ನೊಬೆಲ್‌ಗೆ ಪ್ರತಿಭಟನಾರ್ಥ ಪರ್ಯಾಯ ಸಾಹಿತ್ಯ ಪ್ರಶಸ್ತಿ !

7
ಸ್ವಿಡನ್‌ನ 107 ಬುದ್ಧಿಜೀವಿಗಳಿಂದ ಹೊಸ ಅಕಾಡೆಮಿ ಸ್ಥಾಪನೆ

ನೊಬೆಲ್‌ಗೆ ಪ್ರತಿಭಟನಾರ್ಥ ಪರ್ಯಾಯ ಸಾಹಿತ್ಯ ಪ್ರಶಸ್ತಿ !

Published:
Updated:

ಸ್ಟಾಕ್‌ಹೋಂ: ಲೈಂಗಿಕ ವಿವಾದದ ಕಾರಣ ಈ ಬಾರಿ ನೊಬೆಲ್‌ ಸಾಹಿತ್ಯ ಪುರಸ್ಕಾರ ನೀಡುವುದಿಲ್ಲ ಎಂದು ಸ್ವೀಡಿಶ್‌ ಅಕಾಡೆಮಿ ಘೋಷಿಸಿದ ನಂತರ, ಅದಕ್ಕೆ ಪ್ರತಿಭಟನಾರ್ಥವಾಗಿ ಪರ್ಯಾಯ ಸಾಹಿತ್ಯ ಪ್ರಶಸ್ತಿ ನೀಡಲು ಅಲ್ಲಿನ ಬುದ್ಧಿಜೀವಿಗಳ ತಂಡವೊಂದು ನಿರ್ಧರಿಸಿದೆ. 

ಲೇಖಕರು, ಚಿಂತಕರು, ಕಲಾವಿದರು ಮತ್ತು ಪತ್ರಕರ್ತರು ಸೇರಿ ಒಟ್ಟು 107 ಮಂದಿ ‘ದಿ ನ್ಯೂ ಅಕಾಡೆಮಿ’ ರಚಿಸಿಕೊಂಡಿದ್ದು, ಇದರ ಮೂಲಕ ಸಾಹಿತ್ಯ ಪ್ರಶಸ್ತಿ ನೀಡಲು ಮುಂದಾಗಿದ್ದಾರೆ. ಪ್ರಶಸ್ತಿಯು ₹77.70 ಲಕ್ಷ ನಗದು ಒಳಗೊಂಡಿದೆ.

ಸಾರ್ವಜನಿಕರಿಂದ ಹಾಗೂ ಸಂಸ್ಥೆಗಳಿಂದ ಅಕಾಡೆಮಿಯು ಈ ಮೊತ್ತವನ್ನು ಸಂಗ್ರಹಿಸಲಿದ್ದು, ಪ್ರತಿ ಬಾರಿ ನೊಬೆಲ್‌ ಸಾಹಿತ್ಯ ಪುರಸ್ಕಾರ ನೀಡಲಾಗುವ ಡಿಸೆಂಬರ್‌ 10ರಂದೇ ಈ ಪ್ರಶಸ್ತಿಯನ್ನೂ ನೀಡಲು ಅದು ನಿರ್ಧರಿಸಿದೆ. 

‘ಪೂರ್ವಗ್ರಹ, ಅಹಂಕಾರ ಮತ್ತು ಲೈಂಗಿಕತೆ’ ಖಂಡಿಸುವ ಪ್ರಶಸ್ತಿ ಇದಾಗಲಿದೆ ಎಂದು ನ್ಯೂ ಅಕಾಡೆಮಿ ತಿಳಿಸಿದೆ.

ಫ್ರಾನ್ಸ್‌ನ ಸಾಂಸ್ಕೃತಿಕ ರಾಯಭಾರಿ ಎನಿಸಿದ, ಸ್ವೀಡಿಶ್‌ ಅಕಾಡೆಮಿಯೊಂದಿಗೆ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಅತ್ಯಾಚಾರ ಎಸಗಿದ್ದು, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 18 ಮಹಿಳೆಯರು ಆರೋಪಿಸಿದ್ದರು.

ಸ್ಥಳೀಯ ಮಾಧ್ಯಮಗಳಲ್ಲಿ ಇದು ಪ್ರಕಟವಾಗಿ ವಿವಾದ ಸೃಷ್ಟಿಸಿತ್ತು.ಲೈಂಗಿಕ ಹಗರಣವನ್ನು ಪ್ರತಿಭಟಿಸಿ, ಸ್ವೀಡಿಶ್‌ ಅಕಾಡೆಮಿ ಪ್ರಶಸ್ತಿ ಸಮಿತಿಯ ಮೊದಲ ಮಹಿಳಾ ಕಾಯಂ ಕಾರ್ಯದರ್ಶಿ ಸಾರಾ ಡೇನಿಯಸ್‌ ಸೇರಿದಂತೆ ಹಲವರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. 

ಈ ವರ್ಷ ನೊಬೆಲ್‌ ಸಾಹಿತ್ಯ ಪುರಸ್ಕಾರ ನೀಡುವುದಿಲ್ಲ ಎಂದು ಸ್ವೀಡಿಶ್‌ ಅಕಾಡೆಮಿ ಕಳೆದ ಮೇ ನಲ್ಲಿ ಘೋಷಿಸಿತ್ತು. 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನೊಬೆಲ್‌ ಸಾಹಿತ್ಯ ಪುರಸ್ಕಾರ ನೀಡಿಲ್ಲ.

‘ಬುದ್ಧಿಜೀವಿಗಳು ಅವರಿಗೆ ಇಷ್ಟ ಬಂದಿದ್ದನ್ನು ಮಾಡಲು ಸ್ವತಂತ್ರರು’ ಎಂದು ಸ್ವೀಡಿಶ್‌ ಅಕಾಡೆಮಿಯ ಸದಸ್ಯ ಪರ್ ವಾಸ್ಟ್‌ಬರ್ಗ್‌ ಹೇಳಿದ್ದಾರೆ.

*
ಸ್ವೀಡನ್‌ ಹೆಚ್ಚು ಪಾರದರ್ಶಕ, ಪ್ರಜಾಸತ್ತಾತ್ಮಕ ಹಾಗೂ ಲಿಂಗ ಸಮಾನತೆ ಹೊಂದಿರುವ ರಾಷ್ಟ್ರ. ಈ ದೇಶಕ್ಕೆ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಹೊಂದಿರಬೇಕಾದ ಅಗತ್ಯವಿದೆ.
-ಅಲೆಕ್ಸಾಂಡ್ರ ಪಾಸ್ಕಾಲಿಡೊ, ನ್ಯೂ ಅಕಾಡೆಮಿಯ ಸಂಸ್ಥಾಪಕ 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !