ಸೋಮವಾರ, ಡಿಸೆಂಬರ್ 9, 2019
22 °C
ಬಸವನಬಾಗೇವಾಡಿಯಲ್ಲೂ ನೀರಿನ ಸಮಸ್ಯೆ ಬಿಗಡಾಯಿಸುವಿಕೆ

ದ್ರಾಕ್ಷಿ ಬೆಳೆ ರಕ್ಷಣೆಗಾಗಿ ಟ್ಯಾಂಕರ್ ನೀರಿಗೆ ಮೊರೆ

ಪ್ರಕಾಶ ಎನ್.ಮಸಬಿನಾಳ Updated:

ಅಕ್ಷರ ಗಾತ್ರ : | |

Deccan Herald

ಬಸವನಬಾಗೇವಾಡಿ: ಇನ್ನೂ ಬೇಸಿಗೆ ಆರಂಭವಾಗಿಲ್ಲ. ಈಗಲೇ ತೋಟಗಾರಿಕೆ ಬೆಳೆಗಳಿಗೆ ನೀರಿನ ಕೊರತೆ ಕಾಡಲಾರಂಭಿಸಿದೆ.

ತಾಲ್ಲೂಕಿನಲ್ಲಿ ಸಾಕಷ್ಟು ಸಂಖ್ಯೆಯ ರೈತರು ತಮ್ಮ ತೋಟದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದಾರೆ. ತೆರೆದ ಬಾವಿ, ಕೊಳವೆಬಾವಿಗಳು ನೀರಿಗೆ ಆಸರೆಯಾಗಿವೆ. ಕೆಲವರು ಕೃಷ್ಣಾ ನದಿಯಿಂದ ಪೈಪ್‌ಲೈನ್‌ ಮೂಲಕ ನೀರು ತಂದು ತೋಟಗಾರಿಕೆ ನಡೆಸಿದ್ದಾರೆ.

ಆದರೆ ಈಚೆಗೆ ತೆರೆದ ಬಾವಿ, ಕೊಳವೆಬಾವಿಗಳಲ್ಲಿ ಅಂತರ್ಜಲ ಬತ್ತುತ್ತಿದ್ದು; ತೋಟಗಾರಿಕೆ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಮುಂಬರುವ ಮಳೆಗಾಲದವರೆಗೂ ಬೆಳೆ ಕಾಪಾಡಿಕೊಳ್ಳುವುದು ಹೇಗೆ ಎಂಬ ಚಿಂತೆ ಕಾಡಲಾರಂಭಿಸಿದೆ.

ಪಟ್ಟಣದ ತೆಲಗಿ ರಸ್ತೆಯಲ್ಲಿ ರಾಜಶೇಖರ ಇವಣಗಿ ತಮ್ಮ ಐದು ಎಕರೆಯಲ್ಲಿ 11 ವರ್ಷಗಳಿಂದ ದ್ರಾಕ್ಷಿ ಬೆಳೆದಿದ್ದಾರೆ. ತೋಟದಲ್ಲಿದ್ದ ನಾಲ್ಕು ಕೊಳವೆಬಾವಿ, ಒಂದು ತೆರೆದ ಬಾವಿಯಲ್ಲಿನ ನೀರು ಇದೂವರೆಗೂ ಆಸರೆಯಾಗಿತ್ತು.

ದಶಕದ ಅವಧಿಯಲ್ಲಿ ಒಮ್ಮೆಯೂ ಸಮಸ್ಯೆಯಾಗಿರಲಿಲ್ಲ. ಆದರೆ ಈ ವರ್ಷ ಬೇಸಿಗೆ ಆರಂಭಕ್ಕೂ ಮುನ್ನವೇ ಅಂತರ್ಜಲ ಸಂಪೂರ್ಣ ಬತ್ತಿದೆ. ದಶಕದ ಪಡ ಉಳಿಸಿಕೊಳ್ಳಲು ಅನಿವಾರ್ಯವಾಗಿ ಟ್ಯಾಂಕರ್‌ ನೀರಿನ ಮೊರೆ ಹೊಕ್ಕಿದ್ದಾರೆ ಇವಣಗಿ.

ನಿತ್ಯವೂ 10 ಟ್ಯಾಂಕರ್ ನೀರನ್ನು ತರಿಸಿಕೊಳ್ಳುತ್ತಿದ್ದಾರೆ. ಟ್ಯಾಂಕರ್‌ವೊಂದು ತೋಟ ತಲುಪಲು ₹ 600 ಖರ್ಚಾಗುತ್ತಿದೆ. ಈ ಲೆಕ್ಕದಲ್ಲಿ ನಿತ್ಯ ನೀರಿಗಾಗಿ ₹ 6000 ಮೀಸಲಿಡುವ ಅನಿವಾರ್ಯ ರಾಜಶೇಖರ ಅವರದ್ದಾಗಿದೆ.

‘ಹೊಸದಾಗಿ ಕೊಳವೆಬಾವಿ ಕೊರೆಸುವ ಧೈರ್ಯವಿಲ್ಲ. ಕೊರೆಸಿದರೂ ನೀರು ಸಿಗಲಿದೆ ಎಂಬ ಆತ್ಮವಿಶ್ವಾಸ ಯಾರಲ್ಲೂ ಇಲ್ಲದಿರುವುದರಿಂದ, ಬೆಳೆ ರಕ್ಷಣೆಗಾಗಿ ಅನಿವಾರ್ಯವಾಗಿ ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದೇವೆ’ ಎಂದು ರಾಜಶೇಖರ ಇವಣಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನೂ ವಿಜಯಪುರ ರಸ್ತೆಯಲ್ಲಿರುವ ಸಂಗಮೇಶ ಮುರಾಳ ಅವರ ಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಎರಡು ಎಕರೆ ದ್ರಾಕ್ಷಿ ಉಳಿಸಿಕೊಳ್ಳುವ ಹೋರಾಟ ಇವರದ್ದು. ತೋಟದಲ್ಲಿದ್ದ ಐದು ಕೊಳವೆಬಾವಿಗಳಲ್ಲಿ ಈಗಾಗಲೇ ನಾಲ್ಕು ಬೋರ್ ಬತ್ತಿವೆ. ಉಳಿದ ಒಂದರಲ್ಲೂ ಕೊಂಚವೇ ನೀರು ಬರುತ್ತಿದೆ. ಇದು ಬೆಳೆಗೆ ಸಾಕಾಗದಿದ್ದರಿಂದ ಇವರೂ ಸಹ ಅನಿವಾರ್ಯವಾಗಿ ಟ್ಯಾಂಕರ್‌ ಮೊರೆ ಹೊಕ್ಕಿದ್ದಾರೆ.

ಇದು ಒಬ್ಬಿಬ್ಬ ರೈತರ ಸ್ಥಿತಿಯಲ್ಲ. ಬಹುತೇಕರು ಭವಿಷ್ಯ ನೆನೆದು ಈ ಬಾರಿ ದ್ರಾಕ್ಷಿ ಚಾಟ್ನಿಯ ಸಹವಾಸಕ್ಕೆ ಹೋಗಿಲ್ಲ. ಔಷಧೋಪಚಾರ ಮಾಡುವುದನ್ನು ನಿಲ್ಲಿಸಿದ್ದಾರೆ.

ತರಕಾರಿ ಸೇರಿದಂತೆ ಇನ್ನಿತರೆ ಋತುಮಾನದ ತೋಟಗಾರಿಕೆ ಬೆಳೆಗಳಾಗಿದ್ದರೆ, ನೀರಿನ ಕೊರತೆಯಾದಾಗ ಕೃಷಿ ಚಟುವಟಿಕೆ ತಟಸ್ಥಗೊಳಿಸಬಹುದು. ಹಲವು ವರ್ಷಗಳಿಂದ ದ್ರಾಕ್ಷಿ ಬೆಳೆಯನ್ನೇ ಬೆಳೆಯುತ್ತಿರುವುದರಿಂದ ಅವುಗಳ ರಕ್ಷಣೆ ಮಾಡಬೇಕಿದೆ. ಇನ್ನೂ ಬೇಸಿಗೆ ಕಾಲದಲ್ಲಿ ಎಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದು ತಿಳಿಯುತ್ತಿಲ್ಲ ಎಂದು ಕೆಲ ದ್ರಾಕ್ಷಿ ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)