ದೇವಿಗೂ ಸಿಹಿ, ನಮಗೂ ಸಿಹಿ

7

ದೇವಿಗೂ ಸಿಹಿ, ನಮಗೂ ಸಿಹಿ

Published:
Updated:

ಅಮೃತಫಲ
ಬೇಕಾಗುವ ಸಾಮಗ್ರಿಗಳು:
ತೆಂಗಿನ ಕಾಯಿಹಾಲು – 2ಕಪ್, ಹಾಲು – 2ಕಪ್, ಸಕ್ಕರೆ – 2ಕಪ್, ಏಲಕ್ಕಿ ಪುಡಿ – ಸ್ವಲ್ಪ, ತುಪ್ಪ –ಚೂರು

ತಯಾರಿಸುವ ವಿಧಾನ: ಹಾಲು, ತೆಂಗಿನ ಹಾಲು ಮತ್ತು ಸಕ್ಕರೆ ಮೂರನ್ನೂ ಬೆರೆಸಿ ಬಾಣಲೆಗೆ ಹಾಕಿ ಕಾಸಿ. ಗಟ್ಟಿಯಾಗುತ್ತಾ ಬಂದಾಗ ಏಲಕ್ಕಿಪುಡಿ ಹಾಕಿ ಮುಗುಚಿತುಪ್ಪ ಸವರಿದ ತಟ್ಟೆಗೆ ಹರಡಿ. ಆರಿದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ ಅಥವಾ ದೂದುಪೇಡಾದಂತೆ ಉಂಡೆ ಮಾಡಿ ದೇವಿಗೆ ಸಮರ್ಪಿಸಿ.

*

ಅನಾನಸ್‌ ಕೇಸರಿಭಾತ್‌
ಬೇಕಾಗುವ ಸಾಮಗ್ರಿಗಳು: ರವೆ – 1ಕಪ್‌, ಸಕ್ಕರೆ – 1, 1/2ಕಪ್‌, ಹಾಲು / 2ಕಪ್‌, ಅನಾನಸ್‌ (ಹೆಚ್ಚಿದ್ದು), ತುಪ್ಪ – 1/2ಕಪ್‌, ಗೋಡಂಬಿ – ಸ್ವಲ್ಪ, ದ್ರಾಕ್ಷಿ, ಏಲಕ್ಕಿ 

ತಯಾರಿಸುವ ವಿಧಾನ: ಅನನಾಸ್‌ನ ಸಿಪ್ಪೆ ಮತ್ತು ಮಧ್ಯದ ಗಟ್ಟಿ ಭಾಗವನ್ನು ತೆಗೆದು ಹೆಚ್ಚಿ ಮಿಕ್ಸಿಯಲ್ಲಿ ತಿರುವಿ ಇಡಿ. ಬಾಣಲೆಗೆ ರವೆ ಹಾಕಿ ಪರಿಮಳ ಬರುವಂತೆ ಹುರಿಯಿರಿ. ಹಾಲಿಗೆ ಅಷ್ಟೇ ನೀರು ಸೇರಿಸಿ ಕುದಿಸಿಡಿ. ಹುರಿದ ರವೆಗೆ ತಿರುವಿದ ಅನನಾಸನ್ನು ಸೇರಿಸಿ ಕುದಿದ ಹಾಲನ್ನು ಹಾಕಿ ಮಗುಚುತ್ತಿದ್ದು ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಮುಚ್ಚಿಡಿ. ಗಟ್ಟಿ ಆಗುವಾಗ ತಳ ಹಿಡಿಯದಂತೆ ಮಗುಚುತ್ತಿದ್ದು ಸಕ್ಕರೆ ಹಾಕಿ ಮತ್ತೆ ಮಗುಚಿ. ನೀರಾದ ಸಕ್ಕರೆಯು ರವೆಯೊಂದಿಗೆ ಮಿಶ್ರವಾಗಿ ಗಟ್ಟಿಯಾಗುತ್ತಾ ಬಂದಾಗ ತುಪ್ಪ ಹಾಕಿ. ತಳ ಬಿಟ್ಟಾಗ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಮತ್ತು ಏಲಕ್ಕಿಪುಡಿಗಳನ್ನು ಸೇರಿಸಿ ಮಗುಚಿ ತುಪ್ಪ ಸವರಿದ ತಟ್ಟೆಗೆ ಕವುಚಿ.

*

ಮುಳ್ಳುಸೌತೆ ಪಾಯಸ
ಬೇಕಾಗುವ ಸಾಮಗ್ರಿಗಳು:
ಮುಳ್ಳುಸೌತೆ ಹೋಳು – 5ಕಪ್, ಬೆಲ್ಲ – 1/2ಕೆ.ಜಿ., ಅಕ್ಕಿಹಿಟ್ಟು – 1/2ಕಪ್‌, ತೆಂಗಿನಕಾಯಿ – 1, ಉಪ್ಪು – ಸ್ವಲ್ಪ, ಏಲಕ್ಕಿ ಪುಡಿ.

ತಯಾರಿಸುವ ವಿಧಾನ: ಮುಳ್ಳುಸೌತೆಯ ಸಿಪ್ಪೆ ತೆಗೆದು ಅರ್ಧ ಇಂಚು ಅಗಲ, ಅರ್ಧ ಇಂಚು ದಪ್ಪಕ್ಕೆ ಹೆಚ್ಚಿ. ಆಮೇಲೆ ಮುಳ್ಳುಸೌತೆಯ ಹೋಳನ್ನು ನೀರು ಹಾಕಿ ಮೆತ್ತಗೆ ಬೇಯಿಸಿ ಉಪ್ಪು, ಬೆಲ್ಲ ಹಾಕಿ ಬೆಲ್ಲ ಕರಗಿದ ನಂತರ ಕಾಯಿಹಾಲನ್ನು ಹಾಕಿ ಕುದಿಸಿ ರುಬ್ಬಿಟ್ಟ ಅಕ್ಕಿಯ ಹಿಟ್ಟನ್ನು ಹಾಕಿ ಮಗುಚಿ. ಇದು ಪಾಯಸದ ಹದಕ್ಕೆ ಬರುವಾಗ ದಪ್ಪ ಕಾಯಿ ಹಾಲು ಹಾಕಿ, ಏಲಕ್ಕಿ ಪುಡಿ ಹಾಕಿ ಇಳಿಸಿ. ಇದು ದೇವಿಗೆ ಬಹಳ ವಿಶೇಷ.

*

ಗೆಣಸಲೆ
ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ - 1/2 ಕೆ.ಜಿ., ತೆಂಗಿನ ಕಾಯಿತುರಿ - 2, ಬೆಲ್ಲ - 1/4ಕೆ.ಜಿ, ಉಪ್ಪು - ಸ್ವಲ್ಪ, ತುಪ್ಪ - 2 ಚಮಚ, ಬಾಳೆಎಲೆ –10.

ತಯಾರಿಸುವ ವಿಧಾನ: ಅಕ್ಕಿಯನ್ನು ನೆನೆ ಹಾಕಿ, ನೀರು ಬಸಿದು ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಹಿಟ್ಟು ದೋಸೆಹಿಟ್ಟಿನಷ್ಟು ತೆಳ್ಳಗಿರಲಿ. ನಂತರ ಕಾಯಿತುರಿಗೆ ಬೆಲ್ಲ ಬೆರೆಸಿ ಸ್ವಲ್ಪ ಬಿಸಿ ಮಾಡಿ. ಬಾಳೆಎಲೆಗಳನ್ನು ಬಾಡಿಸಿ ತೊಳೆದು 9-10 ಇಂಚುಗಳ ಸೀಳು ಮಾಡಿಟ್ಟುಕೊಳ್ಳಿ. ರುಬ್ಬಿದ ಹಿಟ್ಟಿಗೆ 2 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲಕಿಕೊಂಡು ಬಾಳೆ ಎಲೆಗೆ ಒಂದು ಸೌಟು ಅಕ್ಕಿ ಹಿಟ್ಟನ್ನು ಹಾಕಿ ದೋಸೆಯಂತೆ ತೆಳುವಾಗಿ ಹರಡಿ. ಇದರ ಅರ್ಧಕ್ಕೆ ಬೆಲ್ಲ ಬೆರೆಸಿದ ತೆಂಗಿನ ಕಾಯಿತುರಿಯನ್ನು ಹರಡಿ ಮಡಚಿ ಇಡ್ಲಿಪಾತ್ರೆಯಲ್ಲಿ ಇಟ್ಟು ಉಗಿಯಲ್ಲಿ ಬೇಯಿಸಿ. ನಂತರ ಬಾಳೆಲೆಯಿಂದ ಬಿಡಿಸಿ ಶುಭ್ರವಾದ ತಟ್ಟೆಗೆ ಹಾಕಿ ದೇವಿಗೆ ನೈವೇದ್ಯವನ್ನು ಮಾಡಿ.

*

ಮುಳ್ಳುಸೌತೆ ಸಿಹಿ ಅಪ್ಪ
ಬೇಕಾಗುವ ಸಾಮಗ್ರಿಗಳು:
ಮುಳ್ಳುಸೌತೆ ಹೋಳು – 4 ಕಪ್, ಬೆಳ್ತಿಗೆ ಅಕ್ಕಿ – 2 ಕಪ್, ತೆಂಗಿನ ತುರಿ – 1/2 ಕಪ್, ಬೆಲ್ಲ – 4 ಅಚ್ಚು, ಉಪ್ಪು ಚಿಟಿಕೆ, ತುಪ್ಪ – 1/2 ಕಪ್.

ತಯಾರಿಸುವ ವಿಧಾನ: ಅಕ್ಕಿಯನ್ನು 2 ಗಂಟೆ ನೆನೆಸಿ. ನಂತರ ತೊಳೆದು ಸಿಪ್ಪೆ ಮತ್ತು ತಿರುಳನ್ನು ತೆಗೆದು ಸಣ್ಣಗೆ ಹೆಚ್ಚಿದ ಮುಳ್ಳುಸೌತೆ ಮತ್ತು ತೆಂಗಿನ ತುರಿಯನ್ನು ಸೇರಿಸಿ ನೀರು ಹಾಕದೆ ನುಣ್ಣಗೆ ರುಬ್ಬಿ. ನಂತರ ಬೆಲ್ಲ, ಉಪ್ಪು ಸೇರಿಸಿ ರುಬ್ಬಿ. ನಂತರ ಬಾಣಲೆಗೆ ಹಾಕಿ ಸ್ವಲ್ಪ ಹೊತ್ತು ಸ್ವಲ್ಪ ಗಟ್ಟಿಯಾಗುವವರೆಗೆ ಮಗುಚಿ. ನಂತರ ಅಪ್ಪದ ಕಾವಲಿ ಗುಳಿಗೆ ತುಪ್ಪ ಹಾಕಿ, ಬಿಸಿಯಾದಾಗ ಹಿಟ್ಟು ಹಾಕಿ. ಬೆಂದು ತಳ ಬಿಟ್ಟಾಗ ಅಪ್ಪದ ಕಡ್ಡಿಯಿಂದ ಚುಚ್ಚಿ ಮಗುಚಿ ಹಾಕಿ ಬೇಯಿಸಿ. ಕೆಂಪಗೆ ಆದಾಗ ತೆಗೆದು ಪಾತ್ರೆಗೆ ಹಾಕಿ ದೇವಿಗೆ ಸಮರ್ಪಣೆ ಮಾಡಿ.

*

ಹಾಲುಬಾಯಿ
ಬೇಕಾಗುವ ಸಾಮಗ್ರಿಗಳು:
ಬೆಳ್ತಿಗೆ ಅಕ್ಕಿ – 1/4ಕೆ.ಜಿ., ಬೆಲ್ಲ – 1/4 ಕೆ.ಜಿ., ತೆಂಗಿನ ಕಾಯಿ – 1, ಸ್ವಲ್ಪ ಉಪ್ಪು.

ತಯಾರಿಸುವ ವಿಧಾನ: ತೆಂಗಿನಕಾಯಿ ತುರಿದು ನೀರು ಹಾಕಿ ರುಬ್ಬಿ ಹಾಲು ಹಿಂಡಿಕೊಳ್ಳಿ. ಒಂದು ಗಂಟೆ ಕಾಲ ನೆನೆ ಹಾಕಿ ತೊಳೆದ ಅಕ್ಕಿಯನ್ನು ತೆಂಗಿನ ಹಾಲನ್ನು ಹಾಕಿ ನುಣ್ಣಗೆ ರುಬ್ಬಿ. ಬೆಲ್ಲ, ಉಪ್ಪು ಹಾಕಿ ಮತ್ತೆ ತಿರುವಿ. ಒಂದು ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ ಹಿಟ್ಟನ್ನು ತೆಳ್ಳಗೆ ನೀರುದೋಸೆಹಿಟ್ಟಿನ ಹದಕ್ಕೆ ತೆಗೆದು ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಮುಗುಚಿ. ಹಿಟ್ಟು ಬೆಂದ ನಂತರ ಒಂದು ಬಾಳೆ ಎಲೆಗೆ ಕೊಬ್ಬರಿ–ಎಣ್ಣೆಯನ್ನು ಹಚ್ಚಿ ಹಾಲುಬಾಯಿಯನ್ನು ತೆಳುವಾಗಿ ಹರಡಿ ಮೇಲಿನಿಂದ ಸ್ವಲ್ಪ ಕೊಬ್ಬರಿ–ಎಣ್ಣೆಯನ್ನು ಹಚ್ಚಿ ಹಲ್ವಾದಂತೆ ಸವರಿ, ಬೇಕಾದ ಆಕಾರಕ್ಕೆ ಕತ್ತರಿಸಿ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !