ಸ್ವಚ್ಛ ಸರ್ವೇಕ್ಷಣೆ; ಕಲಬುರ್ಗಿಗೆ ರಾಜ್ಯದಲ್ಲಿ 11ನೇ ಸ್ಥಾನ

7
ವೈಜ್ಞಾನಿಕ ಕಸ ಸಂಸ್ಕರಣೆ, ಬಯಲು ಶೌಚ ಮುಕ್ತ ಇಲ್ಲದಿರುವುದು ಹಿನ್ನಡೆಗೆ ಕಾರಣ

ಸ್ವಚ್ಛ ಸರ್ವೇಕ್ಷಣೆ; ಕಲಬುರ್ಗಿಗೆ ರಾಜ್ಯದಲ್ಲಿ 11ನೇ ಸ್ಥಾನ

Published:
Updated:

ಕಲಬುರ್ಗಿ: ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಈಚೆಗೆ ಬಿಡುಗಡೆ ಮಾಡಿರುವ ಸ್ವಚ್ಛ ಸರ್ವೇಕ್ಷಣೆ–2018ರಲ್ಲಿ ಕಲಬುರ್ಗಿ ಮಹಾನಗರ ಪಾಲಿಕೆ ದೇಶದಲ್ಲಿ 273 (485ಕ್ಕೆ) ಹಾಗೂ ರಾಜ್ಯದಲ್ಲಿ 15 (26ಕ್ಕೆ)ನೇ ಸ್ಥಾನ ಪಡೆದಿದೆ. ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳಲ್ಲಿ ಮೊದಲ ಸ್ಥಾನದಲ್ಲಿದೆ.

ಮನೆ ಮನೆಯಿಂದ ಕಸ ಸಂಗ್ರಹ. ಕಸ ಸಾಗಿಸುವ ವಾಹನಗಳಿಗೆ ಜಿಪಿಎಸ್‌ ಉಪಕರಣ ಅಳವಡಿಕೆ, ಪೌರಕಾರ್ಮಿಕರಿಗೆ ಬೆಳಿಗ್ಗೆಯ ಉಪಾಹಾರ ಮತ್ತು ಸೌಲಭ್ಯ ಕಲ್ಪಿಸಿರುವುದು ಕಲಬುರ್ಗಿ ಮಹಾನಗರ ಪಾಲಿಕೆಗೆ ಉತ್ತಮ ಅಂಕ ತಂದುಕೊಟ್ಟಿದೆ. ಆದರೆ, ವೈಜ್ಞಾನಿಕವಾಗಿ ಕಸ ಸಂಸ್ಕರಣೆ ಮತ್ತು ವಿಲೇವಾರಿ ಯಂತ್ರ ಇಲ್ಲದಿರುವುದು ಹಾಗೂ ಬಯಲು ಶೌಚಮುಕ್ತಗೊಳ್ಳದಿರುವುದು ಹಿನ್ನಡೆಗೆ ಕಾರಣವಾಗಿದೆ.

ಈ ವರದಿಗೆ ಪರಿಗಣಿಸಿರುವ ದೇಶದ 485 ಜಿಲ್ಲೆಗಳ ಪೈಕಿ ಕಲಬುರ್ಗಿ ಮಹಾನಗರ ಪಾಲಿಕೆ 273ನೇ ಸ್ಥಾನ ಲಭಿಸಿದೆ. ಕಳೆದ ವರ್ಷ ಇದು 294ನೇ ಸ್ಥಾನದಲ್ಲಿತ್ತು. ಅದಕ್ಕಿಂತ ಹಿಂದಿನ ವರ್ಷ (2016)ದಲ್ಲಿ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅರ್ಹತೆಯನ್ನೇ ಪಡೆದಿರಲಿಲ್ಲ!

‘273ನೇ ಸ್ಥಾನ ತೃಪ್ತಿಕರವಲ್ಲ ಎಂಬುದು ನಿಜ. ಆದರೆ, ಕಳೆದ ಸಾಲಿನಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ 291ನೇ ಸ್ಥಾನದಲ್ಲಿತ್ತು. ಈ ವರ್ಷ ಅದು 390ನೇ ಸ್ಥಾನಕ್ಕೆ ಕುಸಿತ ಕಂಡಿದೆ. 5ನೇ ಸ್ಥಾದಲ್ಲಿದ್ದ ಮೈಸೂರು 8ನೇ ಸ್ಥಾನಕ್ಕೆ ಕುಸಿದಿದೆ. ಇದನ್ನು ಗಮನಿಸಿದರೆ ನಮ್ಮ ಸಾಧನೆ ಉತ್ತಮವಾಗಿದೆ’ ಎನ್ನುತ್ತಾರೆ ಕಲಬುರ್ಗಿ ಮಹಾನಗರ ಪಾಲಿಕೆಯ ಪರಿಸರ ಎಂಜಿನಿಯರ್‌ ಮುನಾಫ್‌ ಪಟೇಲ್‌.

‘ಕಸ ವಿಲೇವಾರಿ ವಿಷಯದಲ್ಲಿ ರಾಷ್ಟ್ರೀಯ ಸರಾಸರಿ ಅಂಕ 287.63ರಷ್ಟಿದ್ದರೆ, ನಮಗೆ 364 ಅಂಕ ಲಭಿಸಿವೆ. ಕಸದ ಸಮಸ್ಯೆಯ ದೂರು ವಿಲೇವಾರಿ ವಿಷಯದಲ್ಲಿ ರಾಷ್ಟ್ರೀಯ ಸರಾಸರಿ 806.15ರಷ್ಟಿದ್ದರೆ, ನಮ್ಮದು 886.99ರಷ್ಟಿದೆ. ದೂರು ಸಲ್ಲಿಕೆಯಾದ ಅರ್ಧಗಂಟೆಯಿಂದ 24 ಗಂಟೆಗಳ ಒಳಗಾಗಿ ಅವುಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಈ ಎರಡು ವಿಭಾಗಗಳಲ್ಲಿ ನಮ್ಮ ಸಾಧನೆ ರಾಷ್ಟ್ರೀಯ ಸರಾಸರಿಗಿಂತಲೂ ಉತ್ತಮವಾಗಿದೆ’ ಎನ್ನುವುದು ಅವರ ವಿವರಣೆ.

ನಿತ್ಯ 200 ಮೆ.ಟನ್‌ ಕಸ ಸಂಗ್ರಹ

ಕಲಬುರ್ಗಿಯಲ್ಲಿ ನಿತ್ಯ ಸರಾಸರಿ 200 ಮೆ.ಟನ್‌ ಕಸ ಸಂಗ್ರಹವಾಗುತ್ತದೆ. ಕಸವನ್ನು ವಿಂಗಡಿಸದೇ ಹಾಗೇ ಹಾಕಲಾಗುತ್ತದೆ. ಅದು ತನ್ನಿಂದ ತಾನೇ ಕೊಳೆತ ನಂತರ ಕಾರ್ಮಿಕರ ನೆರವಿಂದ ಅದನ್ನು ವಿಂಗಡಿಸಿ, ಕೊಳೆತು ಗೊಬ್ಬರವಾಗಿ ಮಾರ್ಪಟ್ಟಿರುವುದನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ.

‘ಇದು ನೂರರಷ್ಟು ಗೊಬ್ಬರ ಇರುವುದಿಲ್ಲ. ಅದರಲ್ಲಿ ಶೇ 25ರಷ್ಟು ಮಣ್ಣು, ಶೇ 10ರಷ್ಟು ನೀರಿನ ಅಂಶ ಇರುತ್ತದೆ. ಕಸ ವಿಂಗಡಣೆ ಹಾಗೂ ಸಂಸ್ಕರಣೆಯ ಘಟಕ ಮಂಜೂರಾಗಿದ್ದು, ಯಂತ್ರ ಅಳವಡಿಸಿದರೆ ಉತ್ತಮವಾದ ಗೊಬ್ಬರ ಉತ್ಪಾದನೆ ಸಾಧ್ಯ. ಸದ್ಯ ಪಹಣಿ ಹಾಗೂ ಬೇಡಿಕೆ ಪತ್ರ ಪಡೆದು ರೈತರಿಗೆ ಉಚಿತವಾಗಿ ಗೊಬ್ಬರ ನೀಡಲಾಗುತ್ತಿದೆ’ ಎನ್ನುತ್ತಾರೆ ಅಧಿಕಾರಿಗಳು.

ವೈಯಕ್ತಿಕ ಶೌಚಾಲಯಗಳಿಗೆ ನೆರವು

‘ಸಮೀಕ್ಷೆಯಂತೆ ಕಲಬುರ್ಗಿ ನಗರದಲ್ಲಿ ಇನ್ನೂ ಮೂರು ಸಾವಿರ ವೈಯಕ್ತಿಕ ಶೌಚಾಲಯಗಳು ನಿರ್ಮಾಣವಾಗಬೇಕಿವೆ. ಜನರು ಅರ್ಜಿ ಸಲ್ಲಿಸಿದರೆ ಸಾಲದು. ಅಲ್ಪಸಂಖ್ಯಾತರು, ಅಂಗವಿಕಲರು, ಎಸ್‌ಸಿ–ಎಸ್‌ಟಿಯವರಿಗೆ ಪ್ರತ್ಯೇಕ ಬಾಬ್ತಿನಲ್ಲಿ ಅನುದಾನ ನೀಡಬೇಕಾಗುತ್ತದೆ. ಅದಕ್ಕೆ ಅವರು ಸಂಬಂಧಿಸಿದ ದಾಖಲೆ ಸಲ್ಲಿಸಬೇಕು’ ಎನ್ನುವುದು ಪಾಲಿಕೆಯ ಅಧಿಕಾರಿಗಳ ಮನವಿ.

‘ಒಂದು ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ₹15 ಸಾವಿರ ನೆರವು ನೀಡಲಾಗುತ್ತದೆ. ಶೌಚಾಲಯ ಇಲ್ಲದವರು ತಮ್ಮ ಮನೆಯ ದಾಖಲೆ. ಬಾಡಿಗೆ ಮನೆಯಾಗಿದ್ದರೆ ಬಾಡಿಕೆ ಒಪ್ಪಂದ ಪತ್ರ, ಆದಾಯ ಮತ್ತು ಜಾತಿ ಪತ್ರ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ, ಭಾವಚಿತ್ರ ಸಮೇತ ಅರ್ಜಿ ಸಲ್ಲಿಸಬೇಕು. ಪಾಲಿಕೆಯ ಸಿಬ್ಬಂದಿಯೇ ಸ್ಥಳಕ್ಕೆ ತೆರಳಿ ಸಮೀಕ್ಷೆ ನಡೆಸುತ್ತಾರೆ’ ಎನ್ನುವುದು ಅವರ ಮಾಹಿತಿ.

ವೈಜ್ಞಾನಿಕವಾಗಿ ಕಸ ಸಂಸ್ಕರಣೆ ಹಾಗೂ ಶೌಚಾಲಯಗಳ ನಿರ್ಮಾಣದಲ್ಲಿ ಸಾಧನೆ ಮಾಡಿದ್ದರೆ ದೇಶದ ಸ್ವಚ್ಛ 100 ನಗರಗಳ ಪಟ್ಟಿಯಲ್ಲಿ ಕಲಬುರ್ಗಿಯೂ ಇರುತ್ತಿತ್ತು.
ಮುನಾಫ್‌ ಪಟೇಲ್‌, ಪಾಲಿಕೆಯ ಪರಿಸರ ಎಂಜಿನಿಯರ್‌

55 ವಾರ್ಡ್‌ಗಳು
5.43 ಲಕ್ಷ ಜನಸಂಖ್ಯೆ (2011ರ ಜನಗಣತಿ)
56 ಸಾವಿರ ಆಸ್ತಿಗಳು
3 ಸಾವಿರ ವೈಯಕ್ತಿಕ ಶೌಚಾಲಯಗಳ ಕೊರತೆ
1,024 ಪೌರಕಾರ್ಮಿಕರು
120 ಕಸ ಸಾಗಿಸುವ ವಾಹನ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !