ಜಾಕ್‌ವೆಲ್ ಶೀಘ್ರ ದುರಸ್ತಿಗೆ ಆಗ್ರಹ

7
ಬಳೂತಿಗೆ ಹೋರಾಟಗಾರರೊಂದಿಗೆ ಸ್ವಾಮೀಜಿಗಳ ಭೇಟಿ

ಜಾಕ್‌ವೆಲ್ ಶೀಘ್ರ ದುರಸ್ತಿಗೆ ಆಗ್ರಹ

Published:
Updated:
Prajavani

ಆಲಮಟ್ಟಿ: ಶಾರ್ಟ್ ಸರ್ಕೀಟ್‌ನಿಂದಾಗಿ ಅಗ್ನಿ ಅವಘಡ ಸಂಭವಿಸಿ, ವಿದ್ಯುತ್ ಉಪಕರಣಗಳು ಸುಟ್ಟು ಹೋದ ಮುಳವಾಡ ಏತ ನೀರಾವರಿ ಯೋಜನೆಯ ಬಳೂತಿ ಮುಖ್ಯಸ್ಥಾವರಕ್ಕೆ ಹೂವಿನಹಿಪ್ಪರಗಿ ಕೆರೆ ತುಂಬುವ ಹೋರಾಟಗಾರರೊಂದಿಗೆ ಯರನಾಳ ಸಂಗನಬಸವ ಸ್ವಾಮೀಜಿ, ಬಸವನಬಾಗೇವಾಡಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಹಾಗೂ ಕರಭಂಟನಾಳದ ಶಿವಕುಮಾರ ಸ್ವಾಮೀಜಿ ಗುರುವಾರ ಭೇಟಿ ನೀಡಿದರು.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿ ಗಮನಿಸಿ ಸ್ಥಳಕ್ಕೆ ಭೇಟಿ ನೀಡಿದ ಸ್ವಾಮೀಜಿಗಳು, ಹೋರಾಟಗಾರರಿಂದ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಟಿ.ವೆಂಕಟೇಶ ಹಾಗೂ ಕಾರ್ಯ ನಿರ್ವಾಹಕ ಎಂಜಿನಿಯರ್ ಭರತ ಕಾಂಬಳೆ ಜಾಕ್‌ವೆಲ್‌ನಲ್ಲಿ ಸಂಭವಿಸಿದ ವಿದ್ಯುತ್ ಅವಘಡದ ಬಗ್ಗೆ ವಿವರಿಸಿದರು.

‘ಮುಂದೆ ಈ ರೀತಿಯ ಶಾರ್ಟ್‌ ಸರ್ಕೀಟ್‌ ಸಂಭವಿಸದಂತೆ ಹೊಸ ತಂತ್ರಜ್ಞಾನ ಬಳಸಿ, ದುರಸ್ತಿಗೊಳಿಸುವ ಅಗತ್ಯವಿದೆ. ಇದಕ್ಕಾಗಿ ಕನಿಷ್ಠ 4 ತಿಂಗಳು ಹಿಡಿಯಲಿದೆ’ ಎಂದು ಮುಖ್ಯ ಎಂಜಿನಿಯರ್ ಟಿ.ವೆಂಕಟೇಶ ತಿಳಿಸಿದರು.

ಶೀಘ್ರ ದುರಸ್ತಿಗೆ ಆಗ್ರಹ: ‘ಯುಕೆಪಿ ಯೋಜನೆಯ ಮುಖ್ಯ ಘಟ್ಟ ಬಳೂತಿ ಜಾಕವೆಲ್ ಆಗಿದೆ. ಹಾಗಾಗಿ, ಜಾಕ್‌ವೆಲ್‌ ಅನ್ನು ಶೀಘ್ರ ದುರಸ್ತಿಗೊಳಿಸಬೇಕು. ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕಾದರೆ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ, ತರ್ತು ಕಾಮಗಾರಿಯಾಗಿ ಪರಿಗಣಿಸಿ ತಿಂಗಳೊಳಗೆ ದುರಸ್ತಿ ಕೆಲಸ ಆರಂಭಿಸಬೇಕು. ಅದಕ್ಕಾಗಿ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರನ್ನು ಭೇಟಿಯಾಗಿ ಒತ್ತಡ ಹೇರಲಾಗುವುದು’ ಎಂದು ಯರನಾಳದ ಸಂಗನಬಸವಸ್ವಾಮೀಜಿ ಹೇಳಿದರು.

‘ಹೂವಿನಹಿಪ್ಪರಗಿ ಕೆರೆ ಭರ್ತಿ ಸದ್ಯಕ್ಕೆ ಅಸಾಧ್ಯ. ಇಲ್ಲಿಯ ವಸ್ತುಸ್ಥಿತಿ ಬಗ್ಗೆ ಶುಕ್ರವಾರ ಹೋರಾಟಗಾರರಿಗೆ ತಿಳಿಸಿ, ಹೋರಾಟದ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.‌

ರೈತ ಮುಖಂಡ ಸಿದ್ರಾಮ ಅಂಗಡಗೇರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !