ಅತ್ಯಾಚಾರ ಖಂಡಿಸಿ ತಮಟೆ ಚಳವಳಿ

7

ಅತ್ಯಾಚಾರ ಖಂಡಿಸಿ ತಮಟೆ ಚಳವಳಿ

Published:
Updated:

ವಿಜಯಪುರ: ‘ಬಸವನಬಾಗೇವಾಡಿ ತಾಲ್ಲೂಕಿನ ಹೂವಿನಹಿಪ್ಪರಗಿ ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ, ಶನಿವಾರ ವಿಜಯಪುರದಲ್ಲಿ ತಮಟೆ ಚಳವಳಿ ನಡೆಸಲಾಗುವುದು’ ಎಂದು ವಾಲ್ಮೀಕಿ ಗುರುಪೀಠದ ಸಂಜಾನಂದಕುಮಾರ ಸ್ವಾಮೀಜಿ ತಿಳಿಸಿದರು.

‘ಈ ದುರ್ಘಟನೆಯ ಬೆನ್ನಿಗೆ ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ. ಇದನ್ನು ಖಂಡಿಸಿ ವಿಜಯಪುರದ ಅಂಬೇಡ್ಕರ್‌ ವೃತ್ತದಿಂದ ಕಪ್ಪುಬಟ್ಟೆ ಧರಿಸಿಕೊಂಡು ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಜಾಥಾ ನಡೆಸಲಿದ್ದೇವೆ’ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಹೇಯ ಕೃತ್ಯ ನಡೆದರೂ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿ ನೊಂದ ಕುಟುಂಬದ ನೆರವಿಗೆ ಮುಂದಾಗಿಲ್ಲ. ಸಾಂತ್ವನ ಹೇಳಿಲ್ಲ. ಮೂವರು ಸಚಿವರಿದ್ದರೂ; ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತಿರುವುದು ನೋವಿನ ಸಂಗತಿ’ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

‘ಅಪ್ರಾಪ್ತೆಯನ್ನು ಅಮಾನುಷವಾಗಿ ಕೊಂದಿದ್ದಾರೆ. ಘಟನೆ ನಡೆದು 10 ದಿನ ಗತಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಉಡಾಫೆ ಮನೋಭಾವ ಪ್ರದರ್ಶಿಸಿದ್ದಾರೆ’ ಎಂದು ದೂರಿದರು.

ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ತಳವಾರ, ಜಿಲ್ಲಾ ಘಟಕದ ಅಧ್ಯಕ್ಷ ಶರಣಗೌಡ ಪಾಟೀಲ, ಸಿದ್ದು ಮೇಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !