ಭಾನುವಾರ, ಅಕ್ಟೋಬರ್ 20, 2019
22 °C

ಬೆಳ್ಳಿಪಲ್ಲಕ್ಕಿ ಉತ್ಸವ; ಜಂಬೂ ಸವಾರಿ

Published:
Updated:
Prajavani

ಹೆಸರಘಟ್ಟ: ತಳಿರು ತೋರಣಗಳಿಂದ ಅಲಂಕೃತಗೊಂಡ ಬೀದಿಗಳು, ಮನೆಗಳ ಮುಂದೆ ಬಣ್ಣ ಬಣ್ಣದ ಚಿತ್ತಾರ, ಕಿಕ್ಕಿರಿದು ಸೇರಿದ್ದ ಗ್ರಾಮಸ್ಥರು... ಇದು ಚಾಮುಂಡೇಶ್ವರಿ ಮತ್ತು ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ತರಬನಹಳ್ಳಿಯಲ್ಲಿ ಈಚೆಗೆ ಆಯೋಜಿಸಿದ್ದ ಮೂರನೇ ವರ್ಷದ ಚಾಮುಂಡಿ ದೇವಿಯ ಬೆಳ್ಳಿ ಪಲ್ಲಕ್ಕಿ ಆನೆ ಅಂಬಾರಿ ಮಹೋತ್ಸವದಲ್ಲಿ ಕಂಡುಬಂದ ದೃಶ್ಯ.

ಗೊರವರ ಕುಣಿತ, ಡೊಳ್ಳು ಕುಣಿತ, ಪಟ ಕುಣಿತ, ವೀರಗಾಸೆ, ಕೀಲು ಕುದುರೆ, ಕೋಲಾಟ ಸೇರಿದಂತೆ ವಿವಿಧ ಕಲಾಪ್ರಕಾರಗಳು ಅನಾವರಣಗೊಂಡಿವು. ತುಮಕೂರಿನ ಹೊರಪೇಟೆಯಿಂದ ಬಂದ ಲಕ್ಷ್ಮಿರಾಜ ಆನೆಯು ಗಾಂಭೀರ್ಯದಿಂದ ಚಾಮುಂಡಿ ದೇವಿಯ ಬೆಳ್ಳಿ ಪಲ್ಲಕ್ಕಿಯನ್ನು ಹೊತ್ತು, ಗ್ರಾಮದ ಬೀದಿಗಳಲ್ಲಿ ಸಾಗಿತು.

ಭಕ್ತರು ಹಣ್ಣು–ಕಾಯಿಗಳನ್ನು ಸಮರ್ಪಿಸಿ, ಗ್ರಾಮದ ಏಳ್ಗೆಗೆಗೆ ಪ್ರಾರ್ಥನೆ ಸಲ್ಲಿಸಿದರು. ತುಂತುರು ಮಳೆಯ ನಡುವೆಯೂ ಆನೆಯು ಶಾಂತವಾಗಿ ಸಾಗಿತು.

ಅಂಬಾರಿ ಮಹೋತ್ಸವಕ್ಕೆ ಚಾಲನೆ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಪರ ನಿರ್ದೇಶಕ ಸುಜಾತಾ, ‘ಮೈಸೂರಿನಲ್ಲಿ ಮಾತ್ರ ನಡೆಯುತ್ತಿದ್ದ ಆನೆ ಅಂಬಾರಿ ಮೆರವಣಿಗೆಯು ತರಬನಹಳ್ಳಿಯಂತಹ ಚಿಕ್ಕ ಗ್ರಾಮದಲ್ಲಿ ನಡೆಯುತ್ತಿರುವುದು ಸಂತಸದ ವಿಷಯ’ ಎಂದು ತಿಳಿಸಿದರು.

‘ಮೂರು ವರ್ಷಗಳಿಂದ ಜರುಗುತ್ತಿರುವ ಆನೆ ಅಂಬಾರಿ ಮೆರವಣಿಗೆ ಪ್ರತಿ ವರ್ಷ ತನ್ನ ವೈಭವವನ್ನು ಹೆಚ್ಚಿಸಿ ಕೊಳ್ಳುತ್ತಿದೆ. ಹೋದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಜನರು ಬಂದಿದ್ದಾರೆ’ ಎಂದು ಅರ್ಚಕ ನಾಗರಾಜು ಮಾಹಿತಿ ನೀಡಿದರು.

Post Comments (+)