ಸ್ವಚ್ಛ ಸರ್ವೇಕ್ಷಣ್‌ ಸರ್ವೆ: ಕೈಗೂಡದ ಅಗ್ರ 50ರ ಕನಸು

ಶನಿವಾರ, ಮಾರ್ಚ್ 23, 2019
28 °C
ಪಾಲಿಕೆಗೆ 194ನೇ ಸ್ಥಾನ * ಕಳೆದ ಸಾಲಿಗಿಂತ ಉತ್ತಮ ಶ್ರೇಯಾಂಕ

ಸ್ವಚ್ಛ ಸರ್ವೇಕ್ಷಣ್‌ ಸರ್ವೆ: ಕೈಗೂಡದ ಅಗ್ರ 50ರ ಕನಸು

Published:
Updated:

ಬೆಂಗಳೂರು: ದೇಶದ ಯಾವ ನಗರದಲ್ಲಿ ಹೆಚ್ಚು ಸ್ವಚ್ಛವಾಗಿದೆ ಎಂಬುದನ್ನು ನಿರ್ಧರಿಸುವ 2019ರ ಸ್ವಚ್ಛ ಸರ್ವೇಕ್ಷಣ್‌ ಸರ್ವೆಯಲ್ಲಿ ಅಗ್ರ 50ರ ಒಳಗಿನ ಸ್ಥಾನಪಡೆಯಬೇಕೆಂಬ ಬಿಬಿಎಂಪಿಯ ಪ್ರಯತ್ನ ಈ ಬಾರಿಯೂ ಕೈಗೂಡಿಲ್ಲ. ಈ ಬಾರಿ ಪಾಲಿಕೆ 194ನೇ ಸ್ಥಾನ ಪಡೆದಿದೆ.

2018ನೇ ಸಾಲಿನಲ್ಲಿ 216ನೇ ಶ್ರೇಯಾಂಕ ಪಡೆದಿದ್ದ ಬಿಬಿಎಂಪಿ ಈ ಬಾರಿ ಶತಾಯಗತಾಯ ಅಗ್ರ 50ರ ಒಳಗಿನ ಶ್ರೇಯಾಂಕ ಪಡೆಯಲು ಕಸರತ್ತು ನಡೆಸಿತ್ತು. ಆದರೆ ಸರ್ವೆಯ ಫಲಿತಾಂಶ ಪಾಲಿಕೆ ಆಡಳಿತಕ್ಕೂ ನಿರಾಸೆ ಮೂಡಿಸಿದೆ. ಕಳೆದ ಸಾಲಿಗೆ ಹೋಲಿಸಿದರೆ 22 ಸ್ಥಾನ ಮೇಲಕ್ಕೆ ಏರಿದ್ದಕ್ಕಷ್ಟೇ ಪಾಲಿಕೆ ತೃಪ್ತಿಪಟ್ಟುಕೊಳ್ಳಬೇಕಿದೆ. 

ಈ ಬಾರಿಯ ಸರ್ವೆಯಲ್ಲಿ ಒಟ್ಟು 5,000 ಅಂಕಗಳ ಮಾನದಂಡ ರೂಪಿಸಲಾಗಿತ್ತು. ಅದರಲ್ಲಿ ಸ್ವಯಂ ಪ್ರಮಾಣೀಕರಣ ಪ್ರಕ್ರಿಯೆಗೆ, ನೇರ ಪರಿಶೀಲನೆಗೆ, ಸೇವಾ ಸುಧಾರಣೆಗೆ ಹಾಗೂ ಸಾರ್ವಜನಿಕರ ಪ್ರತಿಕ್ರಿಯೆಗೆ ತಲಾ 1,250 ಅಂಕ ನಿಗದಿಪಡಿಸಲಾಗಿತ್ತು. 

ಸ್ವಯಂ ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಪಾಲಿಕೆಗೆ ದಕ್ಕಿರುವುದು ಕೇವಲ 25 ಅಂಕಗಳು. ಈ ವಿಭಾಗದಲ್ಲಿ 1,225 ಅಂಕಗಳು ನಷ್ಟವಾಗಿವೆ. 

ಸೇವಾ ಸುಧಾರಣೆ ವಿಭಾಗದ 1,250 ಅಂಕಗಳಲ್ಲಿ ಕಸ ಸಂಗ್ರಹ ಮತ್ತು ಸಾಗಣೆಗೆ 338 ಅಂಕ ನಿಗದಿಯಾಗಿತ್ತು. ಶೇ 95ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಮನೆ ಮನೆಯಿಂದ ಕಸ ಸಂಗ್ರಹ ಮಾಡಿದರೆ 45 ಅಂಕ, ಮೂಲದಲ್ಲೇ ಹಸಿ ಮತ್ತು ಒಣ ಕಸ ವಿಂಗಡಣೆ ಮಾಡುವ ಪ್ರಕ್ರಿಯೆ ಶೇ 95ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಜಾರಿಯಲ್ಲಿದ್ದರೆ 65 ಅಂಕ, ಕಸ ಸಂಸ್ಕರಣೆ ಮತ್ತು ವಿಲೇವಾರಿಗೆ 375 ಅಂಕ ಇತ್ತು. ಈ ವಿಭಾಗಗಳಲ್ಲಿ ಪಾಲಿಕೆ ರಾಷ್ಟ್ರಿಯ ಸರಾಸರಿಗಿಂತ (182) ಉತ್ತಮ ಸಾಧನೆ (738.86 ಅಂಕ) ಮಾಡಿದೆ.

ನಾಗರಿಕರ ಪ್ರತಿಸ್ಪಂದನೆಯಲ್ಲೂ ಪಾಲಿಕೆಗೆ ಭಾರಿ ಅಂಕಗಳು ನಷ್ಟವಾಗಿವೆ. 1,250 ಅಂಕಗಳಲ್ಲಿ ಬಿಬಿಎಂಪಿ 617.96 ಗಳಿಸಿದೆ. ಇದು ರಾಷ್ಟ್ರೀಯ ಸರಾಸರಿ ಹಾಗೂ ರಾಜ್ಯದ ಸರಾಸರಿಗಿಂತಲೂ ಕಡಿಮೆ.

ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಸಾರ್ವಜನಿಕ ಸ್ಥಳಗಳಲ್ಲಿ ಬಿಲ್‌ಬೋರ್ಡ್‌ ಅಥವಾ ಹೋರ್ಡಿಂಗ್‌ಗಳನ್ನು ಅಳವಡಿಸುವುದು, ಮೇಲ್ಸೇತುವೆ, ಕೊಳೆಗೇರಿಗಳನ್ನು ಅಂದಗೊಳಿಸುವಿಕೆ ಮುಂತಾದ ಪ್ರಕ್ರಿಯೆಗಳಿಗೂ ‘ನೇರ ವೀಕ್ಷಣೆ’ ವಿಭಾಗದಲ್ಲಿ ಅಂಕ ನಿಗದಿಯಾಗಿತ್ತು. ಈ ವಿಭಾಗದಲ್ಲಿ ಪಾಲಿಕೆ 250ಕ್ಕೂ ಅಂಕಗಳು ನಷ್ಟವಾಗಿವೆ.

‘ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಶೋಚನೀಯವಾಗಿದೆ. ಬಹುತೇಕ ಶೌಚಾಲಯಗಳು ರಾತ್ರಿ 8 ಗಂಟೆ ಬಳಿಕ ಮುಚ್ಚಿರುತ್ತವೆ. ಆಧುನಿಕ ತಂತ್ರಜ್ಞಾನದ ಬಳಸಿ ಉತ್ತಮ ಶೌಚಾಲಯಗಳನ್ನು ಹೊಂದಲು ಸಾಧ್ಯವಿದೆ’ ಎನ್ನುತ್ತಾರೆ ‘ಗ್ರೀನ್‌ ರೋಡೀಸ್‌’ನ ಸಂಸ್ಥಾಪಕ ರಾಮ್‌ಕುಮಾರ್‌ ಬಿಕೆ.

‘ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲೂ ಹೆಚ್ಚಿನ ಪ್ರಯತ್ನಗಳಾಗಬೇಕು. ಜನ ತಂಬಾಕು ಜಗಿದು ಎಲ್ಲೆಂದರಲ್ಲಿ ಉಗುಳುತ್ತಾರೆ, ಮನ ಬಂದ ಕಡೆ ಕಸ ಬಿಸಾಡುತ್ತಾರೆ. ಇವುಗಳಿಗೆ ಕಡಿವಾಣ ಹಾಕಬೇಕು’ ಎಂದರು.

’ಮನೆಯ ಕಸವನ್ನು ಮೂಲದಲ್ಲೇ ಬೇರ್ಪಡಿಸುವ ನಿಟ್ಟಿನಲ್ಲೂ ಜನರಿಗೆ ಮನವರಿಕೆ ಮಾಡಿಕೊಡಬೇಕು. ಈ ಕಸದಿಂದ ಹಣ ಗಳಿಸುವ ಅನೇಕ ವಿಧಾನಗಳಿವೆ. ಈ ಬಗ್ಗೆ ತಿಳಿವಳಿಕೆ ಮೂಡಿಸಿದರೆ ಕಸ ವಿಲೇವಾರಿಗೆ ಪಾಲಿಕೆ ಖರ್ಚು ಮಾಡುವ ಕೋಟ್ಯಂತರ ರೂಪಾಯಿ ಉಳಿತಾಯವಾಗಲಿದೆ’ ಎಂದರು.

‘ನಾವು ಈ ವರ್ಷಶಕ್ತಿ ಮೀರಿ ಪ್ರಯತ್ನ ಮಾಡಿದ್ದೇವೆ. ಆದರೆ, ಕೆಲವೊಂದು ವಿಚಾರಗಳಲ್ಲಿ ನಾವು ಅನಿಸಿಕೊಂಡಿದ್ದ ಕಾರ್ಯಕ್ರಮಗಳ ಅನುಷ್ಠಾನ ಸಾಧ್ಯವಾಗಿಲ್ಲ. ಖಂಡಿತಾ ಮುಂದಿನ ವರ್ಷ ಬಿಬಿಎಂಪಿ ಇನ್ನಷ್ಟು ಉತ್ತಮ ಶ್ರೇಯಾಂಕ ಪಡೆಯಲಿದೆ’ ಎಂದು ಹೆಚ್ಚುವರಿ ಆಯುಕ್ತ ರಂದೀಪ್‌ (ಘನತ್ಯಾಜ್ಯ ನಿರ್ವಹಣೆ) ತಿಳಿಸಿದರು.

‘ಮನೆ ಮನೆಯಿಂದ ಕಸ ಸಂಗ್ರಹಣೆಗೆ ವಾರ್ಡ್‌ವಾರು ಗುತ್ತಿಗೆ ನೀಡುವ ಪದ್ಧತಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರ ಮೇಲೆ ನಿಗಾ ಇಡಲು ಮಾರ್ಷಲ್‌ಗಳ ನೇಮಕದಂತಹ ಕ್ರಮಗಳು ಇನ್ನಷ್ಟೇ ಜಾರಿ ಆಗಬೇಕಿದೆ. ಇದುರಿಂದ ನಗರದ ಸ್ವಚ್ಛತೆ ಸುಧಾರಣೆ ಆಗಲಿದೆ’ ಎಂದು ಮೇಯರ್‌ ಗಂಗಾಂಬಿಕೆ ವಿಶ್ವಾಸ ವ್ಯಕ್ತಪಡಿಸಿದರು.

ಅಂಕ ಕಳೆದ ಬಯಲು ಬಹಿರ್ದೆಸೆ

ನಗರದ 198 ವಾರ್ಡ್‌ಗಳೂ ‘ಬಯಲು ಬಹಿರ್ದೆಸೆ ಮುಕ್ತವಾಗಿವೆ’ (ಒಡಿಎಫ್‌) ಎಂದು ಸ್ವಯಂ ಘೋಷಿಸಿಕೊಳ್ಳುವ ಪ್ರಕ್ರಿಯೆಯನ್ನು ಬಿಬಿಎಂಪಿ ಈ ಬಾರಿ ಪೂರ್ಣಗೊಳಿಸಿತ್ತು. ಇದಕ್ಕೆ ನಿಗದಿಪಡಿಸಿದ್ದ ಪೂರ್ಣ 250 ಅಂಕ ಪಡೆಯುವಲ್ಲಿ ಪಾಲಿಕೆ ಸಫಲವಾಗಿಲ್ಲ.

ವಾರ್ಡ್‌ನ ಪ್ರತಿ ಮನೆಗೂ ಶೌಚಾಲಯ ಸಂಪರ್ಕ ಕಲ್ಪಿಸುವುದು, ವೈಯಕ್ತಿಕ ಶೌಚಾಲಯ ನಿರ್ಮಿಸಲು ಸ್ಥಳಾವಕಾಶ ಇಲ್ಲದ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುವುದು, ಇವು ಬೆಳಿಗ್ಗೆ 4ರಿಂದ ರಾತ್ರಿ 10 ಗಂಟೆವರೆಗೆ ಸಾರ್ವಜನಿಕರ ಬಳಕೆಗೆ ಲಭ್ಯವಿರುವಂತೆ ನೋಡಿಕೊಳ್ಳುವುದು ಹಾಗೂ ಇವುಗಳಿಗೆ ನೀರಿನ ಹಾಗೂ ಒಳಚರಂಡಿ ಸಂಪರ್ಕ ಕಲ್ಪಿಸುವ ಅಂಶಗಳನ್ನು ಆಧರಿಸಿ ವಾರ್ಡ್‌ಗಳಿಗೆ ಬಯಲು ಬಹಿರ್ದೆಸೆ ಮುಕ್ತ ಎಂಬ ಮನ್ನಣೆ ನೀಡಲಾಗುತ್ತದೆ. 

‘ನಾವು 3000 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಗುರಿಯನ್ನು ನಿಗದಿಪಡಿಸಿಕೊಂಡಿದ್ದೆವು. ಅದನ್ನು ತಲುಪಲು ಸಾಧ್ಯವಾಗಿಲ್ಲ. ಇದು ಕೂಡಾ ನಮ್ಮ ಹಿನ್ನಡೆಗೆ ಕಾರಣ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು. 

ಸ್ವಚ್ಛ ಸರ್ವೇಕ್ಷಣ್‌ ಸರ್ವೆ– ಬಿಬಿಎಂಪಿಗೆ ಏನು ಸ್ಥಾನ?

194

ದೇಶದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪೈಕಿ ಬಿಬಿಎಂಪಿ ಸ್ಥಾನ

3

ರಾಜ್ಯದ 26 ನಗರಗಳ ಪೈಕಿ ಬಿಬಿಎಂಪಿ ಸ್ಥಾನ

3,509

ಸರ್ವೆಗೆ ಪ್ರತಿಕ್ರಿಯೆ ನೀಡಿರುವ ನಾಗರಿಕರು

ಯಾವುದಕ್ಕೆ ಎಷ್ಟು ಅಂಕ (ಗರಿಷ್ಠ ಅಂಕ 5000)

ಬಿಬಿಎಂಪಿ ಗಳಿಸಿದ ಅಂಕ; 2,351.81

ರಾಜ್ಯದ ನಗರಗಳು ಗಳಿಸಿದ ಸರಾಸರಿ ಅಂಕ; 1,504.93

ದೇಶದ ನಗರಗಳು ಗಳಿಸಿದ ಸರಾಸರಿ ಅಂಕ: 1,846

 

ನೇರ ವೀಕ್ಷಣೆ (ಗರಿಷ್ಠ ಅಂಕ 1250)

ಬಿಬಿಎಂಪಿ ಗಳಿಸಿದ ಅಂಕ; 970

ರಾಜ್ಯದ ನಗರಗಳು ಗಳಿಸಿದ ಸರಾಸರಿ ಅಂಕ; 573.97

ದೇಶದ ನಗರಗಳು ಗಳಿಸಿದ ಸರಾಸರಿ ಅಂಕ: 675

 

ನಾಗರಿಕರ ಪ್ರತಿಸ್ಪಂದನೆ (ಗರಿಷ್ಠ ಅಂಕ 1250)

ಬಿಬಿಎಂಪಿ ಗಳಿಸಿದ ಅಂಕ; 617.96

ರಾಜ್ಯದ ನಗರಗಳು ಗಳಿಸಿದ ಸರಾಸರಿ ಅಂಕ; 685.15

ದೇಶದ ನಗರಗಳು ಗಳಿಸಿದ ಸರಾಸರಿ ಅಂಕ: 780

 

ಸೇವೆಗಳ ಸುಧಾರಣೆ (ಗರಿಷ್ಠ ಅಂಕ 1250)

ಬಿಬಿಎಂಪಿ ಗಳಿಸಿದ ಅಂಕ; 738.86

ರಾಜ್ಯದ ನಗರಗಳ ಸರಾಸರಿ ; 156.74

ದೇಶದ ನಗರಗಳ ಸರಾಸರಿ; 182

 

ಸ್ವಯಂ ಪ್ರಮಾಣೀಕರಣಕ್ಕೆ (ಗರಿಷ್ಠ ಅಂಕ 1,250)

ಬಿಬಿಎಂಪಿ ಗಳಿಸಿದ ಅಂಕ; 25

ರಾಜ್ಯದ ನಗರಗಳ ಸರಾಸರಿ ಅಂಕ; 89.07

ದೇಶದ ನಗರಗಳು ಗಳಿಸಿದ ಸರಾಸರಿ ಅಂಕ: 208

 

ಸ್ವಚ್ಛ ಸರ್ವೇಕ್ಷಣ ಸರ್ವೆ:ಬಿಬಿಎಂಪಿ ಹಾದಿ

ವರ್ಷ; ಭಾಗವಹಿಸಿದ ನಗರಗಳು; ಬಿಬಿಎಂಪಿ ಸ್ಥಾನ

2016;73; 38

2017; 434; 210

2018; 4,203; 216

2019;4237; 194

* ನಗರದ ಶ್ರೇಯಾಂಕ ನಿರಾಸೆ ಮೂಡಿಸಿದೆ. ದೇಶದ ಬೇರೆ ನಗರಗಳಿಗೆ ಹೋಲಿಸಿದರೆ ನಮ್ಮ ನಗರ ಹೆಚ್ಚು ಸ್ವಚ್ಛವಾಗಿದೆ. ಆಯ್ಕೆ ಮಾನದಂಡವೇ ಅರ್ಥವಾಗುತ್ತಿಲ್ಲ

– ಗಂಗಾಂಬಿಕೆ, ಮೇಯರ್‌

* ಎಲ್ಲಿ ಹಿನ್ನಡೆ ಆಗಿದೆ ಎಂಬುದನ್ನು ಅಧ್ಯಯನ ಮಾಡಿ ಮುಂದಿನ ವರ್ಷ ಹೆಚ್ಚಿನ ರ‍್ಯಾಂಕಿಂಗ್‌ ಪಡೆಯಲು ಕಾರ್ಯಕ್ರಮ ರೂಪಿಸುತ್ತೇವೆ<

– ಎನ್‌.ಮಂಜುನಾಥ ಪ್ರಸಾದ್‌,  ಆಯುಕ್ತರು, ಬಿಬಿಎಂಪಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !