ಭಾನುವಾರ, ಸೆಪ್ಟೆಂಬರ್ 19, 2021
29 °C
ಸ್ವಾಮಿ ವಿವೇಕಾನಂದರ ಷಿಕಾಗೊ ಭಾಷಣದ 125ನೇ ವರ್ಷಾಚರಣೆ

ವಿಶ್ವಮಾನವನಾಗು; ವಿಶ್ವವಿಜೇತನಾಗು

ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮ, ಗದಗ Updated:

ಅಕ್ಷರ ಗಾತ್ರ : | |

ಅದು 1892ನೇ ಇಸ್ವಿ. ಸ್ವಾಮಿ ವಿವೇಕಾನಂದರು ಗುಜರಾತಿನ ಪೋರಬಂದರಿನಲ್ಲಿ ದಿವಾನ್‌ ಪಾಂಡುರಂಗಶಾಸ್ತ್ರಿ ಅವರ ಅತಿಥಿಯಾಗಿ ತಂಗಿದ್ದ ದಿನಗಳವು. ಆ ಸಂದರ್ಭದಲ್ಲಿಯೇ, ಅಮೆರಿಕದಲ್ಲಿ ಸರ್ವಧರ್ಮ ಸಮ್ಮೇಳನವೊಂದು ನಡೆಯಲಿದೆ ಎಂಬ ವಿಷಯ ಅವರಿಗೆ ತಿಳಿಯುತ್ತದೆ.

ಹೃದಯ, ಮನಸ್ಸನ್ನು ಜ್ವಾಲಾಮುಖಿಯನ್ನಾಗಿಸಿಕೊಂಡು ಕನ್ಯಾಕುಮಾರಿಯ ಬಂಡೆಯ ಮೇಲೆ ಮೂರು ದಿನ ಕಳೆದ ಸ್ವಾಮೀಜಿ, ಕೊನೆಗೂ ಅಮೆರಿಕಕ್ಕೆ ಹೋಗುವುದೇ ಸರಿ ಎಂದು ಮನಸ್ಸನ್ನು ದೃಢಮಾಡಿಕೊಳ್ಳುತ್ತಾರೆ. ಆದರೆ, ಯಾವ ಕಾರಣಕ್ಕಾಗಿ? ಕಾರಣ ತಿಳಿದರೆ ಆಶ್ಚರ್ಯವಾಗುವುದು. ನಮಗೆಲ್ಲ ಗೊತ್ತಿರುವಂತೆ, ಧರ್ಮ ಸಮ್ಮೇಳನದಲ್ಲಿ ಭಾಗವಹಿಸಲೆಂದೇನೂ ಅಲ್ಲ; ಅದು ಗೌಣ.
ದೇಶದಲ್ಲಿ ಅವರು ಸಂಚರಿಸುತ್ತಿದ್ದಾಗ ಕಣ್ಣಾರೆ ಕಂಡ ಹೃದಯವಿದ್ರಾವಕ ದೃಶ್ಯಗಳು ಮತ್ತೆ ಮತ್ತೆ ಅವರ ಕಣ್ಣಿಗೆ ರಾಚುತ್ತಿದ್ದವು. ಕಿತ್ತು ತಿನ್ನುವ ಬಡತನ, ಅಜ್ಞಾನ, ಅಂಧಕಾರ, ದ್ವೇಷ, ವೈಷಮ್ಯ, ಉಸಿರಾಡುವ ಹೆಣಗಳಂತೆ, ಮಣ್ಣಿನ ಬೊಂಬೆಗಳಂತೆ ಭರವಸೆಯೇ ಇಲ್ಲದವರಂತೆ ಜಡತ್ವ, ನಪುಂಸಕತನವನ್ನೇ ಉಸಿರಾಗಿಸಿಕೊಂಡವರು, ತಾವೂ ಮನುಷ್ಯರು ಎಂಬುದನ್ನೇ ಮರೆತು ಹೋದವರಂತೆ ಬದುಕುತ್ತಿದ್ದ ಜನಸಾಮಾನ್ಯರು ಒಂದೆಡೆಯಾದರೆ; ಸ್ವಾರ್ಥ, ಕಂದಾಚಾರಗಳನ್ನೇ ಧರ್ಮವನ್ನಾಗಿಸಿಕೊಂಡ ಹೃದಯಹೀನ, ಮನುಷ್ಯತ್ವದ ಸೋಂಕೇ ಇಲ್ಲದ ಆಷಾಢಭೂತಿತನ, ಹೇಡಿತನ, ನಾಸ್ತಿಕತೆ, ಭೋಗಲೋಲುಪತೆ ಅದರಲ್ಲೇ ಸಾರ್ಥಕತೆ ಕಾಣುತ್ತಿದ್ದ ಮೇಲ್ವರ್ಗದ ಸಮಾಜ ಇನ್ನೊಂದು ಕಡೆ!

ಕೆಳವರ್ಗದ ಜನರ ಕೀಳರಿಮೆಯ ಬದುಕಿಗೆ, ಜಡತ್ವ, ಅಸಮಾನತೆಯ ನಿವಾರಣೆಗಾಗಿ ಅವರಿಗೊಂದು ವೇದಿಕೆ ಹಾಗೂ ಸಂಪನ್ಮೂಲ ಬೇಕಿತ್ತು.

ತ್ಯಾಗಿ ಯುವಕರನ್ನು– ಪಾವಿತ್ರ್ಯ, ನಿಸ್ವಾರ್ಥತೆ, ಸೇವೆಯನ್ನೇ ಉಸಿರಾಗಿಸಿಕೊಂಡ ಸಹಸ್ರಾರು ಸಿಂಹ ಸದೃಶ್ಯ ಯುವಕರನ್ನು ತರಬೇತುಗೊಳಿಸಿ ಆತ್ಮನ ಮಹಿಮೆ, ಶಕ್ತಿ, ಸ್ವಾತಂತ್ರ್ಯ ಕುರಿತು ಜನರಿಗೆ ತಿಳಿಸಿಕೊಡಬೇಕಿತ್ತು. ಆತ್ಮಗೌರವದ ಸೋಂಕೂ ಇಲ್ಲದ ಈ ಬರ್ಬರ ಸ್ಥಿತಿಯಿಂದ ಅವರನ್ನು ಪಾರು ಮಾಡಬೇಕಿತ್ತು.

ಇದಕ್ಕೆ ಬೇಕಾದ ಯುವಕರೇನೋ ಸಿಗಬಹುದು. ಆದರೆ ಹಣ? ಸದ್ಯಕ್ಕೆ ಭಾರತದಲ್ಲಂತೂ ಅದರ ಭರವಸೆಯಿಲ್ಲ. ಏನು ಮಾಡುವುದು ಎಂಬ ಯೋಚನೆಯೇ ಕೊನೆಗೆ ಅವರನ್ನು ಕರೆದೊಯ್ದದ್ದು ಅಮೆರಿಕಕ್ಕೆ.

ಅಮೆರಿಕಕ್ಕೆ ಹೋಗಬೇಕು, ಹೇಗಿದ್ದರೂ ಅಲ್ಲಿ, ಸರ್ವಧರ್ಮ ಸಮ್ಮೇಳನ ನಡೆಯುತ್ತಿದೆ. ಅದರಲ್ಲಿ ಭಾಗವಹಿಸಿ ತಮ್ಮ ಧೀ ಶಕ್ತಿ ಮತ್ತು ಅಧ್ಯಾತ್ಮಿಕ ಶಕ್ತಿಗಳಿಂದ ಅವರನ್ನು ಗೆಲ್ಲಬೇಕು. ಭಾರತದ ಪುನರುತ್ಥಾನಕ್ಕಾಗಿ ಅವರಿಂದ ನೆರವು ಪಡೆಯಬೇಕು ಎಂಬ ವಿವೇಕಾನಂದರ ಈ ತಾಯ್ಗರುಳೇ ಅವರನ್ನು ಅಲ್ಲಿಗೆ ತಂದು ನಿಲ್ಲಿಸಿತು.

ಮದ್ರಾಸಿನಲ್ಲಿದ್ದ ಅವರ ಶಿಷ್ಯರು ಮನೆಮನೆಗೂ ತೆರಳಿ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣ, ಮೈಸೂರು, ಖೇತ್ರಿ ರಾಜರ ಸಹಾಯದಿಂದ ಅಮೆರಿಕಕ್ಕೆ ತೆರಳಿದರು. ಆದರೆ, ಇವರು ಹಿಂದೂ ಧರ್ಮದ ಅಧಿಕೃತ ಪ್ರತಿನಿಧಿ ಎಂದು ಸಾರುವ ಯಾವ ಪತ್ರವನ್ನೂ ಅವರು ಜತೆಯಲ್ಲಿ ಒಯ್ದಿರಲಿಲ್ಲ ಅಥವಾ ಭಾರತೀಯರಾರೂ ಅವರಿಗೆ ನೀಡಿರಲಿಲ್ಲ. ಪಾಶ್ಚಿಮಾತ್ಯರ ಶಿಸ್ತು ನಿರ್ದಾಕ್ಷಿಣ್ಯವಾಗಿ ವಿವೇಕಾನಂದರಿಗೆ ಅವಕಾಶವನ್ನು ತಿರಸ್ಕರಿಸಿತ್ತು!

ಈ ಕಾರಣದಿಂದ ಅವರು ಒಂದು ಹೋಟೆಲ್‌ನಲ್ಲಿ ಉಳಿಯಬೇಕಾಯಿತು. ದುಬಾರಿಯಾದ ಷಿಕಾಗೊ ನಗರ ಶೀಘ್ರವಾಗಿ ಅವರ ಜೇಬನ್ನು ಖಾಲಿಯಾಗಿಸುತ್ತಿತ್ತು. ವಿಧಿಯಿಲ್ಲದೇ, ರೈಲಿನಲ್ಲಿ ಪರಿಚಯವಾಗಿದ್ದ ಮಿಸ್‌ ಕ್ಯಾಥರೀನ್‌ ಆಹ್ವಾನದಂತೆ ಬಾಸ್ಟನ್‌ಗೆ ತೆರಳಿದರು. ವಿಧಿ ವಿಚಿತ್ರವನ್ನು ಬಲ್ಲವರುಂಟೇ? ಜಗತ್‌ಪ್ರಸಿದ್ಧ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಗ್ರೀಕ್‌ ಭಾಷೆಯನ್ನು ಬೋಧಿಸುತ್ತಿದ್ದ ಪ್ರೊ. ಜೆ.ಎಚ್‌.ರೈಟ್‌, ಕ್ಯಾಥರೀನಳ ನೆರೆಮನೆಯ ನಿವಾಸಿ. ಸ್ವಾಮೀಜಿಯೊಡನೆ ಪ್ರತಿನಿತ್ಯವೂ ಸಂಭಾಷಣೆಯಲ್ಲಿ ತೊಡಗುತ್ತಿದ್ದ ರೈಟ್‌, ಅವರ ಅಮೂಲ್ಯ ವಿಚಾರಧಾರೆಯಿಂದ ಮಂತ್ರ ಮುಗ್ಧರಾದರು.

ಮರಣೋನ್ಮುಖನನ್ನು ಮಹಾದೇವನನ್ನಾಗಿಸಿ ತಾಂಡವ ನೃತ್ಯಕ್ಕಿಳಿಸುವ, ಜೀವಹೀನನಿಗೆ ಸಂಜೀವಿನಿಯಾಗಬಲ್ಲ, ಭೋರ್ಗರೆಯುವ ಅಮೃತ ಪ್ರವಾಹವನ್ನೇ ವಿವೇಕಾನಂದರಲ್ಲಿ ಕಂಡ ರೈಟ್‌,  ‘ಈ ಅದ್ಭುತ ವಿಚಾರಗಳೆಲ್ಲ ಇಡೀ ಅಮೆರಿಕಕ್ಕೆ ಪರಿಚಯವಾಗಬೇಕು; ಅದಕ್ಕಿರುವ ಸುಲಭ ಉಪಾಯವೆಂದರೆ ಸದ್ಯದಲ್ಲಿಯೇ ಇಲ್ಲಿ ನಡೆಯುತ್ತಿರುವ ಜಾಗತಿಕ ಧರ್ಮ ಸಮ್ಮೇಳನದಲ್ಲಿ ನೀವು ಭಾಗವಹಿಸಬೇಕು’ ಎಂದು ಬಿನ್ನವಿಸಿದರು.

ಆ ಉದ್ದೇಶಕ್ಕಾಗಿಯೇ ತಾವು ಅಮೆರಿಕಕ್ಕೆ ಬಂದಿದ್ದಾಗಿಯೂ, ಆದರೆ, ಪರಿಚಯಪತ್ರವಿಲ್ಲದ ಕಾರಣ ತಾವು ತಿರಸ್ಕೃತವಾಗಿದ್ದಾಗಿಯೂ ವಿವೇಕಾನಂದರು ಅರುಹುತ್ತಾರೆ.

ವಿವೇಕಾನಂದರಿಗೆ ಪರಿಚಯ ಕೇಳುವುದು ಸೂರ್ಯನಿಗೆ ಹೊಳೆಯುವ ಅಧಿಕಾರವನ್ನು ಪ್ರಶ್ನಿಸಿದಷ್ಟೇ ಮೂರ್ಖತನ ಎಂದು ಪ್ರೊಫೆಸರ್‌ ರೈಟ್‌ ಭಾವಿಸಿದರಲ್ಲದೇ, ಸ್ವಯಂ ತಾವೇ ಪರಿಚಯಪತ್ರ ಕೊಡಲು ಮುಂದಾದರು. ‘ಇತಿಹಾಸದಲ್ಲಿ ದಾಖಲಿಸಬೇಕಾದ ಪರಿಚಯವಿದು. ಮನುಷ್ಯನ ಧೀಶಕ್ತಿಯ, ಸನ್ಯಾಸ ಸಂಸ್ಕೃತಿ, ತಪಸ್ಸು, ಧ್ಯಾನ, ಜೀವನಗಳ ಹಿರಿಮೆ ಗರಿಮೆಗಳ ಪರಿಚಯವಿದು’ ಎನ್ನುವ ಅವರು, ಆ ಪತ್ರದಲ್ಲಿ ಬರೆಯುತ್ತಾರೆ; ‘ನಮ್ಮ ಅಮೆರಿಕದ ಎಲ್ಲ ಮೇಧಾವಿ ಪ್ರೊಫೆಸರ್‌ಗಳನ್ನು ಒಟ್ಟುಗೂಡಿಸಿದರೂ ಅದನ್ನೂ ಮೀರುವ ಮೇಧಾಶಕ್ತಿ ಈ ಭಾರತೀಯ ಸನ್ಯಾಸಿಯಲ್ಲಿದೆ’ ಎಂದು!

ಆತಂಕಗಳನ್ನೆಲ್ಲ ಪರಿಹರಿಸಿಕೊಂಡು ವೇದಿಕೆಯನ್ನೇರಿದ ವಿವೇಕಾನಂದರು 1893ರ ಸೆ.11ರ ಮಧ್ಯಾಹ್ನ 3.30ಕ್ಕೆ ಆ ವಿಶ್ವವೇದಿಕೆಯಿಂದ ಉಪನ್ಯಾಸ ನೀಡುತ್ತಾರೆ; ಆನಂತರ ನಡೆದಿದ್ದೆಲ್ಲವೂ ಇತಿಹಾಸ!

‘ಧರ್ಮ ನಂಬಿಕೆಯಲ್ಲಿಲ್ಲ. ವಿಜ್ಞಾನವನ್ನು ಪರೀಕ್ಷಿಸುವಂತೆ ಧರ್ಮವನ್ನು ಪರೀಕ್ಷಿಸಿ ಒಪ್ಪಿಕೊಳ್ಳಿ. ಅಂಧಶ್ರದ್ಧೆಯಿಂದ ಧರ್ಮವನ್ನೋ, ದೇವನನ್ನೋ ಒಪ್ಪಿಕೊಳ್ಳುವುದಕ್ಕಿಂತ ನಾಸ್ತಿಕನಾಗುವುದು ಮೇಲು’ ಎಂಬ ಅವರ ಮಾತುಗಳು, ಸಂಪ್ರದಾಯವಾದಿಗಳ ಕಣ್ಣನ್ನು ಕೆಂಪಗಾಗಿಸಿದರೆ, ವಿದ್ವಾನ್ ವಲಯಗಳು, ನಾಸ್ತಿಕರು, ಅಜ್ಞೇಯತಾವಾದಿಗಳು ಪ್ರಶ್ನಿಸುವ ಪತ್ರಕರ್ತರು, ಯುವಕರು, ವಿದ್ಯಾರ್ಥಿಗಳು ಅವರೆಡೆಗೆ ಕಿಕ್ಕಿರಿದು ಸೇರುತ್ತಿದ್ದರು.

‘ಭಾರತವು ತನ್ನ ಆಧ್ಯಾತ್ಮಿಕತೆಯಿಂದ ಜಗತ್ತನ್ನು ಗೆಲ್ಲಬೇಕು; ತ್ಯಾಗ ಮತ್ತು ಸೇವೆಗಳೇ ಪ್ರಧಾನ ಆದರ್ಶಗಳು; ಸಮಾಜದ ಅತ್ಯಂತ ಶ್ರೇಷ್ಠ ವ್ಯಕ್ತಿಗಳು ಬಹುಜನ ಹಿತಕ್ಕಾಗಿ ಹಾಗೂ ಬಹುಜನ ಸುಖಕ್ಕಾಗಿ ತ್ಯಾಗ ಮಾಡಬೇಕು; ಸ್ತ್ರೀಯರು ಮತ್ತು ಜನಸಾಮಾನ್ಯರನ್ನು ಕಡೆಗಣಿಸಿದ್ದೇ ದೇಶದ ಅಧಃಪತನಕ್ಕೆ ಕಾರಣ; ದೀನ ದೇವೋಭವ, ದರಿದ್ರ ದೇವೋಭವ, ರೋಗಿ ದೋವೋಭವ, ಪಾಪಿ ದೋವೋಭವ’ ಎಂದವರು ವಿವೇಕಾನಂದರು. ‘ವಿಧವೆಯ ಕಣ್ಣೀರೊರೆಸದ, ಹಸಿದ ಹೊಟ್ಟೆಗೆ ಅನ್ನವನ್ನು ನೀಡದ ದೇವರಲ್ಲಾಗಲೀ ಧರ್ಮದಲ್ಲಾಗಲೀ ನನಗೆ ನಂಬಿಕೆ ಇಲ್ಲ’ ಎನ್ನುವ ಧೀರವಾಣಿ, ಇಲ್ಲಿಯವರೆಗೂ ಇಲ್ಲದಿದ್ದ ಸಾಮಾಜಿಕ ಆಯಾಮವನ್ನು, ಸಾಮಾಜಿಕ ಕಳಕಳಿಯನ್ನು ಧರ್ಮಕ್ಕೆ ನೀಡಿತು. ಮೇಲ್ವರ್ಗದ ಹೃದಯಹೀನತೆಯ ಬಗ್ಗೆ ಅವರು ನೀಡಿದ ಚಾಟಿಯೇಟು, ಸಮಾಜದ ಕಣ್ತೆರೆಸಿತು.

ವಿಶ್ವ ಕೌಟುಂಬಿಕ ಆದರ್ಶವೇ ವಿವೇಕಾನಂದರು ಬಯಸಿದ ಕ್ರಾಂತಿ. ಸಾಮಾಜಿಕ ಸಮಾನತೆಯಲ್ಲಿ ಇಸ್ಲಾಂ ಅವರಿಗೆ ಆದರ್ಶವಾಗಿದ್ದರೆ, ಬುದ್ಧಿ ಹಾಗೂ ಆಧ್ಯಾತ್ಮಿಕತೆಯಲ್ಲಿ ವೇದಾಂತ ಅವರ ಆದರ್ಶಗಳಾಗಿದ್ದವು. ‘ನನಗೆ ಬೇಕಿರುವುದು ಇಸ್ಲಾಮಿಕ್‌ ದೇಹ ಮತ್ತು ವೇದಾಂತದ ಮಿದುಳು’ ಎನ್ನುವ ಮೂಲಕ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಪ್ರತಿಪಾದಿಸಿದರು.

ಕೆಳವರ್ಗದವರಿಗೆ ಅಧಿಕಾರ, ಶಿಕ್ಷಣ ಸಿಗದೇ ದೇಶದ ಪ್ರಗತಿ ಸಾಧ್ಯವಿಲ್ಲ ಎನ್ನುವುದರ ಜೊತೆ ಜೊತೆಗೇ ಪ್ರಸ್ತುತ ಶಿಕ್ಷಣ ಪದ್ಧತಿಯ ಅಪಾಯಗಳೆಡೆಗೆ ನಮ್ಮ ಗಮನವನ್ನು ಸೆಳೆದರು. ಆತ್ಮಗೌರವ, ಆತ್ಮವಿಶ್ವಾಸಗಳಿಗೆ ಮರ್ಮಾಘಾತವನ್ನೇ ನೀಡುತ್ತಿರುವ ಶಿಕ್ಷಣ ಪದ್ಧತಿಯ ಜಾಗದಲ್ಲಿ ಕಬ್ಬಿಣದ ಮಾಂಸ ಖಂಡಗಳು, ಉಕ್ಕಿನ ನರಮಂಡಲ, ವಿದ್ಯುತ್ ಶಕ್ತಿಯಂತಹ ಇಚ್ಛಾಶಕ್ತಿ, ಅಂಜದ, ಮೃತ್ಯುವನ್ನು ಲೆಕ್ಕಿಸದ, ಪ್ರಾಮಾಣಿಕ ವ್ಯಕ್ತಿತ್ವ ನಿರ್ಮಾಣವನ್ನು ಧ್ಯೇಯವಾಗುಳ್ಳ ವ್ಯವಸ್ಥೆಯ ಅವಶ್ಯಕತೆ ಇದೆ ಎಂದು ಗುಡುಗಿದರು.

ಶಿಕ್ಷಣದ, ಎಲ್ಲ ಸುಧಾರಣೆಯ ಗುರಿಯೇ ಆಂತರ್ಯದಲ್ಲಿರುವ ದಿವ್ಯತೆಯನ್ನು ವ್ಯಕ್ತಪಡಿಸುವುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ರೀತಿಯಲ್ಲಿ ಬೆಳೆಯುವ ಸ್ವಾತಂತ್ರ್ಯವಿರಬೇಕು ಎಂದು ಹೇಳಿದ್ದಲ್ಲದೇ, ನಮ್ಮ ನಮ್ಮಲ್ಲೆ ಇರುವ ಈರ್ಷ್ಯೆ, ದ್ವೇಷ, ಅಸೂಯೆಗಳ ಬಗ್ಗೆ ಗಂಭೀರವಾದ ಎಚ್ಚರಿಕೆಯನ್ನು ನೀಡಿದರು.

‘ಬ್ರಾಹ್ಮಣರೊಡನೆ ಜಗಳವಾಡುವುದಕ್ಕೆ ಸಿಗುವ ಪ್ರತಿಯೊಂದು ಅವಕಾಶಕ್ಕಾಗಿ ಕಾಯುತ್ತಾ ಕುಳಿತುಕೊಳ್ಳಬೇಡಿ. ಅವರಿಂದ ಕಲಿಯಿರಿ ಎಂದು ಹೇಳಿದ್ದಲ್ಲದೇ ಬ್ರಾಹ್ಮಣರು ತಮ್ಮ ವಿದ್ಯೆ, ಸಂಸ್ಕೃತಿಗಳನ್ನು ಸಮಾಜದ ಎಲ್ಲ ವರ್ಗಕ್ಕೂ ಧಾರಾಳವಾಗಿ ನೀಡಿ ತಮ್ಮ ಕರ್ತವ್ಯವನ್ನು ಮೆರೆಯುವ ಸಮಯ ಬಂದಿದೆ’ ಎಂದು ಹೇಳಿ ಮಡಿವಂತಿಕೆಯ ಪಟ್ಟುಗಳನ್ನು ಸಡಿಲಗೊಳಿಸಿದರು.

ಈ ಎಲ್ಲ ನಿರ್ಮಾಣಗಳ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ, ಇವುಗಳ ಅನುಷ್ಠಾನ ಭೂಮಿಯಾಗಬಲ್ಲ ರಾಮಕೃಷ್ಣ ಮಠ ಮತ್ತು ಮಿಷನ್‌ ಸ್ಥಾಪಿಸಿ, 1902ರ ಜುಲೈ 4ರಂದು ಯೋಗ ಮಾರ್ಗದಲ್ಲಿ ಶರೀರವನ್ನು ತ್ಯಜಿಸಿದರು. ಬದುಕಿದ 39 ವರ್ಷ 5 ತಿಂಗಳು 24 ದಿನಗಳಲ್ಲಿ ಗುರುದೇವರ ಭವಿಷ್ಯವನ್ನು ನೂರಕ್ಕೆ ನೂರು ನಿಜವಾಗಿಸಿದರು.  

ವೀರಸನ್ಯಾಸಿಯ ಆ ವೀರವಾಣಿಯ 125ನೇ ವರ್ಷಾಚರಣೆಯ ಹೊತ್ತಿನಲ್ಲಿ ‘ವಿಶ್ವಮಾನವನಾಗು; ವಿಶ್ವವಿಜೇತನಾಗು’ ಎಂಬ ಅದೇ ವಾಕ್ಯದ ಪರಿಪಾಲನೆಯಾಗಬೇಕಿದೆ; ಯುವ ಶಕ್ತಿಯ ಚೈತನ್ಯದ ಮೂಲಕ ಹಾಗೂ ಮನುಷ್ಯಧರ್ಮದ ಮೂಲಕ.

(ಲೇಖಕರು ರಾಮಕೃಷ್ಣ ವಿವೇಕಾನಂದ ಆಶ್ರಮ, ಗದಗ)

***
ಅಂಧ ಶ್ರದ್ಧೆಯಿಂದ ಧರ್ಮವನ್ನೋ, ದೇವನನ್ನೋ ಒಪ್ಪಿಕೊಳ್ಳುವುದಕ್ಕಿಂತ ನಾಸ್ತಿಕನಾಗುವುದು ಮೇಲು
– ಸ್ವಾಮಿ ವಿವೇಕಾನಂದರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು