ರೋಗ ಹರಡುವ ತಾಲ್ಲೂಕು ಆಸ್ಪತ್ರೆ! ಅವ್ಯವಸ್ಥೆ ಒಂದೇ, ಎರಡೇ?

7
ತ್ಯಾಜ್ಯದ ರಾಶಿ, ದುರ್ವಾಸನೆ ಬೀರುವ ಶೌಚಾಲಯ

ರೋಗ ಹರಡುವ ತಾಲ್ಲೂಕು ಆಸ್ಪತ್ರೆ! ಅವ್ಯವಸ್ಥೆ ಒಂದೇ, ಎರಡೇ?

Published:
Updated:
Deccan Herald

ಯಳಂದೂರು: ಎಲ್ಲೆಂದರಲ್ಲಿ ಬಿಸಾಡಿರುವ ಆಸ್ಪತ್ರೆಯ ತ್ಯಾಜ್ಯ, ಗಬ್ಬು ನಾರುತ್ತಿರುವ ಹೊರ ರೋಗಿಗಳ ಶೌಚಾಲಯ, ಬಾಯ್ತೆರೆದು ಕುಳಿತ ಶೌಚಾಲಯದ ಪಿಟ್‌, ಶುಚಿತ್ವ ಕಾಣದ ಹೊರ ಆವರಣ, ಕಟ್ಟಡದ ಸುತ್ತಲೂ ಹಬ್ಬಿದ ಪೊದೆ ಸಸ್ಯಗಳು, ನಡುವೆ ಹಾವುಗಳ ದರ್ಶನ...

ಇದು ಪಟ್ಟಣದ ಸರ್ಕಾರಿ ಆಸ್ಪತ್ರೆಯತ್ತ ಕಣ್ಣು ಹಾಯಿಸಿದಾಗ ಕಾಣುವ ದೃಶ್ಯಗಳು.

ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಾಗಿದ್ದರೂ, ಸೌಲಭ್ಯಗಳ ಕೊರತೆ ಹಾಗೂ ಅವ್ಯವಸ್ಥೆಗಳಿಂದ ರೋಗಿಗಳು ಇಲ್ಲಿ ಬಸವಳಿಯುತ್ತಿದ್ದಾರೆ. ಇಲ್ಲಿನ ಜನೌಷಧ ಕೇಂದ್ರದ ಹಿಂಭಾಗದಲ್ಲಿ ಹಲವು ತಿಂಗಳುಗಳಿಂದ ಆಸ್ಪತ್ರೆಯ ವಿಷಕಾರಿ ತ್ಯಾಜ್ಯವನ್ನು ತುಂಬಲಾಗುತ್ತಿದೆ. ಇದು ಕೊಳೆತು ನಾರುತ್ತಿದೆ. ಸಮೀಪದಲ್ಲಿ ಶುದ್ಧ ನೀರು ಪೂರೈಸುವ ತೊಂಬೆ ಇದೆ. ರೋಗಿಗಳು ಇಲ್ಲಿ ಆಹಾರ ಸೇವಿಸಿ, ಇದೇ ನೀರು ಸೇವಿಸಬೇಕಾದ ಸ್ಥಿತಿ ಇದೆ.

ಆಸ್ಪತ್ರೆಗಳು ರೋಗಗಳಿಗೆ ಚಿಕಿತ್ಸೆ ನೀಡಬೇಕು. ಆದರೆ ಇಲ್ಲಿಗೆ ಬಂದರೆ ಆರೋಗ್ಯವಂತರಿಗೂ ರೋಗ ಹರಡುವ ಅಪಾಯ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುತ್ತಮುತ್ತಲೂ ಸಮಸ್ಯೆ: ಆಸ್ಪತ್ರೆ ಮುಂಭಾಗದ ಸಾರ್ವಜನಿಕ ಶೌಚಗೃಹ ಗಬ್ಬೆದ್ದು ನಾರುತ್ತಿದೆ. ಇಲ್ಲಿಗೆ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಹಿಂಭಾಗದ ಹೆರಿಗೆ ವಾರ್ಡ್‌ಗೆ ಅಂಟಿಕೊಂಡಿರುವ ಶೌಚಾಲಯದ ಪಿಟ್‌ನ ಕಾಂಕ್ರೀಟ್ ಸ್ಲ್ಯಾಬ್‌ಗಳು ಮುರಿದು ಬಿದ್ದಿವೆ. ಇದರಿಂದ ದುರ್ವಾಸನೆ ಬರುತ್ತಿದೆ ಎಂದು ಆರೋಪಿಸುತ್ತಾರೆ ಗುಂಬಳ್ಳಿಯ ಚಾಮರಾಜು ಹಾಗೂ ಬಸವರಾಜು.

ಆಸ್ಪತ್ರೆಯ ಸುತ್ತಲಿನ ಪರಿಸರ ಕಳೆ ಸಸ್ಯಗಳ ಆವಾಸವಾಗಿದೆ. ಗಿಡಗಂಟಿಗಳ ನಡುವೆ ಹಾವು, ಚೇಳು ಹೊರಬರುತ್ತವೆ. ಕ್ರಿಮಿ, ಕೀಟಗಳ ಬಾಧೆಯಿಂದ ರೋಗಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಯಾತನೆ ಅನುಭವಿಸಬೇಕಿದೆ. ಸಮೀಪದ ವಿದ್ಯುತ್ ಪರಿವರ್ತಕವನ್ನು ಗಿಡಗಳು ಆವರಿಸಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಅನತಿ ದೂರದಲ್ಲೇ ಆರೋಗ್ಯಾಧಿಕಾರಿಗಳ ಕಚೇರಿ, ಶುಶ್ರೂಷಕರ ವಸತಿ ತಾಣಗಳಿದ್ದರೂ ಸ್ವಚ್ಛತೆಗೆ ಯಾರೂ ಮುಂದಾಗಿಲ್ಲ.

100 ಹಾಸಿಗೆ ಇನ್ನೂ ಕನಸು: ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸಗಳು ಇನ್ನೂ ಕಡತದಲ್ಲಿಯೇ ಉಳಿದಿವೆ. ಈಗಿರುವ ಹಳೆಯ ಕಟ್ಟಡದ ಕೆಲಭಾಗ ಶಿಥಿಲವಾಗಿದೆ. ಇರುವ ಕೆಲವೇ ಹಾಸಿಗೆಗಳು ರೋಗಿಗಳಿಗೆ ಸಾಲುತ್ತಿಲ್ಲ. ಜನ ಪ್ರತಿನಿಧಿಗಳೂ ಆಸ್ಪತ್ರೆ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ದೂರು.

ಡಯಾಲಿಸಿಸ್ ಕಟ್ಟಡಕ್ಕೆ ಗ್ರಹಣ

ತಾಲ್ಲೂಕಿನಲ್ಲಿ 2 ಡಯಾಲಿಸಿಸ್‌ ಘಟಕಗಳನ್ನು ತೆರೆಯುವ ಉದ್ದೇಶದಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಅಡಿಪಾಯ ನಿರ್ಮಿಸಿ ಹಾಗೇ ಬಿಡಲಾಗಿದೆ. ಇದರಿಂದ ಡಯಾಲಿಸಿಸ್‌ ಚಿಕಿತ್ಸೆಗಾಗಿ ರೋಗಿಗಳು ಮೈಸೂರು, ಕೊಳ್ಳೇಗಾಲ ಮತ್ತು ಚಾಮರಾಜನಗರಕ್ಕೆ ತೆರಳುವ ಅನಿವಾರ್ಯ ಸೃಷ್ಟಿಯಾಗಿದೆ ಎಂದು ಆರೋಪಿಸುತ್ತಾರೆ ಮಾಂಬಳ್ಳಿ ಸಿದ್ದರಾಜು. ‌

‘ಭೇಟಿ ನೀಡಿ ಕ್ರಮ ಕೈಗೊಳ್ಳುವೆ’

‘ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ನನಗೆ ಮಾಹಿತಿ ಕೊರತೆ ಇದೆ. ಕೂಡಲೇ ಸಂಬಂಧಪಟ್ಟ ಆಸ್ಪತ್ರೆಯ ವೈದ್ಯರ ಸಭೆ ಕರೆದು ಸಮಸ್ಯೆ ಚರ್ಚಿಸಲಾಗುವುದು. ತಾಲ್ಲೂಕು ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವ ಸರ್ಕಾರದ ಹಂತದಲ್ಲಿದೆ. ಆದಷ್ಟು ಬೇಗ ಅಭಿವೃದ್ಧಿ ಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್‌. ಪ್ರಸಾದ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !