ಬೆಳೆ ಉಳಿಸಲು ಟ್ಯಾಂಕರ್‌ ನೀರಿಗೆ ಮೊರೆ; ಪ್ರತಿ ಟ್ಯಾಂಕರ್‌ಗೆ ₹ 2000

ಬುಧವಾರ, ಜೂನ್ 19, 2019
23 °C
5ರಿಂದ 10 ಕಿ.ಮೀ ದೂರದಿಂದ ನೀರು ಪೂರೈಕೆ

ಬೆಳೆ ಉಳಿಸಲು ಟ್ಯಾಂಕರ್‌ ನೀರಿಗೆ ಮೊರೆ; ಪ್ರತಿ ಟ್ಯಾಂಕರ್‌ಗೆ ₹ 2000

Published:
Updated:
Prajavani

ತಾಂಬಾ: ಸತತ ಬರಗಾಲದಿಂದ ನೀರಿಲ್ಲದೆ ಕಂಗಾಲಾಗಿರುವ ರೈತರು, ಕಷ್ಟ ಪಟ್ಟು ಬೆಳೆದ ಲಿಂಬೆ, ದಾಳಿಂಬೆ, ದ್ರಾಕ್ಷಿ ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟ್ಯಾಂಕರ್‌ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಪಂಚ ನದಿಗಳು ಹರಿದರೂ ಕುಡಿಯುವ ನೀರಿಗಾಗಿ ಜನರು 2–3 ಕಿ.ಮೀ ಅಲೆಯುವುದು ತಪ್ಪಿಲ್ಲ. ನೀರಿನ ಅಭಾವದಿಂದ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳಾದ ನಿಂಬೆ, ದ್ರಾಕ್ಷಿ, ದಾಳಿಂಬೆ, ಬಿಸಿಲಿನ ತಾಪ ಮತ್ತು ತೇವಾಂಶದ ಕೊರತೆಯಿಂದ ಒಣಗುತ್ತಿವೆ. ಅವುಗಳ ರಕ್ಷಣೆಗಾಗಿ ಕೆಲ ರೈತರು ಸುಮಾರು 5ರಿಂದ 10 ಕಿ.ಮೀ ದೂರದಿಂದ ಟ್ಯಾಂಕರ್‌ ಮೂಲಕ ನೀರನ್ನು ತಂದು ಬೆಳೆಗೆ ಉಣಿಸುತ್ತಿದ್ದಾರೆ.

ತಾಂಬಾ ಗ್ರಾಮದ ಹಾಗೂ ವಿಜಯಪುರ ರಸ್ತೆಯ ರೂಗಿ ಹತ್ತಿರ ಇರುವ ಜಮೀನಿನಲ್ಲಿ ಲಿಂಬೆ ಗಿಡಗಳು ಒಣಗಿ ನಿಂತಿವೆ. ತಡವಲಗಾ ಗ್ರಾಮದ ಕಲ್ಲಪ್ಪ ಹರಣಿ ಅವರ ತೋಟದಲ್ಲಿ ನಾಲ್ಕು ಎಕರೆ ದ್ರಾಕ್ಷಿ ಬೆಳೆ ತೇವಾಂಶದ ಕೊರತೆಯಿಂದ ಸಂಪೂರ್ಣ ಒಣಗಿದೆ. ಮತ್ತೆ ಬೆಳೆಸಲು ಲಕ್ಷಗಟ್ಟಲೆ ಹಣದ ಜೊತೆಗೆ ಇದುವರೆಗೆ ಮಾಡಿದ ಶ್ರಮವೂ ವ್ಯರ್ಥವಾಗುತ್ತದೆ. ಈ ಭಾಗದ ತಡವಲಗಾ, ರೂಗಿ, ಬೊಳೆಗಾಂವ, ಶಿರಕನಳ್ಳಿ, ಹೊನ್ನಳ್ಳಿ, ಕೆಂಗನಾಳ, ಬೆನಕನಹಳ್ಳಿ, ಬಂಥನಾಳ, ವಾಡೆ, ಚಿಕ್ಕರೂಗಿ, ಹಿಟ್ನಳ್ಳಿ, ಅಥರ್ಗಾ ಗ್ರಾಮಗಳ ರೈತರು ಕೂಡ ಒಣಗುತ್ತಿರುವ ಬೆಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಾಗಿ ಮಾಡಿದ ಲಕ್ಷಗಟ್ಟಲೆ ಸಾಲದ ಹೊರೆಯಿಂದ ಚಿಂತಾಕ್ರಾಂತರಾಗಿದ್ದಾರೆ.

ಬೆಳೆ ರಕ್ಷಣೆಗಾಗಿ ಸರ್ಕಾರ ಹೊಸ ಯೋಜನೆ ರೂಪಿಸಬೇಕು. ದೀರ್ಘಾವಧಿ ತೋಟಗಾರಿಕಾ ಬೆಳೆಗಳು ಒಣಗಿದರೆ ಮುಂದಿನ ಐದು ವರ್ಷಗಳವರೆಗೆ ಪರಿತಪಿಸ ಬೇಕಾಗುತ್ತದೆ. ಕಾರಣ ಸರ್ಕಾರ ರೈತರ ಸಂಕಷ್ಟಕ್ಕೆ ಪರಿಹಾರ ನೀಡಬೇಕು ಎಂದು ರೈತ ಮಹಿಳೆ ಗಿರಿಜಾ ಬಂಟನೂರ ಆಗ್ರಹಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಒಕ್ಕಲುತನ ಹೈರಣಾಗಿದ್ದು, ನೀರಿಲ್ಲದೆ ಯಾವುದೇ ಬೆಳೆ ಬೆಳೆಯದಂತಾಗಿದೆ. ಇದ್ದ ಬೆಳೆಗಳಿಗೆ ನೀರು ಹರಿಸಲು ₹ 2000 ನೀಡಿ ಟ್ಯಾಂಕರ್‌ ಮುಖಾಂತರ ನೀರು ತಂದು ಹೊಂಡಗಳಲ್ಲಿ ಸಂಗ್ರಹಿಸಿ ನೀರು ಹಾಯಿಸುತ್ತಿದ್ದೇವೆ ಎನ್ನುತ್ತಾರೆ ರೈತ ಸತೀಶ ಹಿರೇಕುರುಬರ.

ತಾಂಬಾ ಗ್ರಾಮದಲ್ಲಿ ಗೋಶಾಲೆಗಳೇ ಇಲ್ಲ. ಜನರು ನೀರನ್ನಾದರೂ ಕುಡಿದು ದಾಹ ತೀರಿಸಿಕೊಂಡು ನೆರಳನ್ನು ಆಶ್ರಯಿಸಿಕೊಳ್ಳಬಹುದು. ಆದರೆ ಜಾನುವಾರುಗಳಿಗೆ ನೀರೂ ಇಲ್ಲ, ಮೇವೂ ಇಲ್ಲ. ಗೋಶಾಲೆಗಳಿದ್ದರೆ ಅಲ್ಲಿಗಾದರೂ ಕಳುಹಿಸಬಹುದು. ಆದರೆ ಗ್ರಾಮದಲ್ಲಿ ಗೋಶಾಲೆಗಳೇ ಇಲ್ಲದ ಕಾರಣ ದಿಕ್ಕು ತೋಚದಂತಾಗಿ, ಜಾನುವಾರುಗಳು ಕೈಗೆ ಬಂದ ದುಡ್ಡಿಗೆ ಮಾರುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಅವರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !