ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ ಎಲ್ಲರ ರಕ್ಷಣೆ

7

ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ ಎಲ್ಲರ ರಕ್ಷಣೆ

Published:
Updated:
ರಕ್ಷಿಸಿದ ಬಾಲಕರನ್ನು ಹೊತ್ತ ಆಂಬುಲೆನ್ಸ್ ಆಸ್ಪತ್ರೆಯತ್ತ ತೆರಳಿತು–ಎಎಫ್‌ಪಿ ಚಿತ್ರ

ಮಾ ಸೈ, ಥಾಯ್ಲೆಂಡ್: ದಿಢೀರ್ ಉಂಟಾದ ಪ್ರವಾಹದಿಂದ ಇಲ್ಲಿನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಲುಕಿಕೊಂಡಿದ್ದ ಇತರ ಐವರನ್ನೂ ರಕ್ಷಿಸಲಾಗಿದ್ದು, ರಕ್ಷಣಾಕಾರ್ಯ ಪೂರ್ಣಗೊಂಡಿದೆ ಎಂದು ನೇವಿ ಸೀಲ್ ತಂಡ ಘೋಷಿಸಿದೆ. ಈ ಮೂಲಕ ಎಲ್ಲ 13 ಮಂದಿಯನ್ನೂ ರಕ್ಷಿಸಿದಂತಾಗಿದೆ. 

ಥಾಯ್ ಸೀಲ್ ಹಾಗೂ 14 ಮುಳುಗುತಜ್ಞರು ಗುಹೆಯಲ್ಲಿದ್ದ ಉಳಿದಿದ್ದವರನ್ನು ಮಂಗಳವಾರ ಹೊರತಂದರು. ನೀರು ತುಂಬಿದ್ದ ಮಾರ್ಗದಲ್ಲೇ ಆಮ್ಲಜನಕ ಸಿಲಿಂಡರ್‌ ಹಾಗೂ ರಕ್ಷಣಾ ಕವಚಗಳನ್ನು ಹೊತ್ತೊಯ್ದಿದ್ದ ತಂಡ ಅವರನ್ನು ಪಾರು ಮಾಡಿತು. 

ಜೂನ್ 23ರಂದು 11–16 ವರ್ಷದೊಳಗಿನ 12 ಬಾಲಕರು ಹಾಗೂ 25 ವರ್ಷದ ತರಬೇತುದಾರ ಫುಟ್ಬಾಲ್ ತರಬೇತಿ ಮುಗಿಸಿಕೊಂಡು ಗುಹೆ ಪ್ರವೇಶಿಸಿದ್ದರು. ಭಾರಿ ಮಳೆ, ಪ್ರವಾಹದ ಕಾರಣ ಹೊರಬರಲಾಗದೇ ಪರಿತಪಿಸಿದ್ದರು. ಇದು ವಿಶ್ವದ ಗಮನ ಸೆಳೆದಿತ್ತು. 10 ದಿನಗಳ ಬಳಿಕ ಬ್ರಿಟಿಷ್ ಶೋಧಕರು ತಂಡವನ್ನು ಪತ್ತೆಹೆಚ್ಚಿದ್ದರು. ಸೋಮವಾರ ಹಾಗೂ ಮಂಗಳವಾರ ತಲಾ ನಾಲ್ವರನ್ನು ರಕ್ಷಿಸಲಾಗಿತ್ತು. 

ಮುಂಗಾರು ಮಳೆಯು ದಿನೇ ದಿನೇ ಗುಹೆಯನ್ನು ಆವರಿಸುತ್ತಿತ್ತು. ಆಮ್ಲಜನಕದ ಪ್ರಮಾಣವೂ ಕುಸಿಯುತ್ತಿತ್ತು. ಇದು ರಕ್ಷಣಾ ತಂಡಕ್ಕೆ ದೊಡ್ಡ ಸವಾಲಾಗಿತ್ತು. ಹೀಗಾಗಿ ಇಬ್ಬರು ಮುಳುಗುತಜ್ಞರು ಒಬ್ಬ ಬಾಲಕನನ್ನು ಗುಹೆಯಿಂದ ಹೊರತರುವ ಯೋಜನೆ ರೂಪಿಸಿ ಯಶಸ್ವಿಯಾಗಿದೆ. ಕಾರ್ಯಾಚರಣೆ ತಂಡದಲ್ಲಿದ್ದ ಥಾಯ್ ಸೀಲ್ ಸಿಬ್ಬಂದಿಯೊಬ್ಬರು ಆಮ್ಲಜನಕದ ಕೊರತೆಯಿಂದ ಶುಕ್ರವಾರ ಮೃತಪಟ್ಟಿದ್ದರು.

ಗುಹೆಯಲ್ಲೇ ತರಬೇತಿ:
ಮುಳುಗು ತಜ್ಞರಿಗೂ ಈ ಗುಹೆ ಸವಾಲಾಗಿತ್ತು. ಬಾಲಕರಲ್ಲಿ ಯಾರಿಗೂ ನೀರಿನಾಳದಲ್ಲಿ ಈಜುವುದು ಗೊತ್ತಿರಲಿಲ್ಲ. ಅವರಿಗೆಲ್ಲಾ ನೀರಿನಲ್ಲಿ ಮುಳುಗುವುದು, ಆಮ್ಲಜನಕ ಸಿಲಿಂಡರ್ ಬಳಸುವುದು ಹೇಗೆಂದು ತರಬೇತಿ ನೀಡಿ ಕರೆತರಲಾಯಿತು. 

ಗುಹೆಯಿಂದ ಹೊರಬಂದಿರುವ ಫುಟ್ಬಾಲ್ ತಂಡದ ಸದಸ್ಯರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಈಗ ಅತಿಮುಖ್ಯ. ಆಪ್ತ ಸಮಾಲೋಚನೆಯ ಅಗತ್ಯವಿದೆ.  ಗುಹೆಯಲ್ಲಿ ಬಾವಲಿಗಳು ಬಳಸಿದ ನೀರು ಅಥವಾ ಕಲುಷಿತ ನೀರು ಕುಡಿದಿರುವುದಿರಂದ ಅಪಾಯ ಹೆಚ್ಚು ಎಂದು ತಜ್ಞರು ಎಚ್ಚರಿಸಿದ್ದಾರೆ. ಆದರೆ ಈ ಮೊದಲೇ ರಕ್ಷಣೆ ಮಾಡಲಾದ ಎಂಟೂ ಬಾಲಕರು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದಿಂದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಯಾವುದೇ ಸೋಂಕಿಗೆ ಅವರು ಒಳಗಾಗಿಲ್ಲ ಎಂದು ದೃಢಪಟ್ಟ ಬಳಿಕ ಅವರನ್ನು ಮನೆಗೆ ಕಳುಹಿಸಲು ನಿರ್ಧರಿಸಲಾಗಿದೆ. ‌ಫಿಫಾ ವಿಶ್ವಕಪ್ ಫುಟ್ಬಾಲ್ ವೀಕ್ಷಿಸಲು ಬಾಲಕರಿಗೆ ಆಹ್ವಾನ ನೀಡಿಲಾಗಿತ್ತು. ಆದರೆ ಆರೋಗ್ಯದ ದೃಷ್ಟಿಯಿಂದ ಇವರು ಭಾಗವಹಿಸುತ್ತಿಲ್ಲ. 

ಕಣ್ಣೀರಿಟ್ಟ ಪರಿಚಯಸ್ಥ:
ತರಬೇತುದಾರ ಎಕ್ಕಾಪೊಲ್ ಚಂಟಾವೊಂಗ್ ಅವರನ್ನು ಹೊರಕರೆತರುತ್ತಿದ್ದಂತೆ ಅವರ ಪರಿಚಯಸ್ಥ ಹಾಗೂ ಮಾ ಸೈನ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿರುವ ಅಬ್ಬೊಟ್ ಎಂಬಾತ ಕಣ್ಣೀರಿಟ್ಟ. ‘ಚಂಟಾವೊಲ್ ಒಬ್ಬ ಅನಾಥ. ಆತ ನನಗೆ ಮಗನಿದ್ದಂತೆ. ಆತ ತನ್ನ ಜೊತೆಗಿದ್ದ 12 ಬಾಲಕರ ಜವಾಬ್ದಾರಿಯನ್ನು ಹೊತ್ತಿದ್ದ. ಹೀಗಾಗಿ ನನ್ನ ಜೊತೆ 13 ಯೋಧರಿದ್ದಾರೆ ಎಂದು ಭಾಸವಾಗುತ್ತಿದೆ. 18 ದಿನಗಳು ವರ್ಷಗಳ ರೀತಿ ಕಳೆಯಿತು’ ಎಂದು ಅಬ್ಬೋಟ್ ವಿವರಿಸಿದ್ದಾರೆ. 

ಜಾಗತಿಕ ಗಮನ ಸೆಳೆದಿದ್ದ ಈ ರಕ್ಷಣಾ ಕಾರ್ಯಾಚರಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫುಟ್ಬಾಲ್ ಆಟಗಾರ ಮೆಸ್ಸಿ ಹಾಗೂ ಉದ್ಯಮಿ ಎಲಾನ್ ಮಸ್ಕ್ ಅವರು ಬೆಂಬಲ ನೀಡಿದ್ದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !