‘ಮಹಿಳೆ ಗೌರವಿಸುವ ಏಕೈಕ ಪಕ್ಷ ಬಿಜೆಪಿ’

ಸೋಮವಾರ, ಏಪ್ರಿಲ್ 22, 2019
31 °C

‘ಮಹಿಳೆ ಗೌರವಿಸುವ ಏಕೈಕ ಪಕ್ಷ ಬಿಜೆಪಿ’

Published:
Updated:
Prajavani

ವಿಜಯಪುರ: ‘ಮಹಿಳೆಯರನ್ನು ಪೂಜಿಸುವ, ಗೌರವ ತೋರುವ ಸಂಸ್ಕೃತಿ ಹೊಂದಿದ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ತಾರಾ ಅನುರಾಧಾ ಹೇಳಿದರು.

ನಗರದಲ್ಲಿನ ಬಿಜೆಪಿ ಚುನಾವಣಾ ಕಾರ್ಯಾಲಯ ಎದುರು ಗುರುವಾರ ನಡೆದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಬಿಜೆಪಿ ಪಕ್ಷ ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣುತ್ತದೆ. ತಾಯಿ ಎಂದು ಪೂಜಿಸುತ್ತದೆ’ ಎಂದರು.

‘ಮಹಿಳೆ ಅತ್ಯಂತ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸುತ್ತಾಳೆ. ತನ್ನ ಜವಾಬ್ದಾರಿಯ ಜತೆಗೆ ಇತರರ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿ ಸ್ತ್ರೀಯರಲ್ಲಿ ಮಾತ್ರ ಇದೆ. ಸ್ತ್ರೀ ಮನಸ್ಸು ಮಾಡಿದರೆ ಉನ್ನತ ಸಾಧನೆ ಮಾಡಲು ಸಾಧ್ಯ. ರಾಜಕೀಯ ಸೇರಿದಂತೆ ವಿವಿಧ ರಂಗಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಬೇಕು ಎಂಬ ಕೂಗು ಬಲಗೊಳ್ಳುತ್ತಿರುವುದು ಅತ್ಯಂತ ಸಂತೋಷದಾಯಕರ ಸಂಗತಿ’ ಎಂದು ಹೇಳಿದರು.

‘ಕೆಲವೊಂದು ಕಡೆ ಸಾಕಷ್ಟು ಶ್ರೀಮಂತಿಕೆ, ಸುಖದ ಸುಪ್ಪತ್ತಿಗೆ ಇದೆ. ಆದರೆ ಅಲ್ಲಿ ಗೌರವವೇ ಇಲ್ಲದಿದ್ದರೆ ಅಂತಲ್ಲಿ ನಾವು ನಿಲ್ಲಲು ಸಾಧ್ಯವೇ ಇಲ್ಲ. ಹಾಗೆಯೇ ಗೌರವ ಸಿಗುವ ಜಾಗದಲ್ಲಿ ನಾವು ಇರಬೇಕು. ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವ ದೊರಕುತ್ತದೆ. ಮಹಿಳೆ ರಾಜಕೀಯ ರಂಗದಲ್ಲಿ ಉನ್ನತ ಸ್ಥಾನ ಅಲಂಕರಿಸುವ ವಾತಾವರಣ ಬಿಜೆಪಿಯಲ್ಲಿದೆ’ ಎಂದರು.

‘ನಾವು ಮೋದಿ ಹೆಸರಿನಲ್ಲಿ ವೋಟು ಕೇಳುತ್ತಿದ್ದೇವೆ. ಮೋದಿ ನಮ್ಮ ನಾಯಕರು ಅವರ ಹೆಸರಿನಲ್ಲಿ ಮತ ಕೇಳಿದರೆ ತಪ್ಪೇನು ? ಪ್ರತಿಪಕ್ಷದ ಶಾಸಕ ಸಹೋದರರೊಬ್ಬರು ಇದನ್ನು ಟೀಕೆ ಮಾಡಿದರು. ಪಾಪ ಅವರು ಎಲ್ಲಿಯೂ ತಮ್ಮ ಪಕ್ಷದ ಇಂದಿರಾ ಗಾಂಧಿ, ರಾಜೀವ ಗಾಂಧಿ ಹೆಸರು ಹೇಳಿಲ್ಲವೇ?’ ಎಂದು ಪ್ರಶ್ನಿಸಿದರು.

‘ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ದಶಕಗಳ ಹಿಂದೆಯೇ ರಮೇಶ ಜಿಗಜಿಣಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದವರು. ಚತುಷ್ಪಥ ರಸ್ತೆ, ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭ ಸೇರಿದಂತೆ ಅವರ ಸಾಧನೆಯ ಪಟ್ಟಿ ದೊಡ್ಡದಿದೆ. ಜನತೆ ಈ ಬಾರಿ ಜಿಗಜಿಣಗಿ ಅವರಿಗೆ ಆಶೀರ್ವಾದ ಮಾಡಬೇಕು’ ಎಂದು ಹೇಳಿದರು.

ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಮ್ಮ ಜೋಗೂರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ದಾನಮ್ಮ ಅಂಗಡಿ, ಜ್ಯೋತಿ ಅಸ್ಕಿ, ಶ್ರೀದೇವಿ ಐಹೊಳಿ, ಸೌಮ್ಯಾ ಕಲ್ಲೂರ, ದೀಪಾ ಶಹಾಪುರ, ಗೀತಾ ಕುಗನೂರ, ರಜನಿ ಸಂಬಣ್ಣಿ, ಅನುರಾಧಾ ಕಲಾಲ, ಶಾಂತಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !