ ಲಾಂಛನವನ್ನು ಒಳಗೊಂಡ ರೇಷ್ಮೆಸೀರೆಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಅಹವಾಲು ತಿಳಿಸಲು ಸ್ಥಾಪಿಸಲಾಗಿರುವ ಸಹಾಯವಾಣಿ ‘1950’, ಮಾದರಿ ನೀತಿ ಸಂಹಿತೆ ಹಾಗೂ ಪಕ್ಷದ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಬಗ್ಗೆ ನಿಗಾ ಇಡಲು ಚುನಾವಣಾ ಆಯೋಗದ ‘ಸಿ ವಿಜಿಲ್‌’ ತಂತ್ರಾಂಶಳನ್ನು ವಿನ್ಯಾಸ ಮಾಡಿದ್ದ ಸೀರೆ ಹಾಗೂ ಇವಿಎಂ, ವಿವಿ ಪ್ಯಾಟ್‌ ಮತಯಂತ್ರಗಳ ಲಾಂಛನ ಹೊಂದಿರುವ ನಾಲ್ಕು ಸೀರೆಗಳನ್ನು ವೇದಿಕೆಯಲ್ಲಿ ಗಣ್ಯರು ಬಿಡುಗಡೆಗೊಳಿಸಿದರು.

ಬಿಸಿಲಿಗೆ ಬಸವಳಿದ ಮಹಿಳೆಯರು, ವೃದ್ಧೆಯರು

ಸಮಾವೇಶದಲ್ಲಿ ಭಾಗವಹಿಸುವವರಿಗೆ ನೆರಳಿನ ವ್ಯವಸ್ಥೆ ಇರಲಿಲ್ಲ. ತಿಂಡಿ ವ್ಯವಸ್ಥೆಯೂ ಇರಲಿಲ್ಲ. ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಟ್ಯಾಂಕರ್‌ ನೀರನ್ನು ಮಾತ್ರ ಇರಿಸಿದ್ದರು. ಬಿಸಿಲ ತಾಪಕ್ಕೆ ಬಸವಳಿದ ಮಹಿಳೆಯರು, ವೃದ್ಧರು ಕುಡಿಯುವ ನೀರಿಗಾಗಿ ಪರದಾಡಿದರು.

ಅಸ್ವಸ್ಥಗೊಂಡ ಮಹಿಳೆ: ಸಮಾವೇಶ ಮುಗಿದ ನಂತರ ಹೊರ ಹೋಗಲು ಸಿಂಥೆಟಿಕ್‌ ಟ್ರ್ಯಾಕ್‌ನಿಂದ ಗೇಟ್‌ ತೆರೆಯಲಾಗಿತ್ತು. ಇಲ್ಲಿ ಹೆಚ್ಚಿನ ಜನ ಸೇರಿದ್ದರಿಂದ ಹೊರ ಹೋಗಲು ನೂಕುನುಗ್ಗಲು ಆರಂಭವಾಯಿತು. ಈ ವೇಳೆ ಗರ್ಭಿಣಿಯೊಬ್ಬರನ್ನು ಸಹಾಯಕಿಯೊಬ್ಬರು ಗೇಟ್‌ನಿಂದ ಹೊರಗೆ ಕರೆದುಕೊಂಡು ಹೋಗಲು ಧಾವಿಸಿದರು. ಇದೇ ಸಂದರ್ಭದಲ್ಲಿ ನೂಕು ನುಗ್ಗಲು ಆರಂಭವಾದ್ದರಿಂದ ಗರ್ಭಿಣಿ ಹೊರಹೋಗಲಾರದೆ ಹಿಂತಿರುಗಿ ಮತ್ತೊಂದು ದಾರಿಯಲ್ಲಿ ಹೋದರು. ಬಿಸಿಲ ತಾಪಕ್ಕೆ ಒಬ್ಬ ಮಹಿಳೆ ಅಸ್ವಸ್ಥಗೊಂಡರು. ಅವರಿಗೆ ಆಂಬ್ಯುಲೆನ್ಸ್‌ನಲ್ಲೇ ಚಿಕಿತ್ಸೆ ಕೊಡಲಾಯಿತು.

ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ದಳ, ಆಂಬ್ಯುಲೆನ್ಸ್‌ ಹಾಗೂ ಬಿಗಿ ಪೊಲೀಸ್‌ ಬದೋಬಸ್ತ್‌ ಒದಗಿಸಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !